ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕೆಪಿಎಲ್‌ಗೆ ಮೊದಲ ಮುನ್ನುಡಿ

Last Updated 23 ಸೆಪ್ಟೆಂಬರ್ 2017, 6:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪುರುಷರ ಮಾದರಿಯಲ್ಲಿ ಮುಂದಿನ ವರ್ಷ ಮಹಿಳಾ ಕೆಪಿಎಲ್‌ ಟೂರ್ನಿ ನಡೆಸಲು ಯೋಜನೆ ರೂಪಿಸುತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಈ ಬಾರಿ ಟ್ವೆಂಟಿ–20 ಮಾದರಿಯ ಪ್ರದರ್ಶನ ಪಂದ್ಯವನ್ನು ಆಯೋಜಿಸಿದೆ. ಈ ಪಂದ್ಯಕ್ಕೆ ಇಲ್ಲಿನ ರಾಜನಗರದ ಕ್ರೀಡಾಂಗಣ ಆತಿಥ್ಯ ವಹಿಸಿದೆ.

ಮಹಿಳಾ ತಂಡದವರಿಗೂ ಕೆಪಿಎಲ್‌ ಟೂರ್ನಿ ನಡೆಸಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಕೇಳಿಬರುತ್ತಿದೆ. ಅದಕ್ಕೆ ಶನಿವಾರ ನಡೆಯಲಿರುವ ಅಧ್ಯ
ಕ್ಷರ ಇಲೆವೆನ್‌ ಮತ್ತು ಕಾರ್ಯದರ್ಶಿ ಇಲೆವೆನ್‌ ನಡುವಣ ಪಂದ್ಯ ಮುನ್ನುಡಿ ಬರೆಯಲಿದೆ.ಈ ಪಂದ್ಯ ಆಯೋಜಿಸಿರುವುದರಿಂದ ಆಟಗಾರ್ತಿಯರಲ್ಲಿಯೂ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ.

‘ಕ್ರಿಕೆಟ್‌ ವಿಷಯದಲ್ಲಿ ಬೇರೆ ಎಲ್ಲಾ ದೇಶಗಳಿಗಿಂತ ನಾವು ಮುಂದಿದ್ದೇವೆ. ಆದರೆ ಮಹಿಳಾ ಕ್ರಿಕೆಟ್‌ ಬೆಳವಣಿಗೆಯಲ್ಲಿ ಹಿಂದೆ ಬಿದ್ದಿದ್ದೇವೆ.ಇಂಗ್ಲೆಂಡ್‌, ಆಸ್ಟ್ರೇಲಿಯಾದಲ್ಲಿ ಈಗಾಗಲೇ ಐಪಿಎಲ್‌ ಮಾದರಿಯಲ್ಲಿ ಮಹಿಳಾ ಲೀಗ್ ನಡೆಯುತ್ತಿದೆ. ವೆಸ್ಟ್ ಇಂಡೀಸ್‌ನಲ್ಲಿಯೂ ಮುಂದಿನ ವರ್ಷ ಟೂರ್ನಿ ಆರಂಭವಾಗಲಿದೆ.

ಈಗ ನಡೆಯುವ ಚೊಚ್ಚಲ ಪ್ರದರ್ಶನ ಪಂದ್ಯ ಮುಂದೆ ಕೆಪಿಎಲ್‌ ಹಾಗೂ ಐಪಿಎಲ್‌ ಟೂರ್ನಿ ಆರಂಭಕ್ಕೆ ವೇದಿಕೆಯಾಗಲಿದೆ’ ಎಂದು ಭಾರತ ತಂಡದ ಆಟಗಾರ್ತಿ ಕರ್ನಾಟಕದ ಕರುಣಾ ಜೈನ್‌ ಹೇಳಿದರು. ಬೆಂಗಳೂರಿನ ಕರುಣಾ ಐದು ಟೆಸ್ಟ್‌, 44 ಏಕದಿನ ಮತ್ತು ಒಂಬತ್ತು ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ.

‘ರಾಜ್ಯ ಕ್ರಿಕೆಟ್‌ ಸಂಸ್ಥೆ ಮಹಿಳಾ ಕ್ರಿಕೆಟ್‌ಗೆ ಉತ್ತಮ ಬೆಂಬಲ ನೀಡುತ್ತದೆ. ಈಗ ಕೆಪಿಎಲ್‌ ನಡೆಸಲು ಯೋಜನೆ ರೂಪಿಸುತ್ತಿರುವ ಕೆಎಸ್‌ಸಿಎ ಕೆಲಸ ಮುಂದೆ ಬೇರೆ ರಾಜ್ಯಗಳಿಗೆ ಪ್ರೇರಣೆಯಾಗಲಿದೆ’ ಎಂದರು.

ಇತ್ತೀಚೆಗೆ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ್ದ ವಿಜಯಪುರದ ರಾಜೇಶ್ವರಿ ಗಾಯಕ್ವಾಡ್‌, ವೇದಾ ಕೃಷ್ಣಮೂರ್ತಿ  ಪ್ರದರ್ಶನ ಪಂದ್ಯದಲ್ಲಿ ಆಡಲಿದ್ದಾರೆ. ರಾಜೇಶ್ವರಿ ಸಹೋದರಿ ರಾಮೇಶ್ವರಿ, ರಾಷ್ಟ್ರೀಯ ತಂಡದಲ್ಲಿ ಆಡಿರುವ ವಿ.ಆರ್‌. ವನಿತಾ ಕೂಡ ತಂಡದಲ್ಲಿದ್ದಾರೆ.

‘ಮುಂದಿನ ವರ್ಷ ಮಹಿಳಾ ಕೆಪಿಎಲ್‌ ಆರಂಭಿಸುವ ಯೋಜನೆಯಿದೆ. ಆದ್ದರಿಂದ ಈಗ ಪ್ರದರ್ಶನ ಪಂದ್ಯ ಆಯೋಜಿಸಿದ್ದೇವೆ. ಮಹಿಳಾ ಕ್ರಿಕೆಟ್‌ ಪ್ರಗತಿಗೆ ಇನ್ನಷ್ಟು ಕೆಲಸ ಮಾಡಬೇಕಿದೆ’ ಎಂದು ಕೆಎಸ್‌ಸಿಎ ವಕ್ತಾರ ವಿನಯ್‌ ಮೃತ್ಯುಂಜಯ ಹೇಳಿದ್ದಾರೆ.

‘ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್‌ ಬ್ಯಾಷ್‌ ಮಾದರಿಯಲ್ಲಿ ನಮ್ಮಲ್ಲಿಯೂ ಮಹಿಳೆಯರಿಗೆ ಟೂರ್ನಿ ನಡೆಯಬೇಕು. ಹೆಚ್ಚು ಪಂದ್ಯಗಳು ಆಡಲು ಅವಕಾಶ ಸಿಕ್ಕರೆ ಮಾತ್ರ ಮಹಿಳಾ ಕ್ರಿಕೆಟ್‌ ಅಭಿವೃದ್ಧಿಯಾಗುತ್ತದೆ. ಕೇವಲ ಅಭ್ಯಾಸ ಮಾಡಿದರೆ ಏನು ಪ್ರಯೋಜನ’ ಎಂದು ರಾಜೇಶ್ವರಿ ಗಾಯಕ್ವಾಡ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT