ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿನಾಥನ್‌ ವರದಿ ಜಾರಿಗೆ ಆಗ್ರಹ

Last Updated 23 ಸೆಪ್ಟೆಂಬರ್ 2017, 7:34 IST
ಅಕ್ಷರ ಗಾತ್ರ

ಮಂಡ್ಯ: ‘ರೈತರು ಬೆಳೆದ ಬೆಳೆಗಳ ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟು ಲಾಭಾಂಶ ನೀಡಬೇಕು ಎಂದು ಶಿಫಾರಸು ಮಾಡಿರುವ ಸ್ವಾಮಿನಾಥ್‌ ಆಯೋಗದ ವರದಿಯನ್ನು ಕೇಂದ್ರ ಸರ್ಕಾರ ಶೀಘ್ರ ಜಾರಿಗೊಳಿಸಬೇಕು’ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಯಾದವ್‌ ಒತ್ತಾಯಿಸಿದರು.

ರೈತ ಮುಕ್ತಿ ಜಾಥಾ ಅಂಗವಾಗಿ ಅಖಿಲ ಭಾರತ ರೈತ ಸಂಘಟನೆಗಳ ಸಮನ್ವಯ ಸಮಿತಿ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರೈತರ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ರೈತರು ಪಾಂಡವರಾಗಿದ್ದು ಸತ್ಯಕ್ಕಾಗಿ ಹೋರಾಡುವ ಕಾಲ ಹತ್ತಿರ ಬಂದಿದೆ. ಕುರುಕ್ಷೇತ್ರ ಯುದ್ಧ ತಡೆಯಲು ಪಾಂಡವರು ಅಂದು ಐದು ಹಳ್ಳಿ ಕೇಳಿದರು. ಆದರೆ ನಮಗೆ ಐದು ಹಳ್ಳಿ ಬೇಡ. ಕೇವಲ ಎರಡು ಬೇಡಿಕೆ ಈಡೇರಿಸಿ. ದೇಶದ ರೈತರ ಸಾಲ ಸಂಪೂರ್ಣವಾಗಿ ಮನ್ನಾ ಮಾಡಬೇಕು. ಸ್ವಾಮಿನಾಥನ್‌ ಆಯೋಗದ ಶಿಫಾರಸು ಜಾರಿಯಾಗಬೇಕು. ಇವೆರಡು ಬೇಡಿಕೆ ಈಡೇರಿದರೆ ರೈತರು ಇಡೀ ದೇಶಕ್ಕೆ ಅನ್ನ ಕೊಡುತ್ತಾರೆ’ ಎಂದು ಹೇಳಿದರು.

‘ಬಿಜೆಪಿ ಅಧಿಕಾರ ಹಿಡಿಯುವಾಗ ತನ್ನ ಪ್ರಣಾಳಿಕೆಯಲ್ಲಿ ಸ್ವಾಮಿನಾಥನ್‌ ಆಯೋಗದ ಶಿಫಾರಸು ಜಾರಿ ಗೊಳಿಸುವುದಾಗಿ ಭರವಸೆ ನೀಡಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಇದೇ ಆಯೋಗದ ಶಿಫಾರಸು ಜಾರಿಗಾಗಿ ಒತ್ತಾಯ ಮಾಡುತ್ತಿದ್ದರು. 10 ವರ್ಷದ ಹಿಂದೆ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳು ಜಾರಿಯಾಗಿದ್ದರೆ ರೈತರ ಪ್ರತಿ ವರ್ಷ ₹ 15 ಲಕ್ಷ ಕೋಟಿ ಹಣ ಉಳಿಯುತ್ತಿತ್ತು. ಸರ್ಕಾರಗಳು ರೈತರ ಋಣದಲ್ಲಿವೆ’ ಎಂದು ಆರೋಪಿಸಿದರು.

‘ನವಲಗುಂದ, ನರಗುಂದ ಬಂಡಾಯ, ಕಾಗೋಡು ಚಳವಳಿಗೆ ಇಡೀ ರಾಷ್ಟ್ರದಲ್ಲೇ ಹೆಸರುವಾಸಿಯಾಗಿರುವ ಕರ್ನಾಟಕದ ಮಣ್ಣಿನಲ್ಲಿ ಹೊಸ ಹೋರಾಟ ಆರಂಭವಾಗಿದೆ. ಪಾಂಡವಪುರದ ಪುತ್ರರು, ಪುತ್ರಿಯರು ಇಂದು ಹೋರಾಟದ ಹೊಸ ಸಂಕಲ್ಪಕ್ಕೆ ಶಪಥ ಮಾಡಬೇಕು.

‘ಅ.20ರಂದು ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಕುರುಕ್ಷೇತ್ರ ಯುದ್ಧ ನಡೆಯಲಿದೆ. ಸಂಸತ್‌ ಭವನದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರೆ. ರಾಮ್‌ಲೀಲಾ ಮೈದಾನದಲ್ಲಿ ರೈತ ಸಂಸತ್‌ ನಡೆಯಲಿದೆ. ರೈತರ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಈ ಅಧಿವೇಶನ ಕ್ರಾಂತಿಕಾರಕ ಹೆಜ್ಜೆಯಾಗಿದ್ದು ಈ ಹೋರಾಟದಲ್ಲಿ ನೀವೆಲ್ಲರೂ ಪಾಲ್ಗೊಳ್ಳಬೇಕು. ಸರ್ಕಾರಗಳ ಅವೈಜ್ಞಾನಿಕ ನೀತಿಯಿಂದ ಕರ್ನಾಟಕದಲ್ಲಿ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಪೊಲೀಸರ ಗುಂಡಿಗೆ ಆರು ಮಂದಿ ರೈತರು ಜೀವ ಕಳೆದುಕೊಂಡಿದ್ದಾರೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದೆ’ ಎಂದು ಹೇಳಿದರು.

ಸಂಸದ ರಾಜೀವ್ ಶೆಟ್ಟಿ ಮಾತನಾಡಿ ‘ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದಾಗ ನಾನು ಅವರ ಜೊತೆಯಲ್ಲೇ ಇದ್ದೆ. ಆದರೆ ಅವರು ಪ್ರಧಾನಿಯಾಗಿ ಮೂರುವರೆ ವರ್ಷಗಳಾದರೂ ರೈತರ ಪರ ಮಾತನಾಡದೇ ಇರುವುದು ನನ್ನನ್ನು ಕಂಗೆಡಿಸಿತು. ಹೀಗಾಗಿ ಅವರ ಜೊತೆಗಿನ ಸಂಬಂಧ ಕಡಿದುಕೊಂಡೆ. ರೈತರ ಪರ ಧ್ವನಿ ಎತ್ತದ ಪ್ರಧಾನಿಗಳು ನಮ್ಮನ್ನು ಆಳುತ್ತಿರುವುದು ದುರ್ದೈವ’ ಎಂದು ಹೇಳಿದರು.

ಹೋರಾಟ ಸಮನ್ವಯ ಸಮಿತಿಯ ಸಂಚಾಲಕ ವಿ.ಎಂ.ಸಿಂಗ್‌ ಮಾತನಾಡಿ ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ರೈತರಿಗೆ ಮೋಸ ಮಾಡಿದ್ದಾರೆ. ಅವರ ಆಡಳಿತದಿಂದ ಕಾರ್ಪೊರೇಟ್‌ ದೊರೆಗಳಿಗೆ ಮಾತ್ರ ಲಾಭವಾಗುತ್ತಿದೆ. ಅ.20ರಂದು ನಡೆಯುವ ರೈತ ಸಂಸತ್‌ನಲ್ಲಿ ಅವರ ಆಡಳಿತದ ವಿರುದ್ಧ ನವದೆಹಲಿಯಲ್ಲಿ ಬೃಹತ್‌ ಹೋರಾಟ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಸಿಪಿಐಎಂ ಮುಖಂಡ ಡಾ.ವಿಜುಶೆಟ್ಟಿ, ‘ಮೋದಿ ಚುನಾವಣೆ ಸಂದರ್ಭದಲ್ಲಿ ಸ್ವಾಮಿನಾಥನ್‌ ವರದಿ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಪ್ರಧಾನಿ ಆಗಿ ಅಧಿಕಾರ ವಹಿಸಿಕೊಂಡ ನಂತರ ವರದಿಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸುವ ಮೂಲಕ ಈ ದೇಶದ ಕೋಟ್ಯಂತರ ರೈತರಿಗೆ ಮೋಸ ಮಾಡಿದ್ದಾರೆ. ಸ್ವಾಮಿನಾಥನ್‌ ವರದಿ ಜಾರಿಯಾದರೆ ರೈತರ ಸಾಲ ತಾನಾಗಿ ಮನ್ನಾವಾಗುತ್ತದೆ’ ಎಂದು ಹೇಳಿದರು.

ಶಾಸಕ ಕೆ.ಎಸ್‌.ಪುಟ್ಟಣ್ಣ, ರೈತಸಂಘ ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ.ಗಂಗಾಧರ್‌, ಮುಖಂಡರಾದ ಚುಕ್ಕಿ ನಂಜುಂಡ ಸ್ವಾಮಿ, ಪಚ್ಚೆ ನಂಜುಂಡಸ್ವಾಮಿ, ಕವಿತಾ ಕರಗಂಟಿ, ಚಾಮರಸ ಮಾಲಿಪಾಟೀಲ, ಡಾ.ವಾಸು, ಶ್ರೀರಾಮ ರೆಡ್ಡಿ, ಬೈಯ್ಯಾರೆಡ್ಡಿ, ನಾಗೇಂದ್ರ, ಬಿ.ರೇವಣ್ಣ ಹಾಜರಿದ್ದರು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT