ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸನ್ನದ್ಧ’

ಜಮಖಂಡಿಗೆ ಜಿಲ್ಲಾಧಿಕಾರಿ ಭೇಟಿ; ಅಧಿಕಾರಿಗಳೊಂದಿಗೆ ಸಮಾಲೋಚನೆ
Last Updated 24 ಸೆಪ್ಟೆಂಬರ್ 2017, 7:14 IST
ಅಕ್ಷರ ಗಾತ್ರ

ಜಮಖಂಡಿ: ‘ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಅದರ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ಧ ಸ್ಥಿತಿಯಲ್ಲಿದೆ’ ಎಂದು ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಮಖಂಡಿ ಉಪವಿಭಾಗ ಮಟ್ಟದಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ ಜರುಗಿಸಿ ಪ್ರವಾಹ ಪರಿಸ್ಥಿತಿ ಕುರಿತು ಚರ್ಚಿಸಲಾಗಿದೆ. ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್‌ಗೆ 94 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಜಲಾಶಯದ ಕೆಳಭಾಗಕ್ಕೆ ಹರಿಸಲಾಗುತ್ತಿದೆ. ಹಾಗಾಗಿ ಪ್ರವಾಹ ಭೀತಿ ಇಲ್ಲ. ಆದಾಗ್ಯೂ, ಪ್ರವಾಹ ಪರಿಸ್ಥಿತಿ ಎದುರಿಸಲು ಒಂಬತ್ತು ಬೋಟ್‌ ಹಾಗೂ ಪರಿಣಿತ ಈಜುಗಾರರನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಜಮಖಂಡಿ ತಾಲ್ಲೂಕಿನ ಪ್ರವಾಹ ಭೀತಿ ಎದುರಿಸುವ 11 ಸಂಭಾವ್ಯ ಗ್ರಾಮಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಪ್ರವಾಹ ನಿರ್ವಹಣೆಗಾಗಿ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ’ ಎಂದರು.

ನದಿತೀರದ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಸಂಗ ಬಂದರೆ ಮುಂಜಾಗರೂಕತೆ ಕ್ರಮವಾಗಿ ಶಾಲಾ ಕಟ್ಟಡ ಮತ್ತು ಸಮುದಾಯ ಭವನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲಾಗಿದೆ. ಸದ್ಯ ಆಲಮಟ್ಟಿ ಜಲಾಶಯದಲ್ಲಿ 519.5 ಮೀಟರ್‌ವರೆಗೆ ನೀರು ಸಂಗ್ರಹವಿದೆ ಎಂದರು.

ಕುಡಚಿ–ಬಾಗಲಕೋಟೆ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಮೂರು ಬಾರಿ ಮಾರ್ಗವನ್ನು ಬದಲಾಯಿಸಿದ್ದರಿಂದ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ಆಗುತ್ತಿದೆ. ರೈಲ್ವೆ ಮಾರ್ಗಕ್ಕಾಗಿ ಸ್ವಾಧೀನ ಪಡಿಸಿಕೊಂಡ ಜಮೀನಿನ ಮಾಲೀಕರಿಗೆ ಪಾವತಿಸಲು ಬಿಡುಗಡೆ ಆಗಿರುವ ₹ 30 ಕೋಟಿ ಪೈಕಿ ₹17 ಕೋಟಿ ಹಣವನ್ನು ಆರ್‌ಟಿಜಿಎಸ್‌ ಮೂಲಕ ಪಾವತಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಘೋಷಣೆ ಆಗಿರುವ ನೂತನ ತಾಲ್ಲೂಕುಗಳನ್ನು 2018 ರ ಜನವರಿ 1 ರಿಂದ ಅಸ್ತಿತ್ವಕ್ಕೆ ಬರಲಿವೆ. 2017–18ನೇ ಸಾಲಿನಲ್ಲಿ ಬಿಡುಗಡೆ ಆಗುವ ಅನುದಾನ ಆಧರಿಸಿ ಅಗತ್ಯಕ್ಕೆ ತಕ್ಕಂತೆ ಸರ್ಕಾರಿ ಕಚೇರಿಗಳಿಗೆ ಬೇಕಾಗುವ ಕಟ್ಟಡಗಳನ್ನು ನಿರ್ಮಿಸಿಕೊಳ್ಳಲಾಗುವುದು.

ಜಂಬಗಿ ಸೇತುವೆ, ನಗರದ ಬೈಪಾಸ್‌ ರಸ್ತೆ, 24 x7 ಕುಡಿಯುವ ನೀರಿನ ಯೋಜನೆ ಇತ್ಯಾದಿಗಳ ಲೋಕಾರ್ಪಣೆಗಾಗಿ ಅಕ್ಟೋಬರ್‌ ತಿಂಗಳ ಎರಡನೇ ವಾರದಲ್ಲಿ ಮುಖ್ಯಮಂತ್ರಿಗಳು ನಗರಕ್ಕೆ ಬರಲಿದ್ದಾರೆ ಎಂದು ಮಾಹಿತಿ ನೀಡಿದರು.

ಇಲ್ಲಿನ ಮೈಗೂರ ರಸ್ತೆ ಪಕ್ಕದಲ್ಲಿ ನಡೆಯುತ್ತಿರುವ ₹ 17 ಕೋಟಿ ಅಂದಾಜು ವೆಚ್ಚದ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಕಾಮಗಾರಿ ಪೂರ್ಣಗೊಳಿಸುವಲ್ಲಿ ಆಗುತ್ತಿರುವ ವಿಳಂಬಕ್ಕಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಎಸಿ ರವೀಂದ್ರ ಕರಲಿಂಗಣ್ಣವರ, ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ಟಿಪಿಇಒ ಎನ್‌.ವೈ. ಬಸರಿಗಿಡದ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ, ನಗರಸಭೆ ಎಇಇ ಆರ್.ಆರ್‌. ಕುಲಕರ್ಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT