ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರೀಯ ಬಸವ ಸೇನಾ’ ಅಸ್ತಿತ್ವಕ್ಕೆ

ಮೂರುಸಾವಿರ ಮಠದಿಂದ ಕಾರ್ಯನಿರ್ವಹಣೆ ಆರಂಭ
Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗೆ ಆಗ್ರಹಿಸಿ ಭಾನುವಾರ ಇಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ‘ರಾಷ್ಟ್ರೀಯ ಬಸವ ಸೇನಾ’ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಯಿತು.

ಹೋರಾಟದ ನೇತೃತ್ವ ವಹಿಸಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ‘ಈ ಸಂಘಟನೆಗೆ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಅವರು ಅಧ್ಯಕ್ಷರಾಗಿರುತ್ತಾರೆ’ ಎಂದು ಪ್ರಕಟಿಸಿದರು. ಧ್ವಜ ನೀಡುವ ಮೂಲಕ ಅಧಿಕಾರದ ಜವಾಬ್ದಾರಿ ವಹಿಸಿಕೊಟ್ಟರು.

‘ಈ ಸಂಘಟನೆಯ ಕಾರ್ಯಚಟುವಟಿಕೆಗಳು ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಿಂದಲೇ ಆರಂಭಗೊಳ್ಳಲಿವೆ’ ಎಂದು ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಪ್ರಕಟಿಸಿದರು.

ಪ್ರತಿ ಗ್ರಾಮದಲ್ಲಿ ಶಾಖೆ: ‘ನವ ಯುವ ಯುಗ ನಿರ್ಮಾಣಕ್ಕೆ ಈ ಸಂಘಟನೆ ಅಸ್ತಿತ್ವಕ್ಕೆ ತರಲಾಗಿದೆ. 25 ಲಕ್ಷ ಯುವಕ–ಯುವತಿಯರ ಪಡೆ ರಚಿಸಲಾಗುವುದು. ಪ್ರತಿ ಗ್ರಾಮದ ಲ್ಲಿಯೂ ಸೇನಾದ ಶಾಖೆಗಳನ್ನು ಆರಂಭಿಸಿ, ಕನಿಷ್ಠ ತಲಾ 100 ಜನ ಲಿಂಗಾಯತ, ಅಷ್ಟೇ ಸಂಖ್ಯೆಯ ಇತರೆ ಧರ್ಮೀಯರನ್ನು ಸದಸ್ಯರನ್ನಾಗಿ ಮಾಡಲಾಗುವುದು’ ಎಂದು ಎಂ.ಬಿ. ಪಾಟೀಲ ಘೋಷಿಸಿದರು.

ಅನ್ಯಾಯ ಆಗಲು ಬಿಡಲ್ಲ: ‘ಸೇನಾ ಸದಸ್ಯತ್ವ ನೋಂದಣಿ ಸೋಮವಾರದಿಂದಲೇ ಆರಂಭಗೊಳ್ಳಲಿದೆ. ಬಸವ ಅನುಯಾಯಿಗಳಿಗೆ ಇನ್ನು ಅನ್ಯಾಯ ಆಗಲು ಬಿಡುವುದಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಸಿಗದಿದ್ದರೆ ಮತ್ತೊಂದು ಕ್ರಾಂತಿ ಆಗುತ್ತದೆ’ ಎಂದು ವಿನಯ ಕುಲಕರ್ಣಿ ಹೇಳಿದರು.

ನಾಲ್ಕು ಕಡೆಗಳಲ್ಲಿ ಸಮಾವೇಶ: ‘ಸೆಪ್ಟೆಂಬರ್‌ 28ರಂದು ಚಿತ್ರದುರ್ಗ, ನವೆಂಬರ್‌ 5ರಂದು ಹುಬ್ಬಳ್ಳಿ ಮತ್ತು 19ರಂದು ವಿಜಯಪುರದಲ್ಲಿ ಸಮಾವೇಶ ನಡೆಸಲಾಗುವುದು. ಡಿಸೆಂಬರ್‌ 10ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಸಮಾವೇಶ ನಡೆಯಲಿದೆ’ ಎಂದು ಎಂ.ಬಿ. ಪಾಟೀಲ ಹೇಳಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ‘ಪ್ರತ್ಯೇಕ ಧರ್ಮ ಸ್ಥಾಪನೆಯ ವಿಷಯದಲ್ಲಿ ನಮ್ಮಲ್ಲಿರುವ ವ್ಯತ್ಯಾಸ ಸರಿಪಡಿಸಿಕೊಳ್ಳುತ್ತೇವೆ. ನಾವೆಲ್ಲ ಒಟ್ಟಾಗುತ್ತೇವೆ’ ಎಂದರು.

ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧ್ಯಕ್ಷ ಶರಣಬಸವಪ್ಪ ಅಪ್ಪ ಅವರು, ‘ಲಿಂಗಾಯತರೆಲ್ಲರೂ ಲಿಂಗ ಧರಿಸಬೇಕು’ ಎಂದರು. ಅವರು ಬಾಯಿತಪ್ಪಿ ವೀರಶೈವ ಪದ ಬಳಸಿದಾಗ ಸಭಿಕರು ವಿರೋಧ ವ್ಯಕ್ತಪಡಿಸಿದರು.

‘ಸಾಮಾಜಿಕ ಪರಿವರ್ತನೆಗೆ ಕ್ರಾಂತಿ ಆಗಬೇಕು. ಸಾಂಘಿಕ ಹೋರಾಟದ ಮೂಲಕ ಪ್ರತ್ಯೇಕ ಧರ್ಮ ಬೇಡಿಕೆ ಈಡೇರಿಸಿಕೊಳ್ಳೋಣ’ ಎಂದು ಚಿತ್ರದುರ್ಗದ ಮುರುಘಾಶರಣರು ಹೇಳಿದರು.

ಕಲಬುರ್ಗಿಯ ‘ಗುಲಬರ್ಗಾ ವಿಶ್ವವಿದ್ಯಾಲಯ’ಕ್ಕೆ ಬಸವಣ್ಣನವರ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರು ಇಡಬೇಕು ಎಂದು ಶಾಸಕ ಬಿ.ಆರ್‌. ಪಾಟೀಲ ಬೇಡಿಕೆ ಮಂಡಿಸಿದರು.

‘ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಹತ್ಯೆ ಮಾಡಿದವರನ್ನು ಬಂಧಿಸಬೇಕು’ ಎಂಬ ಗೊತ್ತುವಳಿಯನ್ನೂ ಸಮಾವೇಶ ಅಂಗೀಕರಿಸಿತು.
ಸಚಿವ ಬಸವರಾಜ ರಾಯರಡ್ಡಿ ಮಾತನಾಡಿದರು.

‘ವಿರಕ್ತಮಠಗಳ ಶುದ್ಧೀಕರಣ’
‘ಪ್ರತಿ ಗ್ರಾಮಗಳಲ್ಲಿರುವ ವಿರಕ್ತಮಠಗಳ ಎದುರೇ ರಾಷ್ಟ್ರೀಯ ಬಸವ ಸೇನಾ ಸಂಘಟನೆಯ ನಾಮಫಲಕ ಅಳವಡಿಸಿ, ಅಲ್ಲೇ ಸಭೆ ಮಾಡಬೇಕು’ ಎಂದು ಎಂ.ಬಿ. ಪಾಟೀಲ ಹೇಳಿದರು.

‘ನಮ್ಮ ಹೋರಾಟ ವಿರೋಧಿಸುತ್ತಿರುವ ಕೆಲ ವಿರಕ್ತಮಠಗಳು ಇದರಿಂದಲಾದರೂ ಸುಧಾರಣೆ ಆಗಿ, ಬಸವತತ್ವ ಪ್ರಚಾರ ಮಾಡುವಂತಾಗಲಿ’ ಎಂದೂ ಅವರು ಹೇಳಿದರು.

‘ವಿನಯ ಕುಲಕರ್ಣಿ ಏನು ಎಂಬುದು ಧಾರವಾಡದವರಿಗೆ ಗೊತ್ತಿದ್ದು, ಅವರನ್ನು ಕೇಳಿ ತಿಳಿದುಕೊಳ್ಳಿ. ಅವರು ಸಾಕಷ್ಟು ಮಠಗಳ ಶುದ್ಧೀಕರಣ ಮಾಡಿದ್ದಾರೆ. ತಪ್ಪು ತಿದ್ದಿಕೊಳ್ಳದ ವಿರಕ್ತಮಠಗಳನ್ನೂ ಅವರು ಶುದ್ಧೀಕರಣ ಮಾಡುತ್ತಾರೆ’ ಎಂದರು.

‘ಬಸವ ತತ್ವಕ್ಕೆ ಬದ್ಧರಾಗದ ಸ್ವಾಮೀಜಿಗಳು ಮಠ ಖಾಲಿ ಮಾಡಬೇಕು’ ಎಂದು ಬಸವರಾಜ ಹೊರಟ್ಟಿ ಹೇಳಿದರು.

*
ಲಿಂಗಾಯತ ಮಹಾಸಭಾ: ತೋಂಟದ ಶ್ರೀ ಪಟ್ಟು
‘ಬೆಂಗಳೂರಿನ ಸಮಾವೇಶಕ್ಕೂ ಮುನ್ನವೇ ಅಖಿಲ ಭಾರತ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ ತರಬೇಕು. ಅದಕ್ಕೆ ಬಸವರಾಜ ಹೊರಟ್ಟಿ ಅಧ್ಯಕ್ಷ, ಶಿವಾನಂದ ಜಾಮದಾರ ಕಾರ್ಯದರ್ಶಿ ಆಗಲಿ’ ಎಂದು ಗದಗ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಸಲಹೆ ನೀಡಿದರು.

‘ನೀವು ತಜ್ಞರ ಸಮಿತಿ ರಚಿಸುತ್ತೇವೆ ಎನ್ನುತ್ತ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ ತರದಿದ್ದರೆ ಈ ಹೋರಾಟ ತೀವ್ರತೆ ಕಳೆದುಕೊಳ್ಳುವ ಸಾಧ್ಯತೆ ಇದೆ’ ಎಂದರು.
*
‘ಬಸವ ವಚನ ದೀಪ್ತಿ’ ಕೈಬಿಡಲು ಮಾತೆ ಮಹಾದೇವಿ ಸಮ್ಮತಿ
ಬಸವಣ್ಣನವರ ವಚನಗಳಲ್ಲಿನ ‘ಕೂಡಲ ಸಂಗಮದೇವ’ ಅಂಕಿತನಾಮವನ್ನು ‘ಲಿಂಗದೇವ’ ಎಂದು ಬದಲಿಸಿ ಪ್ರಕಟಿಸಿರುವ ‘ಬಸವ ವಚನ ದೀಪ್ತಿ’ ಗ್ರಂಥವನ್ನು ವಾಪಸು ಪಡೆಯಲು ಮಾತೆ ಮಹಾದೇವಿ ಸಮ್ಮತಿಸಿದರು.

‘ನಿಮ್ಮ ಅಂಕಿತನಾಮದ ವಿವಾದ ಪ್ರತ್ಯೇಕ ಲಿಂಗಾಯತ ಧರ್ಮದ ನಮ್ಮ ಹೋರಾಟಕ್ಕೆ ಸಣ್ಣ ಮಟ್ಟದಲ್ಲಿ ಅಡ್ಡಿಯಾಗುತ್ತಿದೆ. ಈಗ ಸುಪ್ರೀಂ ಕೋರ್ಟ್‌ ತೀರ್ಪು ಬಂದಿದ್ದು, ಜನರ ಆದೇಶವೂ ಅದೇ ಆಗಿದೆ. ನೀವು ತ್ಯಾಗ ಮಾಡಬೇಕು’ ಎಂದು ಸಚಿವ ಎಂ.ಬಿ. ಪಾಟೀಲ ಕೋರಿದರು.

ಇದಕ್ಕೆ ಸಮ್ಮಿತಿಸಿದ ಮಾತೆ ಮಹಾದೇವಿ, ‘ಸುಪ್ರೀಂ ಕೋರ್ಟ್‌ ಆದೇಶ ಗೌರವಿಸುತ್ತೇವೆ. ನಾವು ಮತ್ತೆ ಆ ಗ್ರಂಥ ಪ್ರಕಟಿಸುವುದಿಲ್ಲ’ ಎಂದು ಘೋಷಿಸಿದರು. ‘ಅಣ್ಣ ಬಸವಣ್ಣ ಅನ್ನಬೇಡಿ, ಅಪ್ಪ ಬಸವಣ್ಣ’ ಅನ್ನಿ ಎಂದೂ ಅವರು ಹೇಳಿದರು.
*

ಈ ದೇಶದಲ್ಲಿರುವ ಲಿಂಗಾಯತರಿಗೆ ತಾನೇ ಸರ್ವೋಚ್ಚ ಎಂಬ ಹುಚ್ಚು ಕಲ್ಪನೆಯಿಂದ ಅಖಿಲ ಭಾರತ ವೀರಶೈವ ಮಹಾಸಭಾ ಹೊರ ಬರಬೇಕು.
ಡಾ.ಶಿವಾನಂದ ಜಾಮದಾರ,
ನಿವೃತ್ತ ಐಎಎಸ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT