ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದ ಮಾತಿನಲ್ಲಿ ಜನಾಭಿಪ್ರಾಯ ಪ್ರತಿಫಲನ

ಸ್ವಂತ ಅಭಿಪ್ರಾಯ ಹೇರಲು ಬಾನುಲಿ ಕಾರ್ಯಕ್ರಮ ಬಳಸುತ್ತಿಲ್ಲ: ಪ್ರಧಾನಿ
Last Updated 24 ಸೆಪ್ಟೆಂಬರ್ 2017, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮನದ ಮಾತು ಬಾನುಲಿ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇರುವುದಿಲ್ಲ. ಬದಲಿಗೆ ಜನರ ನಿಲುವುಗಳು ಮತ್ತು ಆಕಾಂಕ್ಷೆಗಳನ್ನು ಬಿಂಬಿಸಲು ಬಳಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಮೂರು ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ರಾಜಕಾರಣದಿಂದ ದೂರ ಇರಿಸಿದ್ದೇನೆ. ಯಾವುದೇ ಸಂದರ್ಭದಲ್ಲಿಯೂ ರಾಜಕೀಯ ಬಿಸಿ ಮತ್ತು ಸಿಟ್ಟು ಇದ್ದೇ ಇರುತ್ತದೆ. ಆದರೆ ಅದನ್ನು ದೂರವೇ ಇರಿಸಿ ಜನರ ಜತೆ ಸಂವಹನ ನಡೆಸಲು ಕಾರ್ಯಕ್ರಮವನ್ನು ಬಳಸಿಕೊಂಡಿದ್ದೇನೆ’ ಎಂದು ಮೋದಿ ತಿಳಿಸಿದ್ದಾರೆ.

ಸಮಾಜ ವಿಜ್ಞಾನಿಗಳು, ಸಂಶೋಧಕರು ಮತ್ತು ಮಾಧ್ಯಮ ಪರಿಣತರು ಈ ಕಾರ್ಯಕ್ರಮವನ್ನು ವಿಶ್ಲೇಷಣೆಗೆ ಒಳಪಡಿಸಬೇಕು. ಇದರ ಒಳ್ಳೆಯ ಮತ್ತು ಕೆಟ್ಟ ಅಂಶಗಳಿಗೆ ಬೆಳಕು ಚೆಲ್ಲಬೇಕು. ಅದರಿಂದ ಕಾರ್ಯಕ್ರಮಕ್ಕೆ ಪ್ರಯೋಜನವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಳೆದ ಮೂರು ವರ್ಷಗಳಲ್ಲಿ ಮನದ ಮಾತಿನಲ್ಲಿ ಪ್ರಸ್ತಾಪಿಸಿದ ಕೆಲವು ವಿಚಾರಗಳನ್ನು ಪ್ರಧಾನಿ ಮತ್ತೆ ನೆನಪಿಸಿಕೊಂಡರು. ಸ್ವಚ್ಛತೆ ಅಭಿಯಾನದ ಬಗ್ಗೆ ಮಾತನಾಡಿದ ಅವರು, ಭಾರತದ ಅಸಾಮಾನ್ಯ ವೈಶಿಷ್ಟ್ಯ ಮತ್ತು ಸೌಂದರ್ಯವನ್ನು ಶೋಧಿಸುವಂತೆ ಜನರಿಗೆ ಕರೆ ಕೊಟ್ಟರು. ಭಾರತದಲ್ಲಿ ನಡೆಯಲಿರುವ ಫಿಫಾ 17ರೊಳಗಿನವರ ಫುಟ್‌ಬಾಲ್‌ ಪಂದ್ಯಾವಳಿಯ ಬಗ್ಗೆಯೂ ಮಾತನಾಡಿದರು.

ಜನರ ಧ್ವನಿಯನ್ನು ಪ್ರಧಾನಿ ಆಲಿಸುವುದೇ ಇಲ್ಲ. ಬದಲಿಗೆ ತಮ್ಮ ನಿಲುವುಗಳನ್ನು ಮಾತ್ರ ಹೇಳುತ್ತಾರೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಪ್ರಧಾನಿ ಈ ರೀತಿ ಉತ್ತರ ನೀಡಿದರು: ಇ–ಮೇಲ್‌, ದೂರವಾಣಿ ಕರೆ, ಮೈ ಗವರ್ನ್‌ಮೆಂಟ್‌ ಮತ್ತು ನರೇಂದ್ರ ಮೋದಿ ಆ್ಯಪ್‌ಗಳ ಮೂಲಕ ಜನರು ತಿಳಿಸುವ ಅಭಿಪ್ರಾಯಗಳನ್ನು ಮನದ ಮಾತಿನಲ್ಲಿ ಹಂಚಿಕೊಳ್ಳುತ್ತಿರುವುದಾಗಿ ಅವರು ಹೇಳಿದರು. ದೇಶದ ವಿವಿಧ ಭಾಗಗಳಿಂದ ಇಂತಹ ಹಲವಾರು ಸಂದೇಶಗಳು ಬರುತ್ತಿವೆ. ಆದರೆ ಅರ್ಧ ಗಂಟೆಯ ಕಾರ್ಯಕ್ರಮದಲ್ಲಿ ಅವುಗಳಲ್ಲಿ ಕೆಲವನ್ನು ಮಾತ್ರ ಪ್ರಸ್ತಾಪಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

‘ಅಧ್ಯಾತ್ಮ ಗುರು ಆಚಾರ್ಯ ವಿನೋಭಾ ಭಾವೆ ಅವರ ಬೋಧನೆಗಳನ್ನು ಸದಾ ಮನಸ್ಸಿನಲ್ಲಿ ಇರಿಸಿಕೊಂಡಿರುತ್ತೇನೆ. ರಾಜಕೀಯದಿಂದ ಅತೀತವಾಗಿರುವುದೇ ಅತ್ಯಂತ ಪರಿಣಾಮಕಾರಿ ಎಂದು ಅವರು ಹೇಳುತ್ತಿದ್ದರು. ಮನದ ಮಾತು ಕಾರ್ಯಕ್ರಮದಲ್ಲಿ ದೇಶದ ಜನರನ್ನೇ ಕೇಂದ್ರ ಸ್ಥಾನದಲ್ಲಿ ಇರಿಸಲು ನಾನು ಪ್ರಯತ್ನಿಸಿದ್ದೇನೆ. ಈ ಕಾರ್ಯಕ್ರಮವನ್ನು ನಾನು ರಾಜಕೀಯದಿಂದ ದೂರವೇ ಇರಿಸಿದ್ದೇನೆ’ ಎಂದು ಮೋದಿ ಹೇಳಿದರು.

ಜನರ ಜತೆ ಸಂವಹನ ನಡೆಸುವ, ಅವರ ಭಾವನೆಗಳು, ಬಯಕೆಗಳು, ಆಕಾಂಕ್ಷೆಗಳು ಮತ್ತು ದೂರುಗಳನ್ನು ಕೂಡ ತಿಳಿದುಕೊಳ್ಳುವ ವಿಶಿಷ್ಟ ಅವಕಾಶ ನನಗೆ ಸಿಕ್ಕಿದೆ. ಮನದ ಮಾತು ನನ್ನ ಕಾರ್ಯಕ್ರಮ ಎಂದು ಯಾವತ್ತೂ ಹೇಳಿಲ್ಲ

 ಬಿಲಾಲ್‌ಗೆ ಮೆಚ್ಚುಗೆ

ಶ್ರೀನಗರದ 18 ವರ್ಷದ ಯುವಕ ಬಿಲಾಲ್‌ ದರ್‌ ಬಗ್ಗೆ ಪ್ರಧಾನಿ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಕಳೆದ 5–6 ವರ್ಷಗಳಿಂದ ಸ್ವ ಇಚ್ಛೆಯಿಂದ ಸ್ವಚ್ಛತೆಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಶ್ರೀನಗರದ ಸರೋವರವೊಂದರ ಸಮೀಪದಲ್ಲಿ ಜನರು ಬಿಸಾಕುವ ಬಳಸಿದ ಬಾಟಲಿಗಳು, ಪ್ಲಾಸ್ಟಿಕ್‌ ಮತ್ತಿತರ ವಸ್ತುಗಳನ್ನು ಬಿಲಾಲ್‌ ಹೆಕ್ಕುತ್ತಾರೆ. ಶ್ರೀನಗರ ನಗರಪಾಲಿಕೆಯು ಬಿಲಾಲ್‌ ಅವರನ್ನು ಸ್ವಚ್ಛತಾ ಪ್ರಚಾರ ರಾಯಭಾರಿಯಾಗಿ ನೇಮಿಸಿದೆ. ಸಿನಿಮಾ ತಾರೆಯರು ಅಥವಾ ಕ್ರೀಡಾಪಟುಗಳನ್ನು ಮಾತ್ರ ಪ್ರಚಾರ ರಾಯಭಾರಿಗಳನ್ನಾಗಿ ಮಾಡಬೇಕಿಲ್ಲ ಎಂದು ಪ್ರಧಾನಿ ಹೇಳಿದರು.

ಸ್ವಾತಿ, ನಿಧಿಗೆ ಅಭಿನಂದನೆ

ಹುತಾತ್ಮ ಕರ್ನಲ್‌ ಸಂತೋಷ್‌ ಮಹಾದಿಕ್‌ ಅವರ ವಿಧವೆ ಸ್ವಾತಿ ಮಹಾದಿಕ್‌ ಮತ್ತು ನಾಯ್ಕ್‌ ಮುಕೇಶ್‌ ದುಬೆ ಅವರ ವಿಧವೆ ನಿಧಿ ದುಬೆ ಅವರು ಇತ್ತೀಚೆಗೆ ಸೇನೆಗೆ ಸೇರಿದ್ದನ್ನು ಪ್ರಧಾನಿ ಶ್ಲಾಘಿಸಿದರು.

‘ಇಂತಹ ದಿಟ್ಟ ಮಹಿಳೆಯರ ಬಗ್ಗೆ ದೇಶದ ಎಲ್ಲರಲ್ಲೂ ಗೌರವ ಇರುವುದು ಸಹಜ. ಈ ಸಹೋದರಿಯರನ್ನು ಅಭಿನಂದಿಸುತ್ತೇನೆ. ಅವರು ದೇಶದ ಜನರಲ್ಲಿ ಹೊಸ ಆಕಾಂಕ್ಷೆಗಳು ಮತ್ತು ಜಾಗೃತಿ ಮೂಡಿಸಿದ್ದಾರೆ’ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಖಾದಿ ಪ್ರಚಾರ

ಖಾದಿಯನ್ನು ಜನಪ್ರಿಯಗೊಳಿಸುವ ಚಳವಳಿಯನ್ನು ಮುಂದಕ್ಕೆ ಒಯ್ಯಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ. ಖಾದಿ ಎಂದರೆ ಬರೇ ಬಟ್ಟೆ ಅಲ್ಲ, ಅದೊಂದು ಚಿಂತನೆ ಎಂದು ಅವರು ಹೇಳಿದ್ದಾರೆ. ‘ಖಾದಿ ಬಟ್ಟೆಯನ್ನು ಮಾತ್ರ ಬಳಸಬೇಕು ಎಂದು ನಾನು ಹೇಳುವುದಿಲ್ಲ. ಆದರೆ ವಿವಿಧ ಬಟ್ಟೆಗಳ ನಡುವೆ ಮನೆಯಲ್ಲಿ ಖಾದಿ ಬಟ್ಟೆಯೂ ಇರಲಿ. ಹೊದಿಕೆ, ಕಿಟಕಿ ಪರದೆ ಅಥವಾ ಕರವಸ್ತ್ರ ಮುಂತಾದವುಗಳಲ್ಲಿ ಖಾದಿ ಬಟ್ಟೆ ಬಳಸಬಹುದು. ಯುವ ಜನರಲ್ಲಿಯೂ ಖಾದಿಯ ಬಗ್ಗೆ ಆಸಕ್ತಿ ಹೆಚ್ಚಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಖಾದಿ ಕ್ಷೇತ್ರಕ್ಕೆ ಹೊಸ ತಂತ್ರಜ್ಞಾನ ತರುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆದಿದೆ. ಕಳೆದ 25 ಅಥವಾ 30 ವರ್ಷಗಳಿಂದ ಈ ಕ್ಷೇತ್ರ ನಿಷ್ಕ್ರಿಯವಾಗಿತ್ತು ಎಂದು ಅವರು ಹೇಳಿದ್ದಾರೆ.

ಗಣ್ಯರ ನೆನಪು
ಮಹಾತ್ಮ ಗಾಂಧಿ, ಸರ್ದಾರ್‌ ಪಟೇಲ್‌, ಲಾಲ್ ಬಹಾದ್ದೂರ್ ಶಾಸ್ತ್ರಿ, ಜಯಪ್ರಕಾಶ್‌ ನಾರಾಯಣ್‌ ಮತ್ತು ನಾನಾಜಿ ದೇಶಮುಖ್‌ ಅವರಂತಹ ವ್ಯಕ್ತಿಗಳ ನೆನಪಿಗೆ ಮುಂಬರುವ ಅಕ್ಟೋಬರ್‌ ತಿಂಗಳು ಮುಡಿಪು. ಇವರೆಲ್ಲರೂ ಈ ತಿಂಗಳಲ್ಲಿ ಹುಟ್ಟಿದವರು. ಅದಕ್ಕೂ ಮೊದಲು ಅಂದರೆ ಸೆಪ್ಟೆಂಬರ್‌ 25 ದೀನ ದಯಾಳ್ ಉಪಾಧ್ಯಾಯ ಅವರ ಹುಟ್ಟಿದ ದಿನ ಎಂದು ಪ್ರಧಾನಿ ನೆನಪು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT