ವಿಶ್ಲೇಷಣೆ

ಸಂತ ಸದೃಶಳಲ್ಲ ಆಂಗ್‌ ಸಾನ್‌ ಸೂಕಿ

ಈ ದೌರ್ಜನ್ಯಗಳ ಹಿಂದೆ ಅಡಗಿರುವುದು ಮ್ಯಾನ್ಮಾರ್‌ನ ಸಂಕೀರ್ಣ ಆಂತರಿಕ ರಾಜಕೀಯ. ಅಂದಾಜು ಐವತ್ತು ವರ್ಷಗಳ ಮಿಲಿಟರಿ ಸರ್ವಾಧಿಕಾರದ ನಂತರ, 2015ರ ನವೆಂಬರ್‌ನಲ್ಲಿ ಸೂಕಿ ಅವರು ಮ್ಯಾನ್ಮಾರ್‌ನ ಪ್ರಜಾತಾಂತ್ರಿಕ ನಾಯಕಿ ಆಗಿ ಮುನ್ನೆಲೆಗೆ ಬಂದ ಸಂದರ್ಭದಲ್ಲಿ ಆಗಿದ್ದು ಏನು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು.

ಸಂತ ಸದೃಶಳಲ್ಲ ಆಂಗ್‌ ಸಾನ್‌ ಸೂಕಿ

–ಕೆವಿನ್ ರುಡ್

ಮ್ಯಾನ್ಮಾರ್‌ ದೇಶಕ್ಕೆ ಸಂಬಂಧಿಸಿದಂತೆ ಕಳೆದ ಹಲವು ತಿಂಗಳುಗಳಿಂದ ಬರುತ್ತಿರುವ ಮಾಧ್ಯಮ ವರದಿಗಳು, ಆ ದೇಶದ ನಿಜವಾದ ನಾಯಕಿ ಆಂಗ್‌ ಸಾನ್‌ ಸೂಕಿ ಅವರು ಮಾನವ ಹಕ್ಕುಗಳನ್ನು ರಕ್ಷಿಸುವ ತಮ್ಮ ಹೊಣೆಗಾರಿಕೆಯಿಂದ ಸಂಪೂರ್ಣವಾಗಿ ಕೈತೊಳೆದುಕೊಂಡಿದ್ದಾರೆ ಎಂದು ಹಲವರು ತೀರ್ಮಾನಿಸುವಂತೆ ಮಾಡಿವೆ. ದೇಶದ ಪಶ್ಚಿಮ ಭಾಗದಲ್ಲಿ ವಾಸಿಸುತ್ತಿದ್ದ ರೋಹಿಂಗ್ಯಾ ಜನಾಂಗೀಯ ಅಲ್ಪಸಂಖ್ಯಾತ ಸಮುದಾಯದ ಸಾವಿರಾರು ಜನರನ್ನು ಮ್ಯಾನ್ಮಾರ್‌ನ ಮಿಲಿಟರಿಯು ಅಲ್ಲಿಂದ ಹೊರಹಾಕುತ್ತಿದೆ. ಈ ಪ್ರದೇಶದಲ್ಲಿ ರೋಹಿಂಗ್ಯಾ ಸಮುದಾಯದವರು ಶತಮಾನಗಳಿಂದ ಇದ್ದಾರೆ. ಯಾವುದೇ ದೃಷ್ಟಿಯಿಂದ ನೋಡಿದರೂ, ಅಲ್ಲಿ ನಾವು ಮೂಲಭೂತವಾಗಿ ಕಾಣುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆಯನ್ನು.

ಈ ದೌರ್ಜನ್ಯಗಳ ಹಿಂದೆ ಅಡಗಿರುವುದು ಮ್ಯಾನ್ಮಾರ್‌ನ ಸಂಕೀರ್ಣ ಆಂತರಿಕ ರಾಜಕೀಯ. ಅಂದಾಜು ಐವತ್ತು ವರ್ಷಗಳ ಮಿಲಿಟರಿ ಸರ್ವಾಧಿಕಾರದ ನಂತರ, 2015ರ ನವೆಂಬರ್‌ನಲ್ಲಿ ಸೂಕಿ ಅವರು ಮ್ಯಾನ್ಮಾರ್‌ನ ಪ್ರಜಾತಾಂತ್ರಿಕ ನಾಯಕಿ ಆಗಿ ಮುನ್ನೆಲೆಗೆ ಬಂದ ಸಂದರ್ಭದಲ್ಲಿ ಆಗಿದ್ದು ಏನು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು.

ಸಾಂವಿಧಾನಿಕ ಮಾರ್ಗವೊಂದರ ಮೂಲಕ ಸೂಕಿ ಅವರಿಗೆ ‘ದೇಶದ ಅಧ್ಯಕ್ಷೆ’ ಎಂಬ ಸ್ಥಾನ ನೀಡಲು ಮಿಲಿಟರಿ ನಿರಾಕರಿಸಿತು. ಇದಕ್ಕಿಂತ ಮುಖ್ಯವಾಗಿದ್ದೆಂದರೆ, ಮಿಲಿಟರಿ ಆಡಳಿತ ವ್ಯವಸ್ಥೆಯಿಂದ ಕಿರು–ಪ್ರಜಾತಂತ್ರ ವ್ಯವಸ್ಥೆಗೆ ಮ್ಯಾನ್ಮಾರ್‌ ದೇಶ ಹೊರಳಿಕೊಂಡ ನಂತರ, ಸಂಸತ್ತಿನಲ್ಲಿ ಹೊಂದಿದ್ದ ಶೇಕಡ 25ರಷ್ಟು ಹಿಡಿತದ ಹೊರತಾಗಿಯೂ ಮಿಲಿಟರಿಯು ವಿಸ್ತೃತ ವ್ಯಾಪ್ತಿಯ ಅಧಿಕಾರವನ್ನು ತನ್ನಲ್ಲಿಯೇ ಉಳಿಸಿಕೊಂಡಿತು. ದೇಶದ ರಕ್ಷಣೆಗೆ ಸಂಬಂಧಿಸಿದ ವಿಚಾರಗಳು, ಆಂತರಿಕ ಭದ್ರತೆ ಹಾಗೂ ಗಡಿ ನಿಯಂತ್ರಣ, ನಾಗರಿಕ ಸೇವೆಗಳ ಮೇಲೆ ಮಿಲಿಟರಿಯು ಸಂಪೂರ್ಣ ಅಧಿಕಾರವನ್ನು ಉಳಿಸಿಕೊಂಡಿತು. ದೇಶದ ಮಿಲಿಟರಿಯ ಅತ್ಯುನ್ನತ ಅಧಿಕಾರಿಗಳ ಇಚ್ಛೆಗೆ ವಿರುದ್ಧವಾಗಿ ಏನಾದರೂ ಮಾಡುವಂತೆ ಮಿಲಿಟರಿ ಸಿಬ್ಬಂದಿಗೆ ಅಥವಾ ಭದ್ರತಾ ಪಡೆಗಳಿಗೆ ಸೂಚನೆ ನೀಡುವ ಕಾನೂನು ಅಧಿಕಾರ ಸೂಕಿ ಅವರಿಗೆ ಇಲ್ಲ ಎಂಬುದು ಈ ಸ್ವರೂಪದ ಅಧಿಕಾರ ಹಂಚಿಕೆಯ ಅರ್ಥ.

ರಾಖೈನ್‌ ರಾಜ್ಯದಲ್ಲಿನ ಬಿಕ್ಕಟ್ಟಿನ ಬಗ್ಗೆ ಸೂಕಿ ಅವರು ಕಳೆದ ವಾರ ಆಡಿದ ಮಾತುಗಳನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬೇಕು. ರೋಹಿಂಗ್ಯಾ ಸಮುದಾಯದ ಬಹುಪಾಲು ಜನರಿಗೆ ತವರುಮನೆ ಆಗಿರುವ ರಾಖೈನ್ ರಾಜ್ಯದಲ್ಲಿ ಮಿಲಿಟರಿಯವರು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿಲ್ಲ ಎಂಬ ಕಾರಣಕ್ಕೆ ಸೂಕಿ ಅವರನ್ನು ಹಲವರು ಟೀಕಿಸಿದ್ದಾರೆ. ಆದರೆ ಸೂಕಿ ಅವರು ತಮ್ಮ ಭಾಷಣದಲ್ಲಿ, ಮಿಲಿಟರಿಯನ್ನು ನೇರಾನೇರ ಟೀಕಿಸುವುದರ ಹಾಗೂ ತಾವು ಎದುರಿಸುತ್ತಿರುವ ರಾಜಕೀಯ ಇತಿಮಿತಿಗಳ ನಡುವೆ ಸೂಕ್ಷ್ಮ ಸಮತೋಲನವನ್ನು ಸಾಧಿಸಿದ್ದಾರೆ. ಮಾನವ ಹಕ್ಕುಗಳನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ನೀಡುವ ಎಲ್ಲ ಶಕ್ತಿಯನ್ನೂ ಬಳಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಕಿ ಹೇಳಿದ್ದಾರೆ. ಬಂದೂಕಿನ ನಳಿಕೆಯ ಮೂಲಕ ಮಿಲಿಟರಿಯು ಇಂದಿಗೂ ಅಧಿಕಾರ ಹೊಂದಿರುವ ಕಾರಣ, ಇಂಥದ್ದೊಂದು ನಿಲುವು ತಾಳಲು ಎದೆಗಾರಿಕೆ ಬೇಕು.

ಮಿಲಿಟರಿ ಎಂಬುದು ಏಕರೂಪಿ ವ್ಯವಸ್ಥೆ ಅಲ್ಲ. ಅಲ್ಲಿನ ಹಲವು ಕಟ್ಟರ್‌ವಾದಿ ಅಧಿಕಾರಿಗಳು ಸರ್ಕಾರದ ಮೇಲೆ ಪೂರ್ಣ ನಿಯಂತ್ರಣ ಸಾಧಿಸಲು ಬಯಸುತ್ತಾರೆ. ಪ್ರಜಾತಾಂತ್ರಿಕ ಮಾರ್ಗದ ಮೂಲಕ ರಚನೆಯಾಗಿರುವ ತಮ್ಮ ಸರ್ಕಾರದ ವಿರುದ್ಧ ದಂಗೆ ಏಳಲು ಮಿಲಿಟರಿಗೆ ಸಮರ್ಥನೆ ಒದಗಿಸದೆ ಇರುವ ಹಾಗೂ ರೋಹಿಂಗ್ಯಾ ಸಮಸ್ಯೆಗೆ ದೀರ್ಘಕಾಲೀನ ಪರಿಹಾರವೊಂದನ್ನು ಕಂಡುಕೊಳ್ಳುವತ್ತ ಮುಂದಡಿ ಇಡುವ ಸವಾಲುಗಳು ಸೂಕಿ ಅವರ ಮೇಲಿವೆ. ಸೂಕಿ ಅವರು ‘ರಾಷ್ಟ್ರದ ಭದ್ರತೆ’ಯ ವಿಚಾರದಲ್ಲಿ ದುರ್ಬಲ ವ್ಯಕ್ತಿ ಎಂದು ಅಲ್ಲಿನ ಮಿಲಿಟರಿ ಚಿತ್ರಿಸಿದೆ. ಜನಾಂಗೀಯ ಅಲ್ಪಸಂಖ್ಯಾತರನ್ನು ರಕ್ಷಿಸುವ ವಿಚಾರದಲ್ಲಿ ಸೂಕಿ ದುರ್ಬಲರು ಎಂದು ಅಂತರರಾಷ್ಟ್ರೀಯ ಸಮುದಾಯ ಭಾವಿಸಿದೆ. ಇವೆರಡರ ನಡುವೆ ಸೂಕಿ ಇದ್ದಾರೆ. ಇದೊಂದು ಅಪಾಯಕಾರಿ ಸ್ಥಿತಿ.

ರಾಖೈನ್‌ನಲ್ಲಿ ಪರಿಸ್ಥಿತಿ ಸ್ಥಿರವಾಗಿಸುವ ತಮ್ಮ ಯತ್ನದ ಭಾಗವಾಗಿ ಸೂಕಿ ಅವರು ವಿಶ್ವಸಂಸ್ಥೆಯ ಮಾಜಿ ಮಹಾ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ನೇತೃತ್ವದಲ್ಲಿ ಒಂದು ಆಯೋಗ ರಚಿಸಿ, ಶಿಫಾರಸುಗಳನ್ನು ನೀಡಲು ಸೂಚಿಸಿದ್ದರು. ದೇಶದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗೆ ತೆರೆಯಲಾಗಿರುವ ಶಿಬಿರಗಳನ್ನು ಸ್ಥಗಿತಗೊಳಿಸಬೇಕು, ಮುಕ್ತ ಸಂಚಾರದ ಸ್ವಾತಂತ್ರ್ಯ ಇರಬೇಕು, ನಾಗರಿಕ ವಿಚಾರಗಳಲ್ಲಿ ಅಲ್ಪಸಂಖ್ಯಾತರ ಪಾಲ್ಗೊಳ್ಳುವಿಕೆ ಇರಬೇಕು, ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಒಂದು ವ್ಯವಸ್ಥೆ ರೂಪಿಸಬೇಕು ಎಂಬುದೂ ಸೇರಿದಂತೆ ಹಲವು ಶಿಫಾರಸುಗಳನ್ನು ಆಯೋಗವು ತನ್ನ ಅಂತಿಮ ವರದಿಯಲ್ಲಿ ಹೇಳಿದೆ. ಇದನ್ನು ಆಗಸ್ಟ್‌ ಕೊನೆಯಲ್ಲಿ ಸಲ್ಲಿಸಲಾಗಿದ್ದು, ಸೂಕಿ ಅವರು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ.

ಆದರೆ ವರದಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಆರಾಕಾನ್ ರೋಹಿಂಗ್ಯಾ ಮುಕ್ತಿ ಸೇನೆ ಎಂಬ ಹೊಸ ದಾಳಿಕೋರ ಭಯೋತ್ಪಾದಕ ಸಂಘಟನೆಯು ಗಡಿಯಲ್ಲಿರುವ ಹಲವು ಠಾಣೆಗಳ ಮೇಲೆ ದಾಳಿ ನಡೆಸಿತು. ಮಿಲಿಟರಿ ನೀಡುತ್ತಿರುವ ಹಿಂಸಾತ್ಮಕ ಪ್ರತಿಕ್ರಿಯೆಗಳನ್ನು ಸಮರ್ಥಿಸಿಕೊಳ್ಳಲು ಈ ದಾಳಿಗಳನ್ನು ಬಳಸಿಕೊಳ್ಳಲಾಯಿತು. ಇದು ಈಗಿನ ದಾರುಣ ಬಿಕ್ಕಟ್ಟಿಗೆ ಕಾರಣವಾಗಿದೆ.

ಅಂದಾಜು ಎರಡರಿಂದ ನಾಲ್ಕು ಲಕ್ಷ ಜನರನ್ನು ಬಾಂಗ್ಲಾದೇಶದ ಗಡಿಯತ್ತ ತಳ್ಳಲಾಗುತ್ತಿದೆ ಎಂದು ಹೇಳಲಾಗಿದೆ. ಕೆಲವರು ಗಡಿ ದಾಟಿ ಆಚೆಗೆ ಹೋಗುತ್ತಿದ್ದಾರೆ, ಇನ್ನು ಕೆಲವರಿಗೆ ಅದು ಸಾಧ್ಯವಾಗುತ್ತಿಲ್ಲ. ಅತ್ಯಾಚಾರ ನಡೆದ, ಕೊಲೆಗಳು ಆಗಿರುವ, ಹಳ್ಳಿಗಳನ್ನು ಇಡಿಯಾಗಿ ಸುಟ್ಟುಹಾಕಿರುವ ವರದಿಗಳು ಇವೆ. ಇದು ರೋಹಿಂಗ್ಯಾ ರಾಖೈನ್‌ ರಾಜ್ಯದ ಗಡಿಗುಂಟ ವಾಸಿಸುತ್ತಿರುವ ಇತರ ಜನರ ಮೇಲೂ ಪರಿಣಾಮ ಉಂಟುಮಾಡುತ್ತಿದೆ. ಆರಾಕಾನ್ ರೋಹಿಂಗ್ಯಾ ಮುಕ್ತಿ ಸೇನೆ ನಡೆಸುತ್ತಿರುವ ಭೀಕರ ದಾಳಿಗಳ ಕಾರಣದಿಂದಾಗಿ ಇತರ ಜನಾಂಗೀಯ ಅಲ್ಪಸಂಖ್ಯಾತರ ಪರಿಸ್ಥಿತಿ ಕೂಡ ಹದಗೆಟ್ಟಿದೆ.

ಮ್ಯಾನ್ಮಾರ್‌ ಮಿಲಿಟರಿ ನಡೆಸುತ್ತಿರುವ ಕಾರ್ಯಾಚರಣೆಯು ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಬಹುಸಂಖ್ಯಾತ ಬೌದ್ಧರಲ್ಲಿ ಆಳವಾಗಿ ಬೇರುಬಿಟ್ಟಿರುವ ಭಾವನೆಗಳನ್ನು ಬಳಸಿಕೊಳ್ಳುವ ತಂತ್ರಗಾರಿಯ ಭಾಗವಾಗಿದೆ. ರೋಹಿಂಗ್ಯಾ ಸಮುದಾಯದವರನ್ನು ಹೊರಹಾಕುವುದು, ಮ್ಯಾನ್ಮಾರ್‌ನ ಜನ ಸೂಕಿ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತೆ ಮಾಡುವ ಕೆಲಸದಲ್ಲಿ ಮಿಲಿಟರಿಗೆ ಸಹಾಯವಾಗಲಿದೆ. ರೋಹಿಂಗ್ಯಾ ಸಮುದಾಯದವರು ಅಥವಾ ಇತರ ಜನಾಂಗೀಯ ಅಲ್ಪಸಂಖ್ಯಾತ ಸಮುದಾಯದವರು ಮ್ಯಾನ್ಮಾರ್‌ನ ಭಾಗವಲ್ಲ ಎಂಬುದು ಅಲ್ಲಿನ ಬಹುಸಂಖ್ಯಾತರ ಭಾವನೆ. ರೋಹಿಂಗ್ಯಾ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಪರವಾಗಿ ಸೂಕಿ ಅವರು ಧ್ವನಿ ಎತ್ತುವಂತೆ ಮಾಡುವ ಮೂಲಕ, ಅವರು ರೋಹಿಂಗ್ಯಾ ಸಮುದಾಯದವರ ವಿರುದ್ಧ ಹಾಗೂ ಬೌದ್ಧ ಸಮುದಾಯದ ಪರವಾಗಿ ಮಾತನಾಡಲು ಸಿದ್ಧರಿಲ್ಲ ಎಂಬ ಸಂದೇಶ ರವಾನಿಸುವ ಪ್ರಯತ್ನವನ್ನೂ ಮಿಲಿಟರಿ ನಡೆಸಿದೆ.

ರೋಹಿಂಗ್ಯಾ ಸಮುದಾಯದವರ ರಕ್ಷಣೆಯ ವಿಚಾರದಲ್ಲಿ ಸೂಕಿ ಅವರು ದುರ್ಬಲರಾಗಿದ್ದಾರೆ ಎಂಬಂತೆ ಅಂತರರಾಷ್ಟ್ರೀಯ ಸಮುದಾಯ ಭಾವಿಸಿದೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸೂಕಿ ಅವರ ಪ್ರಭಾವ ತಗ್ಗಿಸಬೇಕು ಎಂಬುದು ಮಿಲಿಟರಿಯ ಬಯಕೆ. ಕಾನೂನಿನ, ಸಂವಿಧಾನದ ಹಾಗೂ ರಾಜಕೀಯ ವಾಸ್ತವದ ಮಿತಿಗಳ ಕಾರಣದಿಂದಾಗಿ ಸೂಕಿ ಅವರು ಕ್ರಮ ಕೈಗೊಳ್ಳುವ ಶಕ್ತಿಯನ್ನು ಬಹುತೇಕ ಹೊಂದಿಲ್ಲದಿದ್ದರೂ, ಈ ಉದ್ದೇಶ ಸಾಧನೆಯಲ್ಲಿ ಮಿಲಿಟರಿ ಯಶಸ್ಸು ಕಾಣುತ್ತಿದೆ.

ಈ ಎಲ್ಲ ಕಾರಣಗಳಿಂದಾಗಿ, ಅಂತರರಾಷ್ಟ್ರೀಯ ಸಮುದಾಯವು ತನ್ನದೇ ಆದ ಇಬ್ಬಗೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ: ಮೊದಲನೆಯದು, ರಾಖೈನ್‌ ರಾಜ್ಯದಲ್ಲಿ ಬೃಹತ್ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಉಂಟಾಗಿರುವ ತುರ್ತುಸ್ಥಿತಿ. ಎರಡನೆಯದು, ದೇಶದಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೂಕಿ ಅವರು ಹೊಂದಿರುವ ಸ್ಥಾನವನ್ನು ಕುಗ್ಗಿಸುವ ಮೂಲಕ ಒಂದು ಬಗೆಯ ಮಿಲಿಟರಿ ಆಡಳಿತವನ್ನು ಪುನಃ ಜಾರಿಗೆ ತರುವ ಉದ್ದೇಶದ ಮಿಲಿಟರಿ ಕಾರ್ಯತಂತ್ರ. ಅಲ್ಲಿನ ಪರಿಸ್ಥಿತಿಯ ವಿಚಾರವಾಗಿ ಏನು ಮಾಡಬೇಕು ಎಂಬುದನ್ನು ತೀರ್ಮಾನಿಸಲು ವಿಶ್ವಸಂಸ್ಥೆ ಸಭೆ ಸೇರಿದಾಗ, ಈ ಎರಡೂ ಸಂಗತಿಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

ರೋಹಿಂಗ್ಯಾ ಸಮುದಾಯದವರಿಗೆ ರಕ್ಷಣೆ ನೀಡುವುದನ್ನು ಅತ್ಯಂತ ಆದ್ಯತೆಯ ವಿಚಾರವನ್ನಾಗಿ ಕೈಗೆತ್ತಿಕೊಳ್ಳಬೇಕು. ಅದರ ಜೊತೆಯಲ್ಲೇ, ಈಗಷ್ಟೇ ರೆಕ್ಕೆ ಬಿಚ್ಚಿ ಹಾರಲು ಯತ್ನಿಸುತ್ತಿರುವ ಮ್ಯಾನ್ಮಾರ್‌ನ ಪ್ರಜಾತಂತ್ರದ ಬಗ್ಗೆಯೂ ಗಮನ ಇರಬೇಕು. ಇದು ಸಾಧ್ಯವಾಗಬೇಕು ಎಂದಾದರೆ, ರೋಹಿಂಗ್ಯಾ ಸಮುದಾಯದವರ ವಿರುದ್ಧದ ಕ್ರೌರ್ಯ ಕೊನೆಗೊಳ್ಳಬೇಕು ಎಂದು ಮಿಲಿಟರಿಯನ್ನು ಒತ್ತಾಯಿಸುವುದು ಮಾತ್ರವಲ್ಲದೆ, ಸೂಕಿ ಅವರನ್ನು ಬೆಂಬಲಿಸುವುದರಿಂದ ಹಿಂದೆ ಸರಿಯಲೂಬಾರದು. ಹಾಗೆಯೇ, ಅನ್ನಾನ್‌ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ರಚಿಸಿರುವ ವ್ಯವಸ್ಥೆಗೆ ಅಂತರರಾಷ್ಟ್ರೀಯ ಬೆಂಬಲ ಸಿಗಬೇಕು.

ಸೂಕಿ ಅವರು ಸಂತ ಸದೃಶ ವ್ಯಕ್ತಿಯಲ್ಲ. ಯಾವ ರಾಜಕಾರಣಿಯೂ ಅಂಥ ವ್ಯಕ್ತಿತ್ವ ಹೊಂದಿಲ್ಲ. ಆದರೆ, ಅಲ್ಲಿನ ಬಿಕ್ಕಟ್ಟಿನ ಎಲ್ಲ ಆಯಾಮಗಳ ಬಗ್ಗೆ ಅಂತರರಾಷ್ಟ್ರೀಯ ಸಮುದಾಯ ಗಮನ ನೀಡದಿದ್ದರೆ, ರೋಹಿಂಗ್ಯಾ ಬಿಕ್ಕಟ್ಟು ಮುಂದುವರಿಯುವುದು ಮಾತ್ರವಲ್ಲದೆ, ಮ್ಯಾನ್ಮಾರ್‌ನ ಪ್ರಜಾತಂತ್ರ ವ್ಯವಸ್ಥೆಯೂ ಕೊನೆಗೊಳ್ಳುತ್ತದೆ.

(ಲೇಖಕರು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ. ಅವರು ಈಗ ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷರು.)

Comments
ಈ ವಿಭಾಗದಿಂದ ಇನ್ನಷ್ಟು
ಯಾರೊಂದಿಗೂ ಸ್ನೇಹವೂ ಇಲ್ಲ, ದ್ವೇಷವೂ ಇಲ್ಲ

ಸ್ಪಂದನ
ಯಾರೊಂದಿಗೂ ಸ್ನೇಹವೂ ಇಲ್ಲ, ದ್ವೇಷವೂ ಇಲ್ಲ

22 Mar, 2018
ಆಂಧ್ರ ಚುನಾವಣಾ ಪ್ರಚಾರಕ್ಕೆ ಲೋಕಸಭೆಯಿಂದಲೇ ಚಾಲನೆ

ಸ್ಪಂದನ
ಆಂಧ್ರ ಚುನಾವಣಾ ಪ್ರಚಾರಕ್ಕೆ ಲೋಕಸಭೆಯಿಂದಲೇ ಚಾಲನೆ

21 Mar, 2018
 ಬಿ.ಎಸ್.ಪಿ. ಆನೆಯನ್ನು ಪಳಗಿಸೀತೇ ಬಿಜೆಪಿ?

ಸುದ್ದಿ ವಿಶ್ಲೇಷಣೆ
ಬಿ.ಎಸ್.ಪಿ. ಆನೆಯನ್ನು ಪಳಗಿಸೀತೇ ಬಿಜೆಪಿ?

15 Mar, 2018
ಕನಸಿನ ವ್ಯಾಪಾರಿಗಳ ಬಲೆಯಲ್ಲಿ ಮುಸ್ಲಿಮರು

ವಿಶ್ಲೇಷಣೆ
ಕನಸಿನ ವ್ಯಾಪಾರಿಗಳ ಬಲೆಯಲ್ಲಿ ಮುಸ್ಲಿಮರು

14 Mar, 2018
ಹೊಸ ಅರುಣೋದಯದತ್ತ ಜಿಂಬಾಬ್ವೆ

ವಿಶ್ಲೇಷಣೆ
ಹೊಸ ಅರುಣೋದಯದತ್ತ ಜಿಂಬಾಬ್ವೆ

13 Mar, 2018