ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗದ ಹಾದಿಯಲ್ಲಿ ನವೋಲ್ಲಾಸ

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಮಧ್ಯ ಮವೇಗದ ಬೌಲಿಂಗ್‌ಗೆ ವಿಶೇಷ ಪರಂಪರೆ ಇದೆ. ಸ್ಪಿನ್ನರ್‌ಗಳೇ ತಂಡದ ಬಹುದೊಡ್ಡ ಶಕ್ತಿ ಎಂಬಂತಿದ್ದ ಕಾಲಘಟ್ಟದಲ್ಲಿ (1930) ತಂಡಕ್ಕೆ ವೇಗದ ಬಲ ತುಂಬಿದವರು ಮಹಮ್ಮದ್‌ ನಿಸಾರ್ ಮತ್ತು ಲಾಲಾ ಅಮರ್‌ ಸಿಂಗ್. ನಿಸಾರ್‌ ಅವರು ಟೆಸ್ಟ್‌ ಮಾದರಿಯಲ್ಲಿ ಮೊದಲ ವಿಕೆಟ್‌ ಪಡೆದ ಭಾರತದ ವೇಗಿ ಎಂಬುದು ವಿಶೇಷ.

ಇವರ ನಂತರ ಕಪಿಲ್ ದೇವ್‌ ವಿಶ್ವ ಕ್ರಿಕೆಟ್‌ನಲ್ಲಿ ಪ್ರಜ್ವಲಿಸಿದರು. ಕಪಿಲ್‌, ವಿದಾಯದ ನಂತರ ಕರ್ನಾಟಕದ ಜಾವಗಲ್‌ ಶ್ರೀನಾಥ್‌ ಮತ್ತು ವೆಂಕಟೇಶ್ ಪ್ರಸಾದ್‌ ಅವರು ಭಾರತದ ವೇಗದ ಶಕ್ತಿಯನ್ನು ಜಗಜ್ಜಾಹೀರು ಮಾಡಿ ಸಾರ್ವಕಾಲಿಕ ಶ್ರೇಷ್ಠರ ಸಾಲಿನಲ್ಲಿ ಸ್ಥಾನ ಗಳಿಸಿದ್ದು ಇತಿಹಾಸ.

ಸೌರವ್‌ ಗಂಗೂಲಿ ನಾಯಕತ್ವ ವಹಿಸಿಕೊಂಡ ಬಳಿಕ ಭಾರತದ ಕ್ರಿಕೆಟ್‌ ಲೋಕದಲ್ಲಿ ನವ ಮನ್ವಂತರ ಶುರುವಾಯಿತು. ಅವರ ಅವಧಿ ಯಲ್ಲಿ ಸಾಕಷ್ಟು ವೇಗದ ತಾರೆಯರು ಕ್ರಿಕೆಟ್ ಕ್ವಿತಿಜದಲ್ಲಿ ಮಿನುಗಿದರು.

ಈ ಪೈಕಿ ಎಡಗೈ ವೇಗಿ ಗಳಾದ ಜಹೀರ್‌ ಖಾನ್, ಆಶಿಶ್‌ ನೆಹ್ರಾ ಮತ್ತು ಇರ್ಫಾನ್‌ ಪಠಾಣ್‌ ಅವರು ಪ್ರಮುಖರು.

ಸ್ಪಿನ್‌ ಸ್ನೇಹಿ ಎನಿಸಿದ್ದ ಉಪಖಂಡದ ಪಿಚ್‌ಗಳಲ್ಲಿ ಕರಾರುವಾಕ್‌ ದಾಳಿ ನಡೆಸಿ ಎದುರಾಳಿ ಬ್ಯಾಟ್ಸ್‌ಮನ್‌ಗಳಲ್ಲಿ ನಡುಕ ಹುಟ್ಟಿಸುತ್ತಿದ್ದ ಇವರು 90ರ ದಶಕದಲ್ಲಿ ಹಲವು ಪಂದ್ಯಗಳಲ್ಲಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟ ಉದಾಹರಣೆಗಳು ಸಾಕಷ್ಟಿವೆ.  ಮುನಾಫ್‌ ಪಟೇಲ್‌. ಎಸ್‌.ಶ್ರೀಶಾಂತ್‌, ಇಶಾಂತ್‌ ಶರ್ಮಾ, ಆರ್‌.ಪಿ.ಸಿಂಗ್‌ ಅವರೂ ಈ ಸಾಲಿಗೆ ಸೇರುತ್ತಾರೆ.

(ವೆಂಕಟೇಶ್ ಪ್ರಸಾದ್‌)

2007-08ನೇ ಸಾಲಿನಲ್ಲಿ ಭಾರತ ತಂಡ ತ್ರಿಕೋನ ಏಕದಿನ ಸರಣಿ ಆಡಲು ಆಸ್ಟ್ರೇಲಿಯಾಕ್ಕೆ ಹೋದಾಗ, ಇಶಾಂತ್‌ ಶರ್ಮಾ, ಕಾಂಗರೂಗಳ ನಾಡಿನ ಬ್ಯಾಟ್ಸ್‌ಮನ್‌ಗಳ ಸದ್ದಡಗಿಸಿದ್ದ ನೆನಪುಗಳು ಇಂದಿಗೂ ಅಭಿಮಾನಿಗಳ ಮನದಲ್ಲಿ ಅಚ್ಚೊತ್ತಿವೆ. ಇಶಾಂತ್‌ ಗಂಟೆಗೆ 150 ಕಿ.ಮೀ.ವೇಗದಲ್ಲಿ ಎಸೆಯುತ್ತಿದ್ದ ಚೆಂಡನ್ನು ಎದುರಿಸಲು ರಿಕಿ ಪಾಂಟಿಂಗ್‌ ಸೇರಿದಂತೆ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಪರದಾಡಿದ್ದನ್ನೂ ಮರೆಯುವಂತಿಲ್ಲ.

ಮುಂದುವರಿದ ಪರಂಪರೆ

‘ಭುವನೇಶ್ವರ್‌ ಕುಮಾರ್‌, ಮಹಮ್ಮದ್‌ ಶಮಿ, ಉಮೇಶ್‌ ಯಾದವ್‌ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರು ವಿಶ್ವದ ಶ್ರೇಷ್ಠ ಬೌಲರ್‌ಗಳೆನಿಸಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಸಾಮರ್ಥ್ಯ ವೃದ್ಧಿಸಿಕೊಂಡು ಸಾಗುತ್ತಿರುವ ಇವರು ಪರಿಣಾಮಕಾರಿ ದಾಳಿಯ ಮೂಲಕ ವಿಶ್ವದ ದಿಗ್ಗಜ ಬ್ಯಾಟ್ಸ್‌ಮನ್‌ಗಳ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಬಲ್ಲರು’....

ಈ ವರ್ಷದ ಮೇ ತಿಂಗಳಿನಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಶ್ರೀಲಂಕಾದ ಹಿರಿಯ ವೇಗಿ ಚಮಿಂದಾ ವಾಸ್‌, ಭಾರತದ ಬೌಲರ್‌ಗಳ ಕುರಿತು ಹೀಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಗಾಯದ ಸಮಸ್ಯೆ ಮತ್ತು ಆಟದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲಾಗದೆ ಇಶಾಂತ್‌, ಇರ್ಫಾನ್‌ ಮತ್ತು ಆರ್‌.ಪಿ. ಸಿಂಗ್‌ ಅವರು ತೆರೆಗೆ ಸರಿಯುತ್ತಿದ್ದ ಸಂದರ್ಭದಲ್ಲಿ ಮುನ್ನೆಲೆಗೆ ಬಂದ ಉಮೇಶ್‌, ಶಮಿ, ಬೂಮ್ರಾ ಮತ್ತು ಭುವನೇಶ್ವರ್‌, ಪ್ರತಿ ಸರಣಿಯಲ್ಲೂ ಅಪೂರ್ವ ಸಾಮರ್ಥ್ಯ ತೋರಿ ವೇಗಿಗಳ ಕೊರಗು ಕಾಡದಂತೆ ನೋಡಿಕೊಳ್ಳುತ್ತಿದ್ದಾರೆ.

(ಭುವನೇಶ್ವರ್‌ ಕುಮಾರ್‌, ಉಮೇಶ್‌ ಯಾದವ್‌, ಹಾರ್ಡಿಕ್‌ ಪಾಂಡ್ಯಾ ಮಹಮ್ಮದ್‌ ಶಮಿ)

ತವರಿನಲ್ಲಿ ಮತ್ತು ವಿದೇಶಗಳಲ್ಲಿ ನಡೆದ ಸರಣಿಗಳಲ್ಲಿ ಮಿಂಚಿನ ದಾಳಿ ಸಂಘಟಿಸಿ ವಿರಾಟ್‌ ಕೊಹ್ಲಿ ಬಳಗ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸುವಲ್ಲಿ ಇವರು ನಿರ್ಣಾಯಕ ಪಾತ್ರವಹಿಸಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ ಮತ್ತು ಶ್ರೀಲಂಕಾ ಪ್ರವಾಸದಲ್ಲಿ ಭಾರತದಿಂದ ಮೂಡಿಬಂದ ಸಾಧನೆ ಇದಕ್ಕೊಂದು ನಿದರ್ಶನ.
ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ಶಮಿ ಮತ್ತು ಭುವಿ, ಇನ್‌ ಮತ್ತು ಔಟ್‌ಸ್ವಿಂಗ್‌ ಗಳ ಮೂಲಕ , ಉಮೇಶ್‌ ಮತ್ತು ಬೂಮ್ರಾ ಅವರು ಯಾರ್ಕರ್‌ಗಳ ಮೂಲಕ ಎದುರಾಳಿಗಳನ್ನು ಕಟ್ಟಿಹಾಕುವಷ್ಟು ಶಕ್ತರಾಗಿದ್ದಾರೆ. ಹಾರ್ದಿಕ್‌ ಪಾಂಡ್ಯ ಕೂಡ ತಂಡದ ವೇಗದ ವಿಭಾಗಕ್ಕೆ ಬಲ ತುಂಬಿದ್ದಾರೆ.

‘ಡೆತ್‌ ಓವರ್‌ ಸ್ಪೆಷಲಿಸ್ಟ್‌’ ಬೂಮ್ರಾ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ 5 ಪಂದ್ಯಗಳಿಂದ 15 ವಿಕೆಟ್‌ ಉರುಳಿಸಿದ್ದರು. ಈ ಮೂಲಕ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಗಳಿಸಿದ್ದರು. ಇವರು ಉತ್ತಮ ದೈಹಿಕ ಕ್ಷಮತೆ ಕಾಪಾಡಿಕೊಂಡು ಸಾಗಿದರೆ, ಮುಂದಿನ ದಿನಗಳಲ್ಲಿ ಭಾರತದ ವೇಗದ ಪರಂಪರೆ ಇನ್ನಷ್ಟು ಎತ್ತರಕ್ಕೇರಬಹುದು.

ಹೊಸ ಅಲೆ: ಭುವಿ, ಬೂಮ್ರಾ, ಉಮೇಶ್‌ ಮತ್ತು ಶಮಿ ಅವರು ಗಾಯಗೊಂಡರೆ ಅಥವಾ ನಿವೃತ್ತಿ ಹೇಳಿದರೆ ತಕ್ಷಣಕ್ಕೆ ಅವರ ಸ್ಥಾನ ತುಂಬಬಲ್ಲ ಸಮರ್ಥರ ದೊಡ್ಡ ಪಡೆ ಈಗ ನಮ್ಮಲ್ಲಿದೆ. ವರುಣ್ ಆ್ಯರನ್‌, ಭಾರತದ ಮಟ್ಟಿಗೆ ಅತ್ಯಂತ ವೇಗವಾಗಿ ಚೆಂಡನ್ನು ಎಸೆಯಬಲ್ಲ ಸಾಮರ್ಥ್ಯ ಹೊಂದಿರುವ ಬೌಲರ್. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಡಿ ಇಟ್ಟ ಶುರುವಿನಲ್ಲಿ ಅವರು ಗಂಟೆಗೆ 153 ಕಿಲೊ ಮೀಟರ್ಸ್‌ ವೇಗದಲ್ಲಿ ದಾಳಿ ನಡೆಸುತ್ತಿದ್ದರು. ನಿರಂತರವಾಗಿ ಕಾಡಿದ ಗಾಯದ ಸಮಸ್ಯೆಯಿಂದಾಗಿ ಅವರು ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ವಿಫಲರಾಗಿದ್ದಾರೆ.

(ಭುವನೇಶ್ವರ್‌ ಕುಮಾರ್‌, ಮಹಮ್ಮದ್‌ ಶಮಿ, ಉಮೇಶ್‌ ಯಾದವ್‌)

ಶಾರ್ದೂಲ್‌ ಠಾಕೂರ್‌ ಕೂಡ ಪ್ರತಿಭಾನ್ವಿತ ಬೌಲರ್‌. ಅವರು ಟೆಸ್ಟ್‌ ಮಾದರಿಯಲ್ಲಿ ಗಂಟೆಗೆ 134ರಿಂದ 145 ಕಿಲೊ ಮೀಟರ್ಸ್‌ ವೇಗದಲ್ಲಿ ಬೌಲ್‌ ಮಾಡಬಲ್ಲರು.  ನಾಥು ಸಿಂಗ್‌, ಅಂಕಿತ್‌ ರಜಪೂತ್‌, ಕೇರಳದ ಸಂದೀಪ್‌ ವಾರಿಯರ್‌ ಮತ್ತು ಬಸಿತ್‌ ಥಂಪಿ ಅವರೂ ರಾಷ್ಟ್ರೀಯ ತಂಡದ ಪರ ಆಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. 142 ಕಿ.ಮೀ. ವೇಗದಲ್ಲಿ ಬೌನ್ಸರ್‌ಗಳನ್ನು ಹಾಕುವುದರಲ್ಲಿ ಥಂಪಿ ನಿಸ್ಸೀಮರು. ರಾಹುಲ್‌, ಶುಕ್ಲಾ, ಮಹಮ್ಮದ್‌ ಸಿರಾಜ್‌, ಅನಿಕೇತ್‌ ಚೌಧರಿ, ಪ್ರದೀಪ್‌ ಸಂಗ್ವಾನ್‌, ಪವನ್‌ ಸುಯಾಲ್‌, ಆವೇಶ್‌ ಖಾನ್‌, ನವ ದೀಪ್‌ ಸೈನಿ, ರವಿಕಿರಣ್‌, ಚಾಮ ಮಿಲಿಂದ್‌ ಮತ್ತು ಬರಿಂದರ್‌ ಸರನ್‌ ಅವರೂ ಐಪಿಎಲ್‌ ಮತ್ತು ದೇಶಿ ಟೂರ್ನಿಗಳಲ್ಲಿ ಮೋಡಿ ಮಾಡಿದ್ದು, ಭರವಸೆಯ ತಾರೆಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT