ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಕೇಂದ್ರ ಘೋಷಣೆ ವಿಳಂಬಕ್ಕೆ ಆಕ್ರೋಶ

Last Updated 23 ಸೆಪ್ಟೆಂಬರ್ 2017, 9:57 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ತಾಲ್ಲೂಕು ಕೇಂದ್ರಕ್ಕಾಗಿ ಒತ್ತಾಯಿಸಿ, 39 ದಿನಗಳಿಂದ ಹೋರಾಟ ನಡೆಯುತ್ತಿದ್ದರೂ ಇದುವರೆಗೂ ಸರ್ಕಾರದಿಂದ ಪ್ರತಿಕ್ರಿಯೆ ಬಂದಿಲ್ಲವೆಂದು ಹಲವು ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಆರಂಭವಾದ ಅನಿರ್ದಿಷ್ಟಾವಧಿ ಧರಣಿ ಆರಂಭವಾಗಿತ್ತು. ವಿಜಯಪುರ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿ ನೇತೃತ್ವ ವಹಿಸಿದ್ದು, ವಿವಿಧ ಸಂಘ ಸಂಸ್ಥೆಗಳು ಇದರಲ್ಲಿ ಭಾಗವಹಿಸಿವೆ.

ವಿಜಯಪುರ (ವಡಿಗೇನಹಳ್ಳಿ), ದೇವನಹಳ್ಳಿ ತಾಲ್ಲೂಕಿನ ಮುಖ್ಯ ವ್ಯಾಪಾರ ಕೇಂದ್ರ. ಖುಷ್ಕಿ ಬೆಳೆಗಳಾದ ರಾಗಿ ಪ್ರಮುಖ ಆಹಾರ ಬೆಳೆ. ಜೋಳ, ಅವರೆ, ಕಡಲೆ, ಎಣ್ಣೆಕಾಳು ಉಳಿದ ಬೆಳೆಗಳು. ನೀರಾವರಿ ಜಮೀನಿನಲ್ಲಿ ತರಕಾರಿ ಅತ್ಯಂತ ಮಹತ್ವದ ವ್ಯಾಪಾರಿ ಬೆಳೆ.

ಆಲೂಗೆಡ್ಡೆ, ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಬಟಾಣಿ, ಈರುಳ್ಳಿ, ಕೆಂಪು ಮೂಲಂಗಿ, ಮೊದಲಾದವು ಮುಖ್ಯ ತರಕಾರಿ ಬೆಳೆಗಳು. ಇಲ್ಲಿನ ರೈತರು ಕಬ್ಬು, ಬಾಳೆ ಮತ್ತು ಗೋವಿನ ಜೋಳ ಬೆಳೆಯುತ್ತಾರೆ. ದ್ರಾಕ್ಷಿ ಇನ್ನೊಂದು ಪ್ರಮುಖ ಬೆಳೆಯಾಗಿದೆ.

ಇಲ್ಲಿ 1917ರ ಸೆಪ್ಟೆಂಬರ್ 14 ರಂದು ಪುರಸಭೆ ಆರಂಭವಾಗಿದೆ. ಇಲ್ಲಿ ಶಿಕ್ಷಣ ಸಂಸ್ಥೆಗಳು, ಬೆಸ್ಕಾಂ ಕಚೇರಿ, ರೇಷ್ಮೆಗೂಡಿನ ಮಾರುಕಟ್ಟೆ, ಸೇರಿದಂತೆ ಅನೇಕ ಹೋಬಳಿ ಮಟ್ಟದ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಆಸ್ಪತ್ರೆ ರಾಜ್ಯದಲ್ಲೇ ಎರಡನೇ ಉತ್ತಮ ಆಸ್ಪತ್ರೆಯೆಂಬ ಹೆಗ್ಗಳಿಕೆ ಪಡೆದಿದೆ. ರಾಜ್ಯ ಹೆದ್ದಾರಿಗಳು ಹಾದು ಹೋಗುತ್ತವೆ. ಎರಡು ಬಾರಿ ಉತ್ತಮ ಪುರಸಭೆಯೆಂಬ ಪುರಸ್ಕಾರವೂ ಲಭಿಸಿದೆ.

ವಿಜಯಪುರವನ್ನು ತಾಲ್ಲೂಕು ಕೇಂದ್ರ ಮಾಡಬೇಕಾದರೆ, ಭೌಗೋಳಿಕವಾಗಿ ವಿಸ್ತೀರ್ಣ ಸಾಲದು. ದೇವನಹಳ್ಳಿ ತಾಲ್ಲೂಕು ಕೇಂದ್ರದಿಂದ ಇದು ಕೇವಲ 10 ಕೀ.ಮೀ ದೂರದಲ್ಲಿದೆ. ಉತ್ತಮ ಸಾರಿಗೆ ವ್ಯವಸ್ಥೆಯಿದೆ ಎನ್ನುವುದು ಕೆಲವು ಮುಖಂಡರ ವಾದವಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ನಡೆಸಿದರೆ ಉತ್ತಮವೆನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಪ್ರತಿಕೃತಿ ದಹನದಿಂದ ಕೋಪ: ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ವಿಜಯಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎನ್ನುವ ಒತ್ತಾಯ ಮುಂದಿಡಲಾಗಿತ್ತು. ಆದರೆ, ಅದು ಈಡೇರದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ವೀರಪ್ಪ ಮೊಯಿಲಿ, ಸಚಿವ ಕೃಷ್ಣಬೈರೇಗೌಡ ಅವರ ಪ್ರತಿಕೃತಿಗಳನ್ನು ದಹಿಸಲಾಗಿತ್ತು. ಇದರಿಂದ ಜನಪ್ರತಿನಿಧಿಗಳು ಕೋಪಗೊಂಡಿರುವುದು ತಾಲ್ಲೂಕು ಕೇಂದ್ರ ಮಾಡಲು ಹಿನ್ನಡೆಯಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

‘ಹೋರಾಟ ಆರಂಭಿಸುವ ಮುನ್ನವೇ ಹಿರಿಯ ಮುಖಂಡ ಚನ್ನಹಳ್ಳಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರೊಂದಿಗೆ ಚರ್ಚೆ ನಡೆಸಲಾಗಿತ್ತು. ತಾಲ್ಲೂಕು ಕೇಂದ್ರಕ್ಕಾಗಿ ಒತ್ತಾಯ ಮಾಡಿದ್ದೆವು, ಅವರು ಕಾಲಾವಕಾಶ ಕೇಳಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ ತಿಳಿಸಿದ್ದಾರೆ.

ತಾಲ್ಲೂಕು ರಚನೆಯೆಂದರೆ ಅಷ್ಟೊಂದು ಸುಲಭವಲ್ಲ. ಸರ್ಕಾರ , ಅಂಕಿ ಅಂಶಗಳನ್ನು ತರಿಸಿಕೊಂಡು ನಿಯಮಾನುಸಾರವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಸರ್ಕಾರದ ಪ್ರತಿನಿಧಿಯಾಗಿ ಜಿಲ್ಲಾಧಿಕಾರಿ ಭೇಟಿ ನೀಡಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT