ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಂಗ್ಯಾಗಳನ್ನು ತಡೆಯಲು ‘ಚಿಲ್ಲಿ ಸ್ಪ್ರೇ, ಸ್ಟನ್‌ ಗ್ರೆನೇಡ್‌‘ ಬಳಸಲು ಮುಂದಾದ ಬಿಎಸ್ಎಫ್‌

Last Updated 23 ಸೆಪ್ಟೆಂಬರ್ 2017, 10:35 IST
ಅಕ್ಷರ ಗಾತ್ರ

ನವದೆಹಲಿ: ಅಕ್ರಮವಾಗಿ ದೇಶದ ಗಡಿ ಪ್ರವೇಶಿಸುತ್ತಿರುವ ರೋಹಿಂಗ್ಯಾಗಳನ್ನು ತಡೆಯಲು, ಚಿಲ್ಲಿ ಸ್ಪ್ರೇ ಹಾಗೂ ಸ್ಟನ್‌ ಗ್ರೆನೇಡ್‌ಗಳನ್ನು ಬಳಸಲು ಗಡಿ ಭದ್ರತಾ ಪಡೆ(ಬಿಎಸ್‌ಎಫ್‌) ಚಿಂತಿಸಿದೆ.

ಸದ್ಯ ದೇಶದಲ್ಲಿ ನೆಲೆಸಿರುವ ಸುಮಾರು 40,000 ರೋಹಿಂಗ್ಯಾ ಮುಸ್ಲಿಂ ವಲಸಿಗರನ್ನು ದೇಶದಿಂದ ಹೊರ ಕಳುಹಿಸಲು ಸರ್ಕಾರ ನಿರ್ಧರಿಸಿದ್ದು, ಒಳನುಸುಳುವಿಕೆಯ ಪ್ರಯತ್ನಗಳನ್ನು ವಿಫಲಗೊಳಿಸಲು ‘ಕಠಿಣ’ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಬಿಎಸ್‌ಎಫ್‌ಗೆ ನೀಡಲಾಗಿದೆ.

ಈ ಬಗ್ಗೆ ಮಾತನಾಡಿರುವ ಬಿಎಸ್‌ಎಫ್‌ನ ಹಿರಿಯ ಅಧಿಕಾರಿ, ‘ಅಕ್ರಮ ವಲಸಿಗರನ್ನು ಬಂಧಿಸುವುದು ಅಥವಾ ಘಾಸಿಗೊಳಿಸುವುದನ್ನು ನಾವು ಬಯಸುವುದಿಲ್ಲ. ಆದರೆ, ಅವರು ದೇಶದ ಗಡಿ ಪ್ರವೇಶಿಸುವುದನ್ನು ನಾವು ಸಹಿಸುವುದಿಲ್ಲ’ ಎಂದು ಹೇಳಿದ್ದಾರೆ.

‘ಪರಿಸ್ಥಿತಿ ಉದ್ವಿಗ್ನವಾಗಿದೆ. ಅಕ್ರಮವಾಗಿ ಗಡಿ ಪ್ರವೇಶಿಸಲು ಯತ್ನಿಸುತ್ತಿರುವ ರೋಹಿಂಗ್ಯಾಗಳನ್ನು ತಡೆಯಲು ನಾವು ಚಿಲ್ಲಿ ಸ್ಪ್ರೇ(ಮೆಣಸಿನ ಪುಡಿ) ತುಂಬಿರುವ ಗ್ರೆನೇಡ್‌ಗಳನ್ನು ಬಳಸುತ್ತೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮ್ಯಾನ್ಮಾರ್‌ ಸೇನೆ ರೋಹಿಂಗ್ಯಾಗಳನ್ನು ಗುರಿಯಾಗಿರಿಸಿ ದಾಳಿ ನಡೆಸಿದ ನಂತರ, ಆ.25ರಿಂದ ಇಲ್ಲಿಯವರೆಗೆ ಸುಮಾರು 4ಲಕ್ಷ ರೋಹಿಂಗ್ಯಾಗಳು ಬಾಂಗ್ಲಾದೇಶದತ್ತ ಪಲಾಯನಮಾಡಿದ್ದರು. ದಾಳಿ ವೇಳೆ 400ಕ್ಕೂ ಹೆಚ್ಚು ರೋಹಿಂಗ್ಯಾಗಳು ಸಾವಿಗೀಡಾಗಿದ್ದರು. ಈ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿತ್ತು.

ಸದ್ಯ ಬಹುಸಂಖ್ಯೆಯಲ್ಲಿ ದೇಶ ಪ್ರವೇಶಿಸಿರುವ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ಅಥವಾ ಅವರನ್ನು ಸ್ಥಳಾಂತರಿಸಲು ಬಾಂಗ್ಲಾದೇಶ ಹೆಣಗಾಡುತ್ತಿದ್ದು, ಇದು ಭಾರತದ ಚಿಂತೆಯನ್ನು ಹೆಚ್ಚಿಸಿದೆ.

ಪಶ್ಚಿಮ ಬಂಗಾಳ ಬಿಎಸ್‌ಎಫ್‌ನ ಡೆಪ್ಯುಟಿ ಇನ್ಸ್‌ಪೆಕ್ಟರ್‌ ಜನರಲ್‌ ಆರ್‌ಪಿಎಸ್‌ ಜಸ್ವಾಲ್‌, ರೋಹಿಂಗ್ಯಾಗಳನ್ನು ಹಿಮ್ಮೆಟ್ಟಿಸಲು ತಮ್ಮ ಪಡೆಗಳಿಗೆ ಚಿಲ್ಲಿ ಸ್ಪೇ ‌ಹಾಗೂ ಸ್ಟನ್‌ ಗ್ರೆನೇಡ್‌ಗಳನ್ನು ಬಳಸಲು ಸೂಚಿಸಿದ್ದಾರೆ. ಚಿಲ್ಲಿ ಸ್ಪ್ರೇ ದಾಳಿ ನಡೆಸುವುದರಿಂದ ಎದುರಾಳಿಗಳ ದೇಹದಲ್ಲಿ ಕೆಲಕಾಲ ಉರಿ ಕಾಣಿಸಿಕೊಳ್ಳುತ್ತದೆ. ವಲಸಿಗರನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೋಹಿಂಗ್ಯಾಗಳನ್ನು ದೇಶದಿಂದ ಹೊರಹಾಕಲು ತೀರ್ಮಾನಿಸಿದೆ. ಈ ಸಂಬಂಧ ಗುರುವಾರ ಮಾತನಾಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು, ‘ಅಕ್ರಮವಾಗಿ ಗಡಿ ಪ್ರವೇಶಿಸಿರುವವರನ್ನು ಹೊರಹಾಕುವುದು ಅಪರಾಧವಲ್ಲ’ ಎಂದು ಹೇಳಿಕೆ ನೀಡಿದ್ದರು.

ಕಳೆದ ವಾರ ಸುಪ್ರೀಂಗೆ ಮಾಹಿತಿ ನೀಡಿದ್ದ ಕೇಂದ್ರ ಗೃಹ ಸಚಿವಾಲಯ, ‘ರೋಹಿಂಗ್ಯಾಗಳು ಪಾಕಿಸ್ತಾನ ಮೂಲ‌ದ ಉಗ್ರ ಸಂಘಟನೆಗಳೊಡನೆ ಸಂಬಂಧ ಹೊಂದಿರುವ ಕುರಿತು ಗುಪ್ತಚರ ಇಲಾಖೆಗೆ ಮಾಹಿತಿ ಇದೆ’ ಎಂದು ತಿಳಿಸಿತ್ತು.

‘ತನಿಖೆಯ ಪ್ರಕಾರ ಅಲ್‌ಖೈದಾ, ಭಾರತ ಹಾಗೂ ಬಾಂಗ್ಲಾದೇಶದಲ್ಲಿರುವ ರೋಹಿಂಗ್ಯಾಗಳನ್ನು ಮ್ಯಾನ್ಮಾರ್‌ ಭದ್ರತಾ ಪಡೆಗಳ ವಿರುದ್ಧ ಹೋರಾಡಲು ಬಳಸಿಕೊಳ್ಳಲು ಬಯಸುತ್ತಿದೆ. ರೋಹಿಂಗ್ಯಾಗಳಿಂದ ಭದ್ರತೆಗೆ ಧಕ್ಕೆಯಿದೆ’ ಎಂದು ದೆಹಲಿ ಪೊಲೀಸ್‌ ಅಧಿಕಾರಿ ಪ್ರಮೋದ್‌ ಸಿಂಗ್‌ ಖುಶ್ವಂತ್‌ ಹೇಳಿದ್ದರು.

ಸುಮಾರು 270ಕ್ಕೂ ಹೆಚ್ಚು ರೋಹಿಂಗ್ಯಾಗಳು 2014ರಿಂದ ಭಾರತೀಯ ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT