ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಆರೋಗ್ಯ ಕಾರ್ಡ್‌ ವಿತರಣೆ: ನಿರ್ಲಕ್ಷ್ಯಕ್ಕೆ ತೀವ್ರ ಆಕ್ಷೇಪ

ಸಂಸದ ಡಿ.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ’ದಿಶಾ’ ಸಭೆ; ಅಧಿಕಾರಿಗಳಿಗೆ ತರಾಟೆ
Last Updated 24 ಸೆಪ್ಟೆಂಬರ್ 2017, 9:14 IST
ಅಕ್ಷರ ಗಾತ್ರ

ರಾಮನಗರ: ಮಣ್ಣು ಆರೋಗ್ಯ ಕಾರ್ಡುಗಳನ್ನು ರೈತರಿಗೆ ಸಮರ್ಪಕವಾಗಿ ವಿತರಿಸದ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಸದ ಡಿ.ಕೆ. ಸುರೇಶ್‌ ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೇಂದ್ರ ಪುರಸ್ಕೃತ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯಲ್ಲಿ ಈ ವಿಷಯ ಹೆಚ್ಚು ಚರ್ಚೆಗೆ ಒಳಗಾಯಿತು.

‘ಜಿಲ್ಲೆಯಲ್ಲಿ 2.7 ಲಕ್ಷ ಮಣ್ಣು ಆರೋಗ್ಯ ಕಾರ್ಡುಗಳನ್ನು ಮುದ್ರಣ ಮಾಡಿ ಇಡಲಾಗಿದೆ. ಆದರೆ ಸಿಬ್ಬಂದಿ ಕೊರತೆಯಿಂದಾಗಿ ಕಳೆದ ವರ್ಷ ಜುಲೈನಿಂದ ಈವರೆಗೆ ಈವರೆಗೆ 50 ಸಾವಿರ ಕಾರ್ಡುಗಳನ್ನು ವಿತರಿಸಲಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೀಪಜಾ ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು ‘ಇಷ್ಟು ದಿನಗಳವರೆಗೆ ನಿಮ್ಮ ಸಿಬ್ಬಂದಿ ಏನು ಮಾಡುತ್ತೀದ್ದೀರಿ’ ಎಂದು ಪ್ರಶ್ನಿಸಿದರು.

‘ಕೇವಲ ಕಾರ್ಡು ಕೊಟ್ಟು ಕೈತೊಳೆದುಕೊಳ್ಳುವುದಲ್ಲ. ಮಣ್ಣಿನ ಫಲವತ್ತತೆ ಬಗ್ಗೆ ರೈತರಿಗೆ ವಿವರಿಸಿ, ಅದಕ್ಕೆ ಹೊಂದಿಕೊಳ್ಳುವ ಬೆಳೆಗಳನ್ನೇ ಬೆಳೆಯುವಂತೆ ಪ್ರೋತ್ಸಾಹಿಸಬೇಕು. ಅದನ್ನು ಬಿಟ್ಟು ಬಂದ ಅನುದಾನವನ್ನು ತಾವಿಷ್ಟು, ಜನಪ್ರತಿನಿಧಿಗಳಿಗೆ ಇಷ್ಟು ಎಂದು ಹಂಚಿ ಸುಮ್ಮನಾಗಬಾರದು’ ಎಂದರು.

ಬಿಡದಿಯ ಬೈರಮಂಗಲ ಕೆರೆಯ ಸಮೀಪ ಸಮುದಾಯ ಆಧಾರಿತ ಸಣ್ಣ ನೀರಾವರಿ ಯೋಜನೆ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ ಸಂಸದರು ‘ಅಲ್ಲಿನ ಕೆರೆಯ ನೀರು ಈಗಾಗಲೇ ಮಲೀನವಾಗಿದೆ. ಜೊತೆಗೆ ಆ ಪ್ರದೇಶಕ್ಕೆ ನಗರೀಕರಣಕ್ಕೆ ಒಳಪಡುತ್ತಿರುವ ಕಾರಣ ಅಷ್ಟು ಸೂಕ್ತವಲ್ಲ. ಅದರ ಬದಲಿಗೆ ನಾಲ್ಕೂ ತಾಲ್ಲೂಕುಗಳಲ್ಲಿಯೂ ಒಂದೊಂದು ಸ್ಥಳ ಗುರುತಿಸಿ ಪ್ರಸ್ತಾವ ಸಲ್ಲಿಸಿ’ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಸುಮಾರು ₹60 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಣ್ಣು ಪರೀಕ್ಷೆ ಪ್ರಯೋಗಾಲಯದ ಕಾರ್ಯನಿರ್ವಹಣೆ ಕುರಿತೂ ಅಸಮಾಧಾನ ವ್ಯಕ್ತಪಡಿಸಿದ ಅವರು, ರೈತರಿಗೆ ಹೆಚ್ಚು ನೆರವಾಗುವಂತೆ ಸೂಚಿಸಿದರು.

ರಸಗೊಬ್ಬರ ಖರೀದಿ: ‘ಸರ್ಕಾರವು ರಸಗೊಬ್ಬರ ಖರೀದಿಗೆ ರೈತರ ಬಯೋಮೆಟ್ರಿಕ್‌ ಕಡ್ಡಾಯಗೊಳಿಸಿದೆ. ಜಿಲ್ಲೆಯಲ್ಲಿ 230 ಗೊಬ್ಬರ ಮಾರಾಟಗಾರರು ಇದ್ದು, ಇವರಲ್ಲಿ ಈಗಾಗಲೇ 65 ವರ್ತಕರು ಹೊಸ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಉಳಿದಿವರಿಗೆ ಡಿಸೆಂಬರ್‌ 31ರವರೆಗೂ ಅವಕಾಶ ಇದೆ’ ಎಂದು ದೀಪಜಾ ತಿಳಿಸಿದರು.

ಅಧಿಕಾರಿ ವಿರುದ್ಧ ಕಿಡಿ: ಸಭೆಗೆ ಸರಿಯಾಗಿ ಮಾಹಿತಿ ನೀಡದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಗುಣವಂತ ಅವರನ್ನು ಸಂಸದರು ಗದರಿಸಿದ ಘಟನೆಯೂ ನಡೆಯಿತು. ‘ಹನಿ, ತುಂತುರು ನೀರಾವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕನಿಷ್ಠ ಒಬ್ಬ ಪ್ರಗತಿಪರ, ಉತ್ಸಾಹಿ ರೈತನನ್ನು ಗುರುತಿಸಿ ಆಧುನಿಕ ಕೃಷಿ ಬಗ್ಗೆ ಮಾಹಿತಿ ನೀಡಬೇಕು’ ಎಂದು ಅವರು ಸೂಚಿಸಿದರು.

ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಸರಬರಾಜು ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು , ಸಂಜೆ ವೇಳೆಗೆ ಗ್ರಾಮಕ್ಕೆ ನೀರಿನ ಸಂಪರ್ಕ ಸಿಗದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಯನ್ನು ಅಮಾನತು ಮಾಡುವುದಾಗಿ ಎಚ್ಚರಿಸಿದರು.

ಹೆದ್ದಾರಿ ವಿಸ್ತರಣೆ ಬಗ್ಗೆ ಚರ್ಚೆ: ಬೆಂಗಳೂರು–ಮೈಸೂರು ಹೆದ್ದಾರಿ (ಎನ್‌.ಎಚ್‌–275) ವಿಸ್ತರಣೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಅವರು ಸೂಚಿಸಿದರು. ಚನ್ನಪಟ್ಟಣದಲ್ಲಿ ಭೂಸ್ವಾಧೀನಕ್ಕೆ ಅನುವು ಮಾಡಿಕೊಡದ ನಗರಸಭೆ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೊತ್ತಂಬರಿ ಸೊಪ್ಪು ಮಾರಿ ಕಾರು ಖರೀದಿ!: ಆನೇಕಲ್‌ನ ರೈತರೊಬ್ಬರು ಒಂದೂವರೆ ಎಕರೆಯಲ್ಲಿ ಬರೀ ಕೊತ್ತಂಬರಿ ಸೊಪ್ಪು ಬೆಳೆದು ಅದರಿಂದ ಬಂದ ಹಣದಿಂದ ಕಾರು ಖರೀದಿ ಮಾಡಿದ ಯಶೋಗಾಥೆಯನ್ನು ಸಂಸದರು ಸಭೆಯಲ್ಲಿ ಪ್ರಸ್ತಾಪಿಸಿದರು.

ನನ್ನ ಶಿಫಾರಸು ಪರಿಗಣಿಸಿ!: ‘ಯಾವುದೇ ಯೋಜನೆ ಇರಲಿ. ಫಲಾನುಭವಿಗಳ ಆಯ್ಕೆ ಮಾಡುವಾಗ ನನ್ನ ಶಿಫಾರಸುಗಳನ್ನೂ ಪರಿಗಣಿಸಬೇಕು’ ಎಂದು ಸಂಸದರು ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಸಿದ್ದರಾಮಯ್ಯ ಅವರಿಗೆ ಆದೇಶಿಸಿದರು.

‘ಫಲಾನುಭವಿಗಳ ಆಯ್ಕೆಯಲ್ಲಿ ಶಾಸಕರಷ್ಟೇ ಸಂಸದರಿಗೂ ಅವಕಾಶ ಇದೆ. ನನ್ನ ಶಿಫಾರಸು ಪರಿಗಣಿಸಿ, ಇಲ್ಲ ಆಯ್ಕೆ ಸಭೆಗೆ ನನ್ನನ್ನೂ ಕರೆಯಿರಿ’ ಎಂದು ಅವರು ಗದರಿದರು.

‘ಬೈರಾಪಟ್ಟಣ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಕೆಲವು ಜಮೀನುಗಳು ಇನ್ನೂ ಪಂಚಾಯಿತಿ ಹೆಸರಿನಲ್ಲಿಯೇ ಇವೆ. ಆದರೆ ಭೂಸ್ವಾಧೀನ ಪ್ರಕ್ರಿಯೆ ನಡೆದಿರುವ ಕಾರಣ ಆ ದಾಖಲೆಗಳನ್ನು ತಿದ್ದಲು ಅವಕಾಶ ಇಲ್ಲ. ಹೀಗಾಗಿ ಪರಿಹಾರ ವಿತರಣೆ ಕಗ್ಗಂಟಾಗಿದೆ’ ಎಂದು ಉಪವಿಭಾಗಾಧಿಕಾರಿ ರಾಜೇಂದ್ರಪ್ರಸಾದ್‌ ತಿಳಿಸಿದರು.

‘ರಾಮನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 108.7 ಹೆಕ್ಟೇರ್‌ನಷ್ಟು ಭೂಮಿಯನ್ನು ಹೆದ್ದಾರಿಗಾಗಿ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಈವರೆಗೆ ₹165 ಕೋಟಿ ಪರಿಹಾರವನ್ನೂ ವಿತರಿಸಲಾಗಿದೆ’ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT