ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗುಂದಿದ ‘ನವರಾತ್ರಿ ಗೊಂಬೆ’ ವ್ಯಾಪಾರ

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ದಸರಾ ಹಬ್ಬ ಎಂದಾಗ ಮನಸ್ಸಿನಲ್ಲಿ ಮೂಡುವುದು ಬಣ್ಣ ಬಣ್ಣದ ಗೊಂಬೆಗಳ ಪ್ರದರ್ಶನ. ಆದರೆ, ಸರಕು ಮತ್ತು ಸೇವಾ ತೆರಿಗೆಯಿಂದಾಗಿ (ಜಿಎಸ್‌ಟಿ) ಗೊಂಬೆಗಳ ಬೆಲೆ ದುಬಾರಿಯಾಗಿದ್ದು, ವ್ಯಾಪಾರದ ಮೇಲೂ ಪರಿಣಾಮ ಬೀರಿದೆ.

ಮರದಿಂದ ತಯಾರಿಸಿದ, ಬಣ್ಣ ಲೇಪಿತ ಗೊಂಬೆಗಳ ಮೇಲೆ ಶೇ 12ರಷ್ಟು ಹಾಗೂ ಜೈಪುರದ ಗೊಂಬೆಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದರಿಂದ ಗೊಂಬೆಗಳ ದರ ದುಪ್ಪಟ್ಟಾಗಿದೆ.

‘ಕಳೆದ ವರ್ಷ ₹450ಕ್ಕೆ ಜೋಡಿ ಗೊಂಬೆ ಸಿಗುತ್ತಿತ್ತು. ಈಗ ಅವುಗಳ ದರ ₹1,000ಕ್ಕೆ ಏರಿಕೆ ಆಗಿದೆ’ ಎಂದು ನಗರದ ಗೊಂಬೆ ವ್ಯಾಪಾರಿ ನಾಗಲಕ್ಷ್ಮಿ ತಿಳಿಸಿದರು.

‘ಇತ್ತೀಚೆಗೆ ನಗದುರಹಿತ ವ್ಯಾಪಾರ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗೊಂಬೆಗಳನ್ನು ಖರೀದಿಸುವವರು ಕಾರ್ಡ್‌ ಮೂಲಕವೇ ಹಣ ಪಾವತಿಸುತ್ತಾರೆ. ಅಂಗಡಿಗಳಲ್ಲಿ ಜಿಎಸ್‌ಟಿ ಸೇರಿಸಿ ದರ ನಿಗದಿಪಡಿಸುತ್ತೇವೆ. ಬೀದಿ ಬದಿಗಳಲ್ಲಿ ಯಾವುದೇ ರಸೀದಿ ನೀಡದೆಯೇ ಕಡಿಮೆ ಬೆಲೆಗೆ ಗೊಂಬೆಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲಿನ ದರಕ್ಕೆ ಹೋಲಿಸಿದಾಗ ಗ್ರಾಹಕರಿಗೆ ಅಂಗಡಿಗಳಲ್ಲಿ ದರ ದುಬಾರಿ ಎನಿಸುತ್ತದೆ’ ಎಂದರು.

‘ಬೀದಿಗಳಲ್ಲಿ ಗೊಂಬೆಗಳನ್ನು ಮಾರುವವರಿಂದಾಗಿ ಅಂಗಡಿ ನಡೆಸುವ ನಮಗೆ ತೊಂದರೆ ಆಗುತ್ತಿದೆ’ ಎಂದು ಗಾಂಧಿ ಬಜಾರ್‌ನ ಗೊಂಬೆ ವ್ಯಾಪಾರಿ ಸಂದೀಪ್‌ ದೂರಿದರು.

‘ಹೊರ ರಾಜ್ಯದಿಂದ ಬರುವ ಗೊಂಬೆಗಳ ಮೇಲೆ ಜಿಎಸ್‌ಟಿ ಹಾಕಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ತಮಿಳುನಾಡು, ಆಂಧ್ರಪ್ರದೇಶ, ಜೈಪುರದಿಂದ ನಗರದ ಮಾರುಕಟ್ಟೆಗೆ ಸಾಕಷ್ಟು ಗೊಂಬೆಗಳು ಬರುತ್ತವೆ. ಇವು ಬೀದಿಗಳಲ್ಲಿಯೇ ಮಾರಾಟವಾಗುತ್ತವೆ.   ಮಾರಾಟ ಮಾಡುವವರಿಗೆ ಜಿಎಸ್‌ಟಿ ಬಗ್ಗೆ ಯಾವುದೇ ಅರಿವು ಇಲ್ಲ’ ಎಂದು ವ್ಯಾಪಾರಿ ಗೋವಿಂದ್‌ ತಿಳಿಸಿದರು.

‘ಈ ಹಿಂದೆ ದಸರಾ ಗೊಂಬೆಗಳ ಪ್ರದರ್ಶನಕ್ಕೆ ಚನ್ನಪಟ್ಟಣದ ಗೊಂಬೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಆಗುತ್ತಿದ್ದವು. ತೆರಿಗೆ ವಿಧಿಸಿರುವುದರಿಂದ ಈ ಗೊಂಬೆಗಳು ದುಬಾರಿ ಆಗಿವೆ. ಹಾಗಾಗಿ ಅವುಗಳ ಮಾರಾಟ ಪ್ರಮಾಣ ಕಡಿಮೆಯಾಗಿದೆ. ಅವುಗಳ ಜಾಗವನ್ನು ಹೊರ ರಾಜ್ಯಗಳಿಂದ ಬರುವ ಟೆರ್ರಾಕೋಟಾ ಮತ್ತು ಮಣ್ಣಿನ ಗೊಂಬೆಗಳು ಆಕ್ರಮಿಸಿವೆ’ ಎಂದರು.

₹ 10,000 ಖರ್ಚಾಗುತ್ತಿದೆ: ‘ಸುಮಾರು 30 ವರ್ಷಗಳಿಂದ ಗೊಂಬೆಗಳ ಪ್ರದರ್ಶನ ಏರ್ಪಡಿಸುತ್ತಿದ್ದೇವೆ. ಆರಂಭದ ದಿನಗಳಲ್ಲಿ ಗೊಂಬೆಗಳನ್ನು ತಂದು ಜೋಡಿಸಲು ₹ 2,000ದಿಂದ ₹ 3,000 ಖರ್ಚಾಗುತ್ತಿತ್ತು. ಈಗ ಅದು ₹10,000ಕ್ಕೆ ತಲುಪಿದೆ.

‘ಅಂಗಡಿಗಳಲ್ಲಿ ಮಾರಾಟವಾಗುವ ಗೊಂಬೆಗಳ ಗುಣಮಟ್ಟ ಚೆನ್ನಾಗಿರುತ್ತದೆ. ಅವು ಹೆಚ್ಚು ಬಾಳಿಕೆ ಬರುತ್ತವೆ. ಹೀಗಾಗಿ, ಬೆಲೆ ಕಡಿಮೆ ಇದೆ ಎಂಬ ಕಾರಣಕ್ಕೆ ಬೀದಿ ಬದಿಯಲ್ಲಿ ಗೊಂಬೆ ಖರೀದಿಸುವುದಿಲ್ಲ. ಈ ವರ್ಷ ಪ್ರದರ್ಶನದ ಆಯೋಜನೆಗಿಂತ ಗೊಂಬೆ ಖರೀದಿ ವೆಚ್ಚವೇ ಜಾಸ್ತಿಯಾಗಿದೆ’ ಎಂದು ಬಸವೇಶ್ವರ ನಗರ ನಿವಾಸಿ ಶ್ರೀನಿವಾಸ್‌ ಹೇಳಿದರು.

ವ್ಯಾಪಾರ ಕಡಿಮೆ ಆಗಿಲ್ಲ: ‘ಗೊಂಬೆಗಳ ಬೆಲೆ ದುಬಾರಿಯಾಗಿದೆ. ಆದರೆ, ನಮ್ಮ ವ್ಯಾಪಾರಕ್ಕೆ ತೊಂದರೆ ಆಗಿಲ್ಲ. ಕಳೆದ ಬಾರಿಯಷ್ಟೇ ವ್ಯಾಪಾರ ಆಗಿದೆ.

‘ನಮ್ಮಲ್ಲಿ ವೈವಿಧ್ಯಮಯ ಗೊಂಬೆಗಳು ದೊರೆಯುತ್ತವೆ. ಈ ಕಾರಣಕ್ಕೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಅಂಗಡಿಗೆ ಭೇಟಿ ನೀಡುತ್ತಾರೆ. ಪ್ರತಿ ವರ್ಷವೂ ಗೊಂಬೆ ಕೂರಿಸುವವರು ಹಣದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಗೊಂಬೆ ದುಬಾರಿಯಾದರೂ ಅವರು ಖರೀದಿಸುತ್ತಾರೆ’ ಎಂದು ಗಾಂಧಿಬಜಾರ್‌ನ ಸತೀಶ್‌ ಸ್ಟೋರ್ಸ್‌ನ ಮಂಜುನಾಥ್‌ ಮಾಹಿತಿ ನೀಡಿದರು.
*
‘ಖರೀದಿಗಿಂತ ತಯಾರಿ ಲೇಸು’
‘ನವರಾತ್ರಿಗೆ ಎರಡು ವಾರಗಳ ಮೊದಲೇ ಗೊಂಬೆಗಳನ್ನು ಕೂರಿಸುವ ಸಿದ್ಧತೆ ಆರಂಭವಾಗುತ್ತದೆ. ಪ್ರತಿ ಬಾರಿ ಮಾರುಕಟ್ಟೆಯಿಂದ ಗೊಂಬೆಗಳನ್ನು ತರುತ್ತಿದ್ದೆವು. ಬೆಲೆ ದುಬಾರಿಯಾಗುತ್ತಿರುವ ಪರಿಣಾಮ ಈ ಬಾರಿ ನಾವೇ ಮಣ್ಣಿನಿಂದ ಗೊಂಬೆಗಳನ್ನು ಸಿದ್ಧಪಡಿಸಿದ್ದೇವೆ. ಕುಟುಂಬದವರೆಲ್ಲರೂ ಒಟ್ಟಾಗಿ ಗೊಂಬೆಗಳನ್ನು ತಯಾರಿಸಿದೆವು’ ಎಂದು ವಸಂತಪುರದ ನಿವಾಸಿ ಅನಂತಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT