ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಂಪುರ: ಈರುಳ್ಳಿ ಬೆಳೆಗಾರ ಕಂಗಾಲು

Last Updated 23 ಸೆಪ್ಟೆಂಬರ್ 2017, 9:05 IST
ಅಕ್ಷರ ಗಾತ್ರ

ಅಜ್ಜಂಪುರ: ಇಳುವರಿ ಕುಸಿತದ ನಡುವೆಯೂ ಶಿವನಿ ಭಾಗದ ಈರುಳ್ಳಿ ಬೆಳೆಗಾರರು ಸಮಾಧಾನ ಪಟ್ಟುಕೊಳ್ಳುವಷ್ಟು ಆದಾಯ ಪಡೆಯುತ್ತಿದ್ದರೆ, ಅತ್ತ ಅಜ್ಜಂಪುರ ಭಾಗದ ರೈತರು ಇನ್ನೂ ಈರುಳ್ಳಿ ಬೆಳವಣಿಗೆ ಕಾಣದಿರುವುದರಿಂದ ಮತ್ತಷ್ಟು ಸಮಯದವರೆಗೆ ಕಾಯಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಮುಂಗಾರು ಮಳೆ ಕೊರತೆಯು ಈರುಳ್ಳಿ ಬೀಜ ಬಿತ್ತನೆಯನ್ನು ವಿಳಂಬಗೊಳಿಸಿತ್ತು. ಬಳಿಕ ಬಂದ ಮಳೆ, ಕೆಲ ರೈತರಿಗೆ ಎರಡನೇ ಬಾರಿ ಬಿತ್ತನೆ ಮಾಡುವಂತಹ ಅನಿವಾರ್ಯತೆಯನ್ನೂ ಸೃಷ್ಟಿಸಿತ್ತು. ನಂತರ ಕಾಣಿಸಿಕೊಂಡ ರೋಗಗಳು ಈರುಳ್ಳಿಯ ಹೆಚ್ಚಿನ ಬೆಳವಣಿಗೆಯನ್ನು ಮತ್ತು ನಡುವೆ ಎದುರಾದ ಮಳೆಕೊರತೆ ಇಳುವರಿಯನ್ನು ಕುಂಠಿತಗೊಳಿಸಿದ್ದವು.

ಬೇಸಾಯ, ಬಿತ್ತನೆ ಬೀಜ, ಗೊಬ್ಬರ, ಕಳೆ ತೆಗೆಯಲು ಕೂಲಿ, ಕಳೆನಾಶಕ, ಕೀಟ-ಕ್ರಿಮಿನಾಶಕ, ಈರುಳ್ಳಿ ಕೀಳುವಿಕೆ, ಹೊಲದಿಂದ ಹೊರಕ್ಕೆ ಸಾಗಣೆ, ಈರುಳ್ಳಿ ಸ್ವಚ್ಛಗೊಳಿಸುವಿಕೆ ಸೇರಿದಂತೆ ಪ್ರತಿ ಎಕರೆಗೆ ₹ 28-30 ಸಾವಿರ ಖರ್ಚು ಮಾಡಿರುವ ರೈತರು, ಅಷ್ಟೇ ಪ್ರಮಾಣದ ಆದಾಯ ಪಡೆಯಲು ಪರದಾಡುವಂತಾಗಿದೆ.

ಗೌರಿ- ಗಣೇಶ ಹಬ್ಬದ ವೇಳೆಗಾಗಲೇ ಮುಂಗಾರಿನ ಪ್ರಮುಖ ಬೆಳೆ ಈರುಳ್ಳಿಯಿಂದ ಆದಾಯ ಪಡೆಯುತ್ತಿದ್ದ ಅಜ್ಜಂಪುರ ಭಾಗದ ರೈತರು, ಮಳೆ ವಿಳಂಬದ ಕಾರಣವಾಗಿ ಹಿಗ್ಗದ ಈರುಳ್ಳಿ ಗಡ್ಡೆಗಳನ್ನು ಮತ್ತಷ್ಟು ಸಮಯದವರೆಗೆ ಕೀಳದೇ ಇರುವಂತೆ ಮಾಡಿದೆ. ಇದರಿಂದ ರೈತರು ಹಿಂಗಾರಿನ ಮುಖ್ಯಬೆಳೆ ಕಡಲೆಕಾಳು ಬಿತ್ತನೆಯನ್ನೂ ಮಾಡದಂತಾಗಿದೆ.

ಆದರೆ, ಶಿವನಿ ಭಾಗದಲ್ಲಿನ ರೈತರಿಗೆ ಆರಂಭದಲ್ಲಿ ಮಳೆಯಾಗಿದ್ದರ ಫಲವಾಗಿ ಇಳುವರಿಯಲ್ಲಿ ಕುಸಿತ ಕಂಡು ಬಂದಿಲ್ಲವಾದರೂ ಗಡ್ಡೆಗಳ ಬೆಳವಣಿಗೆಯಲ್ಲಿ ಮಾತ್ರ ಕೊರತೆ ಕಾಣಿಸಿದೆ. ಪ್ರಸ್ತುತ ಈರುಳ್ಳಿ ಕೀಳುವಿಕೆ- ಸ್ವಚ್ಛಗೊಳಿಸುವಿಕೆ- ಮಾರಾಟದಂತಹ ಕಾರ್ಯಗಳಲ್ಲಿ ಮಗ್ನರಾಗಿರುವ ರೈತರು ಪ್ರತಿ ಎಕರೆಗೆ ₹ 70-80 ಕ್ವಿಂಟಲ್ ಬೆಳೆದಿದ್ದಾರೆ.

‘ಗುಣಮಟ್ಟದ ಈರುಳ್ಳಿ ಕ್ವಿಂಟಲ್‌ಗೆ ₹ 1200-1500, ಸಣ್ಣ ಗಾತ್ರದ ಈರುಳ್ಳಿ ₹ 600-800 ರ ವರೆಗೆ ಮಾರಾಟವಾಗುತ್ತಿದೆ. ಆದರೆ, ಮಳೆ ಕೈಕೊಟ್ಟ ಕಾರಣ, ಮಳೆಯಾಗದೇ ಇರೋದು ಗಡ್ಡೆಯ ಹಿಗ್ಗುವಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಈಗ ಬಂದಿರುವ ಇಳುವರಿಯ ಅರ್ಧಕ್ಕಿಂತ ಹೆಚ್ಚು ಭಾಗ ಸಣ್ಣ ಗಡ್ಡೆಯದ್ದಾಗಿರುವುದು ನಮ್ಮ ಆದಾಯವನ್ನು ಕುಸಿತಗೊಳಿಸಿದೆ’ ಎಂದು ರೈತ ಮಲ್ಲೇಶ್ ಅಳಲುತೋಡಿಕೊಂಡರು.

ಜಿಎಸ್‌ಟಿ ಹೇರಿಕೆ, ಬಾರದ ವ್ಯಾಪಾರಸ್ಥರು: ದೇಶದಲ್ಲಿ ಜಿಎಸ್‌ಟಿ ಅನುಷ್ಠಾನವಾಗಿದೆ. ಮಾರುಕಟ್ಟೆ ಅಥವಾ ದಾಸ್ತಾನು ಕೇಂದ್ರಗಳಲ್ಲೂ ಹೆಚ್ಚಿನ ಶೇಖರಣೆ ಮಾಡುವಂತಿಲ್ಲ. ವ್ಯಾಪಾರಸ್ಥರು ಟಿನ್ ನಂಬರ್, ವ್ಯವಹಾರ ಲೈಸೆನ್ಸ್ ಹೊಂದಿರಬೇಕು ಎಂಬ ಹಲವು ನಿಯಮಾವಳಿಗಳಿಂದಾಗಿ ಸಣ್ಣ-ಪುಟ್ಟ ಹಾಗೂ ಸ್ಥಳೀಯ ವ್ಯಾಪಾರಸ್ಥರು ಈರುಳ್ಳಿ ಖರೀದಿಯತ್ತ ಮುಖ ಮಾಡುತ್ತಿಲ್ಲ. ಇದು ಬೆಲೆ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ ಎಂದು ರೈತ ರಾಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಶೇಂಗಾ ಬೆಲೆ ಕುಸಿತ, ರೈತರಿಗೆ ನಷ್ಠ, ಮಳೆ ಕೊರತೆ ನಡುವೆ ಎಕರೆಗೆ 5 ಕ್ವಿಂಟಲ್ ಇಳುವರಿ ಬಂದಿದೆ. ಆದರೆ, ಈ ಹಿಂದೆ ಕ್ವಿಂಟಲ್ ಶೇಂಗೆ ₹ 5,000 ವರೆಗಿದ್ದ ದರ ಪ್ರಸ್ತುತ ₹ 2,800-3,300ಕ್ಕೆ ಕುಸಿದಿದೆ. ಹೀಗಾಗಿ ಶೇಂಗಾದಲ್ಲಿ ಆದಾಯ ಪಡೆಯುವ ನಿರೀಕ್ಷೆಯೂ ಹುಸಿಯಾಗಿದ್ದು, ನಷ್ಟ ಅನುಭವಿಸುವಂತಾಗಿದೆ ಎಂದು ಶಿವನಿಯ ರೈತ ನಂಜುಂಡಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಮಳೆ ವಿಳಂಬ ಮತ್ತು ಕೊರತೆಯಿಂದಾಗಿ ಸಣ್ಣ ಗಾತ್ರದ ಈರುಳ್ಳಿ ಗಡ್ಡೆಗಳು ಇಳುವರಿ ಕುಸಿತಗೊಳಿಸಿದೆ. ಇನ್ನು ರೋಗಗಳ ಹಾವಳಿ ರೈತರ ಖರ್ಚಿನ ವೆಚ್ಚನ್ನೂ ಅಧಿಕಗೊಳಿಸಿದೆ. ಹೆಚ್ಚಿನ ಸಂಖ್ಯೆಯ ವ್ಯಾಪಾರಸ್ಥರು ಈರುಳ್ಳಿ ಖರೀದಿಗೆ ಮುಂದಾಗದಿರುವುದು ರೈತರ ಅಸಮಾಧಾನ ಹೆಚ್ಚಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT