ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಗರೂಟದಿಂದ ‘ಬಿ’ ವರದಿವರಗೆ...

Last Updated 23 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬಹಳ ಹಿಂದಿನಿಂದಲೂ ಭಾರತವನ್ನು ಕಾಡುತ್ತಿರುವ ಬಹು ದೊಡ್ಡ ಸಮಸ್ಯೆ ಜಾತಿ ಪದ್ಧತಿ. ಸ್ವತಃ ಅಸ್ಪೃಶ್ಯತೆಯ ಕರಾಳತೆಯನ್ನು ಅನುಭವಿಸಿದ್ದ ಅಂಬೇಡ್ಕರ್, ‘ಜಾತಿ ವಿನಾಶವಾದರೆ ಮಾತ್ರ ಭಾರತದ ಪ್ರಗತಿ ಸಾಧ್ಯ’ ಎಂದು ಪ್ರತಿಪಾದಿಸಿದರು. ಅದಕ್ಕೆ ಪೂರಕವಾದ ಕಾನೂನುಗಳನ್ನು ರೂಪಿಸಿದರು ಕೂಡ. ಅವರ ಪರಿಶ್ರಮದ ಫಲವಾಗಿ ಇವತ್ತು ಭಾರತದಲ್ಲಿ ಅಸ್ಪೃಶ್ಯತೆ ನಿಷೇಧಿತವಾಗಿದೆ. ಆದರೂ ಅದು ಬೇರೆ ಬೇರೆ ಸ್ವರೂಪಗಳಲ್ಲಿ ಕಾಣಿಸುತ್ತಲೇ ಇರುತ್ತದೆ. ವಿಷಾದದ ಸಂಗತಿ ಎಂದರೆ ದಬ್ಬಾಳಿಕೆಯ ಹಲವು ನಿಜ ಪ್ರಕರಣಗಳು ಸರಿಯಾದ ತನಿಖೆ ಕಾಣದೆ ನನೆಗುದಿಗೆ ಬಿದ್ದರೆ ಮತ್ತೆ ಕೆಲವು ಸಂದರ್ಭಗಳಲ್ಲಿ ಈ ಕಾನೂನುಗಳು ದುರ್ಬಳಕೆಯಾಗುತ್ತವೆ ಎನ್ನುವುದೂ ಅಷ್ಟೇ ಸತ್ಯ. ವೈಯಕ್ತಿಕ ದ್ವೇಷಕ್ಕೋ, ರಾಜಕೀಯ ಜಿದ್ದಾಜಿದ್ದಿಗೋ ಈ ಕಾನೂನುಗಳನ್ನು ಬಳಸಿ ಜನರನ್ನು ಕಾಡಿಸುವ ಪ್ರಕರಣಗಳೂ ಕಡಿಮೆ ಇಲ್ಲ.

ಜೋಗಿಪುರ ಗ್ರಾಮ ಪಂಚಾಯಿತಿ ಐದು ಗ್ರಾಮಗಳನ್ನು ಒಳಗೊಂಡಿದೆ. ಆದರೆ ಐವತ್ತು ವರ್ಷಗಳಿಂದ ಬೇರೆ ಗ್ರಾಮದವರು ಏನೇ ಹರ
ಸಾಹಸ ಮಾಡಿದರೂ ಅಧ್ಯಕ್ಷರಾಗುವುದು ಜೋಗಿಪುರದವರೇ. ಜೋಗಿಪುರ ದೊಡ್ಡ ಗ್ರಾಮ. ಇಲ್ಲಿ ಅಸ್ಪೃಶ್ಯ ಜಾತಿಗೆ ಸೇರಿದ ಮತದಾರರ ಸಂಖ್ಯೆಯೇ ಅಧಿಕ. ಮೇಲ್ಜಾತಿಗೆ ಸೇರಿದ ಬಾಗಪ್ಪ ಮತ್ತು ಉಗ್ರಪ್ಪ ಎಂಬ ಸಹೋದರರ ಕಪಿಮುಷ್ಠಿಯಲ್ಲಿ ಅವರಿದ್ದರು. 1983ರ ಹೊತ್ತಿಗೆ
ಬಾಗಪ್ಪ-ಉಗ್ರಪ್ಪ ಸಹೋದರರೇ ಸರದಿ ಮೇಲೆ ತಲಾ ಮೂರು ಬಾರಿ ಅಧ್ಯಕ್ಷರಾಗಿದ್ದರು. ಅಧ್ಯಕ್ಷ ಆಗಲು ಬಯಸಿದ್ದವರು ಕುದಿಯುತ್ತಿದ್ದರು. ಬಾಗಪ್ಪ-ಉಗ್ರಪ್ಪ ಸೋದರರಾಗಿದ್ದರೂ, ರಾಜಕೀಯ ವಿರೋಧಿಗಳು. ಏಕೆಂದರೆ ಇಬ್ಬರದು ಬೇರೆ ಬೇರೆ ರಾಜಕೀಯ ಪಕ್ಷ.

1983ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಎರಡು ತಿಂಗಳ ಮುಂಚೆ ಬಾಗಪ್ಪನ ಮಗ ಸಣ್ಣಯ್ಯನ ಮದುವೆ ಕೂಡಿ ಬಂತು. ಬಾಗಪ್ಪ ತನ್ನ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಲು ಯೋಚಿಸಿದ. ಚುನಾವಣೆ ಹತ್ತಿರ ಬರುತ್ತಿದ್ದುದರಿಂದ ಮಗನ ಮದುವೆಯನ್ನು ಮತದಾರರ ಓಲೈಕೆಗೆ ಬಳಸಿಕೊಳ್ಳಲು ಎಲ್ಲ ಸಿದ್ಧತೆ ಮಾಡಿಕೊಂಡ. ಸಣ್ಣಯ್ಯನ ಮದುವೆ ಬೆಂಗಳೂರು ನಗರದ ಹೊರವಲಯದಲ್ಲಿದ್ದ ‘ದುರ್ಗಾಭವತಿ ಕಲ್ಯಾಣ ಮಂಟಪ’ದಲ್ಲಿ ಜರುಗಿತು. ಮದುವೆಯ ಮುಹೂರ್ತಕ್ಕೆ ಇಡೀ ಜೋಗಿಪುರವೇ ಅಲ್ಲಿತ್ತು. ಬಾಗಪ್ಪ ಮದುವೆಯ ಮುಹೂರ್ತಕ್ಕೆ ತನ್ನ ಗ್ರಾಮದ ಎಲ್ಲಾ ಪರಿಶಿಷ್ಟ ಜಾತಿಯ ಜನರೂ ಇರುವಂತೆ, ಅವರಿಗೆ ವಿಶೇಷ ಏರ್ಪಾಟು ಮಾಡಿಸಿ, ತಣಿಸಿ, ಸಂತೃಪ್ತರಾಗುವಂತೆ ನೋಡಿಕೊಂಡ. ಈ ರೀತಿಯಾಗಿ, ಬಾಗಪ್ಪ ಪರಿಶಿಷ್ಟ ಜಾತಿಯವರನ್ನು ಓಲೈಸುವ ಪರಿಯನ್ನು ಉಗ್ರಪ್ಪ ಅಸೂಯೆಯಿಂದ ಗಮನಿಸಿಕೊಂಡ. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆಂಟರಿಷ್ಟರು ನೆರೆದಿದ್ದ ಕಾರಣ ಅತೃಪ್ತಿಯನ್ನು ಅದುಮಿಟ್ಟುಕೊಂಡ. ಅವನ ಗ್ರಾಮದ ಬೆಂಬಲಿಗರೂ ಅವನಂತೆಯೇ ವರ್ತಿಸಿದರು.

ಹೆಣ್ಣಿನ ಮನೆಯವರು ಮದುವೆ ಮಾಡಿಕೊಟ್ಟಿದ್ದರಿಂದ ಮದುವೆ ಮುಗಿದ ಎಂಟನೇ ದಿನಕ್ಕೆ ಬೀಗರ ಊಟವನ್ನು ಬಾಗಪ್ಪ ತನ್ನ ಸ್ವಗ್ರಾಮದ ತೋಟದಲ್ಲಿ ವ್ಯವಸ್ಥೆ ಮಾಡಿದ. ಊರಿನ ಎಲ್ಲ ಪರಿಶಿಷ್ಟ ಜಾತಿಯವರನ್ನು ಅವರ ಮನೆಯ ಬಾಗಿಲಿಗೆ ಹೋಗಿ ಬಾಡೂಟಕ್ಕೆ ಆಹ್ವಾನಿಸಿದ. ಅದುವರೆಗೆ ಗ್ರಾಮದ ಯಾವ ಮುಂದಾಳೂ ಆ ರೀತಿ ಆಹ್ವಾನಿಸಿರಲಿಲ್ಲ. ತಮಗೆ ಸಿಕ್ಕಿದ ವಿಶೇಷ ಆಹ್ವಾನಕ್ಕಾಗಿ ಅವರೆಲ್ಲ ಉಬ್ಬಿಹೋದರು. ಎಲ್ಲರೂ ತಪ್ಪದೆ ಬಾಡೂಟದಲ್ಲಿ ಭಾಗವಹಿಸಲು ತೀರ್ಮಾನಿಸಿದರು.

ಉಗ್ರಪ್ಪನಿಗೂ ಬೀಗರೂಟಕ್ಕೆ ತಪ್ಪದೆ ಬರಲು ಕೇಳಿಕೊಂಡ ಬಾಗಪ್ಪ. ಆದರೆ ಈ ಅದ್ದೂರಿ ಏರ್ಪಾಟು ಸಹಿಸಿಕೊಳ್ಳದ ಆತ, ಬಾಡೂಟವಿದ್ದ 3-4 ದಿನಗಳ ಮುಂಚೆ ಪ್ರವಾಸಕ್ಕೆ ಹೋಗಿ ಊಟದ ದಿನ ಮಧ್ಯಾಹ್ನ 12 ಗಂಟೆಗೆ ವಾಪಸಾದ. ಒಂದು ಗಂಟೆಯ ಸುಮಾರಿಗೆ ಹೆಂಡತಿ ಮಕ್ಕಳು ಮತ್ತು ಬೆಂಬಲಿಗರೊಂದಿಗೆ ಬೀಗರೂಟ ಏರ್ಪಡಿಸಿದ್ದ ಜಾಗಕ್ಕೆ ಬಂದ. ಅತ್ಯಂತ ಠೀವಿಯಿಂದ ಬೆಂಬಲಿಗರ ಬೆಂಗಾವಲಿನಲ್ಲಿ ತನ್ನ ಅಣ್ಣ ಮಾಡಿಸಿದ್ದ ಏರ್ಪಾಟುಗಳನ್ನು ಗಮನಿಸುತ್ತಾ ಅಲ್ಲಿ ಊಟ ಮಾಡುತ್ತಿದ್ದವರನ್ನು ಕೆಕ್ಕರಿಸಿ ನೋಡತೊಡಗಿದ. ಉಗ್ರಪ್ಪ ಹಾಗೂ ಆತನ ಬೆಂಬಲಿಗರು ತಮ್ಮತ್ತ ವಕ್ರದೃಷ್ಟಿ ಬೀರುತ್ತಿರುವುದನ್ನು ಗಮನಿಸಿ, ಊಟ ಮಾಡುತ್ತಿದ್ದವರು ಅಗೋಚರ ಭಯಕ್ಕೆ ಒಳಗಾದವರಂತೆ ಊಟವನ್ನು ಅರ್ಧದಲ್ಲೇ ಬಿಟ್ಟು ಹೊರಟು ಹೋದರು. ಎಲ್ಲರೂ ಅರ್ಧಕ್ಕೆ ಊಟ ಬಿಟ್ಟು ಹೋಗುತ್ತಿರುವ ವಿಷಯವನ್ನು ಅವರಲ್ಲಿ ಒಬ್ಬರು ಕೆಲಸದಲ್ಲಿ ತಲ್ಲೀನನಾಗಿದ್ದ ಬಾಗಪ್ಪನಿಗೆ ಮುಟ್ಟಿಸಿದರು. ಬಾಗಪ್ಪ ಊಟದ ಜಾಗಕ್ಕೆ ಹೋಗಿ ನೋಡುವಷ್ಟರಲ್ಲಿ ಅಲ್ಲಿ ಯಾವೊಬ್ಬ ಅಸ್ಪೃಶ್ಯನೂ ಇಲ್ಲದಿರುವುದನ್ನು ಕಂಡು ದಿಗ್ಭ್ರಮೆಗೊಂಡ.

ಬಾಗಪ್ಪನ ಕೆಲ ಹಿಂಬಾಲಕರು ಉಗ್ರಪ್ಪ ಮತ್ತು ಅವನ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡರು. ಇದರ ಪರಿಣಾಮ ಅಲ್ಲಿ ಸ್ವಲ್ಪ ಹೊತ್ತು ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತು. ಬಾಗಪ್ಪ ಆಡಳಿತ ನಡೆಸುತ್ತಿದ್ದ ಪಕ್ಷದಲ್ಲಿದ್ದ. ಆದ್ದರಿಂದ ಬೀಗರೂಟಕ್ಕೆ ಪಕ್ಷದ ಕೆಲವು ನಾಯಕರೂ ಸ್ಥಳೀಯ ಪೊಲೀಸರೂ ಬಂದಿದ್ದರು. ಅವರೆಲ್ಲಾ ಉಗ್ರಪ್ಪನ ವರ್ತನೆಗೆ ಸಿಟ್ಟುಕೊಂಡು ಅಲ್ಲಿದ್ದ ಪೊಲೀಸರಿಗೆ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಆದರೆ ಉಗ್ರಪ್ಪನ ಉಗ್ರ ಅವತಾರಕ್ಕೆ ಹೆದರಿ ಗ್ರಾಮಸ್ಥರಾರೂ ದೂರು ಕೊಡಲು ಮುಂದೆ ಬರಲಿಲ್ಲ. ಪೊಲೀಸರು ಸ್ವಯಂ ಪ್ರೇರಣೆಯಿಂದ (suo moto) ಕ್ರಮ ಜರುಗಿಸಿ ಉಗ್ರಪ್ಪ ಮತ್ತು ಅವನ 20 ಜನ ಹಿಂಬಾಲಕರನ್ನು ವಶಕ್ಕೆ ಪಡೆದು, ‘ನಾಗರಿಕ ಹಕ್ಕು ರಕ್ಷಣಾ ಕಾಯ್ದೆ 1955, ಕಲಂ 7(ಬಿ) ಮತ್ತು (ಸಿ)’ ರಂತೆ ಪ್ರಕರಣವೊಂದನ್ನು ದಾಖಲಿಸಿದರು.

ಅಂದು ರಾತ್ರಿಯೇ ಕೆಲವು ರಾಜಕಾರಣಿಗಳು, ಉಗ್ರಪ್ಪ ಮತ್ತು ಅವನ ಸಹ ಆರೋಪಿಗಳಿಗೆ ನಾನು ವಕಾಲತ್ತು ವಹಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿಸಲು ಕೇಳಿಕೊಂಡರು. ಮಾರನೆಯ ದಿನ ಅವರನ್ನು ಕೋರ್ಟ್‌ಗೆ ಹಾಜರು ಪಡಿಸುವ ವೇಳೆ ನಾನು ಜಾಮೀನು ಅರ್ಜಿ ಸಲ್ಲಿಸಿದೆ. ಮಧ್ಯಾಹ್ನ ಮೂರು ಗಂಟೆಗೆ ನನ್ನ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಲು ಪ್ರಾಸಿಕ್ಯೂಟರಿಗೆ ನ್ಯಾಯಾಧೀಶರು ನಿರ್ದೇಶಿಸಿದರು.
ಮೂರು ಗಂಟೆಗೆ ಸರಿಯಾಗಿ ಪ್ರಾಸಿಕ್ಯೂಟರ್ ಆಕ್ಷೇಪಣೆ ಸಲ್ಲಿಸಿದರು. ವಾದವನ್ನು ಪ್ರಾರಂಭಿಸುವ ಅವಕಾಶ ನನ್ನದಾಗಿತ್ತು, ನಾನು ಹೇಳಿದ್ದು ಇಷ್ಟು... ‘ಯುವರ್ ಆನರ್, ಪೊಲೀಸ್ ಅಧಿಕಾರಿಯೊಬ್ಬರು ಈ ಆರೋಪಿಗಳನ್ನು ಕುರಿತು ನಾಗರಿಕ ಹಕ್ಕು ರಕ್ಷಣಾ ಕಾಯ್ದೆ ಕಲಂ 7, ಉಪಕಲಂ ‘ಬಿ’ ಮತ್ತು ‘ಸಿ’ ಯಂತೆ ಸ್ವಯಂ ಪ್ರೇರಿತ ದೂರಿನಲ್ಲಿ ಆಪಾದಿಸಿರುತ್ತಾರೆ. ಆರೋಪಿಗಳು ಜೋಗಿಪುರದ ಪರಿಶಿಷ್ಟರು. ಬಾಗಪ್ಪರ ಆಹ್ವಾನದ ಮೇರೆಗೆ ಬಾಡೂಟ ಮಾಡುತ್ತಿದ್ದಾಗ ಘಾಸಿಗೊಳಿಸಿ, ಅಸ್ಪೃಶ್ಯತೆ ಆಧಾರದ ಮೇಲೆ ಅಪರಾಧವೆಸಗಿರುತ್ತಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಅಸ್ಪೃಶ್ಯತೆಯ ಆಚರಣೆಯನ್ನು ತಡೆಯುವ ಸಂಬಂಧದ ಈ ಕಲಂ ಮತ್ತು ಉಪಕಲಂಗಳ ಮೂಲ, ಭಾರತೀಯ ಸಂವಿಧಾನದ 17ನೇ ವಿಧಿ. ಈ ವಿಧಿಯ ಪ್ರಕಾರ ಭಾರತದಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ ಮತ್ತು ಯಾವುದೇ ರೂಪದಲ್ಲೂ ಇದರ ಆಚರಣೆ ನಿಷಿದ್ಧ ಮತ್ತು ಕಾನೂನಿಗನುಸಾರವಾಗಿ ದಂಡನೀಯವಾದ ಅಪರಾಧವಾಗುತ್ತದೆ... ಡಾ. ಅಂಬೇಡ್ಕರ್ ಅವರಿಗೆ ಜಾತಿ ವಿನಾಶದ ಬಗ್ಗೆ ಇದ್ದ ಮಹತ್ತರ ಆಶಯದ ಪರಿಣಾಮವಾಗಿದೆ’ ಎಂದು ನಾನು ವಿನಯದಿಂದ ತಿಳಿಸಿದೆ.

ಮೇಲ್ನೋಟಕ್ಕೆ ಆರೋಪಿಗಳು ಅಂಬೇಡ್ಕರರ ಮಹತ್ತರ ಆಶಯಕ್ಕೆ ಭಂಗ ತಂದಿರುವರೆಂಬ ಆರೋಪವನ್ನು ನಿಜವೆಂದು ಭಾವಿಸಲು ಸಾಧ್ಯ. ಅಸ್ಪೃಶ್ಯತೆಯ ಆಚರಣೆ ಅತ್ಯಂತ ಅಮಾನವೀಯ, ಅತಿ ಘೋರ ದುಷ್ಕೃತ್ಯ. ಕೆಲವು ಸಮುದಾಯ ಮತ್ತು ಪಂಗಡಗಳಿಗೆ ಸೇರಿದವರನ್ನು ಅಶುದ್ಧ ಮತ್ತು ಕೀಳು ಎಂದು ಭಾವಿಸಿ ರೂಢಿಸಿಕೊಂಡಿರುವ ಎಲ್ಲಾ ಬಗೆಯ ಹೀನ ಆಚರಣೆಗಳು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದವು. ನಮ್ಮ ಸಮಾಜದ ಅತಿ ಘೋರ ಅನ್ಯಾಯ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ. ಇವಿಷ್ಟನ್ನು ಗಮನದಲ್ಲಿರಿಸಿಕೊಂಡು, ಈ ಪ್ರಕರಣದ ಚೌಕಟ್ಟಿನೊಳಗೆ ಆರೋಪಿಗಳು ಮಾಡಿದರೆನ್ನಲಾಗುವ ಕೃತ್ಯವು ಅಪರಾಧಿಕ ಮನಸ್ಸಿನಿಂದಲೇ, ಉದ್ದೇಶಪೂರ್ವಕವಾಗಿ ಮಾಡಿರುವರೆಂದು ದೂರಿನಲ್ಲಿ ಉಲ್ಲೇಖವಿಲ್ಲ. ಕೆಲವು ಸಲ ಉದ್ದೇಶರಹಿತವಾಗಿ ನಿಷ್ಕಾಳಜಿಯಿಂದ ಕೆಲವು ಕೃತ್ಯಗಳು ನಡೆಯುತ್ತವೆ. ಅಂತಹ ಉದ್ದೇಶರಹಿತ ಕೃತ್ಯಗಳಿಂದ ಅಪರಾಧವಾಗಿದೆ ಎಂದು ಭಾವಿಸುವುದು ಕಾನೂನಾತ್ಮಕವಾಗಿ ಸೂಕ್ತವಲ್ಲ. ಒಂದು ಕೃತ್ಯ ಅಪರಾಧವಾಗಿ ಕಾಣಲು, ಆ ಕೃತ್ಯ ಮತ್ತು ಅದನ್ನು ಮಾಡುವವನ ಮನಸ್ಸುಗಳೆರಡೂ ಒಂದೇ ಆಗಿರಬೇಕು. ಕೃತ್ಯದ ಪರಿಣಾಮ ಮತ್ತು ಕೃತ್ಯವೆಸಗಿದವನ ಮಾನಸಿಕ ಸ್ಥಿತಿ ಇಲ್ಲಿ ಮುಖ್ಯವಾಗುತ್ತವೆ.

ಉಗ್ರಪ್ಪ ಮತ್ತು ಅವನ ಬೆಂಬಲಿಗರ ವರ್ತನೆ ಮತ್ತು ವರ್ತನೆಯ ಪರಿಣಾಮ ದೂರಿನಲ್ಲಿ ಕಂಡು ಬರುವಂತೆ ವ್ಯಕ್ತವಾಗುವುದು ಮುಖ್ಯವಾಗುತ್ತದೆ. ಉಗ್ರಪ್ಪ ಮತ್ತು ಅವನ ಬೆಂಬಲಿಗರು ಬಾಡೂಟಕ್ಕೆ ಆಹ್ವಾನಿತರಾದವರು. ಅವರು ಊಟದ ಸ್ಥಳಕ್ಕೆ ಬಂದಾಗ ಗ್ರಾಮದ ಪರಿಶಿಷ್ಟ ಜಾತಿಯವರಲ್ಲಿ ಯಾರ‍್ಯಾರು ಬಂದಿರುವರೆಂದು ಗಮನಿಸಿಕೊಳ್ಳುವ ಇರಾದೆ ಅವರಿಗಿದ್ದಿರಬಹುದು. ಇದರಿಂದ ಅವರು ದಲಿತರು ಬಾಡೂಟ ಮಾಡುತ್ತಿದ್ದ ಜಾಗದಲ್ಲಿ ನಿಂತು ಗಮನಿಸಿಕೊಂಡಿರಬಹುದು. ಆ ಸಮಯದಲ್ಲಿ ಅವರು ದೊಡ್ಡ ಕಣ್ಣು ಮಾಡಿದರೆಂದಾಗಲೀ, ಆಂಗಿಕವಾಗಿ ತಮ್ಮ ಸಿಟ್ಟನ್ನು ಪ್ರಕಟಿಸಿದರೆಂದಾ
ಗಲೀ ದೂರಿನಲ್ಲಿ ಎಲ್ಲಿಯೂ ಕಂಡು ಬರುವುದಿಲ್ಲ. ದೂರನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಾಡೂಟ ಸವಿಯುತ್ತಿದ್ದ ದಲಿತರು ಉಗ್ರಪ್ಪ ಮತ್ತು ಅವನ ಜೊತೆಯಲ್ಲಿದ್ದವರನ್ನು ಗಮನಿಸಿಕೊಂಡಾಗ ತಮ್ಮೊಳಗೇ ಉಂಟಾದ ಭಾವನೆಗಳ ತಳಮಳಗಳ ಪರಿಣಾಮದಿಂದ ಎದ್ದು ಹೋಗುವ ಮನಸ್ಸು ಮಾಡಿರಬಹುದು.

ಅಲ್ಲಿ ಸೇರಿದ್ದ ದಲಿತರಿಗೆ ಬಾಗಪ್ಪ ಮತ್ತು ಉಗ್ರಪ್ಪ ಇಬ್ಬರೂ ಪ್ರಮುಖರೇ. ಅವರೇನು ಬಾಗಪ್ಪನಿಗೆ ಮಾತ್ರ ‘ಕಮಿಟೆಡ್’ ಆಗಿದ್ದವರಲ್ಲ. ಯಾವ ಸಂದರ್ಭದಲ್ಲಿ ಬಾಗಪ್ಪನನ್ನು ಕುರಿತು ಉಗ್ರಪ್ಪನಲ್ಲಿ ಏನೇನು ವ್ಯಕ್ತಪಡಿಸಿದ್ದರೋ? ಅದೆಲ್ಲ ಅವರಿಗೆ ನೆನಪಾಗಿ ಉಗ್ರಪ್ಪನನ್ನು ಅಲ್ಲಿ ನೋಡಿದಾಗ ಅವನನ್ನು ಮಾನಸಿಕವಾಗಿ ಎದುರಿಸಲಾಗದೆ ಅಲ್ಲಿಂದ ಎದ್ದು ಹೋದರೆಂದು ತಿಳಿಯಲು ಸಾಧ್ಯ. ಅವಶ್ಯಕವಾದುದಕ್ಕಿಂತ ಹೆಚ್ಚಾಗಿ ಕಾರಣಗಳನ್ನು ಊಹಿಸಿಕೊಳ್ಳಬಾರದೆಂಬ ನ್ಯಾಯಕ್ಕೆ ವಿರುದ್ಧವಾಗಿವೆ ಪ್ರಾಸಿಕ್ಯೂಟರ್ ಅವರ ಲಿಖಿತ ತಕರಾರುಗಳು. ಆರೋಪಿಗಳ ವಿರುದ್ಧ ಮಾಡಿರುವ ಆರೋಪಗಳು ಸದ್ಯಕ್ಕೆ ಬಲಿಷ್ಠವಲ್ಲದವೂ ಮತ್ತು ಜಾಮೀನನ್ನು ನಿರಾಕರಿಸುವಷ್ಟು ಸತ್ವಯುತವಾದವುಗಳಲ್ಲವೆಂದು ಭಾವಿಸಲು ಸಾಧ್ಯವೆನ್ನುವ ಕಾರಣಕ್ಕೆ ಜಾಮೀನು ಮಂಜೂರಾತಿಗಾಗಿ ಕೇಳಿಕೊಳ್ಳುತ್ತೇನೆ...’

ಈಗ ವಾದ ಮಂಡಿಸುವ ಸರದಿ ಪ್ರಾಸಿಕ್ಯೂಟರ್‌ ಅವರದ್ದು. ಅವರು ಕಲಂ 12ರ ಬಗ್ಗೆ ಕೋರ್ಟ್‌ ಗಮನ ಸೆಳೆದು, ಈ ಕಾಯ್ದೆಯ ಅಡಿಯಲ್ಲಿ ಪರಿಶಿಷ್ಟ ಜಾತಿಯವನೊಬ್ಬನ ವಿಷಯದಲ್ಲಿ ಅಪರಾಧವೆಸಗಿದಲ್ಲಿ ಅದು ಅಸ್ಪೃಶ್ಯತೆಯ ಆಧಾರದ ಮೇಲೆ ಆಗಿರುವುದೆಂದು ನ್ಯಾಯಾಲಯವು ಪೂರ್ವಭಾವನೆ ಹೊಂದಿರಬೇಕೆಂಬುದನ್ನು ಒತ್ತಿ ಹೇಳಿದರು. ಪ್ರಕರಣದ ತನಿಖೆಯು ನಿನ್ನೆಯಷ್ಟೇ ಪ್ರಾರಂಭವಾಗಿದ್ದು, ಘಟನೆಯನ್ನು ಕಣ್ಣಾರೆ ಕಂಡ ನೂರಾರು ಜನರ ಹೇಳಿಕೆಗಳನ್ನು ತನಿಖಾಧಿಕಾರಿ ದಾಖಲಿಸಿಕೊಳ್ಳಬೇಕಿದೆ. ಆರೋಪಿ ಪರ ವಕೀಲರು ಮಂಡಿಸಿದ ವಾದವನ್ನು ವಿಚಾರಣೆ ಮುಗಿದ ನಂತರವಷ್ಟೇ ಪರಿಗಣಿಸುವಂತಹುದು... ಮುಂತಾದ ಅಂಶಗಳನ್ನು ನ್ಯಾಯಾಲಯದ ಮುಂದಿಡುತ್ತಾ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲು ಇದು ಸರಿಯಾದ ಹಂತವಲ್ಲವೆಂದೂ, ಅದನ್ನು ಮಂಜೂರು ಮಾಡಿದರೆ ಉಗ್ರಪ್ಪ ಮತ್ತು ಅವನ ಗುಂಪಿನವರು ಸಾಕ್ಷಿಗಳನ್ನು ಹೆದರಿಸಿ ಪೊಲೀಸರ ಮುಂದೆ ಹೇಳಿಕೆ ಕೊಡಲು ಅಡ್ಡಿ ಉಂಟುಮಾಡುವರೆಂದೂ ತಿಳಿಸುತ್ತಾ ಜಾಮೀನು ಅರ್ಜಿಯನ್ನು ತಿರಸ್ಕರಿಸಲು ಕೇಳಿಕೊಂಡರು.

ವಾದ - ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ‘ಘಟನೆ ಸಂಭವಿಸಿದ ಸಂದರ್ಭದಲ್ಲಿ ಹಳ್ಳಿಯವರು ಯಾರೂ ಪೊಲೀಸರಿಗೆ ದೂರುಕೊಡಲು ಮುಂದಾಗದ ಬಗ್ಗೆ ಆರೋಪಿ ಪರ ವಕೀಲರು ಮಾಡಿದ ವಾದವು ಸರಿಯಾಗಿದೆ. ಅಲ್ಲಿ ಹಾಜರಿದ್ದ ರಾಜಕೀಯ ನಾಯಕರ ಪ್ರಭಾವ
ದಿಂದ ಪೊಲೀಸರು ಸ್ವಪ್ರೇರಣೆಯಿಂದ ಪ್ರಕರಣವನ್ನು ದಾಖಲಿಸಬೇಕಾಗಿ ಬಂದಂತಹ ಅನಿವಾರ್ಯತೆ ಬಂದಿರಲೂಬಹುದು’ ಎನ್ನುತ್ತಾ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದರು.

ತನಿಖೆಗೆ ಅವಕಾಶಗಳು ಇನ್ನೂ ಮುಕ್ತವಾಗಿದ್ದವು. ಆದರೆ ನ್ಯಾಯಾಲಯ ವ್ಯಕ್ತಪಡಿಸಿದ ಅಭಿಪ್ರಾಯಗಳು ತನಿಖಾಧಿಕಾರಿಯ ಮೇಲೆ ಎಷ್ಟರಮಟ್ಟಿನ ಪರಿಣಾಮ ಮಾಡಿದವೆಂದರೆ ಅವರು ತನಿಖೆಯನ್ನು ಮುಗಿಸಿದರಾದರೂ ದೋಷಾರೋಪ ಪಟ್ಟಿ ಹಾಕಲಾಗದೆ ‘ಬಿ‘ ರಿಪೋರ್ಟ್‌ ಅನ್ನು (ಆರೋಪಿಗಳ ಮೇಲಿರುವ ಆರೋಪಗಳಲ್ಲಿ ಯಾವುದೇ ಹುರುಳು ಇಲ್ಲ) ಕೋರ್ಟ್‌ಗೆ ಸಲ್ಲಿಸಿದರು. ಆರೋಪಿಗಳು ವಿಚಾರಣೆಯನ್ನು ಎದುರಿಸುವ ಸಂದರ್ಭವೇ ಬರಲಿಲ್ಲ.

(ಹೆಸರುಗಳನ್ನು ಬದಾಯಿಸಲಾಗಿದೆ)

–ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT