ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜಪಡೆ ಹಿಂದಿನ ಸ್ತ್ರೀಶಕ್ತಿ

Last Updated 25 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮನೆ ಬಿಟ್ಬಿಟ್ಟು ವರ್ಸಕ್ಕೊಂದ್‌ ಸಾರಿ ಇಲ್ಲಿಗೆ ಗಂಡನ್‌ ಜತಿ ಬರ್ತೇವಿ. ಅವರ ಆರೋಗ್ಯ ಸಂದಾಗಿದ್ರೆ ತಾನೆ ದಸರೆಲಿ ಆನೆಗಳ್ನ ಮುನ್ನಡ್ಸೋಕೆ ಆಗೋದು. ನಾಡಿಗೆ ಬರೋಕೆ ಕಷ್ಟವಾದ್ರೂ ಖುಷ್‌ಖುಷ್ಯಾಗಿ ಇದ್ದು ಓಯ್ತೀವಿ’.

ಮೈಸೂರಿನ ಅರಮನೆ ಆವರಣದಲ್ಲಿ ತಂಗಿರುವ ‘ಗೋಪಿ’ ಆನೆಯ ಮಾವುತ ಚಿನ್ನಪ್ಪ ಅವರ ಪತ್ನಿ ಅಕ್ಕಮ್ಮ ಹೀಗೆ ಹೇಳುತ್ತ ಬಟ್ಟೆ ತೊಳೆಯಲು ಮುಂದಾದರು. ವಿಶ್ವವಿಖ್ಯಾತ ದಸರಾ ಮಹೋತ್ಸವದ ಮುಕುಟಪ್ರಾಯ ಜಂಬೂಸವಾರಿಯ ಯಶಸ್ಸಿಗೆ ಹಗಲಿರುಳು ಶ್ರಮಿಸುವ ಮಾವುತ– ಕಾವಾಡಿಗಳ ಕುಟುಂಬದ ಬಹುತೇಕರದ್ದು ಇದೇ ಮಾತು.

ನಾಡಹಬ್ಬಕ್ಕೆ ಸರ್ಕಾರ ಹತ್ತಾರು ಕೋಟಿ ಖರ್ಚು ಮಾಡಿದರೂ ಆನೆಗಳು ಅಂಕೆ ತಪ್ಪಿದರೆ ಇಡೀ ದಸರಾ ಉತ್ಸವವೇ ಕಳೆಗುಂದುತ್ತದೆ. ಶಿಸ್ತುಬದ್ಧ, ಗಾಂಭೀರ್ಯದ ನಡಿಗೆಗೆ ಆನೆಗಳನ್ನು ಪಳಗಿಸುವಲ್ಲಿ ಮಾವುತ– ಕಾವಾಡಿಗರ ಕೌಶಲ ವರ್ಣನಾತೀತ. ಅವರಿಗೆ ಒತ್ತಾಸೆಯಾಗಿ ನಿಲ್ಲುವ ಮಹಿಳೆಯರ ಶ್ರಮ ಅಗೋಚರವಾಗಿಯೇ ಉಳಿದಿದೆ.

ಸುಮಾರು 35 ಟೆಂಟ್‌ಗಳಲ್ಲಿ 2 ತಿಂಗಳಮಟ್ಟಿಗೆ ಅರಮನೆ ಆವರಣದಲ್ಲಿ ನೆಲೆಸುತ್ತವೆ ಮಾವುತ– ಕಾವಾಡಿಗಳ ಕುಟುಂಬಗಳು. ಅರಮನೆ ನೋಡಲು ಬಂದವರು ಇತ್ತ ಹೆಜ್ಜೆ ಹಾಕಿದರೆ ಒಮ್ಮೆಲೆ ಎರಡು ಭಿನ್ನ ಪ್ರಪಂಚಗಳ ದರ್ಶನವಾಗುತ್ತವೆ. ಒಂದೆಡೆ ವೈಭವೋಪೇತ ಅರಮನೆ, ಅದರ ಮಗ್ಗುಲಲ್ಲೇ ಟೆಂಟ್‌ಗಳಲ್ಲಿ ಕಾಡಿನ ಮಕ್ಕಳ ಜೀವನ.

ನಾಡಿನ ಜನರೊಂದಿಗೆ ಮಾತನಾಡಲು ಹಿಂಜರಿಯುವ, ಕಾಡಿನಲ್ಲಿ ಆನೆಗಳೊಂದಿಗೆ ಒಡನಾಡಿದ್ದ ಜೀವಗಳಿಗೆ, ಒಮ್ಮೆಲೆ ನಾಡಿಗೆ ಬಂದು ಹೊಂದಿಕೊಳ್ಳುವ ತಾಪತ್ರಯ ಇಲ್ಲಿದೆ. ಆರು ತಿಂಗಳ ಹಸುಗೂಸನ್ನು ಕಟ್ಟಿಕೊಂಡು ಪತಿ ಜತೆ ಬಂದವರು ಇಲ್ಲಿದ್ದಾರೆ. ಪರೀಕ್ಷೆ ತಪ್ಪೀತೆಂಬ ಆತಂಕದಿಂದ ಪಕ್ಕದ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಬಂದಿರುವ ತಾಯಂದಿರಿದ್ದಾರೆ. ಕಾಯಿಲೆ ಬಿದ್ದಿರುವ ಅಮ್ಮನಿಗೆ ಆಗಾಗ ಹಾಡಿಗೆ ಹೋಗಿ ಶುಶ್ರೂಷೆ ಮಾಡಿ ಬರುವ ಮಗಳದ್ದು ಒಂದು ರೀತಿಯ ಸಂಕಟವಾದರೆ, ಮಕ್ಕಳ ಪಾಲನೆಯನ್ನು ಸಂಬಂಧಿಕರಿಗೆ ವರ್ಗಾಯಿಸಿರುವ ತಾಯಿಯದ್ದು ಮತ್ತೊಂದು ಸಂಕಟ. ಏಳೆಂಟು ಮಕ್ಕಳನ್ನು ನೋಡಿಕೊಳ್ಳಲು ಮಗಳಿಗೆ ಕಷ್ಟವಾಗುತ್ತದೆಂದು, ಮೊಮ್ಮಕ್ಕಳ ಪಾಲನೆಗೆ ಅಜ್ಜಿಯೂ ಇಲ್ಲಿಗೆ ಧಾವಿಸಿದ್ದಾಳೆ. ಇಂತಹ ದುಗುಡ– ದುಮ್ಮಾನ, ನೋವು– ನಲಿವನ್ನು ತುಂಬಿಕೊಂಡು ಬಂದಿರುವ ಇವರದ್ದು ಜಂಬೂಸವಾರಿಯನ್ನು ಅಡ್ಡಿ ಆತಂಕ ಇಲ್ಲದೆ ನಿರ್ವಹಿಸಬೇಕೆಂಬ ಏಕಮಾತ್ರ ಉದ್ದೇಶ.

ದುಬಾರೆ, ಬಂಡಿಪುರ, ನಾಗರಹೊಳೆ, ತಿತಿಮತಿ, ಕೆ.ಗುಡಿ, ಮತ್ತಿಗೋಡು, ಬಳ್ಳೆ ಹಾಡಿಗಳಿಂದ 15 ಆನೆಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದಿವೆ. ಅವುಗಳ ಪಾಲನೆಗೆ ತಮ್ಮ ಮನೆ ಬೀಗ ಜಡಿದು, ಕುಟುಂಬ ಸಮೇತ ಅರಮನೆ ಆವರಣದ ಮೂಲೆಯಲ್ಲಿ ಬಿಡಾರ ಹೂಡುತ್ತಾರೆ ಮಹಿಳೆಯರು.

ಪ್ರತಿ ಕುಟುಂಬಕ್ಕೆ ದಿನಕ್ಕೆ ನಾಲ್ಕು ಕೆ.ಜಿ ಅಕ್ಕಿ ನೀಡುವ ಜಿಲ್ಲಾಡಳಿತ ತರಕಾರಿ, ಬೇಳೆ ಕೊಳ್ಳಲು ವಾರಕ್ಕೆ ₹1000 ಕೊಡುತ್ತದೆ. ಸಂಬಂಧಿಕರು, ಸ್ನೇಹಿತರು ದಸರೆ ನೋಡಲು ಬಂದರೆ ಅವರ ಖರ್ಚನ್ನು ಕುಂಟುಂಬವೇ ಬರಿಸಬೇಕು. ದಸರಾಗೆ ಬಂದಾಗ ಪ್ರತಿ ಕುಟುಂಬವೂ ಸಾವಿರಾರು ರೂಪಾಯಿ ಸ್ವಂತ ಹಣ ಖರ್ಚು ಮಾಡುತ್ತದೆ.

‘ಅಲ್ಲಿ ಮಗ್ಳು ಮನೆ ನೋಡ್ಕೋತಾಳೆ. ಆಗಾಗ ಹಾಡಿಗೆ ಹೋಗ್ಬರ್ತಿನಿ. ಅಲ್ಲಿನ ಕಷ್ಟಾನೂ ನೋಡ್ಬೇಕಲ್ಲ. ಮೊಮ್ಮಕ್ಳು ಶಾಲೆಗೆ ಹೋಗ್ತಾರೆ. ಅವರ್ನೆಲ್ಲ ಇಲ್ಲಿಗೆ ಕರ್ಕೊಂಡು ಬಂದ್ರೆ ಶಾಲೆ ತಪ್ಪೋಯ್ತದೆ. ಇಲ್ಲಿಯೂ ಟೆಂಟ್‌ ಶಾಲೆ ಇದೆ. ಆದರೆ, ಮಕ್ಕಳು ಹೊಂದ್ಕೋಳಲ್ಲ. ವರ್ಸಾನೂ ನಾನು ಅಥವಾ ಮಗ್ಳು ಇಬ್ರಲ್ಲಿ ಒಬ್ರು ಇಲ್ಗೆ ಬರ್ತೀವಿ’ ಎಂದು ಕುಟುಂಬವನ್ನು ಬಿಟ್ಟು ಬರುವ ಅನಿವಾರ್ಯತೆ ವಿವರಿಸುತ್ತಾರೆ ‘ಕಾವೇರಿ’ ಆನೆಯ ಮಾವುತ ದೋಬಿ ಅವರ ಪತ್ನಿ ಜಯಾ.

ಜಯಾ ಅವರ ಮಗ, ಅಳಿಯ ಕೂಡ ಆನೆಗಳ ಪೋಷಣೆಯಲ್ಲಿ ತೊಡಗಿದ್ದಾರೆ. ಎಂಟು ವರ್ಷಗಳಿಂದ ಸತತವಾಗಿ ಮೈಸೂರು ದಸರಾದಲ್ಲಿ ಜಯಾ ಅವರ ಕುಟುಂಬ ಪಾಲ್ಗೊಳ್ಳುತ್ತಿದೆ. ದುಬಾರೆಯ ಶಾಲೆಯಲ್ಲಿ ಬಿಸಿಯೂಟದ ಅಡುಗೆ ಕೆಲಸ ನಿರ್ವಹಿಸುತ್ತಿರುವ ಜಯಾ, ರಜೆ ಹಾಕಿ ಇಲ್ಲಿಗೆ ಬಂದಿದ್ದಾರೆ. ಅವರು ಹಾಡಿಗೆ ಹೋದರೆ ಮಗಳು ಇಲ್ಲಿಗೆ ಬರುತ್ತಾಳೆ. ಇಬ್ಬರೂ ಪಾಳಿ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಾರೆ.

ಕಾಡಲ್ಲೇ ನಮ್ಮ ಜೀವ: ‘ಮೈಸೂರು ನಮ್ಗೆ ವರ್ಸಕ್ಕೊಂದು ಬಾರಿ ಬಂದು ಹೋಗುವ ತವರಿದ್ದಂತೆ. ಇಲ್ಲಿಗಿಂತ ನಮಗೆ ಕಾಡೇ ಇಷ್ಟ. ಅಲ್ಲಿ ನಮ್‌ ಜೀವ ಐತೆ’ ಎನ್ನುವ ‘ಬಲರಾಮ’ ಆನೆಯ ಮಾವುತ ತಿಮ್ಮ ಅವರ ಪತ್ನಿ ಲತಾ ಅವರ ಮಾತಲ್ಲಿ ಕಾಡಿನ ಬಗೆಗಿನ ಆಸ್ಥೆ ವ್ಯಕ್ತವಾಗುತ್ತದೆ.

ಇಲ್ಲಿನ ಪ್ರತಿ ಆನೆಗಳೂ ತಮ್ಮ ಮಾವುತ–ಕಾವಾಡಿಗಳ ಪತ್ನಿಯರ, ಮಕ್ಕಳ ದನಿ ಗುರುತಿಸುತ್ತವೆ. ಅನ್ನ, ಬೆಲ್ಲ ಕೊಡುವ ಹೆಣ್ಣುಮಕ್ಕಳ ಪ್ರೀತಿಗೆ ಆನೆಗಳೂ ತಲೆಬಾಗುತ್ತವೆ.

ದಸರಾ ಎಂದರೆ ಮಜಾ: ದಸರಾ ಎಂದರೆ ಒಬ್ಬೊಬ್ಬರಿಗೂ ಒಂದೊಂದು ಭಾವ. ಮಾವುತ– ಕಾವಾಡಿಗರಿಗೆ ಕರ್ತವ್ಯ ನಿಷ್ಠೆ; ಮಹಿಳೆಯರಿಗೆ ಸೂರು ಬಿಟ್ಟು, ಇಲ್ಲಿಗೆ ಹೊಂದಿಕೊಳ್ಳುವ ಅನಿವಾರ್ಯತೆ; ಯುವಕ–ಯುವತಿಯರಿಗೆ ಆಧುನಿಕ ಜೀವನ ಶೈಲಿಗೆ ತೆರೆದುಕೊಳ್ಳುವ ತವಕ; ಮಕ್ಕಳಿಗೆ ಖುಷಿ...

‘ಇಲ್ಲಿ ನಮ್ಗೆ ಮಜಾ ಬರುತ್ತೆ. ಫುಟ್ಬಾಲು, ಚೆಂಡು ಕೊಡ್ತಾರೆ ಆಡೋಕೆ’ ಎನ್ನುತ್ತಾ ಆಟದಲ್ಲಿ ತಲ್ಲೀನನಾಗುತ್ತಾನೆ ತಿತಿಮತಿ ಯಿಂದ ಬಂದಿರುವ 9ನೇ ತರಗತಿ ಓದುತ್ತಿರುವ ಗಣೇಶ.

‘ಆನೆಗಳೆಂದ್ರೆ ನನ್ಗೆ ಪ್ರಾಣ. ಅವುನ್ನ ಬಿಟ್ಟು ನಾ ಇರಲ್ಲ. ಅದ್ಕೆ ವರ್ಸಾನೂ ಇಲ್ಲಿಗೆ ಬರ್ತೇವಿ. ಗೋಪಿ, ಪ್ರಶಾಂತ, ಕಾವೇರಿ ಆನೆಗಳೆಂದರೆ ನಮ್ಗೆ ಇಷ್ಟ. ಅವು ಎಲ್ಲಿರ್ತಾವೋ ನಾವೂ ಅಲ್ಲೇ ಇರ್ತೇವೆ’ ಎಂದು ತನ್ನ ಪ್ರೀತಿಯ ಆನೆಯತ್ತ ಸಾಗಿದ 8 ವರ್ಷದ ಪೋರ ಅಜಯ್‌. ದುಬಾರೆಯಿಂದ ಬಂದಿರುವ 7ನೇ ತರಗತಿ ಓದುತ್ತಿರುವ ನಂದಿನಿ, ಹುಟ್ಟಿದ ವರ್ಷದಿಂದಲೂ ದಸರೆಯಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. ಅಪ್ಪ– ಅಮ್ಮನ ಜತೆ ಬರುವ ಆಕೆಗೆ ಅರಮನೆ ಆವರಣವೇ ಪ್ರಪಂಚವಾಗಿ ಕಾಣುತ್ತದೆ. ನೃತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ನಂದಿನಿ, ಅದನ್ನು ಕಲಿಯಲೆಂದೇ ಇಲ್ಲಿಗೆ ಬರುತ್ತಾಳಂತೆ.

ಮನೆಯವ್ರು ಬರ್ಲಿಲ್ಲ ಅಂದ್ರೆ ಆರೋಗ್ಯ ಕೆಡುತ್ತೆ: ಮಾವುತ– ಕಾವಾಡಿಗಳದ್ದು ಮೈಸೂರಿಗೆ ಬಂದನಂತರ ದಿನಚರಿಯೇ ಬದಲಾಗುತ್ತದೆ. ಬೆಳಿಗ್ಗೆ– ಸಂಜೆ ಆನೆಗಳನ್ನು ತಾಲೀಮಿಗೆ ಕರೆದುಕೊಂಡು ಹೋಗುವುದು, ಅವುಗಳ ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು, ಸಮಯಕ್ಕೆ ಸರಿಯಾಗಿ ಆಹಾರ ಕೊಡುವುದು, ಈ ಕೆಲಸಗಳ ಮಧ್ಯೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಸಮಯ ಸಿಗುವುದಿಲ್ಲ. ಅವರ ಕಾಳಜಿಯ ಜವಾಬ್ದಾರಿ ಏನಿದ್ದರೂ ಮಹಿಳೆಯರದ್ದು.

‘ದಿನವಿಡೀ ಆನೆಗಳ ಕೆಲ್ಸದಾಗೆ ಮುಳುಗೋಯ್ತಿವಿ. ಮನೆಯವ್ರು ಟೈಮ್‌ ಟೈಮ್‌ಗೆ ಸರಿಯಾಗಿ ಕಾಫಿನೊ, ಟೀನೊ, ಉಣ್ಣಾಕೆ ಹಿಟ್ಟೊ ಮಾಡಿಕೊಡ್ತಾರೆ. ನಮ್‌ ಜತಿಗ್‌ ಹೆಂಡ್ತಿ ಬರ್ಲಿಲ್ಲ ಅಂದ್ರೆ ನಮ್‌ ಆರೋಗ್ಯ ಕೆಟ್ಟೋಯ್ತದೆ’ ಎನ್ನುತ್ತಾರೆ ‘ಬಲರಾಮ’ ಆನೆಯ ಮಾವುತ ತಿಮ್ಮ.

‘ಮಕ್ಳು, ಮನೆಯವ್ರು, ಎಲ್ಲಾರ್ನು ಕರ್ಕೊಂಡು ಇಲ್ಲಿಗೆ ಬರಬೇಕು ಎಂದರೆ ಕಷ್ಟವೇ. ಆದರೆ, ಇದು ನಮ್ಮ ಕರ್ತವ್ಯ ಅಲ್ವೇ; ನಾವು ಮಾಡ್ತಿರೋದು ಸರ್ಕಾರದ ಕೆಲ್ಸ, ಅದನ್ನ ನಿಷ್ಠೆಯಿಂದ ಮಾಡುವುದು ನಮ್ಮ ಆದ್ಯತೆ. ಅದ್ರಲ್ಲೇ ನಮ್ಮ ಖುಷಿ ಇರೋದು’ ಎನ್ನುತ್ತಾರೆ ತಿಮ್ಮ. ಅವರು 19 ವರ್ಷಗಳಿಂದ ‘ಬಲರಾಮ’ನ ಪೋಷಣೆಯಲ್ಲಿ ತೊಡಗಿದ್ದಾರೆ. 14 ಬಾರಿ ನನ್ನ ಬಲರಾಮ ಅಂಬಾರಿ ಹೊತ್ತಿದ್ದಾನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.

**

ಜಂಬೂಸವಾರಿ ನೋಡಿರಲಿಲ್ಲ

ದಸರಾ ಯಶಸ್ಸಿಗೆ ಎಲೆಮರೆಕಾಯಿಯಂತೆ ದುಡಿಯುವ ಮಾವುತ– ಕಾವಾಡಿಗಳ ಕುಟುಂಬದವರಿಗೆ ಜಂಬೂಸವಾರಿಯ ರಸನಿಮಿಷಗಳನ್ನು ಕಣ್ತುಂಬಿಕೊಳ್ಳಲು ಅವಕಾಶವೇ ಇರಲಿಲ್ಲ. ತಮ್ಮ ಗಂಡಂದಿರು ವೇಷ– ಭೂಷಣ ಸಹಿತ ಆನೆಗಳನ್ನು ಮುನ್ನಡೆಸುವುದನ್ನು ನೋಡುವ ಭಾಗ್ಯವೂ ಹೆಣ್ಣುಮಕ್ಕಳಿಗೆ ದುರ್ಲಬವಾಗಿತ್ತು. ಈ ವೇಳೆಯಲ್ಲಿ ಮಹಿಳೆಯರು ಕಣ್ಣೀರು ಹಾಕಿದ್ದೂ ಉಂಟು. ಐದಾರು ವರ್ಷಗಳಿಂದೀಚೆಗೆ ಜಂಬೂಸವಾರಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ.

‘ಎಷ್ಟೆಲ್ಲ ಕಷ್ಟಪಟ್ಟು ನಾವು, ಮನೆಯವ್ರು, ಮಕ್ಳು ಆನೆಗಳ್ನ ಸಾಕ್ತೀವಿ. ಆದ್ರೆ ಆನೆ ಸಿಂಗಾರಗೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕೋದ್ನ ನೋಡ್ಲಿಕ್ಕೆ ನಮ್‌ ಕುಟುಂಬದವರಿಗೆ ಅವಕಾಸನೇ ಇರ್ಲಿಲ್ಲ. ಅಲ್ಲಿ ಬಡಿಯೋ ಸಬ್ದ ಒಂದ್‌ ಕೇಳ್ತಿತ್‌ ಅಷ್ಟೆಯ. ಕೆಲವ್ರು ಸಂದಿ– ಮೂಲೆಲ್ಲಿ ಬಗ್ಗಿ, ಅವಿತು, ಕುಳಿತು ಜಂಬೂಸವಾರಿ ನೋಡುತ್ತಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಮನ್ವಿ ಮಾಡ್ಕಂಡ್ವಿ. ಈಗ್ಗೆ ಐದಾರು ವರ್ಸದಿಂದ ನಮ್ಮ ಕುಟುಂಬದವರಿಗೆ ಅಂತಲೇ ಪ್ರತ್ಯೇಕ ಜಾಗ ಮೀಸಲಿಡುತ್ತಿದ್ದಾರೆ’ ಎಂದು ಹೇಳುತ್ತಾರೆ ತಿಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT