ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣದ್ರಾಕ್ಷಿ ಸಹವಾಸವೇ ಸಾಕು!

ದರ ಕುಸಿತ; ಸಂಕಷ್ಟದಲ್ಲಿರುವ ದ್ರಾಕ್ಷಿ ಬೆಳೆಗಾರರ ನಿರ್ಧಾರ
Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವಿಜಯಪುರ: ಒಣದ್ರಾಕ್ಷಿ ದರ ಪಾತಾಳಕ್ಕೆ ಕುಸಿದಿದೆ. ಬೆಳೆಗಾರರ ನಿರೀಕ್ಷೆ ನುಚ್ಚು ನೂರಾಗಿದ್ದು, ದ್ರಾಕ್ಷಿ ತೋಟದ ನಿರ್ವಹಣೆ ಕೂಡ ಸಂಕಷ್ಟದಾಯಕವಾಗಿದೆ.

ಭೀಕರ ಬರದ ಹೊಡೆತ, ಅಂತರ್ಜಲ ಕುಸಿತದ ನಡುವೆಯೂ ದ್ರಾಕ್ಷಿ ಬೆಳೆ ಕಾಪಿಟ್ಟುಕೊಂಡು ಬಂದಿದ್ದ ಬೆಳೆಗಾರರು, ಇದೀಗ ಧಾರಣೆಯ ಕುಸಿತದಿಂದ ಆಘಾತಕ್ಕೀಡಾಗಿದ್ದಾರೆ.

‘ಸದ್ಯಕ್ಕೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಒಣದ್ರಾಕ್ಷಿ ಬೆಲೆ ₹ 30ರಿಂದ ₹100 ಇದೆ. ಉತ್ಕೃಷ್ಟ ದರ್ಜೆಯ ಉತ್ಪನ್ನಕ್ಕೆ ₹120 ಸಿಕ್ಕರೆ, ಸಾಮಾನ್ಯ ದರ್ಜೆಯ ದ್ರಾಕ್ಷಿಗೆ ₹50ರಿಂದ ₹ 70 ಸಿಕ್ಕರೆ ಪುಣ್ಯ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಇದು ಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ’ ಎಂದು ಬಸವನಬಾಗೇವಾಡಿ ತಾಲ್ಲೂಕು ಕೊಲ್ಹಾರದ ಪ್ರಗತಿಪರ ದ್ರಾಕ್ಷಿ ಬೆಳೆಗಾರ ಸಿದ್ದಪ್ಪ ದುಂಡಪ್ಪ ಬಾಲಗೊಂಡ ಅವರು ಹೇಳುತ್ತಾರೆ.

‘ಒಂದು ಎಕರೆ ದ್ರಾಕ್ಷಿ ತೋಟದ ವಾರ್ಷಿಕ ನಿರ್ವಹಣೆಗೆ ಕನಿಷ್ಠ ₹ 1 ಲಕ್ಷ ಬೇಕು. ನಾಲ್ಕು ವರ್ಷದಲ್ಲಿ ಎರಡು ಬಂಪರ್‌ ಇಳುವರಿ ಸಿಕ್ಕರೆ ನಮ್ಮ ಪುಣ್ಯ. ಪ್ರಕೃತಿಯಲ್ಲಿನ ವೈಪರೀತ್ಯ, ನೀರಿನ ಅಲಭ್ಯತೆಯಿಂದಾಗಿ ನಿರೀಕ್ಷಿತ ಫಸಲು ಕೈ ಸೇರುವುದೇ ಅಪರೂಪ.

‘ಎಲ್ಲದರ ನಡುವೆ ಒಳ್ಳೆಯ ಉತ್ಪನ್ನ ದೊರಕಿದರೆ ಎಕರೆಗೆ ಮೂರೂವರೆಯಿಂದ ನಾಲ್ಕು ಟನ್‌ ಒಣದ್ರಾಕ್ಷಿ ಸಿಗುತ್ತದೆ. ಇದರಲ್ಲಿ ಗುಣಮಟ್ಟದ ಉತ್ಪನ್ನ ಎರಡು ಟನ್‌ ಸಿಕ್ಕರೆ ಹೆಚ್ಚು. ಸದ್ಯದ ಧಾರಣೆಯ ಲೆಕ್ಕ ಹಿಡಿದರೆ ಲಾಭದ ಮಾತೇ ಇಲ್ಲ. ಖರ್ಚೆಲ್ಲವೂ ಮೈಮೇಲೆ ಬರುತ್ತಿದೆ. ಏಳೆಂಟು ವರ್ಷಗಳಿಂದ ಚೇತರಿಸಿಕೊಳ್ಳುವುದೇ ಸಾಧ್ಯವಾಗುತ್ತಿಲ್ಲ’ ಎಂದು ಅಲವತ್ತುಕೊಂಡರು.

ಹಸಿ ದ್ರಾಕ್ಷಿ ಮಾರುವೆ: ‘ಈಗ ಮಾರುಕಟ್ಟೆಯಲ್ಲಿ ಇರುವುದು ನಾಲ್ಕೈದು ವರ್ಷದ ಹಿಂದಿನ ಧಾರಣೆ. ಔಷಧಿ, ಕೂಲಿ ವೆಚ್ಚ ಈಗ ಹೆಚ್ಚಾಗಿದ್ದು ಇಂತಹ ಪರಿಸ್ಥಿತಿಯಲ್ಲಿ ತೋಟ ನಿರ್ವಹಿಸುವುದು ಕಷ್ಟ’ ಎಂದು ವಿಜಯಪುರ ತಾಲ್ಲೂಕು ಉಪ್ಪಲದಿನ್ನಿಯ ಯುವ ರೈತ ಸೋಮನಾಥ ಶಿವನಗೌಡ ಬಿರಾದಾರ ತಿಳಿಸಿದರು.

‘ಒಂದು ಕೆ.ಜಿ. ಒಣದ್ರಾಕ್ಷಿ ತಯಾರಿಕೆಗೆ ಕನಿಷ್ಠ ₹ 25 ವೆಚ್ಚವಾಗುತ್ತದೆ. ಧಾರಣೆ ಸಿಗುವ ತನಕ ಶೈತ್ಯಾಗಾರದಲ್ಲಿ ಕಾಯ್ದಿಡಬೇಕೆಂದರೆ ಪ್ರತಿ ಟನ್‌ಗೆ ₹ 500 ಬಾಡಿಗೆ ನೀಡಬೇಕು. ಇದೆಲ್ಲದರ ನಡುವೆ ಸ್ಥಿರವಾದ ದರ ಸಿಗುತ್ತದೆಯೇ? ಅದೂ ಇಲ್ಲ. ಅದಕ್ಕಾಗಿ ಮಣೂಕ (ಒಣದ್ರಾಕ್ಷಿ) ಸಹವಾಸವೇ ಬೇಡ ಎಂದು ನಿರ್ಧರಿಸಿ, ಈ ಹಂಗಾಮಿನಲ್ಲಿ ಹಸಿ ದ್ರಾಕ್ಷಿಯನ್ನೇ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದೇನೆ’ ಎನ್ನುತ್ತಾರೆ ಅವರು.

‘ವಾತಾವರಣ ನೋಡಿಕೊಂಡು, ಈಗಿನಿಂದಲೇ ಚಾಟ್ನಿ (ಗಿಡದ ಕಟಾವು) ನಡೆಸಿದ್ದೇನೆ. ಹಿಂದಿನ ಹಂಗಾಮಿನಲ್ಲಿ ₹35ರಿಂದ ₹45ರ ತನಕ ಧಾರಣೆ ಸಿಕ್ಕಿತ್ತು. ಈ ದರ ಸಿಕ್ಕರೆ ಸಾಕು. ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬಹುದು’ ಎಂದು ಬಿರಾದಾರ ಹೇಳಿದರು.

‘ಒಳ್ಳೆಯ ಧಾರಣೆ ಸಿಗಬಹುದು ಎಂದು ಇಲ್ಲಿಯವರೆಗೂ ಕಾದೆವು. ಚಾಟ್ನಿಗೂ ಕಾಸಿಲ್ಲದಂತಾಗಿದೆ. ಈ ಬಾರಿ ಮಣೂಕ ಸಹವಾಸಕ್ಕೇ ಹೋಗುವುದಿಲ್ಲ’ ಎಂದು ಬೆಳೆಗಾರರಾದ ಮಲ್ಲಪ್ಪ ಸಂಗಪ್ಪ ತುರದನ್ನ, ನಿಜಪ್ಪ ಸಂಗಪ್ಪ ಪೂಜಾರಿ, ಸಂಗಪ್ಪ ಗದಿಗೆಪ್ಪ ಮೆಂಡೆಗಾರ ನಿರ್ಧಾರದ ಧ್ವನಿಯಲ್ಲಿ ತಿಳಿಸಿದರು.
*
₹ 2.5–3 ಸಾವಿರ ಕೋಟಿ ವಾರ್ಷಿಕ ವಹಿವಾಟು
11 ಸಾವಿರ ಹೆಕ್ಟೇರ್‌ನಲ್ಲಿ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ
ಶೇ 85–90ರಷ್ಟು ಬೆಳೆ ಒಣದ್ರಾಕ್ಷಿ ತಯಾರಿಕೆಗೆ ಬಳಕೆ
16 ಸಾವಿರಕ್ಕೂ ಅಧಿಕ ದ್ರಾಕ್ಷಿ ಬೆಳೆಗಾರರು ಜಿಲ್ಲೆಯಲ್ಲಿ
ಆಧಾರ: ಜಿಲ್ಲಾ ತೋಟಗಾರಿಕಾ ಇಲಾಖೆ
*
ಒಣದ್ರಾಕ್ಷಿ ಧಾರಣೆ ಸ್ಥಿರವಾಗಿರದೆ ಕೈ ಸುಟ್ಟಿದ್ದೇ ಹೆಚ್ಚು. ಈ ಬಾರಿ ಹಸಿ ದ್ರಾಕ್ಷಿ ಮಾರಾಟ ಮಾಡುವ ಆಲೋಚನೆಯಿಂದ ಬೇಗ ಚಾಟ್ನಿ ನಡೆಸಿರುವೆ.
- ಸೋಮನಾಥ ಬಿರಾದಾರ,
ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT