ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾವೇಶಕ್ಕೆ 5 ಲಕ್ಷ ಜನರ ನಿರೀಕ್ಷೆ

Last Updated 23 ಸೆಪ್ಟೆಂಬರ್ 2017, 6:49 IST
ಅಕ್ಷರ ಗಾತ್ರ

ಕಲಬುರ್ಗಿ: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ ನಗರದಲ್ಲಿ ಸೆ. 24ರಂದು ನಡೆಯಲಿರುವ ಲಿಂಗಾಯತರ ಸಮಾವೇಶದಲ್ಲಿ ಸುಮಾರು 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಾಸಕ ಬಿ.ಆರ್.ಪಾಟೀಲ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ಸಮಾವೇಶದ ಅಂಗವಾಗಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಗಂಜ್‌ ಪ್ರದೇಶದಿಂದ ಮೆರವಣಿಗೆ ಹೊರಟು, ಸೂಪರ್‌ ಮಾರುಕಟ್ಟೆ, ಜಗತ್‌ ವೃತ್ತದ ಮೂಲಕ ನೂತನ ವಿದ್ಯಾಲಯ ತಲುಪಲಾಗುವುದು. ನಂತರ ವಿದ್ಯಾಲಯ ಆವರಣದಲ್ಲಿ ಸಮಾವೇಶ ನಡೆಯಲಿದೆ’ ಎಂದು ತಿಳಿಸಿದರು.

’ಸಮಾವೇಶದ ನಂತರ ನಗರದ ಬಸವೇಶ್ವರ ವೃತ್ತದಲ್ಲಿ ಸಮಾವೇಶದ ನಿರ್ಣಯವಿರುವ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಹೇಳಿದರು. ’ರಾಜ್ಯದ ನೂರಾರು ಮಠಾಧೀಶರು, ಚಿಂತಕರು, ಸಚಿವರು, ಶಾಸಕರು ಭಾಗವಹಿಸುವರು. ಮಹಾರಾಷ್ಟ್ರದ ಸೊಲ್ಲಾಪುರ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶದಿಂದಲೂ ಸಮಾವೇಶಕ್ಕೆ ಜನರು ಬರಲಿದ್ದಾರೆ. ಜನರಿಗೆ ಆಯಾ ಮಾರ್ಗದಲ್ಲಿಯೇ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.

ಆಳಂದ ಮಾರ್ಗದಲ್ಲಿ ಬರುವವರಿಗೆ ಬೆಣ್ಣೂರು ಕಲ್ಯಾಣ ಮಂಟಪದಲ್ಲಿ, ಸೇಡಂ ಮಾರ್ಗದಲ್ಲಿ ಹಾರಕೋಡ ಕಲ್ಯಾಣ ಮಂಟಪದಲ್ಲಿ, ಜೇವರ್ಗಿ ಮಾರ್ಗದಲ್ಲಿ ಕೋಟನೂರು ಮಠ, ಬೀದರ್– ಹುಮುನಾಬಾದ್‌ ಮಾರ್ಗದಲ್ಲಿ ಶಟಗಾರ ದಾಲ್‌ಮಿಲ್‌ನಲ್ಲಿ ಹಾಗೂ ಅಫಜಲಪುರ ಮಾರ್ಗದಲ್ಲಿ ಬರುವವರಿಗೆ ಹೈಕೋರ್ಟ್‌ ಹತ್ತಿರ ವ್ಯವಸ್ಥೆ ಇದೆ’ ಎಂದು ಹೇಳಿದರು.

’ಸಮಾವೇಶವು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸುತ್ತಿದ್ದಾರೆ. ಕಾಂಗ್ರೆಸ್‌ ಪ್ರಾಯೋಜಿತ ಎನ್ನುವುದು ಸರಿಯಲ್ಲ. ಬಿಜೆಪಿ ನಾಯಕರು ಬಾರದಿದ್ದರೂ ಆ ಪಕ್ಷದ ಸಾವಿರಾರು ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಇದು ಯಾರ ವಿರುದ್ಧವೂ ನಡೆಯುತ್ತಿರುವ ಸಮಾವೇಶವಲ್ಲ. ಲಿಂಗಾಯತ ಧರ್ಮ ಮಾನ್ಯತೆಗಾಗಿ ನಮ್ಮ ಹೋರಾಟ ನಡೆಯುತ್ತಿದೆ. ವೀರಶೈವ ಮುಖಂಡರನ್ನೂ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಅವರು ಸಹ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಅವರು ಸ್ಪಷ್ಟಪಡಿಸಿದರು.

’ವಿಧಾನಸಭೆ ಚುನಾವಣೆ ಹತ್ತಿರವಾಗಿದೆ ಎಂಬ ರಾಜಕೀಯ ಕಾರಣಕ್ಕೆ ಸಮಾವೇಶ ನಡೆಯುತ್ತಿಲ್ಲ. ಲಿಂಗಾಯತರ ಹೋರಾಟಕ್ಕೆ ಕಾಲ ಪಕ್ವವಾಗಿರುವುದರಿಂದ ವಿಚಾರ ಸ್ಫೋಟಗೊಂಡಿದೆ. ಚಳವಳಿಯಲ್ಲಿ ಎಲ್ಲ ಪಕ್ಷಗಳ ನಾಯಕರು ಭಾಗವಹಿಸಬಹುದು. ನಾವು ಹಿಂದೂ ಅಥವಾ ಲಿಂಗಾಯತ ಧರ್ಮವನ್ನು ಒಡೆಯುತ್ತಿಲ್ಲ.

ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವುದರಿಂದ ಹಿಂದೂ ಧರ್ಮಕ್ಕೆ ಧಕ್ಕೆ ಆಗುತ್ತದೆ ಎಂಬ ವಾದವೂ ಸರಿಯಲ್ಲ. ಬಸವಣ್ಣನ ಆಶಯದಂತೆ ಎಲ್ಲರನ್ನೂ ಒಟ್ಟುಗೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಟೀಕೆ ಮಾಡುವ ಬಿಜೆಪಿ ನಾಯಕರೇ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಅವರು ಟೀಕಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮುಖಂಡರಾದ ರವೀಂದ್ರ ಶಹಬಾದಿ, ಆರ್.ಜಿ.ಶಟಗಾರ, ಸಾಯಿಬಣ್ಣ ಹೋಳ್ಕರ್‌, ಭೀಮಾಶಂಕರ ಬಿಲಗುಂದಿ, ಭೀಮಣ್ಣ ಗೋನಾಳ, ಶಿವಲಿಂಗಪ್ಪ ಗೌಳಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT