ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರದ ವೈಫಲ್ಯ ಜನರಿಗೆ ತಿಳಿಸಿ

‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮಕ್ಕೆ ಚಾಲನೆ: ಕಾರ್ಯಕರ್ತರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ ಸಲಹೆ
Last Updated 24 ಸೆಪ್ಟೆಂಬರ್ 2017, 7:21 IST
ಅಕ್ಷರ ಗಾತ್ರ

ಬಾಗಲಕೋಟೆ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಾಡಿನ ಜನರಿಗೆ ನೀಡಿದ ಭಾಗ್ಯಗಳ ಮಾಹಿತಿಯ ಜೊತೆಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವ ಸರ್ಕಾರದ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್.ಪಾಟೀಲ ತಿಳಿಸಿದರು.

ಇಲ್ಲಿನ ರಾಜೀವಗಾಂಧಿ ಆಶ್ರಯ ಕಾಲೊನಿಯಲ್ಲಿ ಶನಿವಾರ ‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಯಾವುದೇ ಭರವಸೆಯನ್ನು ಇಲ್ಲಿಯವರೆಗೂ ಈಡೇರಿಸಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ 165 ಭರವಸೆಗಳಲ್ಲಿ 158 ಈಡೇರಿಸಿದೆ ಎಂದರು.

‘ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಧಾನಿ ಹೇಳಿದ್ದರು. ಕಳೆದ ಮೂರೂವರೆ ವರ್ಷದಲ್ಲಿ ಏಳು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ 50 ಲಕ್ಷ ಉದ್ಯೋಗವೂ ಸೃಷ್ಟಿಯಾಗಿಲ್ಲ. 30 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ’ ಎಂದು ಅವರು ಹೇಳಿದರು.

ವಿದೇಶಗಳಲ್ಲಿ ಇಟ್ಟಿರುವ ಕಾಳಧನವನ್ನು ತಂದು ಎಲ್ಲರ ಬ್ಯಾಂಕ್‌ ಖಾತೆಗೆ ₹15 ಲಕ್ಷ ಪಾವತಿಸುವುದಾಗಿ ಹೇಳಿದ್ದರು. ಆದರೆ ಒಂದು ಪೈಸೆಯೂ ಬಂದಿಲ್ಲ. ನೋಟು ರದ್ಧತಿಯಿಂದ ದೇಶದ ಆರ್ಥಿಕತೆ ಕುಸಿದಿದ್ದು, ಪ್ರಗತಿಯ ವೇಗ 10 ವರ್ಷ ಹಿಂದಕ್ಕೆ ಹೋಗಿದೆ ಎಂದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಾರಸ್‌ಮಲ್‌ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಟಿಡಿಎ ಅಧ್ಯಕ್ಷ ಎ.ಡಿ.ಮೊಕಾಶಿ, ಸದಸ್ಯ ಆನಂದ ಜಿಗಜಿನ್ನಿ, ಮುಖಂಡರಾದ ಮಲ್ಲಿಕಾರ್ಜುನ ಮೇಟಿ, ಕಮಲಾ ಮರಿಸ್ವಾಮಿ ಮತ್ತಿತರರು ಹಾಜರಿದ್ದರು.

‘ಆಶೀರ್ವಾದ ಮಾಡಬೇಕು’

ಜಾಲಿಹಾಳ (ಬಾದಾಮಿ): ‘ಮುಂಬರುವ ಚುನಾವಣೆಯಲ್ಲಿ ಮತದಾರರು ಪಕ್ಷಕ್ಕೆ ಆಶೀರ್ವಾದ ಮಾಡಬೇಕು’ ಎಂದು ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮನವಿ ಮಾಡಿದರು.

ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆ ಮನೆಗೆ ಕಾಂಗ್ರೆಸ್‌ ನಡಿಗೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮತದಾರರಿಗೆ ಮನವಿ ಮಾಡಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಎಂ.ಡಿ. ಯಲಿಗಾರ, ಕೆಪಿಸಿಸಿ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಮಹೇಶ ಹೊಸಗೌಡ್ರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಮಹಾಂತೇಶ ಹಟ್ಟಿ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಡಾ.ಎಂ.ಎಚ್‌. ಚಲವಾದಿ, ಎಂ.ಬಿ. ಹಂಗರಗಿ, ಎಫ್‌.ಆರ್‌. ಪಾಟೀಲ, ಎಸ್‌.ಡಿ. ಜೋಗಿನ, ಡಾ. ಎಂ.ಜಿ. ಕಿತ್ತಲಿ, ಡಾ. ದೇವರಾಜ ಪಾಟೀಲ, ಎನ್‌.ಬಿ. ಬನ್ನೂರ, ಅಶೋಕ ಕೋಟನಕರ, ಮುತ್ತಣ್ಣ ಯರಗೊಪ್ಪ, ಈಶ್ವರಯ್ಯ ಫಳಾರಿ, ಎಸ್‌.ಎ. ನೀರಲಗಿ, ಮೆಹಬೂಬ ಬಾಗವಾನ, ಕೃಷ್ಣಾಜಿ ವೀರಗಂಟಿ, ದೂಲಸಾಬ ದೊಡಮನಿ, ನಾಗನಗೌಡ ಗೌಡರ, ಗ್ರಾಮದ ಮುಖಂಡರು, ಹಿರಿಯರು ಮತ್ತು ಯುವಕರು ಇದ್ದರು.

‘ಸಾಧನೆಗಳನ್ನು ಜನರಿಗೆ ತಲುಪಿಸಿ’

ಕಲಾದಗಿ : ಸರ್ಕಾರದ ಸಾಧನೆಗಳನ್ನು ಮನೆ ಮನೆ ತಲುಪಿಸುವ ಕಾರ್ಯ ಮಾಡುವಂತೆ ಕಾರ್ಯಕರ್ತರಿಗೆ ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಸಮೀಪದ ಗೋವಿಂದಕೊಪ್ಪ ಗ್ರಾಮದಲ್ಲಿ ಶನಿವಾರ ‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಬರ ಪರಿಸ್ಥಿತಿಯ ಕಾರಣ ಸತತ ಮೂರು ವರ್ಷಗಳಿಂದ ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಬಂದಿರುವ ಸಿದ್ದರಾಮಯ್ಯ ಸರ್ಕಾರ ಸಹಕಾರಿ ಸಂಘಗಳಿಂದ ಪಡೆದ ₹50 ಸಾವಿರವರೆಗಿನ ಸಾಲಮನ್ನಾ ಮಾಡಿದೆ. ಅನ್ನಭಾಗ್ಯ ಕೃಷಿಭಾಗ ಪಶುಭಾಗ್ಯ ವಿದ್ಯಾಸಿರಿ ಕ್ಷೀರಧಾರೆ ಸೇರಿದಂತೆ ಹಲವು ಭಾಗ್ಯಗಳನ್ನು ನೀಡಿದೆ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಾರಸ್‌ಮಲ್‌ ಜೈನ್ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ ಸೌದಾಗರ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸಲಿಂ ಶೇಖ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಠ್ಠಲ ಶಿವನಿಚ್ಚಿ, ಮುಖಂಡರಾದ ಪಾಂಡು ಪೊಲೀಸ್, ಸಿದ್ದಣ್ಣ ಛಬ್ಬಿ, ಬಸು ಸಂಶಿ, ಬಸು ಬಿಲಕೇರಿ, ಅಕ್ರಮ್ ಸೌದಾಗರ, ಯಲ್ಲಪ್ಪ ನಂದ್ಯಾಳ. ರಾಮಣ್ಣ ಹಾದಿಮನಿ, ಭರಮಪ್ಪ ಪೂಜಾರಿ ಇದ್ದರು.

**

'ರಾಜಣ್ಣ ಪಕ್ಷವನ್ನು ಉದ್ದೇಶಿಸಿ ಹೇಳಿಲ್ಲ’

‘ಕಾಂಗ್ರೆಸ್ ಕಳ್ಳರ ಪಕ್ಷ ಎಂದು ಶಾಸಕ ಕೆ.ಎನ್‌.ರಾಜಣ್ಣ ಇಡೀ ಪಕ್ಷವನ್ನು ಉದ್ದೇಶಿಸಿ ಹೇಳಿಲ್ಲ. ಬದಲಿಗೆ ಯಾರೋ ಮುಖಂಡರ ಬಗ್ಗೆ ಮಾತನಾಡಿದ್ದಾರೆ’ ಎಂದು ಹೇಳಿದ ಎಸ್.ಆರ್.ಪಾಟೀಲ, ‘ಇಡೀ ಪಕ್ಷದ ಬಗ್ಗೆ ಆ ರೀತಿ ಹೇಳಿಕೆ ನೀಡಿದ್ದರೆ ಆ ಬಗ್ಗೆ ಸ್ಪಷ್ಟನೆ ಕೇಳಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನೋಟಿಸ್ ನೀಡಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT