ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಲ್ಲದೆ ಖಾಸಗಿ ಸಂಸ್ಥೆಗೆ ಸರ್ಕಾರಿ ಶಾಲೆಗಳ ಉಸ್ತುವಾರಿ

ಕನ್ನಡ ಪ್ರಾಧಿಕಾರದ ಅಧ್ಯಕ್ಷ ಸಿದ್ಧರಾಮಯ್ಯ ಆರೋಪ
Last Updated 22 ಸೆಪ್ಟೆಂಬರ್ 2017, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿಕ್ಷಣ ಇಲಾಖೆಯ ಅಧಿಕಾರಿಗಳು ಒಳ ಒಪ್ಪಂದಗಳ ಮೂಲಕ ಖಾಸಗಿ ಸಂಸ್ಥೆಗಳಿಗೆ ಸರ್ಕಾರಿ ಶಾಲೆಗಳ ಉಸ್ತುವಾರಿ ನೀಡಲು ಸಜ್ಜಾಗಿದ್ದಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ಧರಾಮಯ್ಯ ಆರೋಪಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ‘ಸರ್ಕಾರಿ ಶಾಲೆಗಳ ಸಬಲೀಕರಣ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಅಜೀಂ ಪ್ರೇಮ್‌ಜಿಯಂತಹ ಸಂಸ್ಥೆಗೆ ಸರ್ಕಾರಿ ಶಾಲೆಗಳ ಉಸ್ತುವಾರಿ ನೀಡುವ ಮೊದಲು ಜನರೊಂದಿಗೆ ಚರ್ಚಿಸಬೇಕು. ಈಗ ಉಸ್ತುವಾರಿ ತೆಗೆದುಕೊಳ್ಳುವ ಸಂಸ್ಥೆಗಳು ಮುಂದೊಂದು ದಿನ ಅವುಗಳನ್ನು ಆಪೋಶನ ಮಾಡಿಬಿಡುತ್ತವೆ. ಹಾಗಾಗಿ ಅಧಿಕಾರಿಗಳು ತಮ್ಮ ಧೋರಣೆಯನ್ನು ಹೇರುವ ಬದಲು ಜನರ ಹಿತವನ್ನು ಕಾಪಾಡಬೇಕು. ಅವರ ಒಳ ಹುನ್ನಾರಗಳಿಗೆ ಬಡಮಕ್ಕಳ ಭವಿಷ್ಯವನ್ನು ಬಲಿಕೊಡುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬಿಡುವುದಿಲ್ಲ’ ಎಂದು ಹೇಳಿದರು.

‘ವಿಲೀನಗೊಂಡಿರುವ, ಮುಚ್ಚಿರುವ ಸರ್ಕಾರಿ ಶಾಲೆಗಳ ಅಂಕಿ–ಅಂಶಗಳನ್ನು ಅವಲೋಕಿಸಿದರೆ ಭಯ ಹುಟ್ಟಿಸುತ್ತದೆ. ಶಿಕ್ಷಣ ಕ್ಷೇತ್ರ ಒಂದು ಉದ್ದಿಮೆಯಾಗಿ ಬದಲಾಗಿರುವುದರಿಂದ ಸರ್ಕಾರಿ ಶಾಲೆಗಳು ಬಡವಾಗಿವೆ. ಒಂದು ಖಾಸಗಿ ಶಾಲೆ ಪ್ರಾರಂಭವಾದರೆ, ಅದರ ಸುತ್ತಲಿನ ಹತ್ತು ಹಳ್ಳಿಗಳ ಸರ್ಕಾರಿ ಶಾಲೆಗಳು ಮುಚ್ಚುತ್ತವೆ’ ಎಂದು ತಿಳಿಸಿದರು.

‘ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ನೀಡಿರುವ 21 ಶಿಫಾರಸುಗಳನ್ನು ಸರ್ಕಾರ ಸುಲಭವಾಗಿ ಅಳವಡಿಸಬಹುದು. ಅವುಗಳನ್ನು ಶೀಘ್ರ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಶಿಕ್ಷಣ ತಜ್ಞ ಟಿ.ಎಂ. ಕುಮಾರ್‌, ‘ನಮ್ಮ ರಾಜಕಾರಣಿಗಳು, ಅಧಿಕಾರಿಗಳು ಖಾಸಗಿ ಶಿಕ್ಷಣ ಎನ್ನುವ ಭೂತವನ್ನು ಹಿಂಬಾಗಿಲಿನಿಂದ ಕರೆತರುತ್ತಿದ್ದಾರೆ. ಈ ರಾಜ್ಯದಲ್ಲಿರುವ ಶೇ 90ರಷ್ಟು ಖಾಸಗಿ ಶಾಲೆಗಳನ್ನು ರಾಜಕಾರಣಿಗಳು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು ನಡೆಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮ ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಪ್ರಾಥಮಿಕ ಶಿಕ್ಷಣಕ್ಕೆ ನೀಡುತ್ತಿಲ್ಲ. ಇತ್ತೀಚೆಗೆ 2009ರಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಗೆ ತಂದಿದ್ದಾರೆ. ಅದನ್ನೂ ತಪ್ಪಾಗಿ ಅರ್ಥೈಸಿ, ಅದರ ಮೌಲ್ಯವನ್ನು ಕಳೆಯುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT