ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಇಐ ಸಂಖ್ಯೆ ತಿದ್ದಿದರೆ ಜೈಲು

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಎಚ್ಚರ! ಮೊಬೈಲ್‌ ಸಾಧನಗಳ ಐಎಂಇಐ ಸಂಖ್ಯೆಗಳನ್ನು (15 ಸಂಖ್ಯೆಗಳನ್ನು ಹೊಂದಿರುವ ಮೊಬೈಲ್ ಫೋನ್‌ಗಳ ವಿಶಿಷ್ಟ ಗುರುತಿನ ಸಂಖ್ಯೆ) ತಿರುಚಿದರೆ ಇನ್ನು ಮುಂದೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾದೀತು. ಜೊತೆಗೆ, ದಂಡವನ್ನೂ ತೆರಬೇಕಾದೀತು.

ಮೊಬೈಲ್‌ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ದೂರಸಂಪರ್ಕ ಸಚಿವಾಲಯ ಆಗಸ್ಟ್‌ 25ರಂದು ‘ಐಎಂಇಐ ಸಂಖ್ಯೆ ತಿದ್ದುಪಡಿ ನಿರ್ಬಂಧ ನಿಯಮಗಳು–2017’ ಅನ್ನು ರೂಪಿಸಿ ಅಧಿಸೂಚನೆ ಹೊರಡಿಸಿದೆ. ಈ ನಿರ್ಧಾರವು ನಕಲಿ ಐಎಂಇಐ ಸಂಖ್ಯೆಗಳ ಹಾವಳಿ ನಿಯಂತ್ರಿಸಲು ಮತ್ತು ಕಳೆದು ಹೋದ ಮೊಬೈಲ್‌ಗಳನ್ನು ಸುಲಭವಾಗಿ ಪತ್ತೆ ಹಚ್ಚಲು ನೆರವಾಗಲಿದೆ.

‘ತಯಾರಕ ಕಂಪೆನಿಯನ್ನು ಬಿಟ್ಟು ಇನ್ಯಾವುದೇ ವ್ಯಕ್ತಿ ಉದ್ದೇಶಪೂರ್ವಕವಾಗಿ ಐಎಂಇಐ ಸಂಖ್ಯೆಯನ್ನು ತೆಗೆಯುವುದು, ಅಳಿಸಿ ಹಾಕುವುದು, ಬದಲಾಯಿಸುವುದು ಅಥವಾ ತಿದ್ದುವುದು ಕಾನೂನು ಬಾಹಿರ’ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
*
ಐಎಂಇಐ ಎಂದರೆ
ನಿಯಮಗಳ ಪ್ರಕಾರ, ಐಎಂಇಐ ಸಂಖ್ಯೆಯನ್ನು ಬದಲಾಯಿಸಿರುವುದು ಅಥವಾ ಅದನ್ನು ತಿರುಚಲು ಸಾಫ್ಟ್‌ವೇರ್‌ ಅಳವಡಿಸಿರುವುದರ ಬಗ್ಗೆ ತಿಳಿದಿದ್ದರೆ ಅಂತಹ ಮೊಬೈಲ್‌ ಅನ್ನು ಜನರು ಬಳಸುವಂತಿಲ್ಲ.

ಮೊಬೈಲ್‌ಫೋನ್‌ಗೆ ನೀಡಲಾಗುವ ವಿಶಿಷ್ಟ ಗುರುತಿನ ಸಂಖ್ಯೆ. ಇದರಲ್ಲಿ 15 ಅಂಕಿಗಳಿರುತ್ತವೆ. ಬಳಕೆದಾರರು ಮೊಬೈಲ್‌ ಮೂಲಕ ಕರೆ ಮಾಡಿದಾಗಲೆಲ್ಲ, ದಾಖಲೆಗಳಲ್ಲಿ ಕರೆ ಮಾಡಿದವರ ದೂರವಾಣಿ ಸಂಖ್ಯೆ ಮತ್ತು ಕರೆ ಮಾಡಿದ ಮೊಬೈಲ್‌ನ ಐಎಂಇಎ ಸಂಖ್ಯೆ ನಮೂದಾಗಿರುತ್ತವೆ. ಸಿಮ್ ಬದಲಾಯಿಸಿದಾಗ ಆ ಬಳಕೆದಾರನ ಮೊಬೈಲ್‌ ಸಂಖ್ಯೆ ಬದಲಾಗುತ್ತದೆ. ಆದರೆ, ಐಎಂಇಐ ಸಂಖ್ಯೆ ಬದಲಾಗುವುದಿಲ್ಲ. ತಾಂತ್ರಿಕವಾಗಿ ಪರಿಣತಿ ಪಡೆದಿರುವವರು ಮಾತ್ರ ವಿಶೇಷ ಸಾಧನ ಬಳಸಿ ಐಎಂಇಐ ಸಂಖ್ಯೆಬದಲಾಯಿಸಬಹುದು.

ಮೊಬೈಲ್‌ ಉದ್ದಿಮೆಗೆ ಸಂಬಂಧಿಸಿದ ಜಾಗತಿಕ ಮಟ್ಟದ ಸಂಸ್ಥೆ ‘ಜಿಎಸ್‌ಎಂಎ’ ಹಾಗೂ ಅದರ ಅಧೀನದಲ್ಲಿರುವ ಸಂಘಟನೆಗಳು ಐಇಎಂಐ ಸಂಖ್ಯೆಗಳನ್ನು ಹಂಚಿಕೆ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT