ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಕರೆಗಂಟೆ ಬಳಕೆ– ಮೆಟ್ರೊ ವಿಳಂಬ

Last Updated 23 ಸೆಪ್ಟೆಂಬರ್ 2017, 20:16 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ದಕ್ಷಿಣ ಕಾರಿಡಾರ್‌ನಲ್ಲಿ ಸಂಚರಿಸುತ್ತಿದ್ದ ಮೆಟ್ರೊ ರೈಲಿನಲ್ಲಿ ಪ್ರಯಾಣಿಕರೊಬ್ಬರು ತುರ್ತು ಕರೆಗಂಟೆ ಬಳಸಿದ್ದರಿಂದ, ಆ ರೈಲು 4 ನಿಮಿಷ ವಿಳಂಬವಾಗಿ ಸಂಚರಿಸಿತು.

‘ಹಸಿರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೆಟ್ರೊ ಮಹಾಲಕ್ಷ್ಮಿ ಲೇಔಟ್‌ ನಿಲ್ದಾಣದಿಂದ ಹೊರಟ ಬಳಿಕ ಪ್ರಯಾಣಿಕರೊಬ್ಬರಿಗೆ ತಲೆಸುತ್ತು ಬಂದ ಅನುಭವವಾಗಿತ್ತು. ಸಹಪ್ರಯಾಣಿಕರೊಬ್ಬರು ತುರ್ತು ಕರೆಗಂಟೆಯನ್ನು (ಅಲಾರಾಂ) ಬಳಸಿದ್ದರು. ಹಾಗಾಗಿ ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ಅವರು ಮೆಟ್ರೊದಿಂದ ಇಳಿದರು. ಕರೆಗಂಟೆಯನ್ನು ಸಹಜ ಸ್ಥಿತಿಗೆ ತರದೇ ಮೆಟ್ರೊ ರೈಲು ಮುಂದಕ್ಕೆ ಚಲಿಸದು. ಇದಕ್ಕಾಗಿ ರೈಲನ್ನು ನಿಲ್ದಾಣದಲ್ಲಿ 4 ನಿಮಿಷ ನಿಲ್ಲಿಸಬೇಕಾಯಿತು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಪ್ರಧಾನ ವ್ಯವಸ್ಥಾಪಕ (ಕಾರ್ಯಾಚರಣೆ) ಯಶವಂತ ಚೌಹಾಣ್‌  ‘ಪ್ರಜಾವಾಣಿ’ಗೆ ತಿಳಿಸಿದರು.

ಮತ್ತೊಂದು ಘಟನೆ: ‘ಪೂರ್ವ–ಪಶ್ಚಿಮ ಕಾರಿಡಾರ್‌ನ ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ಇದೇ ರೀತಿಯ ಘಟನೆ ನಡೆದಿತ್ತು. ಪ್ರಯಾಣಿಕರೊಬ್ಬರು ಅಸ್ವಸ್ಥಗೊಂಡರು ಎಂಬ ಕಾರಣಕ್ಕೆ ಸಂಜೆ 6ಗಂಟೆ ಸುಮಾರಿಗೆ ಸಹಪ್ರಯಾಣಿಕರು ತುರ್ತು ಕರೆ ಗಂಟೆಯನ್ನು ಬಳಸಿದ್ದರು. ಅದನ್ನು ಸರಿಪಡಿಸುವ ಸಲುವಾಗಿ  ರೈಲು ಕೆಲವು ನಿಮಿಷ ನಿಲ್ದಾಣದಲ್ಲೇ ನಿಂತಿತ್ತು’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

‘ರೈಲಿನ ಬಾಗಿಲಿನ ಬಳಿ ತುರ್ತು ಕರೆಗಂಟೆ ಅಳವಡಿಸಲಾಗಿರುತ್ತದೆ. ಅದರ ಮೇಲಿನ ಗಾಜಿನ ಕವಚವನ್ನು ಒಡೆದು ಅದನ್ನು ಬಳಸಬಹುದು. ನಿನ್ನೆಯ ಘಟನೆಯಲ್ಲಿ ಪ್ರಯಾಣಿಕರು ಮೂರು ಕರೆಗಂಟೆಗಳನ್ನು ಬಳಸಿದ್ದರು. ಹಾಗಾಗಿ ಅವುಗಳನ್ನು ಸರಿಪಡಿಸಲು ಸುಮಾರು 10 ನಿಮಿಷ ಬೇಕಾಯಿತು’ ಎಂದು ಅವರು ತಿಳಿಸಿದರು.

‘ಶುಕ್ರವಾರ ನಡೆದ ಘಟನೆಯಲ್ಲಿ ಯಾವ ಪ್ರಯಾಣಿಕ ಅಸ್ವಸ್ಥಗೊಂಡಿದ್ದರು. ಸಹ ಪ್ರಯಾಣಿಕರು ಏಕೆ ಮೂರು ಕಡೆ ಕರೆಗಂಟೆ ಬಳಸಿದರು ಎಂಬುದು
ಇನ್ನೂ ಸ್ಪಷ್ಟವಾಗಿಲ್ಲ’ ಎಂದರು.

‘ನಮ್ಮ ಮೆಟ್ರೊ ಮೊದಲ ಹಂತ ಪೂರ್ಣಗೊಂಡ ಬಳಿಕ ಇಂತಹ ಪ್ರಸಂಗ ನಡೆದದ್ದು ಇದೇ ಮೊದಲು’ ಎಂದು ಅವರು ತಿಳಿಸಿದರು.

ಅನಗತ್ಯ ಬಳಕೆಗೆ ದಂಡ

‘ಪ್ರಯಾಣಿಕರು ಸಕಾರಣವಿಲ್ಲದೆ ತುರ್ತು ಕರೆಗಂಟೆ ಬಳಸಿ ಸಹ ಪ್ರಯಾಣಿಕರಿಗೆ ಅನನುಕೂಲ ಉಂಟುಮಾಡಿದರೆ ಮೆಟ್ರೊ ಕಾಯ್ದೆ ಪ್ರಕಾರ ₹ 5,000 ದಂಡ ತೆರಬೇಕಾಗುತ್ತದೆ. ಇಂತಹ ಕೃತ್ಯಕ್ಕೆ 4 ವರ್ಷ ಜೈಲು ಶಿಕ್ಷೆ ವಿಧಿಸುವುದಕ್ಕೂ ಅವಕಾಶ ಇದೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಯಾಣಿಕನಿಗೆ ₹ 1,000 ದಂಡ

ಪ್ರಯಾಣಿಕರೊಬ್ಬರು ಶುಕ್ರವಾರ ಮೆಟ್ರೊ ಸಿಬ್ಬಂದಿಗೆ ತಪ್ಪು ಮಾಹಿತಿ ನೀಡಿ, ಜಗಳವಾಡಿದ ಕಾರಣಕ್ಕೆ ₹ 1,000 ದಂಡ ಪಾವತಿಸಿದ್ದಾರೆ.

ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣದಲ್ಲಿ ತುರ್ತು ಕರೆಗಂಟೆ ಬಳಸಿದ ಪ್ರಯಾಣಿಕರನ್ನು ಪತ್ತೆ ಹಚ್ಚುವ ಸಲುವಾಗಿ ಮೆಟ್ರೊ ಸಿಬ್ಬಂದಿ ಕೆಂಪೇಗೌಡ ನಿಲ್ದಾಣದಲ್ಲಿ ಇಳಿಯುವವರ ಚಲನವಲನ ಮೇಲೆ ನಿಗಾ ಇಟ್ಟಿದ್ದರು. ಅಲ್ಲಿ ಆ ರೈಲಿನಿಂದ ಇಳಿದ ವ್ಯಕ್ತಿಯೊಬ್ಬರು, ‘ಅಲಾರಾಂ ಬಳಸಿದ್ದು ನಾನೇ. ಮೆಟ್ರೊದಲ್ಲಿ  ಪ್ರಯಾಣಿಕರ ಸುರಕ್ಷತೆ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ’ ಎಂದು ಏರು ಧ್ವನಿಯಲ್ಲಿ ರೇಗಿದ್ದರು.

ವಿಚಾರಣೆ ನಡೆಸಿದಾಗ ಆ ಪ್ರಯಾಣಿಕ, ‘ನಾನು ಎಚ್‌ಎಎಲ್‌ ಉದ್ಯೋಗಿ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಹೇಳಿಕೊಂಡಿದ್ದರು.

ಮೆಟ್ರೊ ಕಾಯ್ದೆಯ ಬಗ್ಗೆ ಆ ಪ್ರಯಾಣಿಕನಿಗೆ ವಿವರಿಸಿದ ಸಿಬ್ಬಂದಿ, ‘ನೀವು ಏನು ಬೇಕಾದರೂ ಮಾಡಿಕೊಳ್ಳಿ. ನೀವು ಅಲಾರಾಂ ಬಳಸಿದ್ದಕ್ಕೆ ಕಾರಣ ಏನು ಎಂದು ಮೊದಲು ಹೇಳಿ. ಯಾವ ಪ್ರಯಾಣಿಕ ಅಸ್ವಸ್ಥಗೊಂಡಿದ್ದಾರೊ ಅವರನ್ನು ತೋರಿಸಿ ಅಥವಾ ₹ 5,000 ದಂಡ ಕಟ್ಟಿ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ’ ಎಂದು ತಿಳಿಸಿದ್ದರು.

‘ಆಗ ರಾಗ ಬದಲಾಯಿಸಿದ್ದ ಆ ಪ್ರಯಾಣಿಕ, ‘ಅಲರಾಂ ಬಳಸಿದ್ದು ನಾನಲ್ಲ. ನಾನು ಸುಮ್ಮನೆ ಹೇಳಿದ್ದು’ ಎಂದರು. ಆದರೆ, ಅವರ ವರ್ತನೆಯಿಂದಾಗಿ ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಮಯ ವ್ಯರ್ಥವಾಯಿತು. ನಿಜವಾಗಿ ಈ ಕೃತ್ಯ ಎಸಗಿದವನ್ನು ಹಿಡಿಯುವುದಕ್ಕೂ ಅಡ್ಡಿ ಉಂಟಾಯಿತು. ನಮ್ಮ
ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಅವರಿಗೆ ₹ 1000 ದಂಡ ವಿಧಿಸಿ ಬಿಟ್ಟಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT