ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆಗೆ ಚೇತರಿಕೆ ನೀಡುವ ಉತ್ತೇಜನಾ ಕ್ರಮ

ಹಲವಾರು ಮಾರ್ಗೋಪಾಯಗಳ ಪರಿಶೀಲನೆಯಲ್ಲಿ ಸರ್ಕಾರ
Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶಿ ಆರ್ಥಿಕತೆಗೆ ಚೇತರಿಕೆ ನೀಡಲು ಸಿದ್ಧಪಡಿಸುತ್ತಿರುವ ಉತ್ತೇಜನಾ ಕ್ರಮಗಳಲ್ಲಿ ಷೇರು ವಿಕ್ರಯ ತ್ವರಿತಗೊಳಿಸುವ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಸ್‌ಎಂಇ) ಸುಲಭ ಸಾಲ ಒದಗಿಸುವ ಕ್ರಮಗಳೂ ಸೇರಿವೆ.

ಮೂರು ವರ್ಷಗಳಲ್ಲಿಯೇ ಅತಿ ಕಡಿಮೆ ಮಟ್ಟದ ವೃದ್ಧಿ ದರ ದಾಖಲಿಸಿರುವ ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡಲು ದೇಶಿ ಹೂಡಿಕೆ ಉತ್ತೇಜಿಸುವ, ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ  ಮತ್ತು ಕೈಗೆಟುಕುವ ಗೃಹ ನಿರ್ಮಾಣ ಯೋಜನೆಗಳಿಗೆ ಹೆಚ್ಚು ಹಣ ವೆಚ್ಚ ಮಾಡುವ ಕ್ರಮಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಥವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿ, ಸಾಧ್ಯವಿರುವ ಪರಿಹಾರ ಕ್ರಮಗಳನ್ನು ಪಟ್ಟಿ ಮಾಡುವ ಹೊಣೆಯನ್ನು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರಿಗೆ ಒಪ್ಪಿಸಲಾಗಿದೆ. ಉತ್ತೇಜನಾ ಕೊಡುಗೆಗಳಿಗೆ ಹಣ ಹೊಂದಿಸುವುದೇ ಮುಖ್ಯ ಸಮಸ್ಯೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 3.2ಕ್ಕೆ ಇಳಿಸುವ ಗುರಿ ಸಡಿಲಗೊಳಿಸುವ ಬಗ್ಗೆ ಸರ್ಕಾರ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

ಬೇಡಿಕೆಗೆ ಸಂಬಂಧಿಸಿದ ಒತ್ತಡ ನಿವಾರಿಸಿ, ಹೆಚ್ಚು ವೆಚ್ಚ ಮಾಡಲು ಗ್ರಾಹಕರ ಕೈಗೆ ಹೆಚ್ಚು ಹಣ ಒದಗಿಸುವುದು ಸದ್ಯದ  ತುರ್ತು ಅಗತ್ಯವಾಗಿದೆ. ಹಬ್ಬದ ದಿನಗಳಲ್ಲಿಯೇ ಹೀಗೆ ಮಾಡಿದರೆ ಹೆಚ್ಚು ಲಾಭಕರ ಎನ್ನುವುದು ಯೋಜನೆ ರೂಪಿಸುವವರಿಗೆ ಗೊತ್ತಿದೆ. ಸದ್ಯಕ್ಕೆ ಖಾಸಗಿ ಉಪಭೋಗ ಬೇಡಿಕೆಯು ಕಡಿಮೆ ಮಟ್ಟದಲ್ಲಿ ಇದೆ. ಗ್ರಾಹಕರು ಸರಕು ಮತ್ತು ಸೇವೆಗಳ ಖರೀದಿಗೆ ಹೆಚ್ಚು ವೆಚ್ಚ ಮಾಡಬೇಕೆಂದರೆ ತೆರಿಗೆ ದರ ಕಡಿತ ಅಥವಾ ಆದಾಯ ತೆರಿಗೆ ಪಾವತಿಯ ಗರಿಷ್ಠ ಮಿತಿ ಹೆಚ್ಚಿಸುವುದೊಂದೆ ದಾರಿ ಇದೆ. ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ.

ಚಲಾವಣೆಯಲ್ಲಿದ್ದ ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯ ಪರಿಣಾಮ ಮತ್ತು ಜಿಎಸ್‌ಟಿ ಜಾರಿ ಸಂದರ್ಭದಲ್ಲಿನ ಅನಿಶ್ಚಿತತೆ ಕಾರಣಕ್ಕೆ ಆರ್ಥಿಕ ವೃದ್ಧಿ ದರವು ಏಪ್ರಿಲ್‌– ಜೂನ್‌ ತ್ರೈಮಾಸಿಕದಲ್ಲಿ ಮೂರು ವರ್ಷಗಳ ಹಿಂದಿನ ಕನಿಷ್ಠ ಮಟ್ಟಕ್ಕೆ (ಶೇ 5.7) ಕುಸಿದಿತ್ತು. ಇದರಿಂದಾಗಿ ಅತ್ಯಂತ ತ್ವರಿತವಾಗಿ ಬೆಳವಣಿಗೆ ಕಾಣುವ ಆರ್ಥಿಕತೆ ಎನ್ನುವ ಹೆಗ್ಗಳಿಕೆಗೂ ಎರವಾಗಿತ್ತು. ಸೀಮಿತ ಸಂಪನ್ಮೂಲ ಮತ್ತು ಜಿಎಸ್‌ಟಿಯಿಂದ ಹೆಚ್ಚಿನ ಲಾಭ ದೊರೆಯದ ಕಾರಣಕ್ಕೆ ಸರ್ಕಾರ ಹೂಡಿಕೆ ಪ್ರಮಾಣ ಹೆಚ್ಚಿಸುವ ಇತರ ಮಾರ್ಗೋಪಾಯಗಳನ್ನು ಪರಿಶೀಲಿಸುತ್ತಿದೆ. ಮೂರ್ನಾಲ್ಕು ತಿಂಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎಂದು ನಿರೀಕ್ಷಿಸಿರುವ ಸರ್ಕಾರ, ವಿತ್ತೀಯ ಕೊರತೆ ಗುರಿ ಉಲ್ಲಂಘಿಸುವ ಸಾಧ್ಯತೆ ಕಂಡುಬರುತ್ತಿಲ್ಲ.

ಷೇರು ವಿಕ್ರಯ ತ್ವರಿತ: ಏರ್‌ ಇಂಡಿಯಾ ಖಾಸಗೀಕರಣ ಒಳಗೊಂಡಂತೆ, ಸರ್ಕಾರಿ ಸ್ವಾಮ್ಯದ ಪ್ರಮುಖ ಉದ್ದಿಮೆಗಳಲ್ಲಿನ ಪಾಲು ಬಂಡವಾಳ ಮಾರಾಟ  ತ್ವರಿತಗೊಳಿಸಿ ತೆರಿಗೆಯೇತರ ವರಮಾನ ಸಂಗ್ರಹ ಹೆಚ್ಚಿಸಲು ಉದ್ದೇಶಿಸಿದೆ.

ದೇಶದಲ್ಲಿ ರೈಲು ಮಾರ್ಗ ಅಭಿವೃದ್ಧಿಪಡಿಸಲು ದಕ್ಷಿಣ ಕೊರಿಯಾದ ಸಂಸ್ಥೆಗಳು ಆಸಕ್ತಿ ತೋರಿಸಿರುವುದರಿಂದ ಈ ಬಾಬತ್ತಿನಲ್ಲಿನ ಸರ್ಕಾರದ ವೆಚ್ಚ ಕಡಿಮೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.  ಬಾಂಡ್‌ಗಳ ನಿಯಮ ಸಡಿಲಿಕೆ ಮಾಡುವುದರಿಂದ ಸಾವಿರಾರು ಕೋಟಿ ರೂಪಾಯಿಗಳ ದುಡಿಯುವ ಬಂಡವಾಳ ಚಲಾವಣೆಗೆ ಬರಲಿದೆ.

‘ಮುದ್ರಾ’ ಯೋಜನೆಯಡಿ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲದ ಪ್ರಮಾಣ ಹೆಚ್ಚಿಸುವುದನ್ನೂ ಚರ್ಚಿಸಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಹಣಕಾಸಿನ ನೆರವು ಒದಗಿಸುವುದೂ ಆರ್ಥಿಕತೆಗೆ ಚೇತರಿಕೆ ನೀಡುವ ಕ್ರಮಗಳಲ್ಲಿ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT