ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಮಹಾರ‍್ಯಾಲಿಗೆ ಬೆಂಬಲ

Last Updated 23 ಸೆಪ್ಟೆಂಬರ್ 2017, 7:09 IST
ಅಕ್ಷರ ಗಾತ್ರ

ಯಾದಗಿರಿ:‘ಲಿಂಗಾಯತ ಸ್ವತಂತ್ರ ಧರ್ಮ ಹಕ್ಕೊತ್ತಾಯಕ್ಕೆ ಒತ್ತಾಯಿಸಿ ಸೆ. 24ರಂದು ಕಲಬುರ್ಗಿ ನಗರದಲ್ಲಿ ನಡೆಯಲಿರುವ ಲಿಂಗಾಯತ ಮಹಾರ‍್ಯಾಲಿ ಬೆಂಬಲಿಸಿ ಗುರುಮಠಕಲ್‌ ಮತಕ್ಷೇತ್ರದಿಂದ 150 ವಾಹಗಳಲ್ಲಿ ಜನರು ತೆರಳಲಿದ್ದಾರೆ’ ಎಂದು ಗುರುಮಠಕಲ್ ವಿರಕ್ತಮಠದ ಪೀಠಾಧ್ಯಕ್ಷ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಿಂಗಾಯತ ಧರ್ಮಕ್ಕೆ 900 ವರ್ಷದ ಇತಿಹಾಸ ಇದೆ. ಐದು ದಶಕಗಳಿಂದ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಹೋರಾಟ ನಡೆಸುತ್ತಲೇ ಬರಲಾಗಿದೆ. ಆದರೆ, ಇದುವರೆಗೂ ಮಾನ್ಯತೆ ಸಿಕ್ಕಿಲ್ಲ. ಈಗ ಅದಕ್ಕೆ ಕಾಲ ಪಕ್ವವಾಗಿದ್ದು, ಹೋರಾಟದ ಸ್ವರೂಪ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ರ‍್ಯಾಲಿಯಲ್ಲಿ ಭಾಗವಹಿಸುವ ಮೂಲಕ ಹೋರಾಟಕ್ಕೆ ಈ ಭಾಗದ ಲಿಂಗಾಯತರು ಬೆಂಬಲ ವ್ಯಕ್ತಪಡಿಸಲಿದ್ದಾರೆ’ ಎಂದರು.

‘ಬುದ್ಧ, ಯೇಸು, ಮಹಮ್ಮದ್ ಪೈಗಂಬರ್ ಅವರಂತೆ ಬಸವಣ್ಣ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ. ಆದರೆ, ಅದರೊಟ್ಟಿಗೆ ವೀರಶೈವ ಪಂಥ ಸೇರಿಕೊಂಡಿದ್ದರಿಂದ ಪ್ರತ್ಯೇಕತೆಯ ಮಾನ್ಯತೆಗೆ ತಡೆಯಾಗಿದೆ. ಈಗ ಅನೇಕ ಅಧ್ಯಯನ ಪೀಠಗಳು ಸಹ ಲಿಂಗಾಯತ ಪ್ರತ್ಯೇಕ ಧರ್ಮ ಎಂಬುದಾಗಿ ಸಾಬೀತುಪಡಿಸಿವೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಎಂಬುದಾಗಿ ಸಾಂವಿಧಾನಿಕ ಮಾನ್ಯತೆ ನೀಡಬೇಕಿದೆ’ ಎಂದು ವಿಶ್ಲೇಷಿಸಿದರು.

‘ಈಗಾಗಲೇ ಅಖಿಲ ಭಾರತ ವೀರಶೈವ ಮಹಾಸಭೆ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಕೇಂದ್ರಕ್ಕೆ ಎರಡು ಬಾರಿ ಅರ್ಜಿ ಸಲ್ಲಿಸಿದೆ. ಎರಡೂ ಬಾರಿ ಅರ್ಜಿ ತಿರಸ್ಕೃತಗೊಂಡಿದೆ. ಆದರೆ, ಈಗಿರುವ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಪಡೆಯುವ ಎಲ್ಲಾ ಲಕ್ಷಣಗಳು ಇವೆ. ಹಾಗಾಗಿ, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ವೀರಶೈವ ಮಹಾಸಭೆ ಸಹಕರಿಸಬೇಕಿದೆ’ ಎಂದರು.

ಲಿಂಗಾಯತ ಧರ್ಮ ಸಮನ್ವಯ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಗುಂಡಪ್ಪ ಕಲಬುರ್ಗಿ ಮಾತ ನಾಡಿ,‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಸಿಕ್ಕರೆ ಲಿಂಗಾಯತ ಧರ್ಮೀಯರು ಅಲ್ಪಸಂಖ್ಯಾತರ ಸ್ಥಾನ ಮಾನ, ಮೀಸಲಾತಿ, ಇತರೆ ಸೌಲಭ್ಯಗಳು ಸಿಗಲಿವೆ. ಇದರಿಂದ ಹಿಂದುಳಿದಿರುವ ಲಿಂಗಾಯತರಿಗೆ ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅನುಕೂಲ ಆಗಲಿದೆ.

ಅಲ್ಲದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸುವವರಿಗೆ ವಿಶೇಷ ಪ್ಯಾಕೇಜ್ ಸಹ ಸಿಗಲಿದೆ. ಇದರಿಂದ ಸಮುದಾಯ ಅಭಿವೃದ್ಧಿ ಹೊಂದಲಿದೆ’ ಎಂದರು.‘ಲಿಂಗಾಯತ ಮಹಾರ‍್ಯಾಲಿಯಲ್ಲಿ ಕನಿಷ್ಠ 4ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಾಹಿತಿಗಳಾದ ವಿಶ್ವನಾಥರೆಡ್ಡಿ ಗೊಂದೆಡಗಿ, ವಿಶ್ವಾರಾಧ್ಯ ಸತ್ಯಂಪೇಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT