ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಉಗ್ರರ ತವರು: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರತಿಕ್ರಿಯೆ

Last Updated 24 ಸೆಪ್ಟೆಂಬರ್ 2017, 10:24 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ದಕ್ಷಿಣ ಏಷ್ಯಾದಲ್ಲಿ ಭಾರತ ಭಯೋತ್ಪಾದಕರ ತವರಾಗಿದೆ. ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಜತೆಗೆ ತನ್ನ ಎಲ್ಲ ನೆರೆಯ ರಾಷ್ಟ್ರಗಳಲ್ಲಿ ಭಯೋತ್ಪಾದನೆ ನೆಲೆಯೂರಲು ನೆರವು ನೀಡುತ್ತಿದೆ ಎಂದು ವಿಶ್ವಸಂಸ್ಥೆಯ ಪಾಕಿಸ್ತಾನದ ಕಾಯಂ ಪ್ರತಿನಿಧಿ ಮಲೀಹಾ ಲೋಧಿ ಆರೋಪಿಸಿದ್ದಾರೆ.

ಪಾಕಿಸ್ತಾನ ಉಗ್ರರ ಸಂಘಟನೆಗಳನ್ನು ಕಟ್ಟಿದೆ. ಅಷ್ಟೇ ಅಲ್ಲದೆ ಭಯೋತ್ಪಾದನೆಯನ್ನು ಇಡೀ ಜಗತ್ತಿಗೆ ರಫ್ತು ಮಾಡುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ವಿಶ್ವಸಂಸ್ಥೆಯಲ್ಲಿ ಶನಿವಾರ ಖಾರವಾದ ಮಾತುಗಳಿಂದ ಪಾಕಿಸ್ತಾನ ‍ಪ್ರೇರಿತ ಉಗ್ರವಾದವನ್ನು ಖಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮಲೀಹಾ ಭಾರತವನ್ನು ಉಗ್ರರ ತವರು ಎಂದಿದ್ದಾರೆ.

ಮೋದಿ ಸರ್ಕಾರದಲ್ಲಿ ಜನಾಂಗೀಯತೆ ಹಾಗೂ ಬಲಪಂಥೀಯ ವಾದ ಬೇರೂರಿದೆ ಎಂದಿರುವ ಮಲೀಹಾ ಕಾಶ್ಮೀರದ ವಿಚಾರವನ್ನು ಮುಂದಿಟ್ಟು ಆರೋಪಿಸಿದ್ದಾರೆ. 2002ರ ಗುಜರಾತ್‌ ಹತ್ಯಾಕಾಂಡದಲ್ಲಿ ಸಾವಿರಾರು ಮುಸಲ್ಮಾನರ ರಕ್ತಪಾತಕ್ಕೆ ಕಾರಣವಾದ ರಾಜಕೀಯ ಪಕ್ಷ ಈಗ ದೇಶದ ಆಡಳಿತ ನಡೆಸುತ್ತಿದೆ. ಬಲಪಂಥೀಯ ಧೋರಣೆಗಳನ್ನು ಅನುಸರಿಸಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಗಡಿ ಭಾಗದಲ್ಲಿ ಭಯತ್ಪಾದನೆಗೆ ನೀಡುತ್ತಿರುವ ಬೆಂಬಲಿಸಲಿ ನಿಲ್ಲಿಸಲಿ ಎಂದು ಟೀಕಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಹೆಸರನ್ನೂ ಪ್ರಸ್ತಾಪಿಸಿ, ಭಾರತದ ಅತಿ ದೊಡ್ಡ ರಾಜ್ಯದ ನೇತೃತ್ವವನ್ನು ಮತಾಂಧ ವ್ಯಕ್ತಿಗೆ ಕೇಂದ್ರ ಸರ್ಕಾರ ನೀಡಿದೆ. ಈ ಮೂಲಕ ಮುಸ್ಲಿಮರ ವಿರುದ್ಧ ಹಿಂಸಾಕೃತ್ಯಗಳನ್ನು ನಡೆಸಲು ಸರ್ಕಾರವೇ ಅವಕಾಶ ನೀಡಿದಂತಾಗಿದೆ ಎಂದು ದೇಶದ ಆಂತರಿಕ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ.

‘ಈ ಭೀಕರ ಹತ್ಯೆಗಳು ಕೇವಲ ಲಕ್ಷಣಗಳಷ್ಟೇ. ಬದುಕುವುದೇ ದುಸ್ತರವಾಗಿದೆ.ಯಾವಾಗ, ಎಲ್ಲಿಂದ ಆಕ್ರಮಣ ನಡೆಯಬಹುದು ಎಂಬ ಭಯದಲ್ಲಿ; ದಲಿತರು, ಆದಿವಾಸಿಗಳು, ಕ್ರಿಶ್ಚಿಯನ್‌ ಹಾಗೂ ಮುಸ್ಲಿಮರು ಭೀತಿಯಲ್ಲಿ ಬದುಕು ಸಾಗಿಸಬೇಕಿದೆ.’ ಎಂಬ ಲೇಖಕಿ ಅರುಂಧತಿ ರಾಯ್‌ ಅವರ 2015ರ ಮಾತನ್ನು ಉಲ್ಲೇಖಿಸಿ ಸಚಿವೆ ಸುಷ್ಮಾ ಸ್ವರಾಜ್‌ ಮಾತಿಗೆ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನ ಮಾತುಕತೆಗೆ ಸಿದ್ಧವಿದೆ, ಆದರೆ ಚರ್ಚೆಯಲ್ಲಿ ಕಾಶ್ಮೀರದ ವಿಚಾರ ಇರಲೇ ಬೇಕು. ಕಾಶ್ಮೀರದಲ್ಲಿ ಆಗುತ್ತಿರುವ ಘರ್ಷಣೆಗಳಲ್ಲಿ ಭದ್ರತಾ ಪಡೆಗಳು ಗುಂಪು ನಿಯಂತ್ರಿಸಲು ಪೆಲೆಟ್‌ ಗನ್‌ ಬಳಕೆ ಮಾಡುತ್ತಿದ್ದು, ಇದರಿಂದಾಗಿ ಬಳಷ್ಟು ಯುವ ಕಾಶ್ಮೀರಿಗಳು ಕಣ್ಣು ದೃಷ್ಟಿ ಕಳೆದುಕೊಳ್ಳುವಂತಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT