ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು ಬಂದರು ಜಾಗ ಬಿಡಿ....

Last Updated 23 ಸೆಪ್ಟೆಂಬರ್ 2017, 8:55 IST
ಅಕ್ಷರ ಗಾತ್ರ

ತುಮಕೂರು: ’ರೈತರು ಬಂದರು ಜಾಗ ಬಿಡಿ’ ಎಂಬ ಘೋಷಣೆ ಮತ್ತೇ ಮೊಳಗುತ್ತಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಸಲ 170 ರೈತಪರ ಸಂಘಟನೆಗಳು ಒಂದಾಗಿ ಹೋರಾಟಕ್ಕೆ ದುಮುಕಿವೆ.ದೇಶದಾದ್ಯಂತ ಜಾಥಾ ನಡೆಸುತ್ತಿವೆ. ಜಾಥಾವು ರಾತ್ರಿ ನಗರಕ್ಕೆ ಬಂದಿದೆ. ಸೆ.23ರಂದು (ಶನಿವಾರ) ಬೆಳಿಗ್ಗೆ 11ಕ್ಕೆ ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ.

‘ಆಳುವ ಸರ್ಕಾರಗಳ ಕಪಟ ನೀತಿಗಳಿಂದಾಗಿ ಅನ್ನದಾತ ಕಷ್ಟಗಳ ಜತೆ ತೊಳಲಾಡುತ್ತಿದ್ದಾನೆ. ಯಾವ ಸರ್ಕಾರಗಳು ರೈತರು ಕಷ್ಟಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತಿಲ್ಲ. ಇದಕ್ಕಾಗಿ ರೈತರೆಲ್ಲರೂ ಒಂದಾಗಲೇಬೇಕಾಗಿದೆ. ಈ ಸರ್ಕಾರಗಳ ನೀತಿಗಳನ್ನು ಹಿಮ್ಮೆಟ್ಟಿಸಬೇಕಾಗಿದೆ. ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಲಿದೆ’ ಎಂದು ಹೇಳುತ್ತಾರೆ ಪ್ರಾಂತ ರೈತ  ಸಂಘದ ಮುಖಂಡ ಬಿ. ಉಮೇಶ್‌.

ನವೆಂಬರ್‌ 20ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ರೈತ ಸಂಸತ್‌ ಗೆ ಪೂರ್ವಭಾವಿಯಾಗಿ ರೈತಪರ ಸಂಘಟನೆಗಳು ರೈತಮುಕ್ತಿ ಜಾಥಾ ನಡೆಸುತ್ತಿವೆ. ಜಾಥಾವು ರಾತ್ರಿ ನಗರಕ್ಕೆ ಬಂದಿದ್ದು, ಶನಿವಾರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ತೆಲಂಗಾಣದಲ್ಲಿ ಆರಂಭವಾದ ಜಾಥಾ ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಸಾಗಿ ರಾಜ್ಯಕ್ಕೆ ಬಂದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ರೈತರ ಸಮಾವೇಶ ಮುಗಿಸಿಕೊಂಡು ತುಮಕೂರಿಗೆ ಬಂದಿದೆ.  ದೇಶದ ವಿವಿಧ ಭಾಗಗಳ ರೈತಪರ ಹೋರಾಟಗಾರರು, ಮುಖಂಡರು ಜಾಥಾದಲ್ಲಿ ಇದ್ದಾರೆ.

‘ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷಗಳಾಗುತ್ತಿದ್ದರೂ ಅನ್ನದಾತ ಸಂಕಷ್ಟಗಳಿಂದ ಮುಕ್ತನಾಗಿಲ್ಲ. ದೇಶದಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಆತ್ಮಹತ್ಯೆ ವಿಚಾರದಲ್ಲಿ ರಾಜ್ಯದಲ್ಲಿ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಇದಕ್ಕೆಲ್ಲ ಕೇಂದ್ರ, ರಾಜ್ಯ ಸರ್ಕಾರಗಳ ನೀತಿಗಳೇ ಕಾರಣ’ ಎನ್ನುತ್ತಾರೆ ರಾಜ್ಯ ರೈತ ಸಂಘದ ಆನಂದ ಪಟೇಲ್‌.

‘ದೇಶದ ವಿವಿಧ ರಾಜ್ಯಗಳಲ್ಲಿ ಅನೇಕ ರೈತಪರ ಸಂಘಟನೆಗಳು ಹೋರಾಡುತ್ತಲೇ ಬಂದಿದ್ದರೂ ಪ್ರಯೋಜನವಾಗಿಲ್ಲ. ರೈತರನ್ನು ಕೇವಲ ಮತಬ್ಯಾಂಕ್‌ ರಾಜಕಾರಣಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಇದೇ ಕಾರಣಕ್ಕಾಗಿಯೇ ರೈತ ಸಂಘಟನೆಗಳನ್ನು ಒಡೆಯಲಾಗುತ್ತಿದೆ. ಆದ್ದರಿಂದ ರಾಷ್ಟ್ರದಾದ್ಯಂತ ರೈತಪರ ಹೋರಾಟಕ್ಕಾಗಿ ಕ್ರಾಂತಿಕಾರಕ ಹೆಜ್ಜೆ ಇಡುವ ಅಗತ್ಯವನ್ನು ಮನಗಂಡ ರಾಷ್ಟ್ರೀಯ ಮಟ್ಟದಲ್ಲಿ  ರೈತ ಹೋರಾಟ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ’ ಎಂದು ಹೇಳಿದರು.

‘ನವದೆಹಲಿಯ ಸಂಸತ್‌ ಭವನದಲ್ಲಿ ಚಳಿಗಾಲದ ಅಧಿವೇಶನ ನಡೆಯುವಾಗ ರಾಮ್‌ ಲೀಲಾ ಮೈದಾನದಲ್ಲಿ ಬೃಹತ್‌ ರೈತ ಸಂಸತ್‌ ನಡೆಸಿ ಕೇಂದ್ರ ಸರ್ಕಾರವನ್ನು ಎಚ್ಚರಿಸಲಿದ್ದೇವೆ. ಇದಕ್ಕಾಗಿ ದೇಶದಾದ್ಯಂತ ರೈತರನ್ನು, ರೈತ ಮುಖಂಡರನ್ನು ಸಂಘಟಿಸಲು ಜಾಥಾ ನಡೆಸಲಾಗುತ್ತಿದೆ. ತುಮಕೂರಿನಲ್ಲಿ ನಡೆಯುವ ಸಭೆಯಲ್ಲಿ  ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಿಂತನ- ಮಂಥನ ನಡೆಯಲಿದೆ. ಸ್ವರಾಜ್‌ ಇಂಡಿಯಾ ಪಕ್ಷದ ಸಂಸ್ಥಾಪಕರಾದ ಯೋಗೇಂದ್ರ ಯಾದವ್‌ ಸಮಾವೇಶದಲ್ಲಿ ಭಾಷಣ ಮಾಡುವರು. ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್‌. ಡಾ.ವಿಜುಕೃಷ್ಣನ್‌, ಮಧ್ಯಪ್ರದೇಶದ ಸಂಸದ, ರೈತ ಸಂಘಧ ಮುಖಂಡ ರಾಜೀವ್ ಶೆಟ್ಟಿ, ಅಮಿತ್  ಸಿಂಗ್  ಭಾಗವಹಿಸುವರು’ ಎಂದು ಸಮನ್ವಯ ಸಮಿತಿಯ ಸಿ.ಯತಿರಾಜು ತಿಳಿಸಿದರು.

  ಆತ್ಮಹತ್ಯೆ ತಡೆಗೆ ಹೊಸ ನೀತಿ ಬೇಕು: ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗದ ಕಾರಣ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ತಡೆಯುವುದಕ್ಕಾಗಿ ಸರ್ಕಾರಗಳು ಹೊಸ ಆರ್ಥಿಕ, ಉದ್ಯೋಗ ನೀತಿ ಜಾರಿಗೊಳಿಸಬೇಕು ಎಂಬುದು ರೈತ ಜಾಥಾದ ಪ್ರಮುಖ ಒತ್ತಾಯವಾಗಿದೆ.

‘ದೇಶದಲ್ಲಿ 30 ನಿಮಿಷಕ್ಕೆ ಒಬ್ಬರಂತೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆಗೆ ಬೆಳೆ ಸಾಲವೇ ಪ್ರಮುಖ ಕಾರಣ ಎಂದು ಹಲವು ಸಂಘ–ಸಂಸ್ಥೆಗಳು ಸಮೀಕ್ಷೆಯಲ್ಲಿ ಅಭಿಪ್ರಾಯ ಪಟ್ಟಿವೆ. ರೈತರ ಸಂಕಷ್ಟಗಳನ್ನು ದೂರ ಮಾಡುವ ಸಲುವಾಗಿ  ಕೃಷಿ ತಜ್ಞ ಡಾ.ಎಂ.ಎಸ್‌.ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿಗೊಳಿಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು ಸಹ ಜಾಥಾದ ಉದ್ದೇಶವಾಗಿದೆ’ ಎಂದು ಆನಂದ ಪಟೇಲ್‌ ಹೇಳಿದರು.

ಸ್ವಾಮಿನಾಥನ್ ಶಿಫಾರಸು ಏಕೆ ಜಾರಿ ಮಾಡುತ್ತಿಲ್ಲ
ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ನರೇಂದ್ರ ಮೋದಿ ಅವರು ತಮ್ಮ ಪ್ರತಿ ಭಾಷಣದಲ್ಲಿ ಅಧಿಕಾರಕ್ಕೆ ಬಂದರೆ ಡಾ. ಸ್ವಾಮಿನಾಥನ್ ಶಿಫಾರಸುಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡುತ್ತಿದ್ದರು. ಈಗ ವರದಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಇದು ರೈತ ಸಮೂಹದ ಆಕ್ರೋಶಕ್ಕೆ ಕಾರಣವಾಗಿದೆ.

ಸ್ವಾಮಿನಾಥನ್‌ ವರದಿ ಜಾರಿಯಿಂದ ಮಾತ್ರವೇ ಕೃಷಿಕರಿಗೆ ವೈಜ್ಞಾನಿಕ ಬೆಂಬಲ ಬೆಲೆ ಸಿಗಲು ಸಾಧ್ಯ ಎಂಬುದು ರೈತ ಸಂಘಟನೆಗಳು ಅಭಿಪ್ರಾಯವಾಗಿದೆ. ಬೆಂಬಲ ಬೆಲೆಗೆ ಕೊಕ್‌ ನೀಡಿ ಮಾರುಕಟ್ಟೆ ಆಧಾರಿತ ಬೆಲೆ ನೀಡಲು ಕೇಂದ್ರ ಸರ್ಕಾರ ಉತ್ಸಾಹ ತೋರುತ್ತಿರುವುದ ಹಿಂದೆಯೂ ರೈತರನ್ನು ಇಕ್ಕಟ್ಟಿಗೆ ಸಿಲುಕಿಸುವ ಹುನ್ನಾರ ಇದೆ ಎಂದೇ ರೈತ ಸಂಘಟನೆಗಳು ಹೇಳುತ್ತಿವೆ.

ಬೆಂಬಲ ಬೆಲೆಯಲ್ಲಿ ಕೃಷಿ ವೆಚ್ಚ ಹಾಗೂ ಕೃಷಿ ಸವಕಳಿ ವೆಚ್ಚ, ಕೂಲಿ ಕಾರ್ಮಿಕರ ವೆಚ್ಚಗಳನ್ನು ಪರಿಗಣಿಸಬೇಕು. ಇದರ ಮೇಲೆ ಉತ್ಪನ್ನಗಳಿಗೆ ಶೇ 50ರಷ್ಟು ಲಾಭವನ್ನುಇಟ್ಟು ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಸ್ವಾಮಿನಾಥನ್ ತಮ್ಮ ಶಿಫಾರಸಿನಲ್ಲಿ ಹೇಳಿದ್ದಾರೆ.

ರೈತರ ಮಾಡಿದ ಸಾಲ ಅಲ್ಲ
’ರೈತರಿಗೆ ಬಹಳ ಕೃತಕವಾಗಿ ಸಾಲವನ್ನು ಹೇರಲಾಗಿದೆ. ಈಗ ಇರುವುದು ರೈತರು ಮಾಡಿದ ಸಾಲ ಅಲ್ಲ, ಅದು ಅವರು ಮೇಲೆ ಏರಿರುವ ಸಾಲ’ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಅಭಿಪ್ರಾಯಪಟ್ಟರು.

‘ಕಲಬುರ್ಗಿಯಲ್ಲಿ ಈಗ ತೊಗರಿ ಬೆಳೆ ಬಂದಿದೆ. ಆದರೆ ಬೆಲೆ ಇಲ್ಲವಾಗಿದೆ. ಅದಾನಿ ಕಂ‍ಪೆನಿಯರು ಹೊರ ದೇಶಗಳಿಂದ 5000 ಟನ್‌ ತೊಗರಿ ಬೇಳೆಯನ್ನು ಖರೀದಿ ಮಾಡಿರುವುದು ತೊಗರಿ ಬೇಳೆ ಬೆಲೆ ಕಡಿಮೆಯಾಗಲು ಕಾರಣ. ಇದಕ್ಕೆಲ್ಲ ಕೇಂದ್ರ ಸರ್ಕಾರದ ನೀತಿಗಳೇ ಕಾರಣ.

ಹೀಗಾಗಿ ರೈತರು ಮಾಡಿರುವ ಸಾಲವನ್ನು ಕೃತಕವಾಗಿ ಹೇರಲಾಗಿದೆ ಎಂದು ಹೇಳುತ್ತಿದ್ದೇನೆ. ಸಾಲ ಮನ್ನಾ ಮಾಡಬೇಕೆಂಬುದು ನಮ್ಮ ಮುಖ್ಯ ಬೇಡಿಕೆಯಾಗಿದೆ’ ಎಂದರು. ಕೃಷಿ ಬೆಲೆಯ ನಿಯಂತ್ರಣವನ್ನು ಕೇಂದ್ರ ಸರ್ಕಾರವೇ ಇಟ್ಟುಕೊಂಡಿದೆ. ಹೀಗಾಗಿ ರೈತರ ಕಷ್ಟಗಳಿಗೆ ಕೇಂದ್ರ ಸರ್ಕಾರವೇ ಕಾರಣವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT