ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ದಸರಾ; ಮೇಳೈಸಿದ ಗ್ರಾಮೀಣ ಸೊಗಡು

Last Updated 23 ಸೆಪ್ಟೆಂಬರ್ 2017, 8:27 IST
ಅಕ್ಷರ ಗಾತ್ರ

ಮೈಸೂರು:‌ ಸಾಲು ಸಾಲು ಎತ್ತಿನ ಗಾಡಿಗಳು. ನಗರದ ಮಧ್ಯ ಭಾಗದಲ್ಲೂ ದೇಸಿ ಸೊಗಡು. ಕುರಿ ಮಂದೆಯ ಜತೆ ಸಾಗುತ್ತಿದ್ದ ಅವುಗಳ ಒಡೆಯ. ಜಾನಪದ ಕಲಾತಂಡಗಳ ಮೆರುಗು. ಡೊಳ್ಳು, ತಮಟೆಯ ನಾದ. ಹಳ್ಳಿಗಳಲ್ಲಿ ನಡೆಯುವ ಸುಗ್ಗಿಯ ಸೊಬಗನ್ನು ನೆನಪಿಸಿದ ಸನ್ನಿವೇಶ... ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಶುಕ್ರವಾರ ಸಾಗಿಬಂದ ರೈತ ದಸರಾದ ಮೆರವಣಿಗೆಯಲ್ಲಿ ಕಂಡ ಚಿತ್ರಣವಿದು.

ಕಂಸಾಳೆ, ಡೊಳ್ಳು ಕುಣಿತ, ತಮಟೆ, ವಿವಿಧ ಜನಪದ ವೇಷ, ಸ್ತಬ್ಧಚಿತ್ರಗಳ ಜತೆಗೆ ಸಾಗಿದ ಮೆರವಣಿಗೆಗೆ ಎತ್ತಿನಗಾಡಿಗಳನ್ನು ಮುನ್ನಡೆಸುವ ಮೂಲಕ ಮೇಯರ್‌ ಎಂ.ಜೆ.ರವಿಕುಮಾರ್‌ ಚಾಲನೆ ನೀಡಿದರು.

ಕೃಷಿ, ತೋಟಗಾರಿಕೆ, ಪಶುಪಾಲನೆ ಮತ್ತು ಹೈನುಗಾರಿಕೆ, ಅರಣ್ಯಕ್ಕೆ ಸಂಬಂಧಿಸಿದ ಸ್ತಬ್ಧಚಿತ್ರಗಳು ಮನಸೆಳೆದವು. ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರುಗು ನೀಡಿದರು.

ವಸ್ತು ಪ್ರದರ್ಶನ: ಜೆ.ಕೆ.ಮೈದಾನದಲ್ಲಿ ಹಮ್ಮಿಕೊಂಡಿದ್ದ ಕೃಷಿ ವಸ್ತುಪ್ರದರ್ಶನವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಶಿವಣ್ಣ ಉದ್ಘಾಟಿಸಿದರು.
ವೈಜ್ಞಾನಿಕ ಬೇಸಾಯ ಮಾದರಿ, ಕಿರು ಅಣೆಕಟ್ಟೆ, ನೀರಾವರಿ ಪದ್ಧತಿಯ ಕುರಿತ ಕೃಷಿ ಇಲಾಖೆಯ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು. ತೋಟಗಾರಿಕೆ ಇಲಾಖೆ ಅಭಿವೃದ್ಧಿಪಡಿಸಿರುವ ವಿವಿಧ ತಳಿಗಳು, ಅವುಗಳ ಇಳುವರಿ, ನಾಟಿ ಯಂತ್ರಗಳು, ಸಮೃದ್ಧ ಬೆಳೆಗಳ ಪ್ರದರ್ಶನ ರೈತರ ಮನ ಸೆಳೆಯುವಂತಿತ್ತು.

ಮಂಡ್ಯದ ವಿ.ಸಿ.ಫಾರಂ, ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರ, ಮೀನುಗಾರಿಕಾ ಇಲಾಖೆ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ರೇಷ್ಮೆ ಇಲಾಖೆಯ ಮಳಿಗೆಗಳಲ್ಲಿ ಮಾಹಿತಿ, ಪ್ರಾತ್ಯಕ್ಷಿಕೆಗಳನ್ನೂ ನೀಡಲಾಗುತ್ತಿತ್ತು. ಕೃಷಿ ಯಂತ್ರೋಪಕರಣಗಳಿಗೆ ಸಿಗುವ ಸಹಾಯಧನದ ಬಗ್ಗೆಯೂ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು.

ರೈತ ದಸರಾ: ಮೈಸೂರು ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೈತ ದಸರಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನಾ ಚಾಲನೆ ನೀಡಿದರು. ರೈತರು ಆತ್ಮಹತ್ಯೆಗೆ ಮುಂದಾಗಬಾ ರದು. ಆಧುನಿಕ ಕೃಷಿ ಪದ್ಧತಿಯನ್ನು ಅನುಸರಿಸಿಕೊಂಡು ಬೆಳೆ ಬೆಳೆಯಬೇಕು. ಸರ್ಕಾರದ ಸವಲತ್ತುಗಳನ್ನು ಬಳಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ಬದಲಾವಣೆ ಅಗತ್ಯ: ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಇಳುವರಿಯೂ ಅಧಿಕಗೊಂಡು ರೈತರು ಲಾಭ ಗಳಿಸಬಹುದು. ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿರುವ ರೈತರು ಹೊಸ ಪದ್ಧತಿಯನ್ನು ಒಪ್ಪಿಕೊಳ್ಳಬೇಕು ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಂ.ಶಿವಣ್ಣ ಸಲಹೆ ನೀಡಿದರು.

ರೈತರಲ್ಲಿ ಕೌಶಲದ ಕೊರತೆ ಇದೆ. ಅದನ್ನು ನೀಗಿಸಬೇಕು. ನೀರಿನ ಸದ್ಬಳಕೆ ಆಗಬೇಕು. ಅಲ್ಲದೆ, ಮುಂದಿನ ದಿನಗಳಲ್ಲಿ ಆಹಾರದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಜನಸಂಖ್ಯೆಯ ಏರಿಕೆಗೆ ಅನುಗುಣವಾಗಿ ನೋಡುವುದಾದರೆ ಇಂದಿನ ಪ್ರಮಾಣಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಆಹಾರ ಉತ್ಪಾದನೆ ಆಗಬೇಕಿದೆ ಎಂದು ಅವರು ಹೇಳಿದರು.
ತಾಂತ್ರಿಕತೆಯನ್ನು ಅಳವಡಿಸುವ ಮೂಲಕ ಬೇಸಾಯಕ್ರಮಗಳನ್ನು ಉತ್ತಮಪಡಿಸಿಕೊಳ್ಳಬೇಕು. ವಿಜ್ಞಾನಿಗಳ, ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ಅದಕ್ಕೆ ತಕ್ಕಂತೆ ಬೆಳೆ ಬೆಳೆಯಬೇಕು ಎಂದು ಅವರು ಸಲಹೆ ನೀಡಿದರು.

ರೈತ ದಸರಾ ಉಪಸಮಿತಿ ಅಧ್ಯಕ್ಷ ಚೌಹಳ್ಳಿ ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಮಹದೇವ ಗಾಣಿಗ್‌, ಹಿರೇಹಳ್ಳಿ ಸೋಮೇಶ್‌, ದಯಾನಂದ ಮೂರ್ತಿ, ರಮೇಶ್‌, ಸಿ.ಶಿವಶಂಕರ್‌, ರವಿಶಂಕರ್‌, ಜಂಟಿ ಕೃಷಿ ನಿರ್ದೇಶಕ ಕೆ.ಎಂ.ಸೋಮಸುಂದ್ರ ಭಾಗವಹಿಸಿದ್ದರು.

ನೀರಿನ ಸದ್ಬಳಕೆ ಬಗ್ಗೆ ಡಾ.ಸಿ.ರಾಮಚಂದ್ರ, ಸಿರಿಧಾನ್ಯಗಳ ಮಹತ್ವ, ಬೇಸಾಯ ಕ್ರಮ ಡಾ.ಕೆ.ಎಸ್‌.ಶುಭಶ್ರೀ, ಸಾವಯವ ಕೃಷಿ ಕುರಿತು ಡಾ.ಸಿ.ಗೋವಿಂದರಾಜು, ಸಾವಯವ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕುರಿತು ಕೆ.ಎಸ್‌.ಮುನಿರಾಜು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT