ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳಿನ ಪ್ರಜೆಗಳಿಗೆ ಉಡುಗೊರೆ...

Last Updated 25 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

*ಜಯಂತಿ ಕೆ.ವೈ.

‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂಬುದು ನಾವು ಸದಾ ಹೇಳುವ ಹಾಗೂ ಕೇಳುವ ಮಾತು. ಆದರೆ ಈ ನಾಳಿನ ಪ್ರಜೆಗಳ ಬಗ್ಗೆ ನಮಗೆ ನಿಜಕ್ಕೂ ಕಾಳಜಿ ಇದೆಯಾ? ಇವರಿಗೆ ನಾವು ಕೊಟ್ಟು ಹೋಗುವ ಕಾಣಿಕೆ ಏನು? ಇಂದಿನ ಸಂದರ್ಭವನ್ನು ಗಮನಿಸಿದಾಗ ನಾವು ಕೇಳಿಕೊಳ್ಳಲೇಬೇಕಾದ ಪ್ರಶ್ನೆಯಾಗಿದೆ. ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯ, ಕುಡಿಯಬಾರದ ಹಾಲು, ತಿನ್ನಬಾರದ ಊಟ, ಆಡಲು ಇಲ್ಲದ ಬಯಲು, ಜತೆಗಾರರಿಲ್ಲದ ಆಟ... ಕಳವಳ ಕಾಡುತ್ತಿದೆ.

ನಮ್ಮ ಇಂದಿನ ಮಕ್ಕಳಿಗೆ ನಾವು ನಿರ್ಮಿಸಿರುವ ಪರಿಸರ ಎಂತಹುದು? ಮನೆಯೇ ಮೊದಲ ಪಾಠಶಾಲೆ. ಆದರೆ, ಉದ್ಯೋಗಸ್ಥ ತಂದೆ-ತಾಯಿಯ ಮಗುವಿಗೆ ಬೇಬಿ ಸಿಟಿಂಗ್ ಪಾಠಶಾಲೆ! ಅವರಿಗೆ ಅಲ್ಲಿ ಸಿಗುತ್ತಿರುವ ವಾತಾವರಣ ಹೇಗಿದೆ? ಅಲ್ಲಿ ನಿಜಕ್ಕೂ ಮಕ್ಕಳಿಗೆ ತಂದೆ– ತಾಯಂದಿರಿಂದ ದೊರೆಯುವಂತಹ ಪ್ರೀತಿ, ವಾತ್ಸಲ್ಯ ಸಿಗುವುದೇ? ಇದರ ಜತೆಗೆ ವಾಹನ ಮಾಲಿನ್ಯ, ಮನೋ ಮಾಲಿನ್ಯ ಎರಡೂ ಜತೆ-ಜತೆಯಾಗಿ ಮಕ್ಕಳು ಆಸ್ತಮಾ ಪೀಡಿತರಾಗುತ್ತಿರುವುದು, ಆತಂಕ, ಖಿನ್ನತೆಯಂತಹ ಮನೋವ್ಯಾಧಿಗೆ ತುತ್ತಾಗುತ್ತಿರುವುದು ಹೆಚ್ಚಾಗುತ್ತಿದೆ.

ಅತಿಯಾದ ನಗರೀಕರಣದಿಂದ ಕೆರೆಗಳು ಇಲ್ಲವಾಗುತ್ತಿರುವುದು, ಕಾಡು ನಾಶದಿಂದ ಬರಗಾಲ, ಬಂದ ಮಳೆ ಇಂಗಲಾರದಂತಹ ಕಾಂಕ್ರೀಟ್ ರಸ್ತೆಗಳು, ಅಕಸ್ಮಾತ್ ಮಳೆ ಬಂದರೂ ನಗರಗಳಲ್ಲಿ ಇಂಗಲು ಸರಿಯಾದ ಜಾಗವಿಲ್ಲದ ಮತ್ತು ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪ್ರವಾಹದಂತಹ ಪರಿಸ್ಥಿತಿ.

ನಗರಗಳ ಸ್ಥಿತಿಯೇ ಹೀಗಾದರೆ, ಅರೆಪಟ್ಟಣ, ಹಳ್ಳಿಗಳಲ್ಲಿನ ಸ್ಥಿತಿ ಬಗ್ಗೆ ಹೇಳುವುದೇ ಬೇಡ. ನಗರದ ಜನರ ಅನುಕರಣೆಯಿಂದ ಸಲ್ಲದ ಕಷ್ಟಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಬಿತ್ತಿದ ಬೆಳೆ ಸರಿಯಾಗಿ ಫಸಲು ಕೊಡದ ಸ್ಥಿತಿ, ಅತಿವೃಷ್ಟಿಯಿಂದಲೂ ಬೆಳೆನಾಶ, ಅನಾವೃಷ್ಟಿಯಿಂದಲೂ ನಷ್ಟ. ಒಟ್ಟಾರೆ, ರೈತನ ಸ್ಥಿತಿ ಸಂಕಷ್ಟ. ಕಡೆಗೆ ಒಂದೋ ಆತ್ಮಹತ್ಯೆ, ಇಲ್ಲವೇ ಕೃಷಿ ಭೂಮಿ ಪಾಳು ಬಿಟ್ಟು ಅಥವಾ ಅದನ್ನು ಮಾರಿ ನಗರಕ್ಕೆ ವಲಸೆ. ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯಗಳ ಪರಿಣಾಮ ಇದು.

ಹೆಚ್ಚಿದ ರಾಸಾಯನಿಕಗಳ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಬೆಳೆ ಉಳಿಸಿಕೊಳ್ಳಲು ಕೀಟನಾಶಕಗಳ ಸಿಂಪರಣೆ, ನಂತರ ಅವುಗಳನ್ನು ದಾಸ್ತಾನು ಮಾಡುವಾಗ ಔಷಧಗಳ ಬಳಕೆ. ಒಟ್ಟಾರೆ ಮುಂದಿನ ಪೀಳಿಗೆಗೆ ತಿನ್ನಲು ನಾವು ಕೊಡುತ್ತಿರುವುದು ವಿಷಯುಕ್ತ ಆಹಾರ.

ಬಿಳಿಯದೆಲ್ಲ ವಿಷ ಎನ್ನುವುದು ನಮಗೆ ಅರಿವಾಗುವುದು ಯಾವಾಗ? ಪಾಲಿಷ್ ಮಾಡಿದ ಅಕ್ಕಿ, ಹಾಲು, ಸಕ್ಕರೆ, ಮೈದಾ, ಉಪ್ಪು ಎಲ್ಲದರಲ್ಲೂ ಅಡ್ಡಪರಿಣಾಮಗಳು. ಇದು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕೇಳಿಬರುತ್ತಿರುವ ಮಾತು. ಪಾಲಿಷ್ ಮಾಡಲು ಹೆಚ್ಚು ಹಣ ಖರ್ಚು, ಜೊತೆಗೆ ಸತ್ವಹೀನ. ಆದರೂ, ಪಾಲಿಷ್ ಮಾಡಿದ ಬಿಳುಪಾದ ಅಕ್ಕಿಯ ವ್ಯಾಮೋಹ. ತಾಯಿ ಎದೆ ಹಾಲಿನ ನಂತರ ಮಕ್ಕಳಿಗೆ ಅತ್ಯಂತ ಶ್ರೇಷ್ಠ ಆಹಾರ ಹಸುವಿನ ಹಾಲು ಎಂಬ ಮಾತೊಂದಿತ್ತು. ಆದರೆ ಆ ಹಾಲನ್ನೂ ನಿರಾಳವಾಗಿ ಕುಡಿಸುವ ಸ್ಥಿತಿ ಇಲ್ಲ. ಕಾರಣ, ಅದು ನಾಟಿ ಅಥವಾ ದೇಸಿ ಹಸು ಹಾಲು ಅಲ್ಲ. ನಿಂತ ಕಡೆಯೇ ನಿಂತು ಬೂಸಾ, ಹುಲ್ಲು ತಿಂದು ದುಂಡಗಿರುವ ಜೆರ್ಸಿ ಹಸುಗಳಿಗೆ ಹೆಚ್ಚು ಹಾಲು ಉತ್ಪಾದಿಸಲು ಹಾರ್ಮೋನ್, ಹಾಗೆಯೇ ಅವುಗಳ ಆರೋಗ್ಯ ರಕ್ಷಣೆಗೆ ಆ್ಯಂಟಿ ಬಯೊಟಿಕ್‌ಗಳನ್ನು ನೀಡಲಾಗುತ್ತಿದೆ. ಹಾಗಾಗಿ ಈ ಹಾಲು, ದೇಸಿ ಹಸುವಿನ ಹಾಲಿನಲ್ಲಿರುವ ಪೌಷ್ಟಿಕ, ಆರೋಗ್ಯಕರ ಅಂಶಗಳನ್ನು ಹೊಂದಿರುವುದಿಲ್ಲ. ಬದಲಿಗೆ, ಈ ಫಾರ್ಮ್ ಹಸುವಿನ ಹಾಲಿನಿಂದಲೇ ಮಗುವಿಗೆ ಅಲರ್ಜಿ ಆಗುವ, ಕೆಮ್ಮು ಬರುವ ಸಾಧ್ಯತೆ ಇದೆ ಎಂಬುದು ವೈದ್ಯರ ಅನಿಸಿಕೆ.

ಹಸುವಷ್ಟೇ ಅಲ್ಲ, ಪೌಲ್ಟ್ರಿಗಳಲ್ಲಿ ಸಾಕುವ ಕೋಳಿಗಳಿಗೆ ಕೂಡ ಆ್ಯಂಟಿಬಯೊಟಿಕ್‌ಗಳನ್ನು ನೀಡಲಾಗುತ್ತಿದೆ. ಇದರಿಂದ ಮಗುವಿಗೆ ಮೊಟ್ಟೆಯೂ ವರ್ಜ್ಯ.
ಇದೆಲ್ಲ ಒಂದು ಕಡೆಯಾದರೆ, ಕನಿಷ್ಠ ಪಕ್ಷ ಮನೆಯಲ್ಲಿ ಮಕ್ಕಳಿಗೆ ಉಪ್ಪಿಟ್ಟು, ರೊಟ್ಟಿ, ಅವಲಕ್ಕಿ, ದೋಸೆ ಮಾಡಿಕೊಡೋಣವೆಂದರೆ ಅದಕ್ಕೂ ಅವಕಾಶ ಇಲ್ಲ. ಏಕೆಂದರೆ ಇಂದಿನ ಮಕ್ಕಳ ರುಚಿಕೋಶವನ್ನು ನೂಡಲ್ಸ್, ಗೋಬಿ ಮಂಚೂರಿ, ಪಿಜ್ಜಾ, ಬರ್ಗರ್‌ಗಳು ಗುತ್ತಿಗೆ ಪಡೆದುಬಿಟ್ಟಿವೆ. ಪಿಜ್ಜಾ ಬರ್ಗರ್, ಪಿಜ್ಜಾ ಜೊತೆ ಕೋಲಾ, ಪೆಪ್ಸಿ ಕುಡಿಯುವ ಮಕ್ಕಳಿಗೆ ಅಮ್ಮ ಮಾಡುವ ರೊಟ್ಟಿ, ಉಪ್ಪಿಟ್ಟು ರುಚಿಸುತ್ತಿಲ್ಲ. ಅದರ ಜೊತೆ ಸೇವ್‌ಪುರಿ, ಪಾನಿಪುರಿ... ಹೀಗೆ ರಸ್ತೆ ಬದಿ ಅಂಗಡಿಗಳ ಸಾಲು ಸಾಲು. ಆ ಗಾಡಿಗಳಿಂದ ಹೊಮ್ಮುವ ಮಸಾಲೆ ವಾಸನೆಯು ಕಿಂದರಿಜೋಗಿಯ ಹಾಗೆ ಮಕ್ಕಳನ್ನು ಆಕರ್ಷಿಸುತ್ತಿದೆ. ಇದೆಲ್ಲ ತಿಂದ ಮಕ್ಕಳು 10–15ನೇ ವಯಸ್ಸಿನ ವೇಳೆಗೇ ಬೊಜ್ಜು ಬೆಳೆಸಿಕೊಳ್ಳುತ್ತಿದ್ದಾರೆ. ಡಯಾಬಿಟಿಸ್, ಖಿನ್ನತೆಯಂತಹ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.

ತಿನ್ನುವ ಆಹಾರವೇ ಹೀಗಾದರೆ, ನೋಡುವ ನೋಟ ಇನ್ನೊಂದು ರೀತಿಯ ಕಳವಳಕ್ಕೆ ಕಾರಣವಾಗುತ್ತಿದೆ. ಮನೆಯ ಪ್ರತಿಯೊಬ್ಬರ ಬಳಿಯೂ ಮೊಬೈಲು, ಮನೆಯಲ್ಲೊಂದು ಕಂಪ್ಯೂಟರ್, ತಂದೆ-ತಾಯಿ ಇಬ್ಬರೂ ಅನುಕೂಲಕರ ಉದ್ಯೋಗದಲ್ಲಿ ಇದ್ದರೆ ಲ್ಯಾಪ್‌ಟಾಪ್, ಪಾಮ್‌ಟಾಪ್, ಐಟಾಪ್. ಜಗತ್ತನ್ನೇ ಅನಾವರಣಗೊಳಿಸುವ ವಿದ್ಯುನ್ಮಾನ ಸಾಧನಗಳು ಮಗುವಿಗೆ ಅತ್ಯಂತ ಆಕರ್ಷಣೆಯ ವಸ್ತುಗಳು. ಬೇಡ ಎಂದರೂ ಬಿಡಲಾಗದಷ್ಟು ವ್ಯಾಮೋಹ.

ಮೊಬೈಲು, ಅದರಲ್ಲಿನ ವಾಟ್ಸ್‌ ಆ್ಯಪ್ ಮಾಯೆಯಾಗಿ ಮಕ್ಕಳನ್ನು ಕಾಡುತ್ತಿದೆ. ಅದರಿಂದ ಹೊಮ್ಮುವ ರೇಡಿಯೇಷನ್, ಅದರಲ್ಲಿ ಬರುವ ವಿಡಿಯೊಗಳು, ಸಂದೇಶಗಳು, ವಿಡಿಯೊ ಗೇಮ್‌ಗಳು ಮಕ್ಕಳ ಆಲೋಚನಾಕ್ರಮದ ಮೇಲೆ ಮಾಡುತ್ತಿರುವ ದಾಳಿ, ಅದರ ಸಾಂಸ್ಕೃತಿಕ ಪರಿಣಾಮ... ಎಲ್ಲದರ ಬಗ್ಗೆ ಪಾಲಕರು ಹಿಂದೆಂದಿಗಿಂತ ಇಂದು ಹೆಚ್ಚು ಚಿಂತಿಸಬೇಕಾದ ಅಗತ್ಯವಿದೆ.

ಟಿ.ವಿ.ಯಲ್ಲಿ ಬರುವ ಮಕ್ಕಳ ಸೀರಿಯಲ್‌ಗಳು ಅವರಿಗೆ ನೀಡುತ್ತಿರುವ ಮೌಲ್ಯ ಎಂತಹುದು, ಮಕ್ಕಳು ಕೇವಲ ಮಕ್ಕಳ ಚಾನೆಲ್‌ಗಳನ್ನೇ ನೋಡಿದರೂ ಅದರಲ್ಲಿನ ಸರಣಿ ಕಾರ್ಯಕ್ರಮಗಳು ಮಕ್ಕಳಿಗೆ ನೀಡುತ್ತಿರುವ ಸಂದೇಶ ಏನು? ನಾಳಿನ ಪ್ರಜೆಗಳಾಗುವವರು ಪಡೆಯುತ್ತಿರುವುದಾದರೂ ಏನು? ನಾವು ಅವರಿಗೆ ಕೊಡುತ್ತಿರುವ, ಕಟ್ಟಿ ಕೊಡುತ್ತಿರುವ ಪರಿಸರ ಅವರಿಗೆ ಎಂತಹ ಭವಿಷ್ಯ ನೀಡುತ್ತದೆ? ಇದೇ ಏನು ನಾವು ಮುಂದಿನ ಪ್ರಜೆಗಳಿಗೆ ನೀಡುತ್ತಿರುವ ಉಡುಗೊರೆ? ಇದು ಇಂದಿನ ಸಂದರ್ಭದ ಮಹತ್ವದ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT