ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿವಾಸಿ ಕನ್ನಡಿಗರಿಗೆ ಕನ್ನಡ ಕಲಿಕೆ

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಆನ್‌ಲೈನ್‌ ಕೋರ್ಸ್‌
Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಅನಿವಾಸಿ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆ ಕಲಿಸಲು ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯ ಮುಂದಾಗಿದೆ. ಇದಕ್ಕಾಗಿ ಮೂರರಿಂದ ಆರು ತಿಂಗಳ ಆನ್‌ಲೈನ್‌ ಕೋರ್ಸ್‌ ನಡೆಸಲು ಯೋಜನೆ ರೂಪಿಸಿದ್ದು, ಶೀಘ್ರದಲ್ಲೇ ಆರಂಭವಾಗಲಿದೆ.

ಈ  ಯೋಜನೆಗೆ, ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿರುವ, ಚಿತ್ರದುರ್ಗದ ಎಂಜಿನಿಯರ್‌ ನಾಗರಾಜ್‌ ಎಂಬುವವರ ಸಹಾಯ ಪಡೆಯಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಇತ್ತೀಚೆಗೆ ವಿ.ವಿ.ಗೆ ಭೇಟಿ ನೀಡಿದ್ದ ಅವರು,  ಕೋರ್ಸ್‌ ಸ್ವರೂಪದ ಬಗ್ಗೆ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಅವರೊಂದಿಗೆ ಚರ್ಚಿಸಿದ್ದಾರೆ.

ಪಠ್ಯದ ಸ್ವರೂಪವನ್ನು ಅಂತಿಮಗೊಳಿಸಿದ ನಂತರ ಕೋರ್ಸ್‌ ಆರಂಭಿಸುವುದಾಗಿ ಮಲ್ಲಿಕಾ ಘಂಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾಷಾತಜ್ಞರಾಗಿದ್ದ ಪ್ರೊ. ಲಿಂಗದೇವರು ಹಳೆಮನೆ, ಹಲವು ವರ್ಷಗಳ ಹಿಂದೆಯೇ ಅನಿವಾಸಿ ಕನ್ನಡಿಗರಿಗೆ ಕನ್ನಡ ಕಲಿಸುವ ಸಂಬಂಧ ಪಠ್ಯಕ್ರಮ ರೂಪಿಸಿದ್ದರು. ಇದೀಗ ಅದನ್ನೂ ಮರುಪರಿಶೀಲಿಸಿ, ಅದರಲ್ಲಿನ ಕೆಲವು ಆಯ್ದ ಭಾಗಗಳನ್ನು ಕೋರ್ಸ್‌ಗೆ ಆಯ್ಕೆ ಮಾಡಿಕೊಳ್ಳುವ ಚಿಂತನೆ ನಡೆದಿದೆ. ನಂತರ ತಂತ್ರಾಂಶ ರೂಪಿಸಲಾಗುವುದು’ ಎಂದರು.

ಆನ್‌ಲೈನ್‌ನಲ್ಲಿ ಪುಸ್ತಕಗಳು:
‘ಆನ್‌ಲೈನ್‌ ಕೋರ್ಸ್‌ ಜತೆಗೇ ವಿ.ವಿ.ಯ ಅಕ್ಷರ ಗ್ರಂಥಾಲಯದಲ್ಲಿರುವ 2.4 ಲಕ್ಷ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ತಂತ್ರಜ್ಞಾನ ಕ್ರಾಂತಿಯಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ನಮ್ಮ ವಿ.ವಿ.ಯ ಪ್ರಸಾರಾಂಗ ಹೊರತಂದಿರುವ ಪುಸ್ತಕಗಳ ಜತೆಗೇ ನಮ್ಮ ಗ್ರಂಥಾಲಯದಲ್ಲಿರುವ ಎಲ್ಲ ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಓದಲು ವ್ಯವಸ್ಥೆ ಮಾಡಲಾಗುವುದು. ತಂತ್ರಾಂಶ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಸಮಿತಿಯೊಂದನ್ನು ರಚಿಸಲಾಗಿದೆ’ ಎಂದು ಪ್ರೊ. ಘಂಟಿ ವಿವರಿಸಿದರು.

‘ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು, ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಕೆಲಸ, ಸಾಂಸ್ಕೃತಿಕ, ಸಾಹಿತ್ಯಕ ಅನನ್ಯತೆಯನ್ನು ಪರಿಚಯಿಸಿಕೊಡಲಾಗುವುದು. ಪುಸ್ತಕ ಓದುವ ಪ್ರೀತಿ ಬೆಳೆಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ’ ಎಂದು ಹೇಳಿದರು.

***

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಾಗರದಾಚೆಯ ಕನ್ನಡಿಗರ ಮಕ್ಕಳಲ್ಲಿ ಭಾಷೆಯ ಬಗ್ಗೆ ಪ್ರೀತಿ ಬೆಳೆಸುವುದು ಯೋಜನೆಯ ಉದ್ದೇಶ.
ಪ್ರೊ. ಮಲ್ಲಿಕಾ ಎಸ್‌. ಘಂಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT