ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ : ಕೆಪಿಎಲ್‌ ಹಬ್ಬಕ್ಕೆ ವಿಧ್ಯುಕ್ತ ತೆರೆ

ಪಂದ್ಯ ವೀಕ್ಷಿಸಲು ಕೊನೆಯ ದಿನ ತಾರೆಯರ ದಂಡು, ಕ್ರಿಕೆಟ್ ಪ್ರೇಮಿಗಳ ಖುಷಿಯ ಅಲೆ
Last Updated 24 ಸೆಪ್ಟೆಂಬರ್ 2017, 7:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹತ್ತು ದಿನಗಳಿಂದ ಇಲ್ಲಿ ನಡೆದ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟೂರ್ನಿಯ ಪಂದ್ಯಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಶನಿವಾರ ನಡೆದ ಎರಡು ಮಹತ್ವದ ಪಂದ್ಯಗಳಿಗೆ ಸಾವಿರಾರು ಜನ ಸಾಕ್ಷಿಯಾದರು.

ಟೂರ್ನಿಯ ಕೊನೆಯ ದಿನ ನಡೆದ ಬೆಳಗಾವಿ ಪ್ಯಾಂಥರ್ಸ್‌ ಮತ್ತು ಬಿಜಾಪುರ ಬುಲ್ಸ್ ತಂಡಗಳ ನಡುವಣ ಫೈನಲ್‌ ಪಂದ್ಯಕ್ಕೆ ಸುಮಾರು ಹತ್ತು ಸಾವಿರ ಜನ ಸಾಕ್ಷಿಯಾದರು.

ಈ ಬಾರಿಯ ಟೂರ್ನಿಯಲ್ಲಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಒಟ್ಟು 24 ಪಂದ್ಯಗಳು ನಡೆದವು. ಎಲ್ಲಾ ಪಂದ್ಯಗಳಿಗಿಂತ ಫೈನಲ್‌ಗೆ ಹೆಚ್ಚು ಜನ ಬಂದಿದ್ದರು. ಇಲ್ಲಿ ಟೂರ್ನಿ ಆರಂಭವಾದ ದಿನದಿಂದಲೂ ಗಣ್ಯರು ಮತ್ತು ಅತಿಗಣ್ಯರು ಕೂರುವ ಖುರ್ಚಿಗಳು ನಿತ್ಯ ಭರ್ತಿಯಾಗುತ್ತಿದ್ದವು. ಕೊನೆಯ ದಿನ ಎಲ್ಲಾ ಗ್ಯಾಲರಿಗಳಲ್ಲಿಯೂ ಕ್ರಿಕೆಟ್‌ ಪ್ರೇಮಿಗಳು ಕಂಡುಬಂದರು. ತವರಿನ ತಂಡವನ್ನು ಬೆಂಬಲಿಸುವ ಸಲುವಾಗಿ ಬೆಳಗಾವಿಯಿಂದ ಜನ ಬಂದಿದ್ದರು.

ಬೌಲರ್‌ ಪ್ರತಿ ವಿಕೆಟ್‌ ಪಡೆದಾಗ, ಬ್ಯಾಟ್ಸ್‌ಮನ್‌ ಬೌಂಡರಿಗಳನ್ನು ಬಾರಿಸಿದಾಗ ಅಭಿಮಾನಿಗಳು ಕುಣಿದು ಸಂಭ್ರಮಿಸಿದರು. ತಮಟೆ ಸದ್ದು, ಸಂಗೀತದ ಅಬ್ಬರ, ಹಾಡುಗಳ ಸೊಬಗು ಆಕರ್ಷಕವಾಗಿತ್ತು. ಕೆಲವು ಅಭಿಮಾನಿಗಳು ಸಾಂಪ್ರಾದಾಯಿಕ ಪೇಟ ತೊಟ್ಟು ಗಮನ ಸೆಳೆದರು.

ತಾರೆಯರ ದಂಡು: ವೀಕ್ಷಕ ವಿವರಣೆಗಾರ ಚಾರು ಶರ್ಮಾ, ನ್ಯೂಜಿಲೆಂಡ್‌ನ ಕ್ರಿಕೆಟಿಗ ಡೇನಿಯಲ್‌ ವೆಟೋರಿ, ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಮತ್ತು ಆಸ್ಟ್ರೇಲಿಯಾದ ಕ್ರಿಕೆಟಿಗ ಮೈಕ್‌ ಹಸ್ಸಿ ಕೊನೆಯ ದಿನದ ಆಕರ್ಷಣೆ ಎನಿಸಿದರು.

ಫೈನಲ್‌ ಪಂದ್ಯ ಆರಂಭವಾಗಲು ಒಂದು ಗಂಟೆ ಮೊದಲೇ ಕ್ರೀಡಾಂಗಣಕ್ಕೆ ಬಂದಿದ್ದ ಕೆಲವು ಅಭಿಮಾನಿಗಳು ವೆಟೋರಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥೆ ಶಾಂತಾ ರಂಗಸ್ವಾಮಿ, ಮಾಜಿ ಆಟಗಾರ್ತಿಯರಾದ ಮಮತಾ ಮಾಬೆನ್‌, ಕಲ್ಪನಾ ವೆಂಕಟಾಚಾರ್ಯ ಅವರು ಗಮನ ಸೆಳೆದರು.

ಮೊದಲ ಮಹಿಳಾ ಪಂದ್ಯ: ಮಹಿಳೆಯರಿಗೂ ಕೆಪಿಎಲ್‌ ಟೂರ್ನಿ ಜಾರಿಗೆ ತರುವ ಯೋಜನೆ ಹೊಂದಿರುವ ಕೆಎಸ್‌ಸಿಎ ಮೊದಲ ಬಾರಿಗೆ ಮಹಿಳಾ ತಂಡಕ್ಕೆ ಟ್ವೆಂಟಿ–20 ಪಂದ್ಯವನ್ನು ಆಯೋಜಿಸಿತ್ತು.

ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆಡಿದ್ದ ಕಡೂರಿನ ವೇದಾ ಕೃಷ್ಣಮೂರ್ತಿ, ವಿಜಯಪುರದ ರಾಜೇಶ್ವರಿ ಗಾಯಕ್ವಾಡ್‌ ಅವರು ಈ ಪಂದ್ಯದಲ್ಲಿ ಆಡಿದರು. ನಾಯಕಿ ಯರು ಟಾಸ್‌ ಹಾಕುವಾಗ ಕೆಎಸ್‌ಸಿಎ ಪದಾಧಿಕಾರಿಗಳು ಮೈದಾನಕ್ಕೆ ಬಂದಿದ್ದು ವಿಶೇಷ.

ವೀಕ್ಷಕ ವಿವರಣೆಗಾರ ಚಾರು ಶರ್ಮಾ ಜೊತೆ ಬಂದ ಅಧ್ಯಕ್ಷರ ಇಲೆವೆನ್ ತಂಡದ ನಾಯಕಿ ವೇದಾ ಕೃಷ್ಣಮೂರ್ತಿ, ಕಾರ್ಯದರ್ಶಿ ಇಲೆವೆನ್‌ ತಂಡವನ್ನು ಮುನ್ನಡೆಸುತ್ತಿರುವ ರಕ್ಷಿತಾ ಕೃಷ್ಣಪ್ಪ ಟಾಸ್ ಹಾಕಿದರು. ಈ ವೇಳೆ ಕೆಎಸ್‌ಸಿಎ ಕಾರ್ಯದರ್ಶಿ ಸುಧಾಕರರಾವ್‌ ಮತ್ತು ವಕ್ತಾರ ವಿನಯ್‌ ಮೃತ್ಯುಂಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT