ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟಿತ ಹೋರಾಟದಿಂದ ಸಾಧನೆ

ಕೆಪಿಎಲ್‌: ಚೊಚ್ಚಲ ಪ್ರಶಸ್ತಿಯ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ನಾಯಕ ಅರವಿಂದ್‌
Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಾನು ಹೆಸರಿಗೆ ಮಾತ್ರ ನಾಯಕ. ಪ್ರತಿಯೊಬ್ಬ ಆಟಗಾರ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ಗೆಲುವಿಗಾಗಿ ಸಂಘಟಿತ ಹೋರಾಟ ಮಾಡಬೇಕು. ತಂಡದಲ್ಲಿರುವ ಪ್ರತಿಯೊಬ್ಬರು ನಾಯಕರೇ ಎಂದು ಸ್ಪಷ್ಟವಾಗಿ ಹೇಳಿದ್ದರಿಂದ ಎಲ್ಲರೂ ಚೆನ್ನಾಗಿ ಆಡಿದರು. ಇದರಿಂದ ಚೊಚ್ಚಲ ಟ್ರೋಫಿ ಗೆಲ್ಲುವ ಆಸೆ ಈಡೇರಿತು’ ಎಂದು ಬೆಳಗಾವಿ ಪ್ಯಾಂಥರ್ಸ್‌ ತಂಡದ ನಾಯಕ ಎಸ್‌. ಅರವಿಂದ್‌ ಹೇಳಿದರು.

ಭಾನುವಾರ ರಾತ್ರಿ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಕೆಪಿಎಲ್‌ ಟೂರ್ನಿಯ ಫೈನಲ್‌ನಲ್ಲಿ ಪ್ಯಾಂಥರ್ಸ್‌ ತಂಡ ಬಿಜಾಪುರ ಬುಲ್ಸ್‌ ಎದುರು ಆರು ವಿಕೆಟ್‌ಗಳ ಗೆಲುವು ಪಡೆದಿತ್ತು. ಈ ತಂಡ 2009ರ ಟೂರ್ನಿಯಲ್ಲಿ ಫೈನಲ್‌ ತಲುಪಿ ಪ್ರಾವಿಡೆಂಟ್‌ ಬೆಂಗಳೂರು ವಿರುದ್ಧ ಸೋಲು ಕಂಡಿತ್ತು. ಆ ಬಳಿಕ ಒಮ್ಮೆಯೂ ಪ್ರಶಸ್ತಿ ಸುತ್ತು ತಲುಪಿರಲಿಲ್ಲ.

ತಂಡವನ್ನು ಬೆಂಬಲಿಸುವ ಸಲುವಾಗಿ ಬೆಳಗಾವಿಯಿಂದ ಬಂದಿದ್ದ ಸಾವಿರಾರು ಅಭಿಮಾನಿಗಳು ಪಂದ್ಯ ಮುಗಿದು ಒಂದು ಗಂಟೆ ಕಳೆದರೂ  ಕ್ರೀಡಾಂಗಣದಲ್ಲಿದ್ದು ಆಟಗಾರರ ಖುಷಿಯಲ್ಲಿ ಭಾಗಿಯಾದರು. ಸಾಂಪ್ರದಾಯಿಕ ಪೇಟ ತೊಟ್ಟು ಬಂದಿದ್ದ ಕೆಲವು ಕ್ರಿಕೆಟ್‌ ಪ್ರೇಮಿಗಳು ಪ್ರಶಸ್ತಿ ಪ್ರದಾನದ ವೇಳೆ ತಮಟೆ ಬಾರಿಸಿ ಸಂಭ್ರಮಿಸಿದರು.

ಪಂದ್ಯದ ಬಳಿಕ ಮಾತನಾಡಿದ ಅರವಿಂದ್‌ ‘ನೀವೆಲ್ಲರೂ ನಿಮ್ಮ ಜವಾಬ್ದಾರಿ ನಿಭಾಯಿಸಿದರೆ ನಾಯಕನ ಮೇಲೆ ಹೆಚ್ಚು ಹೊಣೆ ಬೀಳುವುದಿಲ್ಲ ಎಂದು ತಂಡದ ಸಭೆಯಲ್ಲಿ ಆಟಗಾರರಿಗೆ ಹೇಳಿದ್ದೆ. ಹೇಳಿದಂತೆಯೇ ಅವರು ನಡೆದುಕೊಂಡಿದ್ದರಿಂದ ನಾಯಕತ್ವ ಜವಾಬ್ದಾರಿ ಕಷ್ಟವೆನಿಸಲಿಲ್ಲ’ ಎಂದರು. ತಂಡದ ಹೊಸ ಆಟಗಾರರ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

'ಟೂರ್ನಿಯ ಆರಂಭದಿಂದಲೂ ಒಂದೇ ರೀತಿಯ ಯೋಜನೆ ನಮ್ಮದಾಗಿತ್ತು. ಫೈನಲ್‌ನಲ್ಲಿ ಸುಲಭವಾಗಿ ಗೆಲ್ಲಲು ಸ್ಪಿನ್ನರ್‌ಗಳು ಕಾರಣ. ಆನಂದ ದೊಡ್ಡಮನಿ, ಶುಭಾಂಗ ಹೆಗ್ಡೆ ಚೆನ್ನಾಗಿ ಬೌಲಿಂಗ್‌ ಮಾಡಿದರು. ಫೀಲ್ಡಿಂಗ್‌ ಇನ್ನಷ್ಟು ಉತ್ತಮವಾಗಿದ್ದರೆ ಬುಲ್ಸ್‌ ತಂಡವನ್ನು 120ರಿಂದ 130 ರನ್ ಒಳಗೆ ಕಟ್ಟಿಹಾಕಬಹುದಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

ಆಡುವುದಷ್ಟೇ ಕೆಲಸ: ‘ಬ್ಯಾಟ್ಸ್‌ಮನ್‌ ಆಗಿ ಚೆನ್ನಾಗಿ ಆಡಬೇಕಿತ್ತು. ತಂಡದ ಗೆಲುವಿಗೆ ನೆರವಾಗಬೇಕಿತ್ತು. ಆ ಕೆಲಸವನ್ನು ಮಾಡಿದ್ದೇನೆ. ಉಳಿದ ಯಾವುದರ ಬಗ್ಗೆಯೂ ಯೋಚಿಸಿಲ್ಲ. ಅದೃಷ್ಟವಿದ್ದರೆ ಎಲ್ಲಾ ಅವಕಾಶಗಳು ಲಭಿಸುತ್ತವೆ’ ಎಂದು ಪಂದ್ಯ ಶ್ರೇಷ್ಠ ಗೌರವ ಪಡೆದ ಸ್ಟಾಲಿನ್‌ ಹೂವರ್‌ ಹೇಳಿದರು. ಕೆಪಿಎಲ್‌ನಲ್ಲಿ ನೀಡಿದ ಪ್ರದರ್ಶನ ಐಪಿಎಲ್‌ ತಂಡದಲ್ಲಿ ಸ್ಥಾನ ಪಡೆಯಲು ನೆರವಾಗಲಿದೆಯೇ ಎನ್ನುವ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.

ಅಭಿಮಾನಿಗಳ ಪ್ರೀತಿಯಲ್ಲಿ ಗೆದ್ದ ಕ್ರಿಕೆಟ್‌
‘ಹುಬ್ಬಳ್ಳಿಯಲ್ಲಿ ಪದೇ ಪದೇ ಮಳೆ ಬರುತ್ತಿದ್ದ ಕಾರಣ ಪಂದ್ಯ ನೋಡಲು ಬರುವವರ ಸಂಖ್ಯೆ ಆರಂಭದಲ್ಲಿ ಕಡಿಮೆಯಿತ್ತು. ಆದರೆ ಫೈನಲ್‌ಗೆ ಸೇರಿದ್ದ ಜನ ನೋಡಿ ತುಂಬಾ ಖುಷಿಯಾಯಿತು’ ಎಂದು ಅರವಿಂದ್‌ ಹೇಳಿದರು.

‘ಟೂರ್ನಿಯಲ್ಲಿ ಇರುವುದು ಎಲ್ಲವೂ ಕರ್ನಾಟಕದ ತಂಡಗಳೇ. ಬಿಜಾಪುರ ಬುಲ್ಸ್‌ ಮತ್ತು ಬೆಳಗಾವಿ ಪ್ಯಾಂಥರ್ಸ್ ಎರಡೂ ತಂಡಗಳನ್ನು ಬೆಂಬಲಿಸಲು ಜನ ಬಂದಿದ್ದರು. ಇವರಿಗಿಂತ  ಕ್ರಿಕೆಟ್‌ ಮೇಲಿನ ಪ್ರೀತಿಯಿಂದ ಬಂದವರು ಹೆಚ್ಚು ಜನ. ಕ್ರಿಕೆಟ್‌ ಪ್ರೇಮಿಗಳ ಅಭಿಮಾನದಿಂದ ಪಂದ್ಯ ಕಳೆಗಟ್ಟಿತು’ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT