ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರ ಹೆಸರಿನಲ್ಲಿ ₹ 934 ಕೋಟಿ ವಂಚನೆ

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪೌರ ಕಾರ್ಮಿಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ₹ 934 ಕೋಟಿ ವಂಚಿಸಿದ ಆರೋ‍‍ಪದ ಎದುರಿಸುತ್ತಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸರ್ಕಾರ ಸೂಚಿಸಿದೆ.

‘ಬಿಬಿಎಂಪಿಯಲ್ಲಿ 6,600 ಪೌರ ಕಾರ್ಮಿಕರ ನಕಲಿ ದಾಖಲೆ ಸೃಷ್ಟಿಸಿ ₹ 550 ಕೋಟಿ ವಂಚಿಸಲಾಗಿದೆ ಹಾಗೂ ₹ 384 ಕೋಟಿಯನ್ನು ಭವಿಷ್ಯ ನಿಧಿ, ಇಎಸ್‌ಐ ಖಾತೆಗೆ ಪಾವತಿಸದೇ ಮೋಸ ಮಾಡಲಾಗಿದೆ’ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರು ಸಲ್ಲಿಸಿತ್ತು. ಈ ಪ್ರಕರಣವನ್ನು ಎಸಿಬಿಗೆ ಒಪ್ಪಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

87 ಗುತ್ತಿಗೆದಾರರು ನಗರದ ಸ್ವಚ್ಛತೆ ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ 19,000 ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಬಿಬಿಎಂಪಿ ದಾಖಲೆ ಹೇಳಿತ್ತು.

ಪೌರ ಕಾರ್ಮಿಕರ ಸಮೀಕ್ಷೆ ನಡೆಸಿದ್ದ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಭೌತಿಕವಾಗಿ 12,400 ಕಾರ್ಮಿಕರು ಮಾತ್ರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. 6,600 ಕಾರ್ಮಿಕರು ಭೌತಿಕವಾಗಿ ಇಲ್ಲ. ಅವರು ಇದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿ ₹ 550 ಕೋಟಿ ದುರುಪಯೋಗ ಮಾಡಿಕೊಳ್ಳಲಾಗಿದೆ. ಇದರಲ್ಲಿ ಅಧಿಕಾರಿಗಳ ಪಾತ್ರವೂ ಇದೆ’ ಎಂದು ವರದಿಯಲ್ಲಿ ಹೇಳಿತ್ತು. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಇದೇ ವರ್ಷದ ಮಾರ್ಚ್‌ನಲ್ಲಿ ಆಯೋಗವು ಮುಖ್ಯಮಂತ್ರಿಗೆ ಮನವಿ ಮಾಡಿತ್ತು.

ಭವಿಷ್ಯ ನಿಧಿ, ಇಎಸ್‌ಐ ಹಣ ದುರ್ಬಳಕೆ
‘ಕಾರ್ಮಿಕರ ವೇತನದಿಂದ ಶೇ 12ರಷ್ಟು ಮತ್ತು ಮಾಲೀಕರ ವಂತಿಕೆಯಾಗಿ ಶೇ 13.61ರಷ್ಟು ಸೇರಿಸಿ ಒಟ್ಟು ಶೇ 25.61ರಷ್ಟು ಮೊತ್ತವನ್ನು ಕಾರ್ಮಿಕರ ಭವಿಷ್ಯ ನಿಧಿ (ಪಿ.ಎಫ್‌) ಖಾತೆಗೆ ಜಮಾ ಮಾಡಬೇಕು. ಇಎಸ್‌ಐ(ಕಾರ್ಮಿಕರ ರಾಜ್ಯ ವಿಮೆ) ಖಾತೆಗೆ ಮಾಲೀಕರ ವಂತಿಕೆ ಶೇ 4.75ರಷ್ಟು ತುಂಬಬೇಕಿದೆ. ಮಾಲೀಕರ ವಂತಿಕೆ ಭಾಗವನ್ನು ಬಿಬಿಎಂಪಿಯಿಂದ ಗುತ್ತಿಗೆದಾರರು ಪಡೆದುಕೊಂಡಿದ್ದರೂ 12 ವರ್ಷಗಳಿಂದ (2005ರಿಂದ) ₹ 384 ಕೋಟಿ ಪಾವತಿ ಮಾಡದೆ ವಂಚಿಸಿದ್ದಾರೆ’ ಎಂದೂ ಆಯೋಗ ದೂರಿತ್ತು.

ಈ ಸಂಬಂಧ ಬಿಬಿಎಂಪಿ ಆಯುಕ್ತರಿಂದ ವರದಿ ತರಿಸಿಕೊಂಡ ನಗರಾಭಿವೃದ್ಧಿ ಇಲಾಖೆ, ‘ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಎಸಿಬಿ ತನಿಖೆ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟಿದೆ.

‍ಪ್ರಸ್ತಾವನೆ ವಾಪಸ್ ಕಳುಹಿಸಿದ್ದ ಸಿಐಡಿ
ವಂಚನೆ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಬಿಬಿಎಂಪಿ ಆಯುಕ್ತರು ಸಿಐಡಿಗೆ ಪತ್ರ ಬರೆದಿದ್ದರು. ಆದರೆ, ಪ್ರಸ್ತಾವನೆಯನ್ನು ಸಿಐಡಿ ವಾಪಸ್‌ ಕಳುಹಿಸಿತ್ತು.

‘ಸರ್ಕಾರ, ಪೊಲೀಸ್ ಪ್ರಧಾನ ಕಚೇರಿ ಅಥವಾ ಹೈಕೋರ್ಟ್ ಆದೇಶ ನೀಡಿದರೆ ಮಾತ್ರ ತನಿಖೆ ನಡೆಸಲಾಗುವುದು’ ಎಂದು ಸಿಐಡಿ ಅಧಿಕಾರಿಗಳು ‍‍ಪ್ರತಿಪಾದಿಸಿದ್ದರು. ಬಳಿಕ ನಗರಾಭಿವೃದ್ಧಿ ಇಲಾಖೆಗೆ  ‍ಪ್ರಸ್ತಾವನೆ ಸಲ್ಲಿಸಿದ್ದ ಬಿಬಿಎಂಪಿ ಆಯುಕ್ತರು, ತನಿಖೆಗೆ ನಿರ್ದೇಶಿಸುವಂತೆ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT