ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಶಾಂತಿಗೆ ಭಯೋತ್ಪಾದನೆ ದೊಡ್ಡ ಸವಾಲು; ಭಾರತ ಐಐಟಿ ಕಟ್ಟಿದರೆ ಪಾಕ್‌ನಿಂದ ಉಗ್ರರ ರಫ್ತು: ವಿಶ್ವಸಂಸ್ಥೆಯಲ್ಲಿ ಸುಷ್ಮಾ ಸ್ವರಾಜ್‌

Last Updated 23 ಸೆಪ್ಟೆಂಬರ್ 2017, 20:33 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಭಾರತವು ಐಐಟಿ, ಐಐಎಂ, ಇಸ್ರೊದಂತಹ ಜಾಗತಿಕ ಮಟ್ಟದ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರೆ ಪಾಕಿಸ್ತಾನವು ಲಷ್ಕರ್‌ ಎ ತಯಬಾ, ಜೈಷ್‌ ಎ ಮೊಹಮ್ಮದ್‌, ಹಿಜ್ಬುಲ್‌ ಮುಜಾಹಿದೀನ್‌, ಹಖ್ಖಾನಿಯಂತಹ ಉಗ್ರರ ಸಂಘಟನೆಗಳನ್ನು ಕಟ್ಟಿದೆ. ಅಷ್ಟೇ ಅಲ್ಲದೆ ಭಯೋತ್ಪಾದನೆಯನ್ನು ಇಡೀ ಜಗತ್ತಿಗೆ ರಫ್ತು ಮಾಡುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಖಾರವಾದ ಮಾತುಗಳಿಂದ ಪಾಕಿಸ್ತಾನ ‍ಪ್ರೇರಿತ ಉಗ್ರವಾದವನ್ನು ಖಂಡಿಸಿದ್ದಾರೆ.

ಭಾರತವನ್ನು ಮಾಹಿತಿ ತಂತ್ರಜ್ಞಾನದ ಜಾಗತಿಕ ಕೇಂದ್ರವೆಂದು ಮತ್ತು ಪಾಕಿಸ್ತಾನವನ್ನು ಭಯೋತ್ಪಾದನೆಯ ರಫ್ತು ದೇಶವೆಂದು ಯಾಕೆ ಪರಿಗಣಿಸಲಾಗುತ್ತದೆ ಎಂಬ ಬಗ್ಗೆ ಪಾಕಿಸ್ತಾನವು ಆತ್ಮಾವಲೋಕನ ಮಾಡಿಕೊಂಡರೆ ಆ ದೇಶಕ್ಕೆ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಸುಷ್ಮಾ ಹೇಳಿದ್ದಾರೆ.

ಪಾಕಿಸ್ತಾನ ಸೃಷ್ಟಿಸಿದ ಭಯೋತ್ಪಾದನೆಯಿಂದ ಭಾರತಕ್ಕೆ ಮಾತ್ರವಲ್ಲ, ನೆರೆಯ ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶಕ್ಕೂ ತೊಂದರೆಯಾಗಿದೆ. ಇದು ಪಾಕಿಸ್ತಾನದ ದುಷ್ಟತನದ ಪ್ರಮಾಣವನ್ನು ಸೂಚಿಸುತ್ತದೆ ಎಂದು ಸುಷ್ಮಾ ಅವರು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವಸಂಸ್ಥೆಯ 72ನೇ ಮಹಾ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಾಕಿಸ್ತಾನದ ಪ್ರಧಾನಿ ಶಾಹಿದ್‌ ಕಾಖನ್‌ ಅಬ್ಬಾಸಿ ಅವರು  ವಿಶ್ವಸಂಸ್ಥೆಯಲ್ಲಿ ಗುರುವಾರ ಮಾಡಿದ ಭಾಷಣವನ್ನು ಉಲ್ಲೇಖಿಸಿ ಸುಷ್ಮಾ ಅವರು ಮಾತನಾಡಿದರು. ಭಾರತವು ಮಾನವ ಹಕ್ಕುಗಳನ್ನು ಉಲ್ಲಂಘಿ
ಸುತ್ತಿದೆ ಮತ್ತು ಭಾರತ ಸರ್ಕಾರ ಭಯೋತ್ಪಾದನೆಯಲ್ಲಿ ನಿರತವಾಗಿದೆ ಎಂದು ಶಾಹಿದ್‌ ಆರೋಪಿಸಿದ್ದರು.

ಭಯೋತ್ಪಾದನೆ ವಿಶ್ವ ಶಾಂತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಪ್ರತಿಪಾದಿಸಿದರ ಅವರು, ಪಾಕಿಸ್ತಾನದ ಮಾಜಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು. ನೆರೆಯ ಪಾಕಿಸ್ತಾನದಲ್ಲಿ ಹಲವು ಉಗ್ರ ಸಂಘಟನೆಗಳು ಸಕ್ರಿಯವಾಗಿವೆ. ಪಾಕಿಸ್ತಾನ ಜಿಹಾದಿಗಳನ್ನು ಹುಟ್ಟುಹಾಕುತ್ತಿದೆ ಎಂದು ಸುಷ್ಮಾ ಅವರು ಪಾಕ್‌ ವಿರುದ್ಧ ಕಟು ಟೀಕೆ ಮಾಡಿದರು.

ವಿಶ್ವವು ಇಂದು ಹಿಂಸಾಚಾರ ಹೆಚ್ಚಳ, ಭಯೋತ್ಪಾದನೆ ಹಾಗೂ ಹವಾಮಾನ ವೈಪರೀತ್ಯದಂತಹ ಬಹು ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT