ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿ ಫುಟ್‌ಬಾಲ್‌ನ ಮಹಾ ಜಗತ್ತು

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವೇಗ, ತಾಂತ್ರಿಕ ಪರಿಣತಿ ಮತ್ತು ಕೌಶಲದ ಮೂಲಕ ಫುಟ್‌ಬಾಲ್ ಪ್ರಿಯರನ್ನು ರೋಮಾಂಚನದ ಶಿಖರಕ್ಕೇರಿಸಿದ ಪ್ರೀಮಿಯರ್‌ ಫುಟ್‌ಸಾಲ್‌ ಟೂರ್ನಿ ಕೊನೆಯ ಘಟ್ಟಕ್ಕೆ ತಲುಪಿದೆ.

ಎರಡನೇ ಆವೃತ್ತಿಯ ಟೂರ್ನಿಯ ದೆಹಲಿ, ಮುಂಬೈ ಮತ್ತು ಬೆಂಗಳೂರು ಹಂತದ ಪಂದ್ಯಗಳು ಮುಗಿದಿದ್ದು ಅಕ್ಟೋಬರ್‌ ಒಂದರಂದು ದುಬೈನಲ್ಲಿ ನಡೆಯಲಿರುವ ಫೈನಲ್‌ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ.

ಖ್ಯಾತ ಫುಟ್‌ಬಾಲ್ ಆಟಗಾರರಾದ ಲೂಯಿಸ್ ಫೆಗೊ ಮತ್ತು ಅಲೆಕ್ಸಾಂಡ್ರೊ ರೋಸಾ ಅವರ ಕನಸಿನ ಕೂಸಾದ ಫುಟ್‌ಸಾಲ್‌ ಲೀಗ್‌ ವಿದೇಶದಲ್ಲಿ ಹಲವು ವರ್ಷಗಳಿಂದ ಹೆಸರು ಮಾಡಿದೆ. ಭಾರತದಲ್ಲಿ ಆರಂಭಗೊಂಡದ್ದು ಒಂದು ವರ್ಷದ ಹಿಂದೆ. ಕಳೆದ ವರ್ಷ ಆರು ತಂಡಗಳ ಟೂರ್ನಿ ಗೋವಾ ಮತ್ತು ಚೆನ್ನೈನ ಫುಟ್‌ಬಾಲ್‌ ಪ್ರಿಯರಲ್ಲಿ ಸಂಚಲನ ಮೂಡಿಸಿತ್ತು. ಎರಡನೇ ವರ್ಷದ ಟೂರ್ನಿಗೆ ಆತಿಥ್ಯ ವಹಿಸಿದ ನಗರಗಳಲ್ಲಿ ಬೆಂಗಳೂರು ಕೂಡ ಇತ್ತು. ಸೆಮಿಫೈನಲ್ ಪಂದ್ಯಗಳು ಕೂಡ ಬೆಂಗಳೂರಿನಲ್ಲೇ ನಡೆದಿವೆ.

ಕಳೆದ ವರ್ಷ ಕೇರಳ ಕೋಬ್ರಾಸ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿ ಮುಂಬೈ ವಾರಿಯರ್ಸ್‌ ಪ್ರಶಸ್ತಿ ಎತ್ತಿ ಹಿಡಿದಿತ್ತು. ಈ ವರ್ಷದ ಚಾಂಪಿಯನ್‌ ಪಟ್ಟ ಅಲಂಕರಿಸಿ ಕೊಲ್ಲಿ ರಾಷ್ಟ್ರದಿಂದ ಮರಳುವ ತಂಡ ಯಾವುದು ಎಂಬ ಪ್ರಶ್ನೆಯ ಉತ್ತರಕ್ಕೆ ಇನ್ನು ಒಂದು ವಾರ ಕಾಯಬೇಕು.

ಪ್ರೀಮಿಯರ್ ಫುಟ್‌ಸಾಲ್‌ ಎಂದರೇನು?

ಪ್ರೀಮಿಯರ್ ಫುಟ್‌ಸಾಲ್‌ ಐದು ಮಂದಿ ಆಡುವ ಫುಟ್‌ಬಾಲ್‌. ಪ್ರತಿ ತಂಡದಲ್ಲಿ ತಲಾ ಐದು ಮಂದಿ ಮಾತ್ರ ಇರುತ್ತಾರೆ. ಒಟ್ಟು 40 ನಿಮಿಷ ನಡೆಯುವ ಪಂದ್ಯವನ್ನು ನಾಲ್ಕು ಕ್ವಾರ್ಟರ್‌ಗಳಾಗಿ ವಿಂಗಡಿಸಲಾಗುತ್ತದೆ. ಬೆಂಗಳೂರು ರಾಯಲ್ಸ್‌, ಚೆನ್ನೈ ಸಿಂಗಮ್ಸ್‌, ಕೇರಳ ಕೋಬ್ರಾಸ್‌, ದೆಲ್ಲಿ ಡ್ರ್ಯಾಗನ್ಸ್‌, ಮುಂಬೈ ವಾರಿಯರ್ಸ್‌ ಮತ್ತು ತೆಲುಗು ಟೈಗರ್ಸ್‌ ತಂಡಗಳು ಆಡುತ್ತಿವೆ.

ಆಟ ಫುಟ್‌ಬಾಲ್‌ನಂತೆಯೇ ನಡೆಯುತ್ತದೆ. ಆದರೆ ನಿಯಮಗಳಲ್ಲಿ ಕೆಲವು ಬದಲಾವಣೆಗಳು ಇವೆ. ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತವೆ. ಸಾಮಾನ್ಯ ಫುಟ್‌ಬಾಲ್‌ಗೆ ಬಳಸುವುದಕ್ಕಿಂತ ಸಣ್ಣ ಅಂಗಣವನ್ನು ಇದಕ್ಕಾಗಿ ಸಜ್ಜುಗೊಳಿಸಲಾಗುತ್ತದೆ. ಆಫ್‌ಸೈಡ್ ನಿಯಮ ಈ ಆಟಕ್ಕೆ ಅನ್ವಯವಾಗುವುದಿಲ್ಲ. ಚೆಂಡು ಹೊರಗೆ ಹೋದ ನಂತರ ಮಾಡುವ ಥ್ರೋ. ಪೆನಾಲ್ಟಿ ಕಿಕ್‌ ಮತ್ತು ಗೋಲ್‌ ಕೀಪರ್‌ ತನ್ನ ಬಳಿಯಿಂದ ಚೆಂಡನ್ನು ವಾಪಸ್ ಕಳುಹಿಸಲು ಕೇವಲ ಐದು ಸೆಕೆಂಡು ಮಾತ್ರ ಸಮಯಾವಕಾಶ ಇರುತ್ತದೆ. ಮೊದಲ ಐದು ತಪ್ಪುಗಳ (ಫೌಲ್‌) ನಂತರ ಪ್ರತಿ ಫೌಲ್‌ ಕೂಡ ಪೆನಾಲ್ಟಿ ಆಗಿ ಪರಿವರ್ತನೆಯಾಗುತ್ತದೆ.

ವಿದೇಶಿ ಆಟಗಾರರ ಮಿಂಚು

ಫುಟ್‌ಸಾಲ್ ಹೆಚ್ಚು ಜನಪ್ರಿಯವಾಗಲು ಪ್ರಮುಖ ಕಾರಣ ವಿದೇಶಿ ಆಟಗಾರರು. ಫುಟ್‌ಬಾಲ್ ಕ್ಷೇತ್ರದ ಖ್ಯಾತನಾಮರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲ ತಂಡಗಳಲ್ಲೂ ಆಡುವ ಬಹುತೇಕರು ವಿದೇಶಿ ಆಟಗಾರರು.

ಪಾಲ್‌ ಶೋಲ್ಸ್‌, ಜೊನಾಥನ್‌, ಪೀಟರ್ಸನ್‌ ಮೆಡೀರೋಸ್‌, ರಾಡೂಸಿಯೊ ಕಿಂಗ್‌ ಮುಂತಾದ ಏಳಕ್ಕೂ ಹೆಚ್ಚು ಆಟಗಾರರು ಬೆಂಗಳೂರು ತಂಡದಲ್ಲಿದ್ದರೆ. ಅರ್ಜೆಂಟೀನಾದ ಹೆರ್ನನ್ ಕ್ರೆಸ್ಬೊ, ಕಾರ್ಲೊಸ್‌ ಹಸಿಬೀಸ್‌, ಫ್ರೆಡ್ಸನ್ ಮಾರ್ಷಲ್‌ ಸೇರಿದಂತೆ ಆರಕ್ಕೂ ಹೆಚ್ಚು ಮಂದಿ ಚೆನ್ನೈ ತಂಡದಲ್ಲಿದ್ದಾರೆ. ಕೇರಳ ಕೋಬ್ರಾಸ್‌ಗೆ ಬಲ ತುಂಬಲು ಬಂದವರಲ್ಲಿ ಸ್ಪೇನ್‌ನ ಮೈಕೆಲ್ ಸಲ್ಗಾಡೊ, ಡ್ಯಾನಿಯೆಲ್‌ ಕ್ಯಾಬೆಜೋನ್‌ ಮತ್ತಿತರರು ಇದ್ದಾರೆ. ಬ್ರೆಜಿಲ್‌ನ ರೊನಾಲ್ಡಿನೊ, ಡೀಗೊ ಕೋಸ್ಟಾ, ನಿಕೊಲಾಸ್‌ ರೋಲಾನ್‌ ಮತ್ತಿತರರು ದೆಲ್ಲಿ ಡ್ರ್ಯಾಗನ್ಸ್ ತಂಡದಲ್ಲಿದ್ದಾರೆ. ಬ್ರೆಜಿಲ್‌ನ ಡೀಕೊ, ವೇಲ್ಸ್‌ನ ರಿಯಾನ್ ಗಿಬ್ಸ್ ಮುಂತಾದವರು ತೆಲುಗು ಟೈಗರ್ಸ್‌ ಮತ್ತು ಮುಂಬೈ ವಾರಿಯರ್ಸ್‌ನ ಪ್ರಮುಖ ವಿದೇಶಿ ಆಟಗಾರರು.

ಕಳೆದ ಬಾರಿಯೂ ಈ ಆಟಗಾರರು ಫುಟ್‌ಸಾಲ್ ಅಂಗಳವನ್ನು ರಂಗೇರಿಸಿದ್ದರು. ಪ್ರಮುಖ ವೈಯಕ್ತಿಕ ಪ್ರಶಸ್ತಿಗಳನ್ನೂ ಬಗಲಿಗೆ ಹಾಕಿಕೊಂಡು ತೆರಳಿದ್ದರು. ಮುಂಬೈ ಪರವಾಗಿ ಆಡಿದ್ದ ಕೊಲಂಬಿಯಾದ ಆ್ಯಂಜೆಲೊಟ್ ಕಾರೊ, ಕೇರಳ ತಂಡದಲ್ಲಿದ್ದ ಬ್ರೆಜಿಲ್‌ನ ಚಗಿಞಾ ಹಾಗೂ ಡೀವ್ಸ್ ಮೊರೇಸ್ ತಲಾ ಎಂಟು ಗೋಲು ಗಳಿಸಿ ಬೆಳಗಿದ್ದರು. ರೊನಾಲ್ಡಿನೊ ಗೋವಾ ಪರವಾಗಿ ಅಡ್ರಿಯಾನೊ ಮತ್ತು ಆ್ಯಂಜೆಲೆಟೊ ಕಾರೊ ಮುಂಬೈ ಪರವಾಗಿ ಹ್ಯಾಟ್ರಿಕ್‌ ಗೋಲಿನೊಂದಿಗೆ ಮುದಗೊಳಿಸಿದ್ದರು.

40 ದಾಟಿದವರು ಮತ್ತು 40ರ ಆಸುಪಾಸಿನಲ್ಲಿರುವವರು ತಮ್ಮ ಹಳೆಯ ಕೌಶಲಗಳನ್ನು ಅಂಗಳದಲ್ಲಿ ಪ್ರದರ್ಶಿಸುವಾಗ ಯುವಕರು ಕೂಡ ನಾಚುತ್ತಾರೆ. ದೇಶಿ ಯುವ ಆಟಗಾರರಿಗೆ ಇವರು ಪ್ರೇರಣೆಯಾಗುತ್ತಿದ್ದಾರೆ. ಟೂರ್ನಿಯ ಬಗ್ಗೆ ವಿರಾಟ್ ಕೊಹ್ಲಿ ಮತ್ತು ಲೂಯಿಸ್ ಫಿಗೊ ಹೇಳಿದಂತೆ ಇದು ಬರೀ ಆಟವಲ್ಲ; ಮೋಜಿನ ಕೂಟವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT