ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಸಂದೇಶ ಜೀವಕ್ಕೆ ಎರವಾಯಿತೇ?

Last Updated 22 ಸೆಪ್ಟೆಂಬರ್ 2017, 20:28 IST
ಅಕ್ಷರ ಗಾತ್ರ

ಬೆಂಗಳೂರು: ಸ್ನೇಹಿತರಿಗೆ ಸಿಹಿ ಹಂಚಿ ಬರುವುದಾಗಿ ಹೇಳಿ ಹೋದ ಮಗ, ರಾತ್ರಿ 8.30 ಸಮಯವಾದರೂ ಬಾರದೆ ಇದ್ದಾಗ ತಾಯಿ ವನಜಾ ಅವರು ಮೊಬೈಲ್‌ಗೆ ಕರೆ ಮಾಡಿದ್ದರು. ಆದರೆ, ಶರತ್ ಕರೆ ಸ್ವೀಕರಿಸಿರಲಿಲ್ಲ. ಮೂರ್ನಾಲ್ಕು ಬಾರಿ ಕರೆ ಮಾಡಿದರೂ ಉತ್ತರ ಸಿಗದಿದ್ದಾಗ, ಮಗನನ್ನು ಹೆದರಿಸಲು‘ಮನೆಗೆ ಬರದಿದ್ದರೆ, ಪೊಲೀಸರಿಗೆ ದೂರು ಕೊಡುತ್ತೇನೆ’ ಎಂದು ಸಂದೇಶ ಕಳುಹಿಸಿದ್ದರು.

ಶರತ್‌ ಮೊಬೈಲ್‌ಗೆ ಬಂದ ಆ ಸಂದೇಶ ನೋಡಿ ಗಾಬರಿಗೊಂಡ ಆರೋಪಿ ವಿಶಾಲ್, ‘ನಾನು ಮನೆಗೆ ಹೋಗಿರುತ್ತೇನೆ. ಸ್ವಲ್ಪ ಸಮಯದ ನಂತರ ವಿಡಿಯೊಗಳನ್ನು ಶರತ್‌ನ ತಾಯಿ ಹಾಗೂ ಅಕ್ಕನ ಮೊಬೈಲ್‌ಗೆ ಕಳುಹಿಸಿ’ ಎಂದು ಸಹಚರರಿಗೆ ಹೇಳಿ ಅಲ್ಲಿಂದ ಹೊರಟು ಮನೆ ತಲುಪಿದ್ದ.

ವಿಡಿಯೊ–1: ‘ಹಲೋ ಅಪ್ಪ. ನಿಮ್ಮಿಂದ ತೊಂದರೆ ಅನುಭವಿಸಿದವರು ನನ್ನನ್ನು ಅಪಹರಿಸಿದ್ದಾರೆ. ಅವರಿಗೆ ₹ 50 ಲಕ್ಷ ಬೇಕಂತೆ. ನಾಳೆ ನಿಮಗೆ ಫೋನ್ ಮಾಡ್ತಾರೆ. ನನಗೆ ತುಂಬ ಕಿರುಕುಳ ನೀಡ್ತಿದಾರೆ. ‌ಹೇಗಾದರೂ ಹಣ ತಂದು ಕೊಡಿ. ಅಲ್ಲಿಯವರೆಗೆ ಇವರು ನನ್ನನ್ನು ಬಿಡುವುದಿಲ್ಲ’ ಎಂದು ಶರತ್ ಹೇಳಿರುವ 25 ಸೆಕೆಂಡ್‌ನ ಮೊದಲ ವಿಡಿಯೊವನ್ನು ಆರೋಪಿಗಳು 10.07ಕ್ಕೆ ಅಕ್ಕ ಹಾಗೂ ತಾಯಿಯ ಮೊಬೈಲ್‌ಗಳಿಗೆ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದರು.

ವಿಡಿಯೊ–2: 10.08ಕ್ಕೆ 31 ಸೆಕೆಂಡ್‌ನ ಮತ್ತೊಂದು ವಿಡಿಯೊ ಕಳುಹಿಸಿದ್ದರು. ಅದರಲ್ಲಿ, ‘ಅಪ್ಪ... ಪೊಲೀಸರಿಗೆ ಕಂಪ್ಲೇಂಟ್ ಮಾಡ್ಬೇಡಿ. ಇವರ ಹತ್ರ ತುಂಬ ದೊಡ್ಡ ಆಯುಧಗಳಿವೆ. ಉಗ್ರರಂತೆ ಕಾಣುತ್ತಾರೆ. ಕಂಪ್ಲೇಂಟ್ ಕೊಟ್ರೆ ನಮ್ಮ ಕುಟುಂಬಕ್ಕೆ ತೊಂದರೆ ಆಗುತ್ತದೆ. ಇವರು ಅಕ್ಕನನ್ನು ಕೆಲ ದಿನಗಳಿಂದ ಹಿಂಬಾಲಿಸಿದ್ದಾರೆ. ಪ್ರತಿದಿನದ ನಮ್ಮ ಚಲನವಲನಗಳ ಬಗ್ಗೆ ನನ್ನ ಬಳಿ ಹೇಳಿದ್ದಾರೆ. ಅದೆಲ್ಲವೂ ಸರಿಯಾಗಿಯೇ ಇದೆ. ಆದಷ್ಟು ಬೇಗ ಹಣ ಹೊಂದಿಸಿ, ಕುಟುಂಬದ ಜತೆ ನನ್ನನ್ನೂ ಉಳಿಸಿಕೊಳ್ಳಿ. ಇವತ್ತು ನಾನು ಇವರ ಗುರಿ ಆಗಿದ್ದೇನೆ. ನಾಳೆ ಅಕ್ಕನನ್ನೂ ಅಪಹರಿಸಬಹುದು. ನನ್ನಿಂದಲೇ ಈ ಸಮಸ್ಯೆ ಮುಗಿಯಲಿ’ ಎಂದು ಶರತ್ ಹೇಳಿದ್ದರು.

ಕಂಗಾಲಾದ ಕುಟುಂಬ: ಆ ವಿಡಿಯೊಗಳನ್ನು ನೋಡುತ್ತಿದ್ದಂತೆಯೇ ಇಡೀ ಕುಟುಂಬ ಕಂಗಾಲಾಗಿತ್ತು. ಶರತ್‌ ಅವರ ಎಲ್ಲ ಸ್ನೇಹಿತರಿಗೂ ಕರೆ ಮಾಡಿ ವಿಚಾರಿಸಲು ಪ್ರಾರಂಭಿಸಿದ್ದರು.

ಈ ಹಂತದಲ್ಲಿ ಗೆಳತಿ ಶಾಲಿನಿಗೆ ಕರೆ ಮಾಡಿದ್ದ ವಿಶಾಲ್, ‘ನಿನ್ನ ತಮ್ಮನಿಗೆ ಏನಾಯಿತು. ಯಾರೋ ಅಪಹರಿಸಿದ್ದಾರಂತಲ್ಲ. ನನಗೆ ಶರತ್‌ನ ಸಹಪಾಠಿಯೊಬ್ಬ ವಿಚಾರ ತಿಳಿಸಿದ’ ಎಂದು ಹೇಳಿದ್ದ. ಆಗ ಶಾಲಿನಿ ಅವರು ತಮ್ಮ ಮೊಬೈಲ್‌ಗೆ ಬಂದಿದ್ದ ಎರಡು ವಿಡಿಯೊಗಳನ್ನು ಆತನಿಗೆ ಕಳುಹಿಸಿದ್ದರು. ಅವುಗಳನ್ನು ತನ್ನ ತಾಯಿಗೂ ತೋರಿಸಿದ್ದ ವಿಶಾಲ್, ‘ನೋಡಮ್ಮ... ನನ್ನ ಗೆಳತಿಯ ತಮ್ಮನನ್ನು ಯಾರೋ ಅಪಹರಿಸಿದ್ದಾರೆ. ನಾನು ಅವರ ಮನೆಗೆ ಹೋಗಿ ಬರುತ್ತೇನೆ’ ಎಂದು ಹೇಳಿ 10.30ರ ಸುಮಾರಿಗೆ ಮನೆಗೆ ಬಂದಿದ್ದ. ಕೊನೆಗೆ ದೂರು ಕೊಡಲು ಅವರ ಜತೆ ಠಾಣೆಗೂ ತೆರಳಿದ್ದ.

ಶರತ್‌ನನ್ನು ಮುಗಿಸಿಬಿಡಿ: ಪ್ರಕರಣ ದಾಖಲಿಸಿ ಠಾಣೆಯಿಂದ ಹೊರಬರುತ್ತಿದ್ದಂತೆಯೇ ಸಹಚರರಿಗೆ ಕರೆ ಮಾಡಿದ್ದ ವಿಶಾಲ್, ಶರತ್‌ ಅವರನ್ನು ಮುಗಿಸಿಬಿಡುವಂತೆ ಸೂಚನೆ ಕೊಟ್ಟಿದ್ದ. ‘ಶರತ್ ತಂದೆ ಜ್ಞಾನಭಾರತಿ ಠಾಣೆಗೆ ದೂರು ಕೊಟ್ಟಿದ್ದಾರೆ. ಅವನನ್ನು ಜೀವಂತವಾಗಿ ಬಿಟ್ಟರೆ ನಾವೆಲ್ಲ ಜೈಲು ಸೇರಬೇಕಾಗುತ್ತದೆ. ಕೊಲೆ ಮಾಡಿ, ಶವವನ್ನು ಕೆರೆಗೆ ಎಸೆದುಬಿಡಿ. ಹಾಗೆಯೇ, ಯಾವುದೇ ಸಾಕ್ಷ್ಯಗಳು ಉಳಿಯದಂತೆ ನೋಡಿಕೊಳ್ಳಿ’ ಎಂದಿದ್ದ. ಅಂತೆಯೇ ಕಾರಿನಲ್ಲೇ ಅವರನ್ನು ಉಸಿರುಗಟ್ಟಿಸಿ ಕೊಂದ ಆರೋಪಿಗಳು, ನಂತರ ಶವವನ್ನು ತಾವರೆಕೆರೆ ಹೋಬಳಿ ಸೂಲಿವಾರ ಗ್ರಾಮದ ನರಸಿಂಹಯ್ಯನ ಕೆರೆಗೆ ಎಸೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

‌ಕೆರೆಯಿಂದ ತೆಗೆದು ಹೂತರು!
ಶವ ಮೇಲೆ ಬಂದರೆ ಸಿಕ್ಕಿ ಬೀಳುತ್ತೇವೆಂದು ಆರೋಪಿಗಳು ಪ್ರತಿದಿನ ಕೆರೆ ಹತ್ತಿರ ಹೋಗಿ ನೋಡಿ ಹೋಗಿ ಬರುತ್ತಿದ್ದರು. ಸೆ.15ರಂದು ಮೃತದೇಹ ನೀರಿನಲ್ಲಿ ತೇಲುತ್ತಿರುವುದನ್ನು ಕಂಡ ಅವರು, ಅದೇ ದಿನ ಮತ್ತೆ ಮೃತದೇಹಕ್ಕೆ ಕಲ್ಲಿನ ಕಂಬವನ್ನು ಕಟ್ಟಿ ಕೆರೆಯಲ್ಲಿ ಮುಳುಗಿಸಿ ಬಂದಿದ್ದರು. ಆದರೆ, ಕಲ್ಲು ಕಟ್ಟಿದ್ದ ಹಗ್ಗ ತುಂಡಾಗಿ ಸೆ.20ರ ಸಂಜೆ ಶವ ಪುನಃ ಮೇಲೆ ಬಂದಿತ್ತು. ಆಗ ಆರೋಪಿಗಳು ಹೂಳಲು ನಿರ್ಧರಿಸಿದ್ದರು.

ಈ ಹಂತದಲ್ಲಿ 5ನೇ ಆರೋಪಿ ವಿನೋದ್, ಹಂತಕರ ನೆರವಿಗೆ ಬಂದಿದ್ದ. ಶವವನ್ನು ಗೋಣಿ ಚೀಲದಲ್ಲಿ ತುಂಬಿದ ಆರೋಪಿಗಳು, ವಿನೋದ್‌ನ ಕಾರಿನಲ್ಲೇ ಅದನ್ನು ಇಟ್ಟುಕೊಂಡು ನಾಲ್ಕು ತಾಸು ನಗರ ಸುತ್ತಿದ್ದರು. ಕೊನೆಗೆ ರಾತ್ರಿ 11 ಗಂಟೆ ಸುಮಾರಿಗೆ ಕೆರೆಯಿಂದ ಐದು ಕಿ.ಮೀ ದೂರದಲ್ಲಿರುವ ಕು‌ರುಬನಪಾಳ್ಯದ ಕಲ್ಲುಕ್ವಾರಿಗೆ ತೆರಳಿ ಶವ ಹೂತು ಬಂದಿದ್ದರು.

ಹೆಸರಘಟ್ಟ ಮುಖ್ಯರಸ್ತೆಯ ಆಚಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಡಿಪ್ಲೊಮಾ (ಆಟೊಮೊಬೈಲ್) ಓದುತ್ತಿದ್ದ ಶರತ್, ಈ ರೀತಿ ಅಪಹರಣವಾದ ದಿನವೇ ಬರ್ಬರವಾಗಿ ಹತ್ಯೆಯಾಗಿದ್ದರು. ಅಪಹರಣ ಪ್ರಕರಣ ಭೇದಿಸಲು ಸಿಸಿಬಿ ಸಿಬ್ಬಂದಿಯನ್ನು ಒಳಗೊಂಡ ಪಶ್ಚಿಮ ವಿಭಾಗದ ಪೊಲೀಸರ ಆರು ತಂಡಗಳು ಕಾರ್ಯಾಚರಣೆ ಪ್ರಾರಂಭಿಸಿದ್ದವು.

ರೈಡ್ ಟು ಲಡಾಕ್: ‘ಶರತ್ ಅವರ ಲ್ಯಾಪ್‌ಟಾಪ್ ಪರಿಶೀಲಿಸಿದಾಗ, ಬೆಂಗಳೂರಿನಿಂದ ಬೈಕ್‌ನಲ್ಲಿ ಕಾಶ್ಮೀರದ ಲಡಾಕ್‌ಗೆ ಹೋಗುವುದು ಹೇಗೆ ಎಂಬ ಬಗ್ಗೆ ಅವರು ಶೋಧ ನಡೆಸಿದ್ದ ಸಂಗತಿ ಗೊತ್ತಾಯಿತು. ಹೀಗಾಗಿ, ಅವರು ಸ್ನೇಹಿತರ ಜತೆ ಲಡಾಕ್‌ಗೆ ತೆರಳಿರಬಹುದು ಎಂದೇ ಭಾವಿಸಿದ್ದೆವು. ಮೂರ್ನಾಲ್ಕು ದಿನಗಳ ತನಿಖೆ ಬಳಿಕ ಶರತ್‌ ಸ್ನೇಹಿತರೆಲ್ಲ ನಗರದಲ್ಲೇ ಇರುವುದು ಖಚಿತವಾಯಿತು. ಅವರೊಬ್ಬರೇ ಲಡಾಕ್‌ಗೆ ಹೋಗಿರಲು ಸಾಧ್ಯವಿಲ್ಲ. ಏನೋ ತೊಂದರೆಯಾಗಿರಬಹುದು ಎಂಬ ನಿರ್ಧಾರಕ್ಕೆ ಬಂದು ತನಿಖೆ ಚುರುಕುಗೊಳಿಸಿದೆವು’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಡಿಆರ್ ಸುಳಿವು: ‘ಶರತ್‌ ಮೊಬೈಲ್‌ ಸಂಖ್ಯೆ ಪಡೆದು ಪರಿಶೀಲನೆ ನಡೆಸಿದಾಗ ಸೆ.12ರ ರಾತ್ರಿ 10.09ಕ್ಕೆ ದೊಡ್ಡ ಆಲದಮರದ ಬಳಿ ಅವರ ಮೊಬೈಲ್ ಸ್ವಿಚ್ಡ್‌ ಆಫ್‌ ಆಗಿರುವುದು ಗೊತ್ತಾಯಿತು. ಕರೆ ವಿವರ (ಸಿಡಿಆರ್) ಪರಿಶೀಲಿಸಿದಾಗ, ಅವರ ಮೊಬೈಲ್‌ಗೆ ಅದೇ ದಿನ ಸಂಜೆ 5.30ಕ್ಕೆ ಅಪರಿಚಿತ ಸಂಖ್ಯೆಯಿಂದ ಕರೆ ಹೋಗಿರುವುದು ಗೊತ್ತಾಯಿತು. ಅಲ್ಲದೆ, ಅದೇ ಸಂಖ್ಯೆ ರಾತ್ರಿ 9 ಗಂಟೆವರೆಗೂ ಆ ಟವರ್‌ನಿಂದಲೇ ಸಂಪರ್ಕ ಪಡೆದಿದ್ದ ಸಂಗತಿ ‘ಟವರ್‌ಡಂಪ್‌’ ತನಿಖೆಯಿಂದ ಖಚಿತವಾಯಿತು’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘9 ಗಂಟೆ ನಂತರ ಆರೋಪಿ ಸಿಮ್‌ ಕಾರ್ಡ್‌ ಕಿತ್ತೆಸೆದಿದ್ದ. ಆ ಸಂಖ್ಯೆಯ ದಾಖಲಾತಿ ಪರಿಶೀಲಿಸಿದಾಗ ಅದು ವಿಶಾಲ್‌ನ ತಾಯಿಯ ಹೆಸರಿನಲ್ಲಿತ್ತು. ನಂತರ ಮನೆಗೆ ತೆರಳಿ ಅವರನ್ನು ವಿಚಾರಣೆ ನಡೆಸಿದಾಗ, ‘ನಾನು ಯಾವುದೇ ಸಿಮ್‌ ಕಾರ್ಡ್‌ ಖರೀದಿಸಿಲ್ಲ’ ಎಂದು ಹೇಳಿದರು. ಅನುಮಾನದ ಮೇಲೆ ವಿಶಾಲ್‌ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡ. ಆತ ನೀಡಿದ ಸುಳಿವಿನಿಂದ ಗುರುವಾರ ರಾತ್ರಿ ಉಳಿದ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು’ ಎಂದು ಮಾಹಿತಿ ನೀಡಿದರು.

ಶರತ್‌ ಪಾತ್ರದ ಶಂಕೆ?
‘ನನಗೆ ಹಣದ ಅವಶ್ಯಕತೆ ಇತ್ತು. ಈ ವಿಚಾರ ತಿಳಿದು ನನ್ನನ್ನು ಸಂಪರ್ಕಿಸಿದ ಶರತ್, ‘ನಾನು ನಿಮ್ಮ ಜತೆ ಬರುತ್ತೇನೆ. ನಂತರ ತಂದೆಗೆ ಕರೆ ಮಾಡಿ ಮಗನನ್ನು ಅಪಹರಿಸಿರುವುದಾಗಿ ಹೇಳಿ ಹಣ ಕೇಳಿರಿ. ಅವರು ಖಂಡಿತಾ ಇಲ್ಲ ಎನ್ನುವುದಿಲ್ಲ. ಬಂದ ಹಣವನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳೋಣ’ ಎಂದು ಹೇಳಿದ್ದ. ಆತನ ಮಾತಿನಂತೆಯೇ ನಾವೂ ನಡೆದುಕೊಂಡಿದ್ದೇವೆ’ ಎಂದು ವಿಶಾಲ್ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕ್ವಾರಿಯಲ್ಲೇ ಮರಣೋತ್ತರ ಪರೀಕ್ಷೆ
ಹಣದಾಸೆಗೆ ಶರತ್ ಅವರನ್ನು ಅಪಹರಿಸಿದ್ದಾಗಿ ಹಾಗೂ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಹತ್ಯೆಗೈದಿದ್ದಾಗಿ ತಪ್ಪೊಪ್ಪಿಕೊಂಡ ಆರೋಪಿಗಳು, ಮೃತದೇಹ ಹೂತಿದ್ದ ಸ್ಥಳವನ್ನು ಶುಕ್ರವಾರ ಬೆಳಿಗ್ಗೆ ಪೊಲೀಸರಿಗೆ ತೋರಿಸಿದರು.

‘ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಬಿ.ಆರ್.ಹರೀಶ್ ನಾಯಕ್ ಅವರ ಸಮ್ಮುಖದಲ್ಲಿ ಮೃತದೇಹ ಹೊರತೆಗೆಯಲಾಯಿತು. ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ಕ್ವಾರಿ ಬಳಿಯೇ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಮಧ್ಯಾಹ್ನ 12.30ರ ಸುಮಾರಿಗೆ ಪೋಷಕರಿಗೆ ದೇಹ ಹಸ್ತಾಂತರಿಸಿದರು’ ಎಂದು ಕಮಿಷನರ್ ಸುನಿಲ್‌ಕುಮಾರ್ ಮಾಹಿತಿ ನೀಡಿದರು.

ಆರೋಪಿಗಳ ಪೂರ್ವಾಪರ
ಕೆಂಗೇರಿಯ ಕಾಲೇಜುವೊಂದರಲ್ಲಿ ಎಂಜಿನಿಯರಿಂಗ್ ಓದುತ್ತಿರುವ ವಿಶಾಲ್, ಉಲ್ಲಾಳ ಆರ್‌ಟಿಒ ಕಚೇರಿಯ ಏಜೆಂಟ್‌ ಆಗಿಯೂ ಕೆಲಸ ಮಾಡುತ್ತಾನೆ. ವಿನಯ್ ಹಾಗೂ ವಿನೋದ್ ಕ್ಯಾಬ್ ಚಾಲಕರಾಗಿದ್ದು, ಶಾಂತಕುಮಾರ್ ಬಿಡದಿಯ ಮದರ್‌ಸನ್‌ ಕಾರ್ಖಾನೆಯ ನೌಕರನಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT