ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಬಳಿ ನಿಯೋಗ ಶೀಘ್ರ

Last Updated 23 ಸೆಪ್ಟೆಂಬರ್ 2017, 5:59 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ರೈತರ ಜಮೀನುಗಳಿಗೆ ದಾರಿ ಸಮಸ್ಯೆ ಇತ್ಯರ್ಥಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಸೆ.25 ರಂದು ಮುಖ್ಯಮಂತ್ರಿಗಳ ಬಳಿಗೆ ರೈತ ಸಂಘಟನೆಯ ನಿಯೋಗ ತೆರಳಲಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಹಲವು ವರ್ಷಗಳಿಂದ ರೈತರು ತಮ್ಮ ಜಮೀನುಗಳಿಗೆ ತೆರಳಲು ಸಮರ್ಪಕ ದಾರಿ ಇರದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಈ ವಿಷಯ ಕುರಿತು ಮತ್ತೊಮ್ಮೆ ಸರ್ಕಾರದ ಗಮನ ಸೆಳೆದು, ಸಮಸ್ಯೆಯನ್ನು ತೀವ್ರಗತಿಯಲ್ಲಿ ಇತ್ಯರ್ಥ ಪಡಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು. ‘2002 ರವರೆಗೆ ದಾರಿ ಇಲ್ಲದ ಜಮೀನುಗಳಿಗೆ ದಾರಿ ಮಾಡಿಕೊಡುವ ಅಧಿಕಾರ ತಹಶೀಲ್ದಾರರಿಗೆ ಇತ್ತು. ನಂತರ ಸರ್ಕಾರ ಅದನ್ನು ಹಿಂಪಡೆದುಕೊಂಡಿದ್ದರಿಂದ ದಾರಿ ಸಮಸ್ಯೆ ಇತ್ಯರ್ಥಗೊಳಿಸಿಕೊಳ್ಳಲು ರೈತರು ನ್ಯಾಯಾಲಯದ ಮೊರೆಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ ತಹಶೀಲ್ದಾರರಿಗೆ ಇದ್ದ ಅಧಿಕಾರವನ್ನು ಪುನಃ ವಹಿಸಿಕೊಡಬೇಕು. ಮುಂದಿನ ಜಮೀನುಗಳಿಗೆ ತೆರಳಲು ದಾರಿ ನೀಡದೇ ಇರುವ ರೈತರಿಗೆ ದಂಡ ಹಾಕುವ ಅಧಿಕಾರವನ್ನು ಅವರಿಗೆ ನೀಡಬೇಕು’ ಎಂದು ಆಗ್ರಹಿಸಿದರು.

‘ಬಸವನಬಾಗೇವಾಡಿಯು ಉಪ ವಿಭಾಗಾಧಿಕಾರಿ ಕಚೇರಿ ಸ್ಥಾಪನೆಗೆ ಸೂಕ್ತ ಸ್ಥಳವಾಗಿದೆ. ಈ ವಿಷಯವಾಗಿ ಎರಡು ಬಾರಿ ಅಹೋರಾತ್ರಿ ಧರಣಿ ಹಮ್ಮಿಕೊಂಡಾಗ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು, ಹೋಬಳಿ ಕೇಂದ್ರಗಳ ಸ್ಥಾಪನೆ ಹಾಗೂ ಹೊಸ ತಾಲ್ಲೂಕು ರಚನೆಯಾದ ನಂತರ ಈ ವಿಷಯ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದ್ದರು. ಈಗ ಈ ವಿಷಯ ಕುರಿತು ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಹೇಳಿದರು.ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ರಾಠೋಡ, ಉಪಾಧ್ಯಕ್ಷ ಸಿದ್ದರಾಮ ಅಂಗಡಗೇರಿ, ಬಾಪುಗೌಡ ಬಿರಾದಾರ, ಡಾ.ಎಂ.ರಾಮಚಂದ್ರ ಬೊಮ್ಮನಜೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT