ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ ದಸರಾ: ಗತ ವೈಭವ ನೆನೆಯುತ್ತ!

Last Updated 24 ಸೆಪ್ಟೆಂಬರ್ 2017, 9:06 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ವಿಜಯನಗರದ ಹಂಪಿಯಲ್ಲಿ ನಡೆಯುತ್ತಿದ್ದ ದಸರಾ ಉತ್ಸವ ಕ್ರಿ.ಶ. 1610ರಿಂದ ಯದು ವಂಶದ ಒಡೆಯರ್‌ ಅರಸರ ಮೊದಲ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ಆರಂಭವಾಯಿತು.

ರಾಜ ಒಡೆಯರ್‌ (1578–1617) 1610ರಲ್ಲಿ ಈ ದ್ವೀಪ ಪಟ್ಟಣದಲ್ಲಿ ಸ್ವತಂತ್ರ ದೊರೆಯಾಗಿ ಅಧಿಕಾರಕ್ಕೇರಿದ ಬಳಿಕ ನವರಾತ್ರಿ ಉತ್ಸವವು ವಿಜೃಂಭಣೆಯಿಂದ ನಡೆಯುವಂತೆ ನಿಬಂಧನೆಗಳನ್ನು ಬರೆಸಿದರು.

ಇದಕ್ಕೂ ಮೊದಲು ವಿಜಯನಗರ ಸಾಮ್ರಾಜ್ಯದ ಪ್ರತಿನಿಧಿ ಶ್ರೀರಂಗರಾಯ ನವರಾತ್ರಿ ಉತ್ಸವವನ್ನು ಆಚರಿಸಲು ಶ್ರೀರಂಗನಾಥಸ್ವಾಮಿ ದೇಗುಲದ ಪೂರ್ವ ದಿಕ್ಕಿನಲ್ಲಿ ಮಹಾನವಮಿ ದಿಬ್ಬವನ್ನು ನಿರ್ಮಿಸಿ ನವರಾತ್ರಿ ಉತ್ಸವಕ್ಕೆ ಮುನ್ನುಡಿ ಬರೆಸಿದ್ದರು. ಸುಮಾರು 180 ವರ್ಷಗಳ ಕಾಲ ಇಲ್ಲಿ ಸಂಭ್ರಮದಿಂದ ನಡೆದ ದಸರಾ ಉತ್ಸವ ಹೈದರ್‌ ಮತ್ತು ಟಿಪ್ಪು ಸುಲ್ತಾನ್‌ ಕಾಲದಲ್ಲಿ ತುಸು ...ಮಖಾಯಿತಾದರೂ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕಾಲ (1799–1868)ಕ್ಕೆ ಮೈಸೂರಿಗೆ ಸ್ಥಳಾಂತಗೊಂಡ ಬಗ್ಗೆ ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.

‘ಕಂಠೀರವ ನರಸರಾಜ ವಿಜಯಂ’ನಲ್ಲಿ ದಸರಾ: ಪಟ್ಟಣದಲ್ಲಿ ದಸರಾ ಉತ್ಸವ ಎಷ್ಟೊಂದು ವೈಭವದಿಂದ ನಡೆಯುತ್ತಿತ್ತು ಎಂಬುದರ ಕುರಿತು ಕಂಠೀರವ ನರಸರಾಜ ಒಡೆಯರ್‌ (1638–1659) ಅವರ ಆಸ್ಥಾನ ಕವಿ ಗೋವಿಂದ ವೈದ್ಯ ತನ್ನ ‘ಕಂಠೀರವ ನರಸರಾಜ ವಿಜಯಂ’ ಕೃತಿಯಲ್ಲಿ ವಿವರಿಸಿದ್ದಾನೆ. 28 ಸಂಧಿಗಳ ಈ ಕಾವ್ಯದಲ್ಲಿ ಮೂರು ಸಂಧಿಗಳು ಇಲ್ಲಿ ನಡೆಯುತ್ತಿದ್ದ ದಸರೆಯ ಸಂಭ್ರಮವನ್ನು ವರ್ಣಿಸುತ್ತವೆ. ‘ದಸರೆಯ ಪುರ ಶೃಂಗಾರ’ ಭಾಗದಲ್ಲಿ ವಿಜಯ ದಶಮಿ ಆಚರಣೆಯ ಸಿದ್ಧತೆಗಳನ್ನು ಸಾದ್ಯಂತವಾಗಿ ವಿವರಿಸಲಾಗಿದೆ.

ಒಡ್ಡೋಲಗ: ‘ಅಶ್ವಯುಜ ಮಾಸ ಶುಕ್ಲ ಪಕ್ಷದ ಪ್ರಥಮ ದಿನದಂದು ಅರಸನು ಪಲ್ಲಕ್ಕಿಯನ್ನೇರಿ, ವಾದ್ಯ ಘೋಷಗಳೊಡನೆ ಒಡ್ಡೋಲಗಕ್ಕೆ ಬಂದನು. ವಿವಿಧ ದೇಶಗಳಿಂದ ಬಂದ ಸಾಮಂತರು ಭೂಪಾಲನಿಗೆ ಕಾಣಿಕೆ ಕೊಟ್ಟು ಕೈಮುಗಿದರು. ಅರಮನೆ ಮುಂದಾಣದಲ್ಲಿ ಮಲ್ಲಯುದ್ಧ, ದೊಂಬರಾಟ, ಟಗರು ಕಾಳಗ, ಗರುಡ ಬೇಟೆ, ಆನೆಗಳ ಹೋರಾಟ, ಹುಲಿ ಮತ್ತು ಕರಡಿಗಳೊಡನೆ ವೀರರ ಕಾದಾಟ, ದೊಣ್ಣೆ ವರಸೆ, ಲಲನೆಯರ ನರ್ತನ, ಇಂದ್ರಜಾಲ, ಸಂಗೀತ, ನಾಟಕ, ವೀಣಾ ವಾದನ, ಕವಿಗೋಷ್ಠಿಗಳು ಜರುಗಿದವು’ ಎಂಬ ಉಲ್ಲೇಖವಿದೆ.

‘ನವರಾತ್ರಿಯಂದು ನವ ಲಕ್ಷ್ಮಿಯರ ಪೂಜೆಗೆ ಅರಮನೆಯ ಮಹಾ ಚಿತ್ರಶಾಲೆಯನ್ನು ಹವಳದ ಕುಚ್ಚು, ಮುತ್ತಿನ ಗೊಂಚಲು, ನವರತ್ನ ಖಚಿತ ಲೋವೆಗಳಿಂದ ಸಿಂಗರಿಸಲಾಯಿತು. ದಿವ್ಯಾಯುಧಗಳನ್ನು ಕಂಗೊಳಿಸುವ ಪಲ್ಲಕ್ಕಿಯಲ್ಲಿಟ್ಟು ತಂದರು. ಖಡ್ಗ, ನೇಜಯ, ಸಿಂಗಾಡಿ, ಜವದಾಡೆ, ಸುರಗಿ, ದಿವ್ಯ ಸುರಗಿ, ಚಿಕ್ಕ ಕಠಾರಿ, ಕರಾಚೂರಿ, ಬಿಚ್ಚುಗತ್ತಿ, ಸಬಳ ಮತ್ತು ಅಂಬುಗಳು ಜಲಕ್ರೀಡೆಗೈದವು’ ಎನ್ನುವ ವಿವರಣೆ ಸಿಗುತ್ತದೆ.

ಜಂಬೂ ಸವಾರಿ: ವಿಜಯ ದಶಮಿಯಂದು ಅರಮನೆಯ ರಾಜಭೇರಿ ಮೊಳಗಿದಾಗ ಚತುರಂಗ ಬಲ ಸಹಿತ ಮೆರವಣಿಗೆ ಮೇರೆ ಇಲ್ಲದಂತೆ ಮುನ್ನಡೆಯಿತು. ವಾದ್ಯ, ಡವಳ, ಶಂಕ, ಡೋಲು, ಮನ್ನೆಯರ ಸಮೂಹದ ಜತೆ ಅರಸನು ಹೊರಟು ಬನ್ನಿ ಮಂಟಪವನ್ನು ಸೇರಿದನು. ಪಟ್ಟದ ಆನೆಯನ್ನೇರಿ ಕೆಲವೊತ್ತು ಮನರಂಜನೆಗಾಗಿ ಆಟಗಳನ್ನು ವೀಕ್ಷಿಸಿ, ಗೋಧೂಳಿ ಲಗ್ನದಲ್ಲಿ ಶಮೀ ವೃಕ್ಷ (ಬನ್ನಿ ವೃಕ್ಷ)ಕ್ಕೆ ಪೂಜೆ ಸಲ್ಲಿಸಿ ಅಗಣಿತ ದೀವಟಿಗೆಗಳ ಬೆಳಕಿನಲ್ಲಿ ಮದ್ದಾನೆಯ ಮೇಲೆ ಅರಮನೆಗೆ ಮರಳಿದನು’ ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT