ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈ ಲವ ಕುಶ: ತ್ರಿಪಾತ್ರದ ಗಮ್ಮತ್ತು... ಅಭಿನಯವೇ ಬಲ

Last Updated 23 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಜೈ ಲವ ಕುಶ
ನಿರ್ಮಾಣ: ನಂದಮೂರಿ ಕಲ್ಯಾಣರಾಮ್‌
ನಿರ್ದೇಶನ: ಕೆ.ಎಸ್‌. ರವೀಂದ್ರ (ಬಾಬಿ)
ತಾರಾಗಣ: ಜೂನಿಯರ್‌ ಎನ್‌ಟಿಆರ್‌, ರಾಶಿ ಖನ್ನಾ, ನಿವೇದಾ ಥಾಮಸ್‌, ಪೋಸಾನಿ ಕೃಷ್ಣಮುರಳಿ, ಸಾಯಿಕುಮಾರ್‌.

ತದ್ರೂಪಿನ ಮೂವರು ಸೋದರರು. ಅವರ ಹೆಸರು ಜೈ, ಲವ ಹಾಗೂ ಕುಶ. ಅವರಿಗೊಬ್ಬ ಸೋದರಮಾವ. ಆತ, ನಾಟಕ ಕಂಪೆನಿಯೊಂದರ ಒಡೆಯ. ನಾಟಕಗಳಲ್ಲಿ ಅಭಿನಯಿಸುವುದೆಂದರೆ ಈ ಬಾಲಕರಿಗೆ ಅಚ್ಚುಮೆಚ್ಚು. ಆದರೆ ಇಲ್ಲೊಂದು ತೊಡರು. ದೊಡ್ಡವ ಜೈಗೆ ತುಸು ಉಗ್ಗು. ಇದೇ ಕಾರಣಕ್ಕಾಗಿ ಆ ಪುಟ್ಟ ಪೋರ ಕಡೆಗಣನೆಗೆ, ಹೀಯಾಳಿಕೆಗೆ ಒಳಗಾಗುತ್ತಾನೆ. ಕೊಟ್ಟರೂ ಪ್ರಮುಖವಲ್ಲದ, ಸಂಭಾಷಣೆಗೆ ಹೆಚ್ಚು ಅವಕಾಶ ಇಲ್ಲದ ಪಾತ್ರಗಳನ್ನಷ್ಟೇ ಕೊಡುತ್ತಾರೆ.

ಉಳಿದ ಇಬ್ಬರು ಸೋದರರು ರಂಗಮಂಚದ ಮೇಲೆ ಪ್ರಧಾನ ಪಾತ್ರಗಳಲ್ಲಿ ಮಿಂಚುತ್ತಾ ಚಪ್ಪಾಳೆ ಗಿಟ್ಟಿಸುತ್ತಾರೆ. ಜನಮನ್ನಣೆ ಪಡೆಯುತ್ತಾರೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಈ ಇಬ್ಬರು ಬಾಲಕರು, ಸೋದರಮಾವನ ಜೊತೆ ಸೇರಿ ಜೈ ಕಾಲೆಳೆಯುತ್ತಾರೆ. ಮೂದಲಿಸುತ್ತಾರೆ. ಎಳವೆಯಲ್ಲಿ ಮನಸ್ಸಿಗೆ ಆದ ಆ ಗಾಯ ಜೈ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ, ಎಂಥ ವಿಪರೀತಕ್ಕೆ ಒಯ್ಯುತ್ತದೆ, ಮೂವರೂ ಸೋದರರನ್ನು ಹೇಗೆ ಅನಾಥ ಪ್ರಜ್ಞೆಗೆ ದೂಡುತ್ತದೆ ಎಂಬುದರ ಸುತ್ತ ಈ ಚಿತ್ರದ ಕಥಾವಸ್ತು ಹಬ್ಬಿಕೊಂಡಿದೆ.

ಈ ಮೂವರಲ್ಲಿ ರೂಪಸಾಮ್ಯತೆ ಇದ್ದರೂ ಸ್ವಭಾವದಲ್ಲಿ ಇವರು ಪೂರ್ತಿ ಭಿನ್ನ. ಮನ್ನಣೆ, ಅಸ್ಮಿತೆಯ ದಾಹದಿಂದ ಜೈ, ‘ರಾವಣ’ನಾಗಿ ರೂಪಾಂತರ ಹೊಂದುತ್ತಾನೆ. ಪ್ರತಿನಾಯಕನ ಛಾಯೆಯುಳ್ಳ ಈ ಪಾತ್ರದ ರೂಪಕಲ್ಪನೆ ಭಿನ್ನವಾಗಿದೆ. ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ ತ್ರಿಪಾತ್ರ ಪೋಷಿಸಿರುವ ನಂದಮೂರಿ ತಾರಕ ರಾಮರಾವ್‌ (ಜೂನಿಯರ್‌), ಮೂರೂ ಪಾತ್ರಗಳನ್ನು ಅವುಗಳ ಸ್ವಭಾವಕ್ಕೆ ತಕ್ಕಂತೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಆರಂಭದ 15 ನಿಮಿಷ ತೆರೆಯ ಮೇಲೆ ಸರಳ ರೇಖೆಯಂತೆ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಸೋದರರ ಬಾಲ್ಯ, ನಾಟಕದ ದೃಶ್ಯಗಳು, ಬೆಂಕಿ ಅವಘಡ, ಬಾಲಕರು ಬೇರೆಯಾಗುವುದು, ಬೆಳೆದು ದೊಡ್ಡವರಾಗುವುದು... ಇವೆಲ್ಲ ಚಕಚಕನೆ ನಡೆದುಹೋಗುತ್ತವೆ.

ಅ ಬಳಿಕ ಒಂದೊಂದೇ ಪಾತ್ರದ ಪರಿಚಯ. ಮಧ್ಯಂತರದ ವೇಳೆಗೆ, ಜೈ ಪ್ರತ್ಯಕ್ಷ ಆಗುವುದರೊಂದಿಗೆ ಸಿನಿಮಾ ಕುತೂಹಲ ಘಟ್ಟಕ್ಕೆ ಹೊರಳುತ್ತದೆ.

ಕಥೆಯಲ್ಲಿ ವೈವಿಧ್ಯ ಹಾಗೂ ಎದ್ದು ಕಾಣಿಸುವಂಥ ಹೊಸ ಅಂಶಗಳು ಇಲ್ಲ. ಎನ್‌ಟಿಆರ್‌ ಅಭಿನಯ ಸಾಮರ್ಥ್ಯವನ್ನು ನೆಚ್ಚಿಕೊಂಡೇ ಬಾಬಿ ಈ ಸಿನಿಮಾ ರೂಪಿಸಿದಂತಿದೆ. ಮೂರು ಪಾತ್ರಗಳನ್ನು ಪೋಷಿಸಿರುವುದರಿಂದ ಸಿನಿಮಾ ಪೂರ್ತಿ ಅವರೇ ಆವರಿಸಿಕೊಂಡಿದ್ದಾರೆ. ಅಭಿನಯ, ಡಾನ್ಸ್‌, ಡೈಲಾಗ್‌, ವಿನೋದಗಳಿಂದ ರಂಜನೀಯಗೊಳಿಸಿದ್ದಾರೆ.

ನೋಟು ರದ್ದತಿ, ರೈತರ ಬವಣೆ, ಚುನಾವಣೆ ಪ್ರಕ್ರಿಯೆಯಂಥ ಕೆಲವು ಅಂಶಗಳನ್ನು ನಡುನಡುವೆ ಮಿಳಿತಗೊಳಿಸಿ ಕಥೆಗೆ ಸಮಕಾಲೀನತೆ ತಂದಿದ್ದಾರೆ. ಬಲವಂತವಾಗಿ ಹಾಸ್ಯದ ಟ್ರ್ಯಾಕ್‌ ಜೋಡಿಸಿಲ್ಲ ಎಂಬುದು ವಿಶೇಷ. ಲವ ಹಾಗೂ ಕುಶ ಪಾತ್ರಗಳ ಮೂಲಕವೇ ವಿನೋದ ಉಕ್ಕಿಸುವ ಕೆಲಸ ಮಾಡಿದ್ದಾರೆ. ಅಂತಿಮ ಘಟ್ಟದಲ್ಲಿ ಸೋದರರ ನಡುವಣ ಭಾವಪೂರ್ಣ ದೃಶ್ಯಗಳು ಮನಸ್ಸಿಗೆ ತಟ್ಟುತ್ತವೆ. ಸಂಭಾಷಣೆ ಚುರುಕಾಗಿದೆ.

ಹಾಡುಗಳಿಗಿಂತ ಹಿನ್ನೆಲೆ ಸಂಗೀತದ ಬಗ್ಗೆ ದೇವಿಶ್ರೀ ಪ್ರಸಾದ್‌ ಹೆಚ್ಚು ಶ್ರದ್ಧೆ ವಹಿಸಿದಂತೆ ಅನ್ನಿಸುತ್ತದೆ. ಸಿನಿಮಾದ ಒಟ್ಟು ಅಂದ ಹೆಚ್ಚಿಸುವಲ್ಲಿ ಚೋಟಾ ಕೆ. ನಾಯ್ಡು ಅವರ ಛಾಯಾಗ್ರಹಣ ಸಫಲವಾಗಿದೆ. ಪೋಸಾನಿ ಕೃಷ್ಣಮುರಳಿ, ಸಾಯಿಕುಮಾರ್‌ ಅವರು ಹದವರಿತ ಅಭಿನಯ ನೀಡಿದ್ದಾರೆ. ನಾಯಕಿಯರಾದ ರಾಶಿ ಖನ್ನಾ, ನಿವೇದಾ ಥಾಮಸ್‌ಗೆ ಅಭಿನಯಕ್ಕೆ ಹೆಚ್ಚು ಅವಕಾಶ ದೊರೆತಿಲ್ಲ. ತಮನ್ನಾ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT