ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಕೈವಶದತ್ತ ವಿರಾಟ್ ಪಡೆ ಚಿತ್ತ

ತಿರುಗೇಟು ನೀಡುವ ಛಲದಲ್ಲಿ ಸ್ಮಿತ್ ಬಳಗ
Last Updated 23 ಸೆಪ್ಟೆಂಬರ್ 2017, 19:52 IST
ಅಕ್ಷರ ಗಾತ್ರ

ಇಂದೋರ್: ರನ್‌ಗಳ ಹೊಳೆ ಹರಿಯುವ ಹೋಳ್ಕರ್ ಕ್ರೀಡಾಂಗಣದ ಪಿಚ್‌ನಲ್ಲಿ ವಿಜಯೋತ್ಸವ ಆಚರಿಸಲು ವಿರಾಟ್ ಕೊಹ್ಲಿ ಬಳಗವು ತುದಿಗಾಲಿನಲ್ಲಿ ನಿಂತಿದೆ. ಭಾನುವಾರ ಇಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಏಕದಿನ ಪಂದ್ಯ ನೋಡಲು ‘ವಾಣಿಜ್ಯ ನಗರಿ’ಯ ಕ್ರಿಕೆಟ್‌ಪ್ರಿಯರೂ ಕಾತುರರಾಗಿದ್ದಾರೆ.

ಐದು ಪಂದ್ಯಗಳ ಸರಣಿಯ ಮೊದಲ ಎರಡೂ ಪಂದ್ಯಗಳನ್ನು ಭಾರತ ತಂಡವು ಜಯಿಸಿದೆ. ಮೂರನೇ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಮೊದಲ ಪಂದ್ಯದಲ್ಲಿ ಕಳಪೆ ಆಟವಾಡಿದ್ದ ಅಜಿಂಕ್ಯ ರಹಾನೆ ಮತ್ತು ನಾಯಕ ವಿರಾಟ್ ಕೋಲ್ಕತ್ತದಲ್ಲಿ ಅರ್ಧಶತಕ ಗಳಿಸಿದ್ದರು.

ಚೆನ್ನೈ ಪಂದ್ಯದಲ್ಲಿ  ಅರ್ಧಶತಕ ಗಳಿಸಿದ್ದ ಹಾರ್ದಿಕ್ ಪಾಂಡ್ಯ ಮತ್ತು ಮಹೇಂದ್ರಸಿಂಗ್ ದೋನಿ ಅವರು ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿದ್ದಾರೆ. ಕೊನೆಯ ಕ್ರಮಾಂಕದ ಭುವನೇಶ್ವರ್ ಕುಮಾರ್ ಕೂಡ ರನ್‌ಗಳನ್ನು ಪೇರಿಸುವ ಸಾಮರ್ಥ್ಯ ಹೊಂದಿದ್ದಾರೆ.

ಬೌಲಿಂಗ್‌ನಲ್ಲಿ ಭುವನೇಶ್ವರ್, ಜಸ್‌ಪ್ರೀತ್ ಅವರು ತಮ್ಮ ಹೊಣೆಯನ್ನು ಅಮೋಘವಾಗಿ ನಿರ್ವಹಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ನೆರವಾಗಿದ್ದಾರೆ.

ಸ್ಪಿನ್‌ ಬೌಲಿಂಗ್ ಎದುರಿಸುವ ಭಯದಲ್ಲಿ ಬಂದಿರುವ ಕಾಂಗರೂ ನಾಡಿನ ಆಟಗಾರರನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಯಶಸ್ವಿಯಾಗಿದ್ದಾರೆ. ಕಾನ್ಪುರದ ಹುಡುಗ ಕುಲದೀಪ್ ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಆದರೆ ಭಾರತಕ್ಕೆ ಆತಂಕ ಇರುವುದು ಫೀಲ್ಡಿಂಗ್ ವಿಭಾಗದಲ್ಲಿ. ಕ್ಯಾಚ್‌ ಕೈಚೆಲ್ಲುವ ಪರಿಪಾಠ ನಿಲ್ಲದಿದ್ದರೆ ಕೊಹ್ಲಿ ಬಳಗಕ್ಕೆ ಮುಳುವಾಗುವ ಅಪಾಯವೂ ಇದೆ.

ಪ್ರವಾಸಿಗರಿಗೆ ಬ್ಯಾಟಿಂಗ್ ಚಿಂತೆ: ಸಿಡಿಲಬ್ಬರದ ಬ್ಯಾಟ್ಸ್‌ಮನ್ ಡೇವಿಡ್‌ ವಾರ್ನರ್ ಬ್ಯಾಟಿಂಗ್ ಲಯ ಕಂಡುಕೊಳ್ಳಲು ಪರದಾಡುತ್ತಿರುವುದು ಪ್ರವಾಸಿ ತಂಡಕ್ಕೆ ಚಿಂತೆಯನ್ನು ಹೆಚ್ಚಿಸಿದೆ. ಎರಡೂ ಪಂದ್ಯಗಳಲ್ಲಿ ಅವರು ವೈಫಲ್ಯ ಅನುಭವಿಸಿದ್ದಾರೆ. ಅದರಿಂದಾಗಿ ತಂಡಕ್ಕೆ ಉತ್ತಮ ಆರಂಭ ದೊರಕಿಲ್ಲ.

ನಾಯಕ ಸ್ಟೀವನ್ ಸ್ಮಿತ್ ಅವರು ಈಡನ್ ಗಾರ್ಡನ್‌ನಲ್ಲಿ ಅರ್ಧಶತಕ ಬಾರಿಸಿದ್ದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾಗಿದ್ದರು. ಮ್ಯಾಥ್ಯೂ ವೇಡ್, ಗ್ಲೆನ್ ಮ್ಯಾಕ್ಸ್‌ವೆಲ್, ಕಾರ್ಟ್‌ರೈಟ್, ಟ್ರಾವಿಸ್ ಹೆಡ್ ಕೂಡ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತೋರಿಸಿಲ್ಲ. ಅದರಿಂದಾಗಿ ತಂಡವು ಗೆದ್ದಿಲ್ಲ. ಆದರೆ, ಬೌಲಿಂಗ್‌ ವಿಭಾಗದ ಸಾಧನೆ ಚೆನ್ನಾಗಿದೆ. ವೇಗಿಗಳಾದ ಕೌಲ್ಟರ್‌ನೈಲ್ ಮತ್ತು ಕೇನ್ ರಿಚರ್ಡ್‌ಸನ್ ಅವರು ಸ್ಪಿನ್‌ಸ್ನೇಹಿ ಪಿಚ್‌ಗಳಲ್ಲಿಯೂ ಉತ್ತಮ ಬೌಲಿಂಗ್ ಮಾಡಿದ್ದಾರೆ. ಭಾರತದ ಆರಂಭಿಕ ಜೋಡಿಯನ್ನು ಬೇಗನೆ ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ಬಳಗವು 300ರ ಮೊತ್ತ ಪೇರಿಸಿದಂತೆ ಆಸ್ಟ್ರೇಲಿಯಾ ಬೌಲರ್‌ಗಳು ನೋಡಿಕೊಂಡಿದ್ದಾರೆ. ಸ್ಪಿನ್ನರ್  ಆ್ಯಡಂ ಜಂಪಾ ಕೂಡ ಭರವಸೆ ಮೂಡಿಸಿದ್ದಾರೆ. ಸ್ಮಿತ್ ಬಳಗದ ಫೀಲ್ಡಿಂಗ್ ಕೂಡ ಚೆನ್ನಾಗಿದೆ. ಬ್ಯಾಟ್ಟ್‌ಮನ್‌ಗಳು ಲಯಕ್ಕೆ ಮರಳಿದರೆ ಪಂದ್ಯಕ್ಕೆ ರಂಗೇರುವುದು ಖಚಿತ.

ಇತಿಹಾಸದ ಬಲ: ಭಾರತ ತಂಡಕ್ಕೆ ಇಂದೋರ್ ಅದೃಷ್ಟದ ಊರು. ಇಲ್ಲಿ ನಡೆದಿರುವ ನಾಲ್ಕು ಏಕದಿನ ಮತ್ತು ಏಕೈಕ ಟೆಸ್ಟ್‌ ಪಂದ್ಯದಲ್ಲಿ ಜಯಿಸಿದೆ. 2011ರಲ್ಲಿ ವೆಸ್ಟ್‌ ಇಂಡೀಸ್ ಎದುರಿನ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ದ್ವಿಶತಕ ಗಳಿಸಿದ್ದರು.

ಇಲ್ಲಿ ನಡೆದಿರುವ ಎಲ್ಲ ಪಂದ್ಯಗಳಲ್ಲಿಯೂ ರನ್‌ಗಳು ಭರಪೂರವಾಗಿ ಹರಿದಿವೆ. ಈ ಬಾರಿಯೂ ಅದೇ ರೀತಿಯ ಪಿಚ್‌ ಇರುವುದು ಖಚಿತ ಎಂದು ಕ್ಯೂರೇಟರ್ ಸಮುಂದರ್ ಸಿಂಗ್ ಹೇಳಿದ್ದಾರೆ.

ಮಳೆ ಬರುವ ಸಾಧ್ಯತೆ: ಚೆನ್ನೈ ಮತ್ತು ಕೋಲ್ಕತ್ತ ಪಂದ್ಯಗಳ ಸಂದರ್ಭದಲ್ಲಿ ಮಳೆ ಸುರಿದಿತ್ತು. ಇಂದೋರ್‌ನಲ್ಲಿಯೂ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮೂಲಗಳು ಹೇಳಿವೆ.

*

ಸ್ಪಿನ್ನರ್‌ಗಳಿಗೆ ಬೌಲಿಂಗ್ ಕಲಿಸಿದ ದೋನಿ!
ಇಂದೋರ್:
‘ತಿರುವು ಪಡೆಯುವ ಎಸೆತವನ್ನು ಹಾಕು, ಈ ತರಹ ಅಲ್ಲ..’– ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ದೋನಿ ಅವರು ಆಸ್ಟ್ರೇಲಿಯಾ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಯುವ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರಿಗೆ ಸಲಹೆ ನೀಡುತ್ತಿರುವ ಪರಿ ಇದು.

ಅನುಭವಿ ಆಟಗಾರ ದೋನಿ ಅವರು ಇಬ್ಬರೂ ಬೌಲರ್‌ಗಳಿಗೆ ನೀಡಿರುವ ಇಂತಹ ಹಲವು ಸಲಹೆಗಳು ಸ್ಟಂಪ್‌ಗಳಿಗೆ ಅಳವಡಿಸಿದ ಮೈಕ್‌ ಮೂಲಕ ದಾಖಲಾಗಿವೆ. ಇದೀಗ ಅವು ಬಹಿರಂಗವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಅವರು ಈ ಎಲ್ಲ ಸಲಹೆಗಳನ್ನೂ ಹಿಂದಿಯಲ್ಲಿ ನೀಡಿದ್ದಾರೆ.

‘ವೋ ಮಾರನೆವಾಲಾ ಡಾಲ್ ನಾ, ಅಂದರ್‌ ಯಾ ಬಾಹರ್ ಕೋಯಿ ಭೀ (ಬ್ಯಾಟ್ಸ್‌ಮನ್ ಹೊಡೆಯಲು ಸಾಧ್ಯವಾಗುವಂತಹ ಎಸೆತಗಳನ್ನು ಹಾಕು. ಒಳಗೆ ಅಥವಾ ಹೊರಗೆ ಚೆಂಡು ತಿರುಗಲಿ ಪರವಾಗಿಲ್ಲ)’ ಎಂದು ಕುಲದೀಪ್ ಅವರಿಗೆ ದೋನಿ ಹೇಳಿದ್ದಾರೆ.

ಇಂದೋರ್‌ನಲ್ಲಿ ಶನಿವಾರ ಆಭ್ಯಾಸದ ವೇಳೆಯೂ ದೋನಿ ಅವರು ಸ್ಪಿನ್ನರ್‌ಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು.

ತಂಡಗಳು: ಭಾರತ: ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಮನೀಷ್ ಪಾಂಡೆ, ಕೇದಾರ್ ಜಾಧವ್‌, ಮಹೇಂದ್ರ ಸಿಂಗ್ ದೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್‌, ಕುಲದೀಪ್ ಯಾದವ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್ ಬೂಮ್ರಾ, ಕೆ.ಎಲ್‌.ರಾಹುಲ್‌, ಜಡೇಜ, ಉಮೇಶ್ ಯಾದವ್‌, ಮಹಮ್ಮದ್ ಶಮಿ.

ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್‌ (ನಾಯಕ), ಡೇವಿಡ್‌ ವಾರ್ನರ್‌, ಹಿಲ್ಟನ್ ಕಾರ್ಟ್‌ ರೈಟ್‌, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್‌), ನೇಥನ್ ಕಾಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಜೇಮ್ಸ್ ಫಾಕ್ನರ್‌, ಪೀಟರ್ ಹ್ಯಾಂಡ್ಸ್‌ಕಂಬ್‌, ಟ್ರಾವಿಸ್ ಹೆಡ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಆ್ಯಡಮ್‌ ಜಂಪಾ, ಕೇನ್‌ ರಿಚರ್ಡ್ಸನ್‌, ಮಾರ್ಕಸ್ ಸ್ಟೊಯಿನಿಸ್‌, ಆ್ಯರನ್ ಫಿಂಚ್‌.

ಪಂದ್ಯ ಆರಂಭ: ಮಧ್ಯಾಹ್ನ 1.30. ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT