ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಭಾಷಣದಿಂದ ಬದಲಾವಣೆ ಅಸಾಧ್ಯ

Last Updated 23 ಸೆಪ್ಟೆಂಬರ್ 2017, 9:46 IST
ಅಕ್ಷರ ಗಾತ್ರ

ಸಾಗರ: ‘ಮನ್ ಕಿ ಬಾತ್ ಹೆಸರಿನಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದಾಕ್ಷಣ ದೇಶದಲ್ಲಿ ಬದಲಾವಣೆ ಆಗುತ್ತದೆ ಎನ್ನುವುದು ಕೇವಲ ಭ್ರಮೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಟೀಕಿಸಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಅದನ್ನು ಈಡೇರಿಸದೇ ಭಾಷಣದಲ್ಲಿ ‘ಸಬ್ ಕೆ ಸಾತ್, ಸಬ್ ಕೆ ವಿಕಾಸ್’ ಎಂದು ಹೇಳುವುದರಲ್ಲಿ ಏನು ಅರ್ಥವಿದೆ’ ಎಂದು ಪ್ರಶ್ನಿಸಿದರು.

‘ಪ್ರಪಂಚದ ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡಿದಾಗ ಅಲ್ಲಿನ ನಾಯಕರು ಅವರಿಗೆ ಗೌರವ ನೀಡುತ್ತಿರುವುದನ್ನೇ ದೊಡ್ಡ ಸಾಧನೆ ಎನ್ನುವಂತೆ ಬಿಜೆಪಿ ಬಿಂಬಿಸುತ್ತಿದೆ. ರಾಜತಾಂತ್ರಿಕ ಸಂಬಂಧಗಳ ಹಿನ್ನೆಲೆಯಲ್ಲಿ ಯಾವುದೇ ದೇಶದ ಮುಖಂಡರು ಮತ್ತೊಂದು ದೇಶಕ್ಕೆ ಭೇಟಿ ನೀಡಿದಾಗ ಗೌರವ ನೀಡುವುದು ಸಾಮಾನ್ಯ. ಪ್ರಪಂಚದ ಹಲವು ಪ್ರಮುಖ ರಾಷ್ಟ್ರಗಳು ಈವರೆಗೂ ಭಾರತದ ಜೊತೆಗೆ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವುದಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಕೂಡ ಇದೆ’ ಎಂದರು.

‘ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದೆ. ಬಿಜೆಪಿ ಸರ್ಕಾರ ಇರುವ ಯಾವ ರಾಜ್ಯದಲ್ಲೂ ಅನ್ನಭಾಗ್ಯದಂತಹ ಜನಪರ ಯೋಜನೆ ಜಾರಿಗೆ ಬಂದಿಲ್ಲ. ರಾಜ್ಯ ಸರ್ಕಾರ ಪ್ರತಿ ರೈತರ ₹ 50 ಸಾವಿರದವರೆಗೆ ಸಾಲ ಮನ್ನಾ ಮಾಡಿದೆ. ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಲಿ’ ಎಂದು ಸವಾಲು ಹಾಕಿದರು.

‘ಮುಂದಿನ ವಿಧಾನಸಭೆ ಚುನಾವಣೆಯನ್ನು ರಾಜ್ಯ ಸರ್ಕಾರದ ಸಾಧನೆ ಆಧಾರದ ಮೇಲೆ ಎದುರಿಸಬೇಕಾದ ಯುದ್ಧ ಕಾಲದಲ್ಲಿ ನಾವಿದ್ದೇವೆ. ರಾಜ್ಯದ ಜನರು ಬಿಜೆಪಿಗೆ ಒಮ್ಮೆ ಅಧಿಕಾರ ನೀಡಿ, ಅದು ನಡೆಸಿರುವ ಹಗರಣಗಳನ್ನು ನೋಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಕಾಂಗ್ರೆಸ್‌ನತ್ತ ಜನರು ಒಲವು ತೋರುವುದು ಖಚಿತ’ ಎಂದು ಕಾಂಗೋಡು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನ.ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ವೀಕ್ಷಕ ಸತ್ಯನಾರಾಯಣ, ನಗರ ಬ್ಲಾಕ್ ಅಧ್ಯಕ್ಷ ಮಕ್ಬೂಲ್ ಅಹ್ಮದ್, ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ.ಸಿದ್ದಪ್ಪ, ಪರಿಶಿಷ್ಟ ವಿಭಾಗದ ಅಧ್ಯಕ್ಷ ಎಲ್.ಚಂದ್ರಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಾಗೋಡು ಅಣ್ಣಪ್ಪ, ಅನಿತಾ ಕುಮಾರಿ, ನಗರಸಭೆ ಅಧ್ಯಕ್ಷೆ ಬೀಬಿ ಫಸಿಹಾ, ಉಪಾಧ್ಯಕ್ಷೆ ಸರಸ್ವತಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ಎಪಿಎಂಸಿ ಅಧ್ಯಕ್ಷ ಕೆ.ಹೊಳೆಯಪ್ಪ, ಕಾರ್ಗಲ್ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ, ಉಪಾಧ್ಯಕ್ಷೆ ವೆರೋನಿಕಾ ಲೋಪಿಸ್ ಹಾಜರಿದ್ದರು. ಎಲ್.ಟಿ.ತಿಮ್ಮಪ್ಪ ಸ್ವಾಗತಿಸಿದರು. ಅನ್ವರ್ ಭಾಷಾ ವಂದಿಸಿದರು. ಗಣಪತಿ ಹೆನಗೆರೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT