ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಗಳ ಪಕ್ಷ ಬಿಜೆಪಿ: ಧ್ರುವನಾರಾಯಣ ಟೀಕೆ

ಹೆಗ್ಗವಾಡಿ ಗ್ರಾಮದಲ್ಲಿ ‘ಮನೆ ಮನೆಗೆ ಕಾಂಗ್ರೆಸ್‌’ ಅಭಿಯಾನಕ್ಕೆ ಚಾಲನೆ
Last Updated 24 ಸೆಪ್ಟೆಂಬರ್ 2017, 7:45 IST
ಅಕ್ಷರ ಗಾತ್ರ

ಚಾಮರಾಜನಗರ: ‘ಬಿಜೆಪಿ ಉದ್ಯಮಿಗಳ ಪರವಾದ ಪಕ್ಷವಾಗಿದೆ. ತನ್ನ ರಕ್ಷಣೆಗಾಗಿ ಕಾರ್ಯಕ್ರಮ ರೂಪಿಸುತ್ತಿದೆ ವಿನಾ, ರೈತರ ಹಾಗೂ ಬಡವರ ಪರ ಕಾರ್ಯಕ್ರಮ ಅನುಷ್ಠಾನಗೊಳಿಸಿಲ್ಲ’ ಎಂದ ಸಂಸದ ಆರ್. ಧ್ರುವನಾರಾಯಣ ಟೀಕಿಸಿದರು.

ತಾಲ್ಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್‌ನಿಂದ ನಡೆದ ‘ಮನೆ ಮನೆಗೆ ಕಾಂಗ್ರೆಸ್‌’ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷವಾಗಿದೆ. ಆದರೆ, ಯಾವುದೇ ಜನಪರ ಯೋಜನೆ ಅನುಷ್ಠಾನಗೊಳಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಮಾಡುವ ಮೂಲಕ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದು, ಜಾತಿಗಳ ನಡುವೆ ಎತ್ತಿಕಟ್ಟುವ ಮೂಲಕ ಕೋಮುವಾದಿ ಧೋರಣೆಯ ತಂತ್ರವನ್ನು ಬಿಜೆಪಿ ಬಳಸುತ್ತಿದೆ. ಜನರನ್ನು ದಿಕ್ಕು ತಪ್ಪಿಸುತ್ತಿದೆ. ಇದನ್ನು ಕಾಂಗ್ರೆಸ್‌ನ ಕಾರ್ಯಕರ್ತರು ತಡೆಗಟ್ಟಬೇಕು ಎಂದು ಸಲಹೆ ನೀಡಿದರು.

ಸಕ್ಕರೆ ಮತ್ತು ಸಣ್ಣಕೈಗಾರಿಕೆ ಸಚಿವೆ ಎಂ.ಸಿ. ಮೋಹನ್‌ಕುಮಾರಿ ಮಾತನಾಡಿ, ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನವನ್ನು ರಾಜ್ಯದೆಲ್ಲೆಡೆ ಏಕಕಾಲದಲ್ಲಿ ಪ್ರಾರಂಭಿಸಲಾಗಿದೆ. ಸರ್ಕಾರದ ಸಾಧನೆಯನ್ನು ಪ್ರತಿ ಮನೆಗೂ ತಲುಪಿಸುವ ಉದ್ದೇಶದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಪ್ರತಿ ಕ್ಷೇತ್ರದಲ್ಲಿಯೂ ಬೂತ್‌ ಕಮಿಟಿ ರಚಿಸಲಾಗಿದೆ ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಚಿವೆ ಎಂ.ಸಿ. ಮೋಹನ್‌ಕುಮಾರಿ, ಹೆಗ್ಗವಾಡಿ ಗ್ರಾಮದ ಮನೆಗಳಿಗೆ ತೆರಳಿ ಸಾಧನೆಯ ಕಿರುಹೊತ್ತಿಗೆ ಹಂಚಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಜಯಣ್ಣ, ಚುನಾವಣಾ ವೀಕ್ಷಕರಾದ ವಸಂತಾ ಶಿವಕುಮಾರ್, ಲೋಕೇಶ್‌ರಾವ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಸದಸ್ಯರಾದ ಕೆ.ಪಿ. ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್‌, ಬಿ.ಕೆ. ಬೋಮಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಮಾಜಿ ಸಂಸದ ಸಿದ್ದರಾಜು, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಬಿ. ಮರಿಸ್ವಾಮಿ, ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಎಂ. ಚಿನ್ನಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT