ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

31 ಸಬ್‌ ರಿಜಿಸ್ಟ್ರಾರ್‌ ವಿರುದ್ಧ ಇಲಾಖಾ ವಿಚಾರಣೆ

Last Updated 22 ಸೆಪ್ಟೆಂಬರ್ 2017, 20:32 IST
ಅಕ್ಷರ ಗಾತ್ರ

ಭರತ್‌ ಜೋಷಿ

ಬೆಂಗಳೂರು: ಅಕ್ರಮವಾಗಿ ಸ್ವತ್ತು ನೋಂದಣಿ ಮಾಡಲು ಅವಕಾಶ ಮಾಡಿಕೊಟ್ಟ ಆರೋಪದಲ್ಲಿ ಬೆಂಗಳೂರು ನಗರ ಜಿಲ್ಲೆಯ 31 ಉಪ ನೋಂದಣಿ ಅಧಿಕಾರಿಗಳು ಸೇರಿ ಒಟ್ಟು 41 ಸಿಬ್ಬಂದಿ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಮೂನೆ 9, 11 (ಕೃಷಿಯೇತರ ಜಮೀನಿನ ತೆರಿಗೆ ಬಾಕಿ ಉಳಿಸಿಕೊಂಡವರು ಹಾಜರುಪಡಿಸಬೇಕಾದ ದಾಖಲೆ) ಇಲ್ಲದೆ ಯಾವುದೇ ಆಸ್ತಿ ನೋಂದಣಿ ಮಾಡಬಾರದು ಎಂದು ಸರ್ಕಾರ ನಿಯಮ ವಿಧಿಸಿದ್ದರೂ ಅದನ್ನು ಉಲ್ಲಂಘಿಸಿದ ಆರೋ‍ಪವನ್ನು ಈ ಅಧಿಕಾರಿಗಳು ಎದುರಿಸುತ್ತಿದ್ದಾರೆ. 2013ರಲ್ಲಿ ಈ ಅಕ್ರಮ ಬಯಲಿಗೆ ಬಂದಿದ್ದರೂ ಎಲ್ಲ ಅಧಿಕಾರಿಗಳು ಅದೇ ಹುದ್ದೆಯಲ್ಲೇ ಮುಂದುವರಿದಿದ್ದಾರೆ.

ಅಕ್ರಮಕ್ಕೆ ಸಂಬಂಧಿಸಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಂ.ಜಿ. ಹಿರೇಮಠ ಅವರು ಕೆಲವು ಪ್ರಥಮ ಮತ್ತು ಸಹಾಯಕ ದರ್ಜೆಯ ಸಹಾಯಕರು ಹಾಗೂ 31 ಉಪ ನೋಂದಣಾಧಿಕಾರಿಗಳು ಸೇರಿ ಒಟ್ಟು 41 ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸುತ್ತಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿ ನೋಂದಣಿಯ ವೇಳೆ ನಮೂನೆ 9 ಮತ್ತು 11ನ್ನು ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ (ಆರ್‌ಡಿಪಿಆರ್‌) 2013ರ ಜೂನ್‌ನಲ್ಲಿ ಆದೇಶಿಸಿತ್ತು. ಅಕ್ರಮ ಬಡಾವಣೆ ನಿರ್ಮಾಣ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿತ್ತು. ಆರ್‌ಡಿಪಿಆರ್‌ ಇಲಾಖೆಯ ಇ– ಸ್ವತ್ತು ತಂತ್ರಾಂಶದಲ್ಲಿ ಆಸ್ತಿ ವಿವರಗಳನ್ನು ಪರಿಶೀಲಿಸಿದ ಬಳಿಕ ಮಾತ್ರ ನೋಂದಣಿ ಮಾಡಿಕೊಳ್ಳುವಂತೆ 2014 ಜುಲೈನಲ್ಲಿ ಸರ್ಕಾರ ಮತ್ತೊಂದು ಆದೇಶ ಹೊರಡಿಸಿತ್ತು.

‘ಆದರೆ, ಯಾವುದೇ ಪರಿಶೀಲನೆ ನಡೆಸದೆ, ನಕಲಿ ನಮೂನೆ 9 ಮತ್ತು 11ನ್ನು ಸಲ್ಲಿಸಿ ಆಸ್ತಿ ನೋಂದಣಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ. ‘ಪ್ರತಿ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧವಾದ ಬಳಿಕ ಅಕ್ರಮ ಕುರಿತ ವಾಸ್ತವಾಂಶ ಗೊತ್ತಾಗಲಿದೆ’ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಹಾನಿರ್ದೇಶಕ ಮನೋಜ್‌ಕುಮಾರ್‌ ಮೀನಾ ತಿಳಿಸಿದರು.

ವಿಚಾರಣೆ ಎದುರಿಸುತ್ತಿರುವ 31 ಮಂದಿಯಲ್ಲಿ ಬನಶಂಕರಿ, ಚಾಮರಾಜಪೇಟೆ, ಬಸವನಗುಡಿ, ಇಂದಿರಾನಗರ, ಗಾಂಧಿನಗರ ಪ್ರದೇಶದ ಉಪ ನೋಂದಣಾಧಿಕಾರಿಗಳು ಸೇರಿದ್ದಾರೆ. ಈ ಪೈಕಿ, ಆರು ಅಧಿಕಾರಿಗಳು ಷೋಕಾಸ್‌ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದು, ಅವರ ಉತ್ತರ ತೃಪ್ತಿಕರವಾಗಿಲ್ಲ. ಆರೋಪ ಎದುರಿಸುತ್ತಿರುವ ಅಧಿಕಾರಿಗಳಲ್ಲಿ ಎಸ್.ಆರ್‌. ವಸಂತಕುಮಾರ್‌ (ಕೆ.ಆರ್.ಪುರ) ಮತ್ತು ಟಿ. ಗೋಪಾಲಕೃಷ್ಣ (ಪೀಣ್ಯ) ಎರಡು ವರ್ಷಗಳ ಹಿಂದೆಯೇ ನಿವೃತ್ತಿಯಾಗಿದ್ದಾರೆ.

ಈ ಅಧಿಕಾರಿಗಳನ್ನು ಬೆಂಗಳೂರಿನಿಂದ ಹೊರಗೆ ವರ್ಗಾವಣೆ ಮಾಡುವಂತೆ 2015ರ ಮೇ ತಿಂಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಹಾನಿರ್ದೇಶಕರು ಶಿಫಾರಸು ಮಾಡಿದ್ದರು. ಇಲಾಖಾ ತನಿಖೆಗೆ ಆದೇಶಿಸಿರುವ ಎಲ್ಲ ಅಧಿಕಾರಿಗಳನ್ನು ಕೆಲವು ವರ್ಷಗಳ ಕಾಲ ಬೆಂಗಳೂರಿನಿಂದ ಹೊರಗೆ ವರ್ಗಾವಣೆ ಮಾಡಿದರೆ ಇಲಾಖೆಗಳ ಕಾರ್ಯಗಳಿಗೂ ಅಡ್ಡಿಯಾಗದ ರೀತಿಯಲ್ಲಿ, ಒಂದು ರೀತಿಯಲ್ಲಿ ಪರೋಕ್ಷ ಶಿಕ್ಷೆ ವಿಧಿಸಿದಂತಾಗುತ್ತದೆ. ಸರ್ಕಾರದ ಸುತ್ತೋಲೆಗಳನ್ನು ಉಲ್ಲಂಘಿಸುವ ಪ್ರವೃತ್ತಿ ನಿಯಂತ್ರಿಸುವ ದಿಸೆಯಲ್ಲಿ ಕ್ರಮ ಕೈಗೊಂಡಂತಾಗುತ್ತದೆ’ ಎಂದೂ ಶಿಫಾರಸಿನಲ್ಲಿ ಅವರು ಉಲ್ಲೇಖಿಸಿದ್ದರು. ಆದರೆ, ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನ ವಹಿಸಿದೆ.

ಅಕ್ರಮಗಳ ಬಗ್ಗೆ ತನಿಖೆ ನಡೆಸಲು 2016ರ ಮಾರ್ಚ್‌ನಲ್ಲಿ ಹಿರೇಮಠ ಅವರನ್ನು ನೇಮಿಸಲಾಗಿತ್ತು. ಪ್ರತಿ ಅಧಿಕಾರಿಯ ವಿರುದ್ಧ ಪ್ರತ್ಯೇಕ ತನಿಖೆ ನಡೆಸುವಂತೆ ಅದೇ ವರ್ಷ ಜೂನ್‌ನಲ್ಲಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ಆದೇಶ ನೀಡಲು ಸರ್ಕಾರ 11 ತಿಂಗಳು ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT