ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಥುನ್‌ ಫಿಟ್‌ನೆಸ್‌ಗೆ ‘ಯೋಗ’ ಬಲ

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಎರಡು ವರ್ಷಗಳ ಹಿಂದೆ ಕರ್ನಾಟಕ ತಂಡ ದೇಶಿ ಕ್ರಿಕೆಟ್‌ನಲ್ಲಿ ತೋರಿದ್ದ ಸಾಮರ್ಥ್ಯ, ಮಾಡಿದ್ದ ಸಾಧನೆಗಳು ದೇಶದೆಲ್ಲೆಡೆ ಸುದ್ದಿಯಾಗಿತ್ತು. ಆಗ ಟ್ರೋಫಿ ಗೆಲ್ಲುವುದಕ್ಕಿಂತ ಹೆಚ್ಚಾಗಿ ಕರ್ನಾಟಕ ತಂಡವನ್ನು ಸೋಲಿಸುವುದೇ ಇತರ ತಂಡಗಳ ಗುರಿಯಾಗಿರುತ್ತಿತ್ತು. ರಣಜಿ, ಇರಾನಿ ಮತ್ತು ವಿಜಯ್‌ ಹಜಾರೆ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರಿಂದ ರಾಜ್ಯದ ಕ್ರಿಕೆಟ್‌ನಲ್ಲಿ ಅವು ಸುವರ್ಣ ದಿನಗಳಾಗಿದ್ದವು.

ಕಾಲ ಯಾವತ್ತೂ ಒಂದೇ ಇರುವುದಿಲ್ಲವಲ್ಲವೇ? ಸತತ ಆರು ಟ್ರೋಫಿ ಗೆದ್ದ ಖುಷಿಯಲ್ಲಿದ್ದ ಕರ್ನಾಟಕ ತಂಡಕ್ಕೆ 2015–16ರ ರಣಜಿ ಟೂರ್ನಿಯಲ್ಲಿ ಮುಖಭಂಗವಾಗಿತ್ತು. ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಸೋತು ಲೀಗ್‌ ಹಂತದಿಂದಲೇ ಚಾಂಪಿಯನ್ನರು ಹೊರಬಿದ್ದಿದ್ದರು. ಈ ಸೋಲು ರಾಜ್ಯದ ಆಟಗಾರರು ಮತ್ತು ಕೋಚ್‌ಗಳಲ್ಲಿ ಭಾರಿ ಆಘಾತ ಮೂಡಿಸಿತ್ತು. ಅಂದು ಪುಣೆಯ ಕ್ರೀಡಾಂಗಣದಿಂದ ಹೊರಬಂದ ಬಳಿಕ ಯಾರೂ, ಯಾರ ಬಳಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆಟಗಾರರಲ್ಲಿ ನೋವು, ಬೇಸರ ತುಂಬಿಕೊಂಡಿತ್ತು. ಹೋದ ವರ್ಷದ ರಣಜಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಹೀನಾಯವಾಗಿ ಸೋತಾಗಲೂ ತಂಡದಲ್ಲಿ ಇದೇ ರೀತಿಯ ವಾತಾವರಣವಿತ್ತು.

ಹೀಗೆ ಹಲವು ಏಳುಬೀಳುಗಳನ್ನು ಕಂಡಿರುವ ಕರ್ನಾಟಕ ತಂಡಕ್ಕೆ ರಾಜ್ಯದ ಅನೇಕ ಬೌಲರ್‌ಗಳು ಕೊಡುಗೆ ನೀಡಿದ್ದಾರೆ. ಅದರಲ್ಲಿ ಮಿಥುನ್‌ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. 2013–14ರಲ್ಲಿ ರಾಜ್ಯ ತಂಡ ರಣಜಿ ಟ್ರೋಫಿ ಜಯಿಸಿದಾಗ ಮಿಥುನ್ 10 ಪಂದ್ಯಗಳಿಂದ 41 ವಿಕೆಟ್‌ ಉರುಳಿಸಿ ಹೆಚ್ಚು ವಿಕೆಟ್‌ ಪಡೆದ ರಾಜ್ಯದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು.

ಹಿಂದಿನ ಎರಡು ವರ್ಷಗಳಲ್ಲಿ ರಾಜ್ಯ ತಂಡ ನೀರಸ ಪ್ರದರ್ಶನ ನೀಡಿದ್ದಾಗ ಹಲವಾರು ಆಟಗಾರರು ಟೀಕೆಗೆ ಗುರಿಯಾದರು. ಅದರಲ್ಲಿ ಮಿಥುನ್‌ ಕೂಡ ಒಬ್ಬರು. ‘ಗಾಯದ ಸಮಸ್ಯೆಯಿದ್ದರೂ ಅದನ್ನು ಮುಚ್ಚಿಟ್ಟು ಆಡಿದ್ದು ಸರಿಯೇ’ ಎಂದು ಆಗ ತಂಡದ ಮುಖ್ಯ ಕೋಚ್‌ ಆಗಿದ್ದ ಅರುಣ್‌ ಕುಮಾರ್‌ ಮಾಧ್ಯಮಗಳ ಎದುರು ಪ್ರಶ್ನಿಸಿದ್ದರು.

‘ಗಾಯ ಯಾವ ಸಂದರ್ಭದಲ್ಲಿ ಆಗುತ್ತದೆ ಎನ್ನುವುದು ಹೇಗೆ ಗೊತ್ತಾಗುತ್ತದೆ’ ಎಂದು ಮಿಥುನ್‌ ಮರುಪ್ರಶ್ನೆ ಹಾಕಿದ್ದರು. ಹೀಗೆ ಟೀಕೆ, ಪ್ರತಿ ಟೀಕೆಗಳಿಂದ ಹೋದ ವರ್ಷ ವಿವಾದ ಉಂಟಾಗಿತ್ತು. ಆದರೂ ಗಾಯದ ಸಮಸ್ಯೆಯನ್ನು ಮಿಥುನ್ ಲಘುವಾಗಿ ಪರಿಗಣಿಸಲಿಲ್ಲ. ಫಿಟ್ ಆಗಿ ಟೂರ್ನಿಯ ಎಲ್ಲಾ ಪಂದ್ಯ ಆಡುವಂತಾಗಲು ಜಿಮ್‌ನಲ್ಲಿ ಹೆಚ್ಚು ಹೊತ್ತು ಕಳೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ನಿತ್ಯ ಯೋಗ ಮಾಡುತ್ತಿದ್ದಾರೆ.

ಇದರಿಂದ ದೇಹ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

* ರಣಜಿ ಟೂರ್ನಿಗೆ ಕೆಪಿಎಲ್‌ ಹೇಗೆ ಅನುಕೂಲ?

ಟ್ವೆಂಟಿ–20 ಮಾದರಿಯ ಪಂದ್ಯ ಯಾವಾಗಲೂ ಒತ್ತಡದಿಂದ ಕೂಡಿರುತ್ತದೆ. ಒತ್ತಡದ ನಡುವೆ ಚೆನ್ನಾಗಿ ಆಡಬೇಕಾದ ಸವಾಲು ಇರುತ್ತದೆ. ಇಲ್ಲಿ ಒತ್ತಡ ಎದುರಿಸಿದರೆ ಮುಂದಿನ ತಿಂಗಳು ಆರಂಭವಾಗುವ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಅಭ್ಯಾಸಕ್ಕೆ ಕೆಪಿಎಲ್‌ ಉತ್ತಮ ವೇದಿಕೆ.

* ಮುಂಬರುವ ಟೂರ್ನಿಗೆ ಹೇಗೆ ಸಜ್ಜಾಗುತ್ತಿದ್ದೀರಿ?
ಮೊದಲೆಲ್ಲಾ ರಣಜಿ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಆಡುತ್ತಿದ್ದೆ. ಆದರೆ ಹಿಂದಿನ ಎರಡು ವರ್ಷ ಪದೇ ಪದೇ ಗಾಯದ ಸಮಸ್ಯೆ ಕಾಡಿತು. ಅಷ್ಟೊಂದು ಚೆನ್ನಾಗಿ ಬೌಲಿಂಗ್ ಮಾಡಲು ಕೂಡ ಸಾಧ್ಯವಾಗಿಲ್ಲ. ಆದ್ದರಿಂದ ಈ ಬಾರಿಯ ಟೂರ್ನಿಯಲ್ಲಿ ಎಲ್ಲಾ ಪಂದ್ಯಗಳಲ್ಲಿ ಆಡಬೇಕು ಎನ್ನುವ ಗುರಿ ಇಟ್ಟುಕೊಂಡು ಅಭ್ಯಾಸ ಮಾಡುತ್ತಿದ್ದೇನೆ.

* ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಏನು ಮಾಡುತ್ತಿದ್ದೀರಿ?
ಪ್ರತಿದಿನ ಜಿಮ್‌ನಲ್ಲಿ ದೈಹಿಕ ಕಸರತ್ತು ಮಾಡುತ್ತೇನೆ. ಇದಕ್ಕಿಂತ ಹೆಚ್ಚಾಗಿ ಯೋಗಕ್ಕೆ ಒತ್ತು ಕೊಡುತ್ತಿದ್ದೇನೆ. ಬೆಂಗಳೂರಿನ ಸಹಕಾರ ನಗರದಲ್ಲಿ ನಿತ್ಯ ಯೋಗ ಮಾಡುತ್ತಿದ್ದೇನೆ. ಇದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಬದಲಾವಣೆಯಾಗಿದೆ.

* ಏನು ಬದಲಾವಣೆಯಾಗಿದೆ?
ಗಾಯದ ಸಮಸ್ಯೆಯಿಂದ ವೇಗವಾಗಿ ಚೇತರಿಸಿಕೊಳ್ಳಲು ಆಗುತ್ತಿದೆ. ಸುಲಭವಾಗಿ ದೇಹ ಸ್ಪಂದಿಸುತ್ತಿದೆ. ಇದರಿಂದ ಕೆಪಿಎಲ್‌ನಲ್ಲಿ ಚೆನ್ನಾಗಿ ಬೌಲಿಂಗ್‌ ಮಾಡಲು ಸಾಧ್ಯವಾಗಿದೆ. ಇದೇ ರೀತಿಯ ಬೌಲಿಂಗ್‌ ರಣಜಿಯಲ್ಲಿಯೂ ಮುಂದುವರಿಸುತ್ತೇನೆ.

* ರಣಜಿ ಟೂರ್ನಿಯಲ್ಲಿ ಲೀಗ್‌ ಹಂತದ ಪಂದ್ಯಗಳು ಕಡಿಮೆಯಾಗಿವೆಯಲ್ಲಾ?
ಮೊದಲಿನ ಹಾಗೆ ಎಂಟು ಪಂದ್ಯಗಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಈಗ ಲೀಗ್‌ನಲ್ಲಿ ಆರು ಪಂದ್ಯಗಳನ್ನಷ್ಟೇ ಆಡಬೇಕು. ಮೊದಲಾಗಿದ್ದರೆ ಕೊನೆಯ ನಾಲ್ಕು ಪಂದ್ಯಗಳಿಗೆ ಒತ್ತು ಕೊಡುತ್ತಿದ್ದೆವು. ಆದರೆ ಈಗ ಮೊದಲ ಪಂದ್ಯದಿಂದಲೇ ನಾಕೌಟ್‌ ಗುರಿ ಇಟ್ಟುಕೊಂಡು ಕಣಕ್ಕಿಳಿಯಬೇಕು.

* ವೇಗದ ಬೌಲರ್‌ಗಳಿಗೆ ಕೆಪಿಎಲ್‌ ಹೇಗೆ ಅನುಕೂಲ?
ನಗರ ಮತ್ತು ಗ್ರಾಮೀಣ ಪ್ರದೇಶದಿಂದ ಬಂದ ಆಟಗಾರರಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಉತ್ತಮ ವೇದಿಕೆ ಸಿಕ್ಕಿದೆ. ಕೆಪಿಎಲ್‌ ಆರಂಭವಾದ ಬಳಿಕ ಹೊಸ ಆಟಗಾರರನ್ನು ಹೆಚ್ಚು ಜನ ಗುರುತಿಸುತ್ತಿದ್ದಾರೆ. ಆದರೆ ಕಿರಿಯರ ಆಟ ಚುಟುಕು ಕ್ರಿಕೆಟ್‌ಗೆ ಸೀಮಿತವಾಗಬಾರದು. ಏಕೆಂದರೆ ಟ್ವೆಂಟಿ–20 ಮಾದರಿಯಲ್ಲಿ ನಾಲ್ಕು ಓವರ್‌ ಬೌಲಿಂಗ್ ಯಾರು ಬೇಕಾದರೂ ಮಾಡಬಹುದು.

ಆದರೆ ರಣಜಿ, ಟೆಸ್ಟ್‌ ಕ್ರಿಕೆಟ್‌ನಲ್ಲಿ ದೀರ್ಘ ಅವಧಿಯವರೆಗೆ ಬೌಲ್‌ ಮಾಡಲು ಉತ್ತಮ ದೈಹಿಕ ಸಾಮರ್ಥ್ಯ, ನಿತ್ಯ 20ರಿಂದ 30 ಓವರ್‌ ಬೌಲ್‌ ಮಾಡುವ ಶಕ್ತಿ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT