ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಕ್ರೀಡಾಂಗಣದಲ್ಲಿ ರಣಜಿ ಸಂಭ್ರಮ

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕರ್ನಾಟಕ ಕ್ರಿಕೆಟ್‌ ಸಂಸ್ಥೆಯ ಶಿವಮೊಗ್ಗ ವಲಯದ ಕನಸು ನನಸಾಗುವ ಹಾದಿಯಲ್ಲಿದೆ. ಸವಳಂಗ ರಸ್ತೆಯಲ್ಲಿ ತಲೆಯೆತ್ತಿರುವ ಸಂಸ್ಥೆಯ ಸ್ವಂತ ಕ್ರೀಡಾಂಗಣ ಈಗ ಮೊದಲ ದೊಡ್ಡಮಟ್ಟದ ಪಂದ್ಯವೊಂದಕ್ಕೆ ಭರದಿಂದ ಸಜ್ಜಾಗುತ್ತಿದೆ. ಅಕ್ಟೋಬರ್‌ 24 ರಿಂದ 27ರವರೆಗೆ ಕರ್ನಾಟಕ– ಹೈದರಾಬಾದ್‌ ನಡುವಣ ರಣಜಿ ಟ್ರೋಫಿ ಪಂದ್ಯ ಇಲ್ಲಿ ನಿಗದಿಯಾಗಿದೆ.

ಆರು ವರ್ಷಗಳ ನಂತರ ರಣಜಿ ಟ್ರೋಫಿ ಪಂದ್ಯ ಮತ್ತೆ ಈ ನಗರಕ್ಕೆ ಮರಳಿದೆ ಎನ್ನುವುದಕ್ಕಿಂತ ಮುಖ್ಯವಾಗಿ ಅದು ಕೆಎಸ್‌ಸಿಎ ಸ್ವಂತ ಕ್ರೀಡಾಂಗಣದಲ್ಲಿ ನಡೆಯುತ್ತಿದೆ ಎನ್ನುವುದೇ ವಲಯ ಸಮಿತಿಯ ಸಂಭ್ರಮಕ್ಕೆ ಕಾರಣವಾಗಿದೆ.

ಈ ಕ್ರೀಡಾಂಗಣದಿಂದ ಕೊಂಚ ದೂರದಲ್ಲಿರುವ ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ ಕರ್ನಾಟಕ– ಉತ್ತರ ಪ್ರದೇಶ ರಣಜಿ ಟ್ರೋಫಿ ಪಂದ್ಯ 2011ರ ಡಿಸೆಂಬರ್‌ನಲ್ಲಿ ನಡೆದಿತ್ತು. ಇದೂ ಸೇರಿ ಜಿಲ್ಲೆಯಲ್ಲಿ ಈ ಹಿಂದೆ ಐದು ಪಂದ್ಯಗಳು ನಡೆದಿವೆ. ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲೇ 2013ರ ಅಕ್ಟೋಬರ್‌ನಲ್ಲಿ ಭಾರತ ‘ಎ’– ವೆಸ್ಟ್‌ ಇಂಡೀಸ್‌ ‘ಎ’ ತಂಡಗಳ ನಡುವೆ ನಾಲ್ಕು ದಿನಗಳ ಟೆಸ್ಟ್‌ ಸರಣಿಯ ಎರಡನೇ ಪಂದ್ಯ ನಡೆದಿತ್ತು. ಈ ಪಂದ್ಯಗಳೆಲ್ಲವನ್ನು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದರು.

ಕೆಎಸ್‌ಸಿಎ ಕ್ರೀಡಾಂಗಣ ನಿರ್ಮಾಣವಾಗಿ ಎರಡು ವರ್ಷಗಳಷ್ಟೇ ಆಗಿವೆ. ಈ ಅಲ್ಪ ಅವಧಿಯಲ್ಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಜೂನಿಯರ್‌ ಟೂರ್ನಿಗಳು ಇಲ್ಲಿ ನಡೆದಿವೆ. ಅಂತರ ವಲಯ 16 ವರ್ಷದೊಳಗಿನವರ ಟೂರ್ನಿ, 19 ವರ್ಷದೊಳಗಿನವರ ಟೂರ್ನಿ, ಅಖಿಲ ಭಾರತ ಕೂಚ್‌ ಬೆಹಾರ್‌ ಟ್ರೋಫಿ ಪಂದ್ಯಗಳಲ್ಲಿ ಆಡಿದವರು, ತಂಡದ ತರಬೇತುದಾರರು ಇಲ್ಲಿರುವ ವ್ಯವಸ್ಥೆ ನೋಡಿ ಖುಷಿಪಟ್ಟಿದ್ದಾರೆ.

‘ಹೆಮ್ಮೆಯ ಕ್ಷಣ’

‘ರಣಜಿ ಟ್ರೋಫಿ ಪಂದ್ಯವನ್ನು ಸ್ವಂತ ಕ್ರೀಡಾಂಗಣದಲ್ಲಿ ನಡೆಸಲು ಕೊಟ್ಟಿರುವುದು ಅತ್ಯಂತ ಹೆಮ್ಮೆ ಮೂಡಿಸಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಈ ಕ್ರೀಡಾಂಗಣಕ್ಕೆ ಎಲ್ಲವನ್ನೂ ಕೊಟ್ಟಿದೆ. ಆತಿಥ್ಯ ವಹಿಸಲು ನಾವೂ ತುದಿಗಾಲಲ್ಲಿ ನಿಂತಿದ್ದೆವು’ ಎಂದು ಪ್ರತಿಕ್ರಿಯಿಸುತ್ತಾರೆ ಶಿವಮೊಗ್ಗ ವಲಯ ಕ್ರಿಕೆಟ್‌ ನಿಮಂತ್ರಕ ಡಿ.ಆರ್‌.ನಾಗರಾಜ್‌.

ಕೆಎಸ್‌ಸಿಎ ಇಲ್ಲಿ 25 ಎಕರೆ ಜಾಗ ಹೊಂದಿದೆ. ಪೆವಿಲಿಯನ್‌ನ ಹಿಂದೆ, ಮುಂದೆ ಎರಡು ಕ್ರೀಡಾಂಗಣಗಳಿವೆ. ಪ್ರಧಾನ ಕ್ರೀಡಾಂಗಣದಲ್ಲಿ ಏಳು ಪಿಚ್‌ಗಳಿದ್ದು, ಅವುಗಳನ್ನು ಹೊಸದಾಗಿ ರೂಪಿಸಲಾಗಿದೆ. ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಪಿಚ್‌ ಜೊತೆ ಅಂಗಣವನ್ನೂ (ಔಟ್‌ಫೀಲ್ಡ್‌) ಹಚ್ಚಹಸಿರಿನಿಂದ ಕಂಗೊಳಿಸುವಂತೆ ಮಾಡುವ ಕೆಲಸ ಪ್ರಗತಿಯಲ್ಲಿದೆ. ಈ ಹಿಂದಿನ ಪಿಚ್‌ಗಳನ್ನು ನಾಲ್ಕೈದು ವರ್ಷ ಹಿಂದೆ ರೂಪಿಸಲಾಗಿದ್ದು, ಸಾಕಷ್ಟು ಪಂದ್ಯಗಳು ನಡೆದಿದ್ದವು.

ಕ್ರೀಡಾಂಗಣದ ಎರಡೂ ಕಡೆ ಸೈಟ್‌ಸ್ಕ್ರೀನ್‌ (ತಲಾ 20X 20 ಅಡಿ) ಗಳನ್ನು ಸಿದ್ಧಪಡಿಸಲಾಗಿದೆ. ಇವುಗಳಿಗಾಗಿ ತಲಾ ₹ 12 ಲಕ್ಷ ವೆಚ್ಚ ಮಾಡಲಾಗಿದೆ. ಕ್ರೀಡಾಂಗಣದ ಸುತ್ತ ಆವರಣ ಬೇಲಿ (ಫೆನ್ಸಿಂಗ್‌) ನಿರ್ಮಾಣ ಕಾರ್ಯವೂ ಅಂತಿಮ ಹಂತದಲ್ಲಿದೆ.

‘ಎಲ್ಲೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ’ ಎಂದು ನಾಗರಾಜ್‌ ಸ್ಪಷ್ಟಪಡಿಸುತ್ತಾರೆ.

ಅತ್ಯಾಧುನಿಕ ಜಿಮ್‌

ಎರಡು ಕ್ರೀಡಾಂಗಣಗಳ ಮಧ್ಯೆಯಿರುವ ಪೆವಿಲಿಯನ್‌ ವಿಶಾಲವಾಗಿದ್ದು ಎಲ್ಲ ಸೌಲಭ್ಯಗಳಿಂದ ಕೂಡಿದೆ. ಬೆಂಗಳೂರು ಬಿಟ್ಟರೆ ರಾಜ್ಯದ ಬೇರೆಲ್ಲೂ ಇಷ್ಟೊಂದು ವಿಶಾಲವಾದ ಡ್ರೆಸಿಂಗ್‌ ಕೊಠಡಿ, ಮೀಟಿಂಗ್‌ ಹಾಲ್‌, ಜಿಮ್‌ ಹಾಲ್‌ಗಳಿರುವ ಪೆವಿಲಿಯನ್‌ ಇಲ್ಲ. ಮೊದಲ ಅಂತಸ್ತಿನ ಡಾರ್ಮಿಟರಿಗಳ ಮಧ್ಯದಲ್ಲಿರುವ ಹಾಲ್‌ನಲ್ಲಿ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಸದ್ಯದಲ್ಲೇ ಜಿಮ್‌ ನಿರ್ಮಾಣವಾಗಲಿದೆ.

(ಡಿ.ಆರ್‌.ನಾಗರಾಜ್‌)

80 ಅಡಿ ಅಗಲ, 170 ಅಡಿ ಉದ್ದ ವಿಸ್ತೀರ್ಣದ ಈ ಪೆವಿಲಿಯನ್‌ನಲ್ಲಿ ನಾಲ್ಕು ಡಾರ್ಮಿಟರಿಗಳಿವೆ. ಇದಕ್ಕೆ ಹೊಂದಿಕೊಂಡಂತೆ ಕೋಚ್‌, ಮ್ಯಾನೇಜರ್‌ಗಳಿಗೂ ಪ್ರತ್ಯೇಕ ಕೊಠಡಿಗಳಿವೆ. ಮ್ಯಾಚ್‌ ರೆಫರಿ, ಅಂಪೈರ್‌ಗಳಿಗೆ ಕೊಠಡಿ, ವೀಕ್ಷಕರ ವಿವರಣೆಗಾರರಿಗೆ, ವಿಡಿಯೊ ಅನಲಿಸ್ಟ್‌ಗೂ ಪ್ರತ್ಯೇಕ ಕೊಠಡಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಮುಂದೆ ಹೊನಲು ಬೆಳಕಿನ ವ್ಯವಸ್ಥೆ, ಅಕಾಡೆಮಿ ಆಟಗಾರರಿಗೆ ಮಳೆಗಾಲದಲ್ಲೂ ಅಭ್ಯಾಸ ಸಾಧ್ಯವಾಗುವಂತೆ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಯೋಜನೆ ಇದೆ ಎನ್ನುತ್ತಾರೆ ನಾಗರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT