ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಸರಣಿ ಗೆಲುವಿನ ಪುಳಕ

ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಶತಕದ ಜೊತೆಯಾಟ; ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ ಕೊಹ್ಲಿ ಪಡೆ
Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಇಂದೋರ್‌: ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಹಾಕಿಕೊಟ್ಟ ಬುನಾದಿಯ ಮೇಲೆ ಸ್ಫೋಟಕ ಬ್ಯಾಟ್ಸ್‌ಮನ್‌ ಹಾರ್ದಿಕ್ ಪಾಂಡ್ಯ ಗೆಲುವಿನ ಸೌಧ ಕಟ್ಟಿದರು. ಈ ಮೂವರ ಅಪೂರ್ವ ಬ್ಯಾಟಿಂಗ್ ಬಲದಿಂದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಗೆದ್ದು ಬೀಗಿತು. ನಿರಂತರ ಒಂಬತ್ತು ಪಂದ್ಯ ಗೆದ್ದ ವಿರಾಟ್‌ ಕೊಹ್ಲಿ ಬಳಗ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿತು.

ಭಾರತ ತಂಡದ ಮುಂದೆ ಪ್ರವಾಸಿ ತಂಡ ಸವಾಲಿನ ಗುರಿ ಇರಿಸಿತ್ತು. ಮೋಹಕ ಬ್ಯಾಟಿಂಗ್ ಮಾಡಿದ ಅಜಿಂಕ್ಯ ರಹಾನೆ (70; 76 ಎ, 9 ಬೌಂ) ಮತ್ತು ರೋಹಿತ್ ಶರ್ಮಾ (71; 62 ಎ, 4 ಸಿ, 6 ಬೌಂ) ತಂಡಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟು ಗುರಿಯನ್ನು ಸುಲಭಗೊಳಿಸಿದರು. 22ನೇ ಓವರ್‌ ವರೆಗೆ ಕ್ರೀಸ್‌ನಲ್ಲಿದ್ದ ಇವರಿಬ್ಬರು ಮೊದಲ ವಿಕೆಟ್‌ಗೆ 139 ರನ್ ಸೇರಿಸಿದರು.

ನಾಲ್ಕನೇ ಓವರ್‌ನಲ್ಲಿ ಕಾಲ್ಟರ್‌ನೈಲ್ ಎಸೆತವನ್ನು ಮೋಹಕವಾಗಿ ಬೌಂಡರಿಗೆ ಅಟ್ಟಿದ ರಹಾನೆ ಎದುರಾಳಿಗಳ ಮೇಲೆ ಪ್ರಹಾರಕ್ಕೆ ನಾಂದಿ ಹಾಡಿದರು. ಇದೇ ಓವರ್‌ನಲ್ಲಿ ರೋಹಿತ್ ಶರ್ಮಾ ಸಿಕ್ಸರ್ ಸಿಡಿಸಿದರು. ಕೇನ್ ರಿಚರ್ಡ್ಸನ್ ಓವರ್‌ನಲ್ಲಿ ರೋಹಿತ್ ಎರಡು ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. ರಿಚರ್ಡ್ಸನ್ ಅವರ ಮುಂದಿನ ಓವರ್‌ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ಮಿಂಚು ಹರಿಸಿದರು. 10ನೇ ಓವರ್‌ನಲ್ಲಿ ರಹಾನೆ ಮೂರು ಬೌಂಡರಿ ಸಿಡಿಸಿದಾಗ ಬೌಲರ್‌ಗಳು ಕಕ್ಕಾಬಿಕ್ಕಿಯಾದರು.

ಇನ್ನೊಂದೆಡೆ ನಿರಂತರ ಸ್ಫೋಟಿಸಿದ ರೋಹಿತ್ 13ನೇ ಓವರ್‌ನಲ್ಲಿ ಅರ್ಧಶತಕ ಪೂರೈಸಿದರು. ಅಗರ್ ಎಸೆತವನ್ನು ಲಾಂಗ್‌ಆನ್‌ ಮೂಲಕ ಗ್ಯಾಲರಿಗೆ ಎತ್ತಿದ ರೋಹಿತ್ 33ನೇ ಅರ್ಧಶತಕದ ಸಂಭ್ರಮದಲ್ಲಿ ಮಿಂದರು. 18ನೇ ಓವರ್‌ನಲ್ಲಿ ರಹಾನೆ ತಮ್ಮ 21ನೇ ಅರ್ಧಶತಕ ಪೂರೈಸಿದರು. 17ನೇ ಓವರ್‌ನಲ್ಲಿ ವಿಕೆಟ್ ಕೀಪರ್ ಹ್ಯಾಂಡ್ಸ್‌ಕಂಬ್ ಅವರಿಂದ ಜೀವದಾನ ಪಡೆದ ರೋಹಿತ್‌ ಕೊನೆಗೆ ಕಾಲ್ಟರ್‌ನೈಲ್‌ ಎಸೆತದಲ್ಲಿ ಔಟಾದರು. ಸ್ವಲ್ಪದರಲ್ಲೇ ರಹಾನೆ ಕೂಡ ಪೆವಿಲಿಯನ್ ಸೇರಿದರು.

ಕೊಹ್ಲಿ–ಪಾಂಡ್ಯ ಮಿಂಚು

ಮೂರನೇ ವಿಕೆಟ್‌ಗೆ ಜೊತೆಗೂಡಿದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ 56 ರನ್‌ ಸೇರಿಸಿದರು. ಕೊಹ್ಲಿ 35 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರೆ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದರು. ಅವರ ಬ್ಯಾಟ್‌ನಿಂದ ಸಿಕ್ಸರ್ ಮತ್ತು ಬೌಂಡರಿಗಳು ಸಿಡಿಯುತ್ತಿದ್ದಂತೆ ತಂಡ ಗೆಲುವಿಗೆ ಹತ್ತಿರವಾಗುತ್ತ ಸಾಗಿತ್ತು. ಗ್ಯಾಲರಿಗಳಲ್ಲಿ ಸಂಭ್ರಮ ಉಕ್ಕಿತು. 72 ಎಸೆತಗಳಲ್ಲಿ ನಾಲ್ಕು ಸಿಕ್ಸರ್ಸ್ ಮತ್ತು ಐದು ಬೌಂಡರಿ ಚಚ್ಚಿದ ಅವರು 78 ರನ್‌ ಗಳಿಸಿ ಜಯಕ್ಕೆ 10 ರನ್‌ ಬೇಕಾಗಿದ್ದಾಗ ಔಟಾದರು. ಮನೀಷ್ ಪಾಂಡೆ (36; 32 ಎ, 6 ಬೌಂ) ಮತ್ತು ಮಹೇಂದ್ರ ಸಿಂಗ್ ದೋನಿ ಔಪಚಾರಿಕತೆಯನ್ನು ಪೂರ್ತಿಗೊಳಿಸಿದರು.

ಸ್ಫೋಟಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌

ಸರಣಿಯಲ್ಲಿ ಇದೇ ಮೊದಲ ಬಾರಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ನಾಯಕ ಸ್ಮಿತ್‌ ಬ್ಯಾಟಿಂಗ್ ಆಯ್ದುಕೊಂಡರು. ಮೀನಖಂಡದ ನೋವಿನಿಂದ ಬಳಲುತ್ತಿದ್ದ ಕಾರಣ ಕಳೆದ ಎರಡು ಪಂದ್ಯಗಳಲ್ಲಿ ಆಡದೇ ಇದ್ದ ಆ್ಯರನ್‌ ಫಿಂಚ್ ಭಾನುವಾರ ಡೇವಿಡ್ ವಾರ್ನರ್ ಜೊತೆ ಬ್ಯಾಟಿಂಗ್‌ ಆರಂಭಿಸಿದರು. ಬ್ಯಾಟಿಂಗ್‌ಗೆ ಅನುಕೂಲಕರವಾಗಿದ್ದ ಪಿಚ್‌ನಲ್ಲಿ ಇಬ್ಬರೂ ಸರಾಗವಾಗಿ ರನ್ ಕಲೆ ಹಾಕಿದರು. ಫಿಂಚ್‌ ಹೆಚ್ಚು ಪರಿಣಾಮ ಬೀರಿದರು.

ಮೊದಲ ಮೂರು ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. ಜಸ್‌ಪ್ರೀತ್ ಬೂಮ್ರಾ ಹಾಕಿದ ನಾಲ್ಕನೇ ಓವರ್‌ನಲ್ಲಿ ಫಿಂಚ್‌ ಎರಡು ಬೌಂಡರಿ ಸಿಡಿಸಿದರು. ಭುವನೇಶ್ವರ್‌ ಕುಮಾರ್ ಹಾಕಿದ ಐದನೇ ಓವರ್‌ನಲ್ಲಿ ವಾರ್ನರ್‌ ಕೂಡ ಬೌಂಡರಿ ಸಿಡಿಸಿ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಒಂಬತ್ತನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಫಿಂಚ್ ನಿರಂತರ ಎರಡು ಬಾರಿ ಬೌಂಡರಿಗೆ ಅಟ್ಟಿದರು. 13ನೇ ಓವರ್‌ನಲ್ಲಿ ಯಜುವೇಂದ್ರ ಚಾಹಲ್ ಅವರ ಎಸೆತವನ್ನು ವಾರ್ನರ್‌ ಸಿಕ್ಸರ್‌ಗೆ ಎತ್ತಿದರು. ಆದರೆ ಮುಂದಿನ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಭಾರತಕ್ಕೆ ಮೊದಲ ವಿಕೆಟ್ ಗಳಿಸಿಕೊಟ್ಟರು. ಆ‍ಫ್‌ ಕಟರ್ ಎಸೆತವನ್ನು ತಪ್ಪಾಗಿ ಗ್ರಹಿಸಿದ ವಾರ್ನರ್ ಬೌಲ್ಡ್ ಆಗಿ ಮರಳಿದರು.

ಫಿಂಚ್‌–ಸ್ಮಿತ್ ಶತಕದ ಜೊತೆಯಾಟ

ಆರಂಭಿಕ ಜೊತೆಗಾರ ಪೆವಿಲಿಯನ್ ಸೇರಿದರೂ ಫಿಂಚ್‌ ಬ್ಯಾಟಿಂಗ್ ವೈಭವ ಮುಂದುವರಿಯಿತು. ನಾಯಕ ಸ್ಮಿತ್ ಜೊತೆಗೂಡಿದಾಗ ರನ್‌ಗಳು ವೇಗವಾಗಿ ಹರಿದು ಬಂದವು. ಫಿಂಚ್‌ (124;125 ಎ, 5ಸಿ, 12 ಬೌಂ) ಶತಕ ಸಿಡಿಸಿದರೆ ಸ್ಮಿತ್‌ 63 (71 ಎ, 5 ಬೌಂ) ರನ್‌ ಗಳಿಸಿ ಮಿಂಚಿದರು. 33ನೇ ಓವರ್‌ನಲ್ಲಿ ಕುಲದೀಪ್ ಯಾದವ್ ಅವರ ಎಸೆತದಲ್ಲಿ ಸಿಕ್ಸರ್ ಗಳಿಸಿ ಫಿಂಚ್‌ ಶತಕ ಪೂರೈಸಿದರು. ಇದು ಭಾರತದ ವಿರುದ್ಧ ಅವರ ನಿರಂತರ ಮೂರನೇ ಶತಕ.

ಎರಡನೇ ವಿಕೆಟ್‌ಗೆ ಫಿಂಚ್‌–ಸ್ಮಿತ್ ಜೋಡಿ 154 ರನ್‌ ಸೇರಿಸಿ ತಂಡವನ್ನು 200ರ ಗಡಿ ದಾಟಿಸಿದರು. ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಕುಲದೀಪ್ ಯಾದವ್ 38 ಮತ್ತು 42ನೇ ಓವರ್‌ನಲ್ಲಿ ಇವರಿಬ್ಬರನ್ನು ಪೆವಿಲಿಯನ್‌ಗೆ ಅಟ್ಟಿ ಭಾರತ ಪಾಳಯದಲ್ಲಿ ಸಂಭ್ರಮ ಉಕ್ಕಿಸಿದರು. ಸ್ಮಿತ್‌ ಬೆನ್ನಲ್ಲೇ ಸ್ಫೋಟಕ ಬ್ಯಾಟ್ಸ್‌ಮನ್‌ ಗ್ಲೆನ್‌ ಮ್ಯಾಕ್ಸ್‌ವೆಲ್ ಕೂಡ ಔಟಾದರು. ನಂತರ ಹಿಡಿತ ಸಾಧಿಸಿದ ಭಾರತದ ಬೌಲರ್‌ಗಳು ಪ್ರವಾಸಿ ತಂಡವನ್ನು ಕಟ್ಟಿ ಹಾಕಿದರು.

ವಿಕೆಟ್‌ಗಳು ಉಳಿಸಿಕೊಂಡಿದ್ದರೂ ಅಂತಿಮ 10 ಓವರ್‌ಗಳಲ್ಲಿ ತಂಡ ಗಳಿಸಿದ್ದು 59 ರನ್ ಮಾತ್ರ. 48ನೇ ಓವರ್‌ನಲ್ಲಿ ಬೌಂಡರಿ ಗೆರೆ ಬಳಿ ಸುಂದರ ಕ್ಯಾಚ್ ಪಡೆದು ಹ್ಯಾಂಡ್ಸ್‌ಕಂಬ್ ಅವರನ್ನು ಔಟ್‌ ಮಾಡಿದ ಮನೀಷ್ ಪಾಂಡೆ ಪ್ರೇಕ್ಷಕರನ್ನು ರೋಮಾಂಚಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT