ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

...ಹಾಗಾದರೆ ‘ನಾವು’ ಯಾರು?

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಈಗ ನಡೆಯುತ್ತಿರುವ ಲಿಂಗಾಯತ ಅಥವಾ ಲಿಂಗಾಯತ-ವೀರಶೈವ ಸಮೂಹದ ಪ್ರತ್ಯೇಕ ಬೇಡಿಕೆಗೆ ಎರಡು ಸ್ತರಗಳಿವೆ. ಒಂದು ಅವರ ಒಳಗಿನದ್ದು. ಬರೀ ಲಿಂಗಾಯತವೋ ಅಥವಾ ವೀರಶೈವಕ್ಕೂ ಜಾಗ ಇರಬೇಕೋ ಎನ್ನುವುದು. ಇನ್ನೊಂದು ಹೊರಗಿನದ್ದು. ವೈದಿಕ ಹಿಂದೂ ಧರ್ಮದ ವಿರೋಧಿಗಳಾಗಿರುವುದರಿಂದ ನಾವು ಹಿಂದೂಗಳಲ್ಲ ಎನ್ನುವುದು. ಈ ನಿಲುವಿಗೆ ನೀಡುವ ಸಮರ್ಥನೆಗಳೆಂದರೆ: ನಾವು ಬಸವಾದಿ ವಚನಕಾರರ ಅನುಯಾಯಿಗಳು. ನಮ್ಮಲ್ಲಿ ಜಾತಿ ವ್ಯವಸ್ಥೆ ಇಲ್ಲ; ನಾವು ಯಜ್ಞ ಯಾಗಾದಿಗಳನ್ನು ವಿರೋಧಿಸುತ್ತೇವೆ, ಲಿಂಗ ತಾರತಮ್ಯವನ್ನು ಒಪ್ಪುವುದಿಲ್ಲ, ವೇದ ಉಪನಿಷತ್ತುಗಳನ್ನು ಪ್ರಮಾಣಗಳೆಂದು ಸ್ವೀಕರಿಸುವುದಿಲ್ಲ, ಮಡಿ-ಮೈಲಿಗೆಯೆಂಬುದು ಸುಳ್ಳು. ದೇಹವೇ ದೇವಾಲಯವೆಂಬುದು ನಮ್ಮ ನಿಲುವು, ಕಸುಬಿನ ಕಾರಣದಿಂದ ಉಂಟಾಗುವ ತಾರತಮ್ಯವನ್ನು ತಿರಸ್ಕರಿಸುತ್ತೇವೆ, ನಮ್ಮದು ಶಿವ ಸಂಸ್ಕೃತಿ ಇತ್ಯಾದಿ.

ಈ ನಿಲುವುಗಳನ್ನು ಪ್ರತಿಪಾದಿಸುವುಕ್ಕಾಗಿ ಕಟ್ಟಿದ ಚಳವಳಿ ಮತ್ತು ಅದನ್ನು ಬದುಕಾಗಿಸಿಕೊಂಡ ಸಮಾಜವೊಂದು ಈ ನೆಲದಲ್ಲಿ ಇತ್ತು, ಇದೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಈ ಚಳವಳಿಯನ್ನು ಬಸವಾದಿಗಳು ಕಟ್ಟಿದರು. ಈ ಬಸವಾದಿಗಳು ಯಾರು? ಅಲ್ಲಿದ್ದ ನಿಜಶರಣರ ಪಟ್ಟಿಯನ್ನು ಅನೇಕ ಆಕರಗಳೂ ಮತ್ತು ನೇರವಾಗಿ ವಚನಗಳೂ ತಿಳಿಸುತ್ತವೆ. ಅಂಬಿಗರ ಚೌಡಯ್ಯ, ಮಾದಿಗರ ಚನ್ನಯ್ಯ, ಹೊಲೇರ ಹೊನ್ನಪ್ಪ, ಹೆಂಡದ ಮಾರಿತಂದೆ, ಒಕ್ಕಲಿಗರ ಮುದ್ದಣ್ಣ, ಮಾದಿಗರ ಧೂಳಯ್ಯ, ಹಡಪದ ಅಪ್ಪಣ್ಣ, ಹಗ್ಗ ನುಲಿಯೋ ಚಂದಯ್ಯ, ಕುರುಬರ ಬೀರಪ್ಪ, ಮಡಿವಾಳ ಮಾಚಯ್ಯ, ಕುಂಬಾರ ಗುಂಡಯ್ಯ, ಜೇಡರ ದಾಸಿಮಯ್ಯ, ಬಹುರೂಪಿ ಚೌಡಯ್ಯ, ಗಾಳದ ಕಣ್ಣಪ್ಪ, ನಗೆಯ ಮಾರಿತಂದೆ, ಡೋಹರ ಕಕ್ಕಯ್ಯ, ತಳವಾರ್ರ ಕಾಮಿದೇವಯ್ಯ, ತುರುಗಾಹಿ ರಾಮಣ್ಣ, ಸೂಳೆ ಸಂಕವ್ವೆ, ಕನ್ನಡಿ ಕಾಯಕದ ರೇವಮ್ಮ- ಮುಂತಾದವರು.

ಥೇಟ್ ಮತದಾರರ ಪಟ್ಟಿಯಂತಿರುವ ಈ ಹೆಸರುಗಳನ್ನು ಗಮನಿಸಿ. ಇದರಲ್ಲಿ ಪಾಲ್ಗೊಂಡ ಜಾತಿಗಳು ಯಾವುವು, ಇವೆಲ್ಲ ಒಂದಾಗಿದ್ದು ಯಾಕೆ, ಇವರನ್ನೆಲ್ಲ ಒಂದೇ ಚಳವಳಿಯ ವೇದಿಕೆಗೆ ನೂಕಿದ ಒತ್ತಡಗಳು ಯಾವುವು, ಇವರೆಲ್ಲ ಸಮಾನವಾಗಿ ಅನುಭವಿಸಿದ ಅವಮಾನಗಳು ಎಲ್ಲಿಂದ ಹುಟ್ಟಿಬರುತ್ತಿವೆ, ಇವರ ಪ್ರತಿಭಟನೆ ಯಾವುದರ ವಿರುದ್ಧ ಮುಂತಾದ ಪ್ರಶ್ನೆಗಳು ಕೇವಲ ಲಿಂಗಾಯತರ ಸಮಸ್ಯೆಗಳಾಗಿ ಯಾವತ್ತೂ ಇರಲಿಲ್ಲ. ಇವು ಇಡಿಯಾಗಿ ಶೂದ್ರ ಸಮೂಹಗಳ ಸಮಸ್ಯೆ ಎನ್ನುವುದರಲ್ಲಿ ಅನುಮಾನವಿಲ್ಲ.

ಮೊದಲಿಗೆ ಈ ಅಪಮಾನ ಹುಟ್ಟಿ ಬಂದದ್ದು ಮತ್ತು ಬರುತ್ತಿರುವುದು ‘ವೈದಿಕ ಹಿಂದೂ’ ಮೂಲದಿಂದ ಎನ್ನುವುದು ನಿಸ್ಸಂಶಯವಾದುದು. ಇದರಿಂದ ಹಿಂದೂ ಎನ್ನುವುದು ಒಂದೇ ವಿಚಾರ– ಆಚರಣೆಯ ಧಾರೆಯಲ್ಲ ಎನ್ನುವುದು ಖಾತ್ರಿಯಾಗುತ್ತದೆ. ಅದರಲ್ಲಿ ನೂರಾರು ಜೀವನಕ್ರಮಗಳಿವೆ. ಆದರೆ ವೈದಿಕ ಹಿಂದೂ ಧರ್ಮವೇ ಹಿಂದೂ ಧರ್ಮವೆಂಬ ಹೇರಿಕೆ ಮತ್ತು ಅದನ್ನು ಪ್ರತಿಭಟಿಸುವುದೂ ನಡೆದೇ ಇದೆ. ನಾನಾ ರೀತಿಯ ತಂತ್ರಗಾರಿಕೆ, ಅಧಿಕಾರ ಕೇಂದ್ರಗಳೊಡನೆ ಅಪವಿತ್ರ ಮೈತ್ರಿ, ಅಕ್ಷರ ವಂಚನೆ, ಜಾತಿಗಳ ಶ್ರೇಣೀಕರಣ, ರಾಷ್ಟ್ರೀಯತೆಯ ಜೊತೆಗಿನ ಸಮೀಕರಣ ಮುಂತಾದ ಸಾಂಸ್ಕೃತಿಕ ರಾಜಕಾರಣದ ಮೂಲಕ ಇಂತಹ ಹೇರಿಕೆ ಸಾಧ್ಯವಾಗಿದೆ.

ವೈದಿಕ ಹಿಂದೂ ಆಕರವನ್ನು ಈಗ ‘ಹಿಂದೂ’ ಎಂಬ ಪ್ರಶ್ನಾತೀತ ಸಿಂಹಾಸನದ ಪಟ್ಟಕ್ಕೇರಿಸಲಾಗಿದೆ. ಇಲ್ಲಿರುವ ತಾರತಮ್ಯಗಳಿಗೆ ಒಪ್ಪಿಗೆಯನ್ನು ಸಾಂಸ್ಕೃತಿಕ ರಾಜಕಾರಣದ ಮೂಲಕ ಉತ್ಪಾದಿಸಿಕೊಳ್ಳಲಾಗಿದೆ. ಇದು ಅನೇಕ ಸ್ತರಗಳಲ್ಲಿ ನಿರ್ವಹಣೆಗೆ ಒಳಗಾದ ಸಾಂಸ್ಕೃತಿಕ ರಾಜಕಾರಣ. ಅದರಲ್ಲಿ ಒಂದು ಸ್ತರವೆಂದರೆ ಶೂದ್ರಸ್ತರಗಳ ಸಾಂಸ್ಕೃತಿಕ– ಧಾರ್ಮಿಕ ಚಹರೆಗಳನ್ನು ನಾಶಪಡಿಸುವುದು, ಅಪಮಾನಿಸುವುದು, ಸಂಶಯಕ್ಕೀಡುಮಾಡುವುದು ಅಥವಾ ಅಪಹರಿಸುವ ಮೂಲಕ ಈ ಸಮೂಹಗಳನ್ನು ಸಾಂಸ್ಕೃತಿಕವಾಗಿ ದುರ್ಬಲಗೊಳಿಸುತ್ತಿರುವುದು. ಈ ಸಮೂಹಗಳ ಸಾಮಾನ್ಯ ಚಹರೆಗಳೆಂದರೆ, ಶಿವಸಂಸ್ಕೃತಿ, ಮಾತೃಸಂಸ್ಕೃತಿ, ಜಲಸಂಸ್ಕೃತಿ, ಚಾಂದ್ರ ಸಂಸ್ಕೃತಿ, ಮತ್ತು ನಾಗಸಂಸ್ಕೃತಿಗಳು. ಇವರ ಧಾರ್ಮಿಕ ಆಚರಣಾ ಜಗತ್ತು ಈ ಸಂಸ್ಕೃತಿಗಳನ್ನು ಆಧರಿಸಿರುತ್ತದೆ. ಈ ಸಾಂಸ್ಕೃತಿಕ ಅಸ್ಮಿತೆಯನ್ನು ಅಪಮಾನಿಸಿದರೆ, ಅತಂತ್ರಗೊಳಿಸಿದರೆ ಸಹಜವಾಗಿ ಆ ಸಮೂಹಗಳು ದುರ್ಬಲವಾಗುತ್ತವೆ. ಈ ಸಂಸ್ಕೃತಿಗಳ ಮೇಲೆ ನಡೆದಿರುವ ಆಕ್ರಮಣರೂಪಿ ಚಟುವಟಿಕೆಗಳನ್ನು ಗಮನಿಸಿ.

* ನಿರಂತರವಾಗಿ ಶೈವ ಸಂಸ್ಕೃತಿಯ ಮೇಲೆ ನಾನಾ ರೀತಿಯ ಆಕ್ರಮಣಗಳು ನಡೆಯುತ್ತ ಬಂದಿವೆ. ದಶಾವತಾರಗಳ ಎಲ್ಲ ಪುರಾಣಗಳಲ್ಲಿ ಶಿವಭಕ್ತರ ಹತ್ಯೆ, ಶೈವ ಆವರಣಗಳ ಮೇಲೆ ಅಪನಂಬಿಕೆ ಬರುವಂತಹ ಪೊಳ್ಳು ಭಯಗಳನ್ನು ಹುಟ್ಟು ಹಾಕುವುದು, ಉದಾಹರಣೆಗೆ ಚಾಮರಾಜೇಶ್ವರ ದೇವಸ್ಥಾನಕ್ಕೆ ಹೋದರೆ ಅಧಿಕಾರ ಹೋಗುತ್ತದೆ! ಇತ್ಯಾದಿ. ಆದರೆ ವೈಷ್ಣವ ದೇವಸ್ಥಾನಕ್ಕೆ ಹೋಗಿ ವಜ್ರದ ಕಿರೀಟ ಅರ್ಪಿಸಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಅಂಬೋಣಗಳನ್ನು ಉತ್ಪಾದಿಸುವುದಿಲ್ಲ! ಸಂಗೀತ ಗಮಕಗಳ ಪಾಡೂ ಅದೇ ಆಗಿದೆ. ಕರ್ನಾಟಕ ಸಂಗೀತವೆಂದರೆ ವೈಷ್ಣವ ಸಂಗೀತ ಎನ್ನುವಂತಾಗಿದೆ. ವಚನಗಳನ್ನು ಹಾಡಲು, ತತ್ವಪದಗಳನ್ನು ಹಾಡಲು ಮನ್ಸೂರರೋ, ಗಂಗಜ್ಜಿಯೋ, ವೆಂಕಟೇಶ್ ಕುಮಾರರೋ ಬರಬೇಕು! ಇನ್ನು, ಈಚಿನ ಸುಮಾರು ಐದು ದಶಕಗಳಲ್ಲಿ ನಗರ, ಪಟ್ಟಣಗಳ ಬಡಾವಣೆಗಳಲ್ಲಿ ಹೊಸದಾಗಿ ಕಟ್ಟಿರುವ ದೇವಸ್ಥಾನಗಳಲ್ಲಿ ಶಿವನ ದೇವಸ್ಥಾನಗಳೇನಾದರೂ ಇವೆಯಾ ಎಂದು ಪರಿಶೀಲಿಸಿ ನೋಡಿದರೆ ದಿಗಿಲು ಬೀಳುತ್ತೀರಿ! ದ್ರಾವಿಡರು ಮತ್ತು ಶಿವನು ವಾಸಿಸುವ ದಕ್ಷಿಣವು ಕೀಳೆಂಬುದು ಇದರ ಭಾಗವೇ ಆಗಿದೆ. ಎಲ್ಲ ಕಡೆ ವೈಷ್ಣವ ವಿಜೃಂಭಣೆ ಇರುವಂತೆ ನಿರ್ವಹಿಸಲಾಗಿದೆ.

* ಊರೂರಲ್ಲೂ ಅಮ್ಮನನ್ನು ಆರಾಧಿಸುವ ನಾವು ಮಾತೃಸಂಸ್ಕೃತಿಯ ಜನ. ಈ ಸಂಸ್ಕೃತಿಯ ಮೇಲೆ ಪಿತೃ ಸಂಸ್ಕೃತಿಯನ್ನು ಹೇರುವುದರ ಸಂಕೇತವಾಗಿ ಎಲ್ಲ(ರ)ಮ್ಮನ ತಲೆ ತೆಗೆಯುವ ಪುರಾಣಗಳನ್ನೂ, ಮಾರಿ-ದುರ್ಗಿಯರ ವಿಲೋಮ ಸಂಬಂಧದ ಭಯಾನಕ ಕತೆಗಳನ್ನು ಕಟ್ಟಿ ಸ್ಥಳೀಯ ‘ಫಲ ಸಂಕೇತಗಳ ಆರಾಧನೆ’ಯನ್ನು ಅಪಮಾನಿಸಲಾಗಿದೆ. ಫಲ ಸಂಕೇತವನ್ನೇ ಪ್ರಧಾನವಾಗಿ ಆರಾಧಿಸಿದ ಲಿಂಗಾಯತದಲ್ಲಿಯೂ ಬಹುತ್ವವನ್ನು ನಿರಾಕರಿಸುವ ಆಶಯಗಳು ಸೇರ್ಪಡೆಯಾದುದು ಆಶ್ಚರ್ಯದ ಸಂಗತಿ.

* ನಾವು ನೀರಿನ ಸಂಸ್ಕೃತಿಯ ಜನ. ಎಲ್ಲ ಧಾರ್ಮಿಕ ಆಚರಣೆಗಳನ್ನೂ ಗಂಗೆಯ ಸಾಕ್ಷಿಯಲ್ಲಿ ನಡೆಸುತ್ತೇವೆ. ಮೊದಲು ಗಂಗೆಯನ್ನು ತಂದು ಪ್ರತಿಷ್ಠಾಪಿಸಿಕೊಳ್ಳುತ್ತೇವೆ. ನೀರನ್ನು ಧಾರೆ ಎರೆದು ಮದುವೆ ಮಾಡುತ್ತೇವೆ. ಅವರು ಅಗ್ನಿಯ ಆರಾಧಕರು. ಎಲ್ಲದಕ್ಕೂ ಅಗ್ನಿಯನ್ನು ಪ್ರತಿಷ್ಠಾಪಿಸಿ ಯಜ್ಞ ಹೋಮಗಳನ್ನು ಮಾಡುತ್ತಾರೆ. ಅದಕ್ಕೆಂದೇ ಜಲಸಂಸ್ಕೃತಿಯನ್ನು ತ್ಯಜಿಸಿ ಅಗ್ನಿ ಸಂಸ್ಕೃತಿಗೆ ಒಳಗಾಗುವಂತೆ ಆಚರಣೆಗಳನ್ನು ನಿರಂತರವಾಗಿ ಬದಲಿಸುತ್ತಲೇ ಇದ್ದಾರೆ. ಸಾಮಾನ್ಯ ಗೃಹ ಪ್ರವೇಶದ ಸಂದರ್ಭದಿಂದ ಹಿಡಿದು ಎಲ್ಲ ಆಚರಣೆಗಳಲ್ಲಿಯೂ ಅಗ್ನಿಸಂಸ್ಕೃತಿಯನ್ನು ಹೇರುವ, ಜಲಸಂಸ್ಕೃತಿಯನ್ನು ತಿರಸ್ಕರಿಸುವ ತಂತ್ರವನ್ನು ಅನುಸರಿಸುತ್ತಾರೆ. ಇದಕ್ಕೆ ಪ್ರತಿಭಟನೆಯಾಗಿ ದಕ್ಷಿಣ ರಾಜ್ಯಗಳ ಪ್ರತಿ ಹಳ್ಳಿಯಲ್ಲಿಯೂ ಹೆಣ್ಣು ಮಕ್ಕಳ ತಲೆಯ ಮೇಲೆ ನೀರಿನ ಕಲಶ ಹೊರಿಸಿ ಅಗ್ನಿಯನ್ನು ತುಳಿಸುವ ಆಚರಣೆಗಳು, ಯಜ್ಞವಿರೋಧಿ ವೀರಗಾಸೆ ಗುಗ್ಗುಳಗಳ ಆಚರಣೆಗಳು ನಡೆಯುತ್ತವೆ. ಅವುಗಳ ಹಿಂದಿನ ಸಾಂಸ್ಕೃತಿಕ ಸೂಕ್ಷ್ಮದ ಅರಿವಿಲ್ಲದೆ ಇವು ನಡೆಯುತ್ತಿವೆ.

* ನಾವು ನಾಗಸಂಸ್ಕೃತಿಯ ಜನ. ಉತ್ತರದವರಿಗೆ ನಾಗಬನಗಳು ಮೈಲಿಗೆಯ ಜಾಗಗಳು. ಅವರು ವೈಷ್ಣವ ದೈವಗಳ ಮೂಲಕ ನಾಗನ ತಲೆಯ ಮೇಲೆ ಕಾಲಿಡಿಸಿ ನಾಗಮರ್ದನದ ಕತೆ ಕಟ್ಟುತ್ತಾರೆ. ಉತ್ತರದಿಂದ ಬಂದ ವಾಮನನು ನಮ್ಮ ಪೂರ್ವಿಕ ಬಲೀಂದ್ರನ ತಲೆಯ ಮೇಲೆ ಕಾಲಿಕ್ಕಿದ ದಿನದಿಂದಲೇ ನಮ್ಮ ಅಸ್ಮಿತೆಯು ಪಾತಾಳ ಸೇರಿತು. ವರ್ಷಕ್ಕೊಮ್ಮೆ ನಮ್ಮ ಪೂರ್ವಿಕರನ್ನು ಕರೆದು ಆರಾಧಿಸುವ ದೀಪಾವಳಿಯು ಅವರಿಗೆ ಸಂಭ್ರಮದ ಸಂಗತಿಯಾಗಿದ್ದು, ಅದನ್ನು ನೆನಪಿಸುವಂತೆ ಬಲಿಯನ್ನು ತುಳಿಯುತ್ತಿರುವ ವಾಮನನ ಚಿತ್ರವಿರುವ ಗ್ರೀಟಿಂಗ್ಸ್ ಕಳಿಸುತ್ತಾರೆ!

ಇವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗುವುದಿಲ್ಲ. ನಮ್ಮ ಅಸ್ಮಿತೆಯ ಬಗೆಗೆ ಕೀಳರಿಮೆ ಹುಟ್ಟಿಸಿ ಅನ್ಯ ಸಾಂಸ್ಕೃತಿಕ ಯಜಮಾನಿಕೆಗೆ ದಾರಿ ಮಾಡುತ್ತವೆ. ಅದು ರಾಜಕೀಯ ಅಧಿಕಾರವಾಗಿ ರೂಪಾಂತರಗೊಳ್ಳುತ್ತದೆ. ಈ ಸಾಂಸ್ಕೃತಿಕ ರಾಜಕಾರಣದ ಬೇರುಗಳು ತೀರಾ ಆಳಕ್ಕಿಳಿದಿವೆ.

ಇದು ಇಡಿಯಾಗಿ ಶೂದ್ರ ಸಮೂಹಗಳ ಸಮಸ್ಯೆ. ಲಿಂಗಾಯತ ಸಮೂಹಕ್ಕೆ ತಾನು ‘ವೈದಿಕ ಹಿಂದೂ’ ಅಲ್ಲ ಎಂದು ತಾತ್ವಿಕವಾಗಿ ಸಮರ್ಥಿಸಿಕೊಳ್ಳಲು ವಚನ ತಾತ್ವಿಕತೆಯ ಆಕರಮೂಲ ಇದೆ. ಹಾಗಾದರೆ ಬೇಡರು, ಬೆಸ್ತರು, ಹೊಲೆಯರು, ಮಾದಿಗರು, ಕುರುಬರು, ಒಕ್ಕಲಿಗರು, ಕುಂಬಾರರು, ಗಾಣಿಗರು, ಉಪ್ಪಾರರು ಇತ್ಯಾದಿ ಸಮೂಹಗಳು ಕೂಡ ಈ ಪ್ರಶ್ನೆಯನ್ನು ಇದಿರಾಗಬೇಕಲ್ಲವೆ? ಇವರ ಅಸ್ಮಿತೆಯನ್ನು ಪೋಷಿಸುವ ತಾತ್ವಿಕ ಆಕರಗಳಾದ ತತ್ವಪದಗಳು, ವಚನಗಳು, ನಾಥ, ಸಿದ್ಧ, ಶಾಕ್ತ, ಬೌದ್ಧ ತಾತ್ವಿಕತೆಯ ಅನೇಕ ಆಕರಗಳಿವೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿಯೂ ಅಂಬೇಡ್ಕರ್, ಕುವೆಂಪು ಮುಂತಾದವರ ಬರಹಗಳ ಜೊತೆಗೆ ವಿಜ್ಞಾನ ಸಾಹಿತ್ಯದ ವಿವೇಕವು ನಮ್ಮ ಜೊತೆಯಾಗಬೇಕು. ಆದರೆ ತಮ್ಮ ಪಾರಂಪರಿಕ ನೆನಪನ್ನು ಕಳೆದುಕೊಂಡು ಮಹಾವಿಸ್ಮೃತಿಗೆ ಸಂದಿರುವ ಈ ಸಮೂಹಗಳು ಮೇಲಿನವರಿಗೆ ತಾವು ತೋರುವ ದಾಸ್ಯವನ್ನು ಸಂಭ್ರಮಿಸುತ್ತ ಬದುಕುತ್ತಿವೆ. ತಾವು ಯಾರೆಂಬುದನ್ನೇ ಮರೆತು ಕೂತಿರುವ ಇವರನ್ನು ಎಚ್ಚರಿಸುವುದು ಹೇಗೆ? ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಕ್ಕೆ ಒತ್ತಾಯಿಸುವ ಈ ಸಂದರ್ಭದಲ್ಲಿಯಾದರೂ, ...ಹಾಗಾದರೆ ‘ನಾವು’ ಯಾರು ಎಂಬ ಪ್ರಶ್ನೆ ಮುನ್ನೆಲೆಗೆ ಬರಬೇಕಿತ್ತಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT