ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಹಿತ ಮರೆತ ಕೇಂದ್ರ ಸರ್ಕಾರ

ಕರ ನಿರಾಕರಣೆ ಸತ್ಯಾಗ್ರಹ ಹಾಗೂ ಪಾದಯಾತ್ರೆಗೆ ಚಾಲನೆ
Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಶಿರಾ: ‘ಕರಕುಶಲ ವಸ್ತುಗಳು ಹಾಗೂ ಖಾದಿ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ತೆರಿಗೆ ವಿಧಿಸಿರುವುದು ಖಂಡನೀಯ. ಜನರ ಹಿತವನ್ನು ಮರೆತಿರುವ ಜನರು ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ’ ಎಂದು ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಅಸಮಾಧಾನ ವ್ಯಕ್ತಪಡಿಸಿದರು.

ಕೈಯಿಂದ ತಯಾರಿಸಿದ ವಸ್ತುಗಳಿಗೆ ತೆರಿಗೆ ವಿಧಿಸುವುದನ್ನು ವಿರೋಧಿಸಿ ತಾಲ್ಲೂಕಿನ ಜುಂಜಪ್ಪನಗುಡ್ಡೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ ನಿರಾಕರಣೆ ಸತ್ಯಾಗ್ರಹ ಹಾಗೂ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

‘ಸಾಲದ ಸುಳಿಗೆ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರಗಳು ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು. ಆದರೆ ಮಾಲ್‌ಗಳಲ್ಲಿ ಮಾರಾಟ ಮಾಡುವ ಕೃಷಿ ಉತ್ಪನ್ನಗಳಿಗೆ ಮತ್ತು ಕೈ ಯಿಂದ ತಯಾರಿಸಿದ ವಸ್ತುಗಳಿಗೆ ಜಿಎಸ್‌ಟಿ ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತಿದೆ. ಈ ತೆರಿಗೆ ನೀತಿಯನ್ನು ಜನರು ಧಿಕ್ಕರಿಸಬೇಕು’ ಎಂದು ಹೇಳಿದರು.

ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ‘ಇದೇ ಮೊದಲ ಬಾರಿಗೆ ಕೈ ಉತ್ಪನ್ನಗಳಾದ ಕೈಮಗ್ಗ, ಕಂಬಳಿ, ಮಡಿಕೆ, ಬೀಡಿ, ಕರಕುಶಲ ವಸ್ತುಗಳಿಗೆ ಕೇಂದ್ರ ಸರ್ಕಾರ ತೆರಿಗೆ ವಿಧಿಸಿದೆ. ಕರ ನಿರಾಕರಿಸುವ ಮೂಲಕ ಪ್ರತಿಭಟನೆಯನ್ನು ನಡೆಸಬೇಕು. ರೈತರು ಮತ್ತು ಕುಶಲ ಕರ್ಮಿಗಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈ ಸತ್ಯಾಗ್ರಹ ದೇಶದ ಪ್ರತಿಯೊಂದು ಭಾಗಕ್ಕೂ ವ್ಯಾಪಿಸಬೇಕು’ ಎಂದರು.

ರೈತ ಮುಖಂಡ ಕಡಿದಾಳು ಶಾಮಣ್ಣ, ಸಾಮಾಜಿಕ ಹೋರಾಟಗಾರ ಎಸ್‌.ಆರ್.ಹಿರೇಮಠ, ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಲೇಖಕ ನಾಗೇಶ ಹೆಗಡೆ ಇದ್ದರು.

***

ನಿರ್ಣಯ

ಸಹಜ ಕೃಷಿ ಪದ್ಧತಿಯಡಿ ಬೆಳೆದ ಉತ್ಪನ್ನಗಳಿಗೆ ಶೂನ್ಯ ಕರ ವಿಧಿಸಬೇಕು. ಪರಿಸರ ಕಲುಷಿತಗೊಳಿಸುವ ಹಾಗೂ ವಿಪರೀತ ಇಂಗಾಲ ಉರಿಸುವ ಕೈಗಾರಿಕಾ ಉತ್ಪನ್ನಗಳ ಮಾರಾಟಕ್ಕೆ ದಂಡ ಸಹಿತ ಕರ ವಿಧಿಸಬೇಕು. ವಸುದೈವ ಕುಟುಂಬ ಆಶಯವನ್ನು ಜಾರಿಗೊಳಿಸಬೇಕು. ಪರಿಸರ ಹಾಗೂ ಬಡ ಮಾನವರ ರಕ್ಷಣೆಗೆ ಕೇಂದ್ರ ಸರ್ಕಾರ ಕ್ಷಿಪ್ರವಾಗಿ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು.

ಜುಂಜಪ್ಪನ ಗುಡ್ಡೆಯಿಂದ ಅರಸೀಕೆರೆ ತಾಲ್ಲೂಕಿನ ಕಸ್ತೂರಿ ಬಾ ಆಶ್ರಮದ ವರೆಗೆ ಪಾದಯಾತ್ರೆ ನಡೆಯಲಿದೆ. ಅ.2ರಂದು ಪಾದಯಾತ್ರೆ ಆಶ್ರಮ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT