ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 26 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

–ಗುರುಸಿದ್ದಯ್ಯ ಹಿರೇಮಠ, ಬೆಳಗಾವಿ

ನಾನು ಸರ್ಕಾರಿ ನಿವೃತ್ತ ನೌಕರ. ವಯಸ್ಸು 70. ನನಗೆ ಮನೆ ದುರಸ್ಥಿಗೆ ತುರ್ತಾಗಿ ₹ 2 ಲಕ್ಷ ಸಾಲ ಬೇಕಾಗಿದೆ. ನನ್ನ ಪಿಂಚಣಿ ಸಿಂಡಿಕೇಟ್‌ ಬ್ಯಾಂಕಿನಲ್ಲಿ ಬರುತ್ತದೆ. ಸಾಲ ಪಡೆಯುವ ಸುಲಭೋಪಾಯ ಯಾವುದು?

ಉತ್ತರ: ನೀವು ಈಗಲೇ ಸಿಂಡಿಕೇಟ್‌ ಬ್ಯಾಂಕಿನಲ್ಲಿ ಪಿಂಚಣಿ ಪಡೆಯುತ್ತಿದ್ದು, ಬೇರೆ ಬ್ಯಾಂಕುಗಳಲ್ಲಿ ಅಥವಾ ಆರ್ಥಿಕ ಸಂಸ್ಥೆಗಳಲ್ಲಿ ಸಾಲ ಪಡೆಯುವುದು ಕಷ್ಟವಾದೀತು. ನೀವು ಮನೆ ದುರಸ್ಥಿಗೆ, ನಿಮ್ಮ ಮಕ್ಕಳ ಜಾಮೀನು ಹಾಗೂ ನೀವು ಪಡೆಯುವ ಪಿಂಚಣಿ ಆಧಾರದ ಮೇಲೆ, ಸಿಂಡಿಕೇಟ್‌ ಬ್ಯಾಂಕಿನಲ್ಲಿ ₹ 2 ಲಕ್ಷ ವೈಯಕ್ತಿಕ ಸಾಲ ಪಡೆಯಬಹುದು. ಅಲ್ಲಿಯೇ ವಿಚಾರಿಸಿರಿ. ಇದಕ್ಕೂ ಉತ್ತಮ ಅಥವಾ ಸುಲಭ ಉಪಾಯಗಳಲ್ಲಿ, ಸಾಲದ ಕಂತು ಪ್ರತೀ ತಿಂಗಳೂ ಪಿಂಚಣಿಯಲ್ಲಿ ಮುರಿಯಲು, ಸ್ಟ್ಯಾಂಡಿಂಗ್‌ ಇನ್ಸ್‌ಟ್ರಕ್ಷನ್‌ ಕೊಡಿರಿ. ನಿಮಗೆ ಸಾಲ ಮರು ಪಾವತಿಸಲು 60–80 ಮಾಸಿಕ ಕಂತು ದೊರೆಯುತ್ತದೆ.

**

–ಎಸ್. ಮೂರ್ತಿ, ಬೆಂಗಳೂರು

ನನ್ನ ವಯಸ್ಸು 77. ನನ್ನ ವಾರ್ಷಿಕ ಪಿಂಚಣಿ ₹ 2.64 ಲಕ್ಷ. ಮುಂದಿನ ಆರ್ಥಿಕ ವರ್ಷದಲ್ಲಿ, ಹಿರಿಯ ನಾಗರಿಕನಾದ ನನಗೆ, ಎಷ್ಟು ಹಣ ಎಫ್.ಡಿ.ಯಲ್ಲಿ ತೊಡಗಿಸಿದರೆ ಟಿ.ಡಿ.ಎಸ್. ಮಾಡುವುದಿಲ್ಲ. ನಾನು ಬ್ಯಾಂಕಿಗೆ 15 ಎಚ್ ಸಲ್ಲಿಸಬೇಕೇ‌?

ಉತ್ತರ: ನೀವು 80 ವರ್ಷ ತಲುಪುವ ತನಕ, ನಿಮ್ಮ ಪಿಂಚಣಿ ಹಾಗೂ ಬಡ್ಡಿ ಆದಾಯ ಒಟ್ಟು ಸೇರಿಸಿ ₹ 3 ಲಕ್ಷ ಆಗುವ ತನಕ, ಆದಾಯ ತೆರಿಗೆ ಇರುವುದಿಲ್ಲ ಹಾಗೂ 15ಎಚ್ ಸಲ್ಲಿಸಬಹುದು. ನೀವು ಈಗ ವಾರ್ಷಿಕವಾಗಿ ₹ 2.64 ಲಕ್ಷ ಪಿಂಚಣಿ ಪಡೆಯುತ್ತಿದ್ದು, ₹ 36,000 ಬಡ್ಡಿ ಬರುವ ತನಕ, 15ಎಚ್ ಸಲ್ಲಿಸಬಹುದು ಹಾಗೂ ಇದರಿಂದಾಗಿ ಬಡ್ಡಿ ಮೂಲದಲ್ಲಿ ತೆರಿಗೆ  ಕಡಿತ (ಟಿಡಿಎಸ್) ಮಾಡುವುದಿಲ್ಲ. ಇದೇ ವೇಳೆ ನಿಮ್ಮ ಪಿಂಚಣಿ ಆದಾಯ ವಾರ್ಷಿಕವಾಗಿ ಹೆಚ್ಚಳವಾಗುತ್ತದೆ. ಇವೆಲ್ಲವನ್ನು ಗಮನಿಸಿ, ಒಟ್ಟು ಆದಾಯ ₹ 3 ಲಕ್ಷ ದಾಟುವ ತನಕ ಮಾತ್ರ 15ಎಚ್ ಕೊಡಿರಿ. ₹ 3 ಲಕ್ಷ ಆದಾಯ ದಾಟಿದ ನಂತರ, ತೆರಿಗೆ ವಿನಾಯ್ತಿ ಪಡೆಯಲು, ಹಾಗೆ ಪಡೆದ ಹೆಚ್ಚಿನ ಆದಾಯಕ್ಕೆ ಅನುಗುಣವಾಗಿ ಬ್ಯಾಂಕಿನಲ್ಲಿ 5 ವರ್ಷಗಳ ಅವಧಿಗೆ, ತೆರಿಗೆಗೋಸ್ಕರ ಸಾದರ ಪಡಿಸಿದ ಠೇವಣಿಯಲ್ಲಿ ಹಣ ಹೂಡಿದರೆ, ಸಂಪೂರ್ಣ ತೆರಿಗೆ ವಿನಾಯ್ತಿ ಪಡೆಯಬಹುದು. ಯಾವುದೇ ವ್ಯಕ್ತಿ ಒಮ್ಮೆ ತೆರಿಗೆಗೆ ಒಳಗಾದಲ್ಲಿ, ವಿನಾಯ್ತಿಯಿಂದ ತೆರಿಗೆ ಉಳಿಸಿದರೂ, 15ಎಚ್ ಕೊಡುವಂತಿಲ್ಲ.

**

ಡಿ. ನಿರಂಜನ ಮೂರ್ತಿ, ಗೋವಿನ ಕೋವಿ

ನಾನು ಸರ್ಕಾರಿ ನೌಕರನಾಗಿದ್ದೆ ಹಾಗೂ ಸ್ವಯಂ ನಿವೃತ್ತಿ ಪಡೆದಿದ್ದೆ. ಈಗ ಹಿರಿಯ ನಾಗರಿಕನಾಗಿದ್ದೇನೆ. ಸ್ವಯಂ ನಿವೃತ್ತಿ ಪಡೆದವರಿಗೆ ತೆರಿಗೆ ಅನ್ವಯವಾಗುವುದಿಲ್ಲ ಎಂದು ಕೇಳಿದ್ದೇನೆ. ಇದು ನಿಜವೇ ತಿಳಿಸಿರಿ. ತೆರಿಗೆಯು ದಂಪತಿಯ ಒಟ್ಟು ಆದಾಯಕ್ಕೆ ಬರುತ್ತದೆಯೋ ಅಥವಾ ಪ್ರತ್ಯೇಕವಾಗಿ ಲೆಕ್ಕ ಹಾಕಬೇಕೇ? ನನ್ನ ಪತ್ನಿ ಕೂಡ ಹಿರಿಯ ನಾಗರಿಕರು ಮತ್ತು ಗೃಹಿಣಿ.

ಉತ್ತರ: ಸ್ವಯಂ ನಿವೃತ್ತಿಯಲ್ಲಿ, ಸರ್ಕಾರ ಸಾದರಪಡಿಸಿದ ಯೋಜನೆ ಇರುವಲ್ಲಿ, ಹಾಗೆ ಪಡೆಯುವ ವಿಶೇಷ ವರಮಾನದಲ್ಲಿ ಸೆಕ್ಷನ್ 89 ಪ್ರಕಾರ, ಒಟ್ಟು ಪಡೆದ ವರಮಾನದಲ್ಲಿ ₹ 5 ಲಕ್ಷ ಕಳೆದು ತೆರಿಗೆ ಸಲ್ಲಿಸಬಹುದು. ಯಾವುದೇ ವ್ಯಕ್ತಿ, ಎಷ್ಟೇ ವಯಸ್ಸಾಗಿರಲಿ, ಯಾವುದೇ ತರಹದ ಆದಾಯವಿರಲಿ (ಕೃಷಿ ಆದಾಯ ಹೊರತು ಪಡಿಸಿ), ಅವರವರ ವಯಸ್ಸಿಗನುಗುಣವಾಗಿ, ಪ್ರತೀ ವರ್ಷ ಕೇಂದ್ರ ಸರ್ಕಾರ ಬಜೆಟ್ಟಿನಲ್ಲಿ ನಿಗದಿಪಡಿಸಿದ ಮಿತಿಯನ್ನು ಅನುಸರಿಸಿ, ಮಿತಿದಾಟಿದಲ್ಲಿ ತೆರಿಗೆ ಸಲ್ಲಿಸಲೇಬೇಕು. ತೆರಿಗೆ ವಿಚಾರದಲ್ಲಿ ಗಂಡ ಹೆಂಡತಿ ಬೇರೆ ಬೇರೆಯಾಗಿ ಪಡೆಯುವ ವರಮಾನ, ಪ್ರತ್ಯೇಕವಾಗಿ ಲೆಕ್ಕ ಹಾಕಿ, ಇಬ್ಬರೂ ವೈಯಕ್ತಿಕವಾಗಿ (ತೆರಿಗೆ ಬರುವಲ್ಲಿ) ರಿಟರ್ನ್ ತುಂಬಬೇಕು.

**

ರುಕ್ಮಿಣಿ, ಮೈಸೂರು

ನನ್ನ ವಯಸ್ಸು 43, ವಾರ್ಷಿಕ ಆದಾಯ ₹ 14 ಲಕ್ಷ, ₹ 25 ಲಕ್ಷ ಪಿ.ಎಫ್.ನಲ್ಲಿದೆ. ₹ 5 ಲಕ್ಷ ಷೇರು– ಮ್ಯೂಚುವಲ್ ಫಂಡ್‌ನಲ್ಲಿದೆ. ಬೆಂಗಳೂರು ಹೊರವಲಯದಲ್ಲಿ ಒಂದು ನಿವೇಶನವಿದೆ. (ಇಂದಿನ ಬೆಲೆ ₹ 25 ಲಕ್ಷ) ನಾನು ಬೆಂಗಳೂರಿನಲ್ಲಿ ಒಂದು ಮನೆ ಕಟ್ಟಿ, ಚಂದವಾದ ಗಾರ್ಡನ್ ಹಾಕಿ ವಾಸಿಸಬೇಕೆಂದಿದ್ದೇನೆ. ಆದರೆ, ಇದು ಸಾಧ್ಯವಾಗುತ್ತಿಲ್ಲ. ನಮಗೆ ಸದ್ಯಕ್ಕೆ ಮನೆಯ ಅಗತ್ಯವಿಲ್ಲ. ನಾವು ತಂದೆ ತಾಯಿಯೊಡನೆ ವಾಸವಾಗಿದ್ದೇವೆ. ನಮಗೆ 10 ವರ್ಷದ ಒಂದು ಪ್ಲ್ಯಾನ್‌ ಹೇಳಿ. ನಮಗೆ 11 ವರ್ಷದ ಮಗಳಿದ್ದಾಳೆ. ನನ್ನ ಪತಿ ವಿದ್ಯಾ ಸಂಸ್ಥೆ ನಡೆಸುತ್ತಿದ್ದು, ಅವರು ಸದ್ಯಕ್ಕೆ ನಿವೇಶನ ಕೊಳ್ಳಲು ಸಹಾಯ ಮಾಡುವ ಪರಿಸ್ಥಿತಿಯಲ್ಲಿಲ್ಲ. 5 ವರ್ಷಗಳಲ್ಲಿ ಅವರು ಸಹಾಯ ಮಾಡಲು ಸಾಧ್ಯವೆ?

ಉತ್ತರ: ನಿಮ್ಮ ಮುಖ್ಯ ಉದ್ದೇಶವೆಂದರೆ, ಬೆಂಗಳೂರಿನಲ್ಲಿ ಒಂದು ನಿವೇಶನ ಕೊಂಡು ಮನೆ ಕಟ್ಟುವುದು. ಇದು ನಿಮಗೆ ಅಸಾಧ್ಯವಾದ ಕೆಲಸವೇನಲ್ಲ. ಬಹಳಷ್ಟು ಬಿಡಿಎ ನಿವೇಶನಗಳು ಮಾರಾಟಕ್ಕಿದ್ದು ಇವುಗಳಲ್ಲಿ ಮೂಲಭೂತ ಸೌಕರ್ಯವಿರುವ (ನೀರು, ಒಳ ಚರಂಡಿ, ವಿದ್ಯುತ್‌ ) ಯಾವುದಾದರೊಂದು ನೀವು ಈಗಲೇ ಖರೀದಿಸಬಹುದು. 30X40 ನಿವೇಶನ ಗರಿಷ್ಠ ₹ 40–45 ಲಕ್ಷಗಳಿಗೆ ದೊರೆಯುತ್ತದೆ. ಹೀಗೆ ಕೊಳ್ಳುವಲ್ಲಿ ನಿಮ್ಮೊಡನಿರುವ ಹೊರವಲಯದ ನಿವೇಶನ ಮಾರಾಟ ಮಾಡಿರಿ ಹಾಗೂ ಪಿ.ಎಫ್. ಮೇಲೆ ಸ್ವಲ್ಪ ಸಾಲ ಪಡೆಯಿರಿ. ಸ್ಥಿರ ಆಸ್ತಿ, ಇನ್ನು ನೀವು 10 ವರ್ಷಗಳ ನಂತರ ಕೊಂಡು ಕೊಳ್ಳುವಾಗ, ಇಂದಿನ ಹಣದುಬ್ಬರದ ವೇಗದಲ್ಲಿ, ಎಷ್ಟು ಹಣ ಉಳಿಸಿದರೂ ಸಾಕಾಗಲಾರದು. ಮುಂದೊಂದು ದಿವಸ ನಿಮಗೆ ಬೇಕಾಗುವಂತೆ ಮನೆ, ಕೈತೋಟ ಮಾಡಿಕೊಳ್ಳಬಹುದು. ನಿಮ್ಮ ಮಗಳ ಸಲುವಾಗಿ ಕನಿಷ್ಠ 15 ಗ್ರಾಂ ಬಂಗಾರ ವಾರ್ಷಿಕವಾಗಿ ಕೊಳ್ಳಿರಿ ಹಾಗೂ ಎಲ್.ಐ.ಸಿ.ಯ ವಿನ್ ಚಿಲ್ಡ್ರನ್ಸ್ ಮನಿಬ್ಯಾಕ್ ಪಾಲಿಸಿ ಮಾಡಿಸಿ, ವಾರ್ಷಿಕ ಕನಿಷ್ಠ ₹ 10,000 ತುಂಬಿರಿ. ನಿಮಗೂ ನಿಮ್ಮ ಕುಟುಂಬಕ್ಕೂ ಉಜ್ವಲ ಭವಿಷ್ಯ ಹಾರೈಸುತ್ತೇನೆ.

**

–ಪ್ರಭಾಕರ, ಮಂಗಳೂರು

ನಾನು ನಿರುದ್ಯೋಗಿ. ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿ ₹ 20 ಲಕ್ಷ ಬಂದಿದೆ. ಈ ಹಣಕ್ಕೆ ತೆರಿಗೆ ಇದೆಯೇ, ಎಫ್.ಡಿ. ಮಾಡಿದರೆ ತೆರಿಗೆ ಬರುತ್ತದೆಯೇ ತಿಳಿಸಿರಿ. ನನಗೆ ಉದ್ಯೋಗ ಮಾಡಲು ಸಾಲ ಸಿಗಬಹುದೇ?

ಉತ್ತರ: ನೀವು ಮಾರಾಟ ಮಾಡಿದ ಪಿತ್ರಾರ್ಜಿತ ಆಸ್ತಿ, ಕೃಷಿ ಜಮೀನಾದಲ್ಲಿ ತೆರಿಗೆ ಬರುವುದಿಲ್ಲ. ಭೂ ಪರಿವರ್ತನೆಯಾದ ಜಾಗವಾದಲ್ಲಿ ಶೇ 20ರಷ್ಟು ತೆರಿಗೆ ಸಲ್ಲಿಸಬೇಕು. ಇದೇ ವೇಳೆ NHIA- REC ಬಾಂಡ್‌ನಲ್ಲಿ ಮೂರು ವರ್ಷಗಳ ಅವಧಿಗೆ ಇರಿಸಿ ಸಂಪೂರ್ಣ ತೆರಿಗೆ ವಿನಾಯಿತಿ ಪಡೆಯಬಹುದು.

ಬ್ಯಾಂಕಿನಲ್ಲಿ ಎಫ್.ಡಿ. ಇರಿಸುವಾಗ ತೆರಿಗೆ ಬರುವುದಿಲ್ಲ. ನೀವು ಉದ್ಯೋಗ ಸ್ವಂತವಾಗಿ ಮಾಡುವಲ್ಲಿ, ಅಂತಹ ಉದ್ಯೋಗದಲ್ಲಿ ನಿಮಗೆ ಅನುಭವವಿರಬೇಕು ಹಾಗೂ ಪ್ರಾಜೆಕ್ಟ್ ರಿಪೋರ್ಟ್ ಬ್ಯಾಂಕಿಗೆ ಸಲ್ಲಿಸಬೇಕು. ‘ಮುದ್ರಾ ಯೋಜನೆ’ ಅಡಿಯಲ್ಲಿ ಸ್ವಂತ ಉದ್ಯೋಗ ಮಾಡಲು ನಿಮ್ಮ ಖಾತೆ ಇರುವ ಬ್ಯಾಂಕಿನಲ್ಲಿ ವಿಚಾರಿಸಿರಿ.

**

ಶ್ರೀನಿವಾಸ್ ರಾವ್, ಅಜಾದ್ ನಗರ

ನಾನು ₹ 1 ಲಕ್ಷ ಬ್ಯಾಂಕ್‌ನಲ್ಲಿ ಫಿಕ್ಸಡ್ ಡಿಪಾಸಿಟ್ ಇಟ್ಟಿದ್ದೇನೆ. ಅವಧಿ ಒಂದು ವರ್ಷಕ್ಕೆ. ಬಾಂಡ್‌ನಲ್ಲಿ ಅವಧಿ ಸೇರಿಸಿ ಒಟ್ಟು ಮೊತ್ತ ನಮೂದಿಸಿದ್ದಾರೆ. ನಾನು ಕೆಲವರನ್ನು ವಿಚಾರಿಸಿದಾಗ ಠೇವಣಿ ಮೇಲಿನ ಬಡ್ಡಿ ಪ್ರತೀ ತಿಂಗಳು ಪಡೆದು ಆರ್.ಡಿ. ಮಾಡಿದರೆ ಹೆಚ್ಚು ಆದಾಯ ಬರುತ್ತದೆ ಎಂದು ಹೇಳಿದರು. ಇವೆರಡರಲ್ಲಿ ಯಾವುದು ಲಾಭಕರ ತಿಳಿಸಿರಿ. ಈಗ ಮಾಡಿದ ಠೇವಣಿಗೆ, 3 ತಿಂಗಳಿಗೊಮ್ಮೆ ಕ್ಯುಮ್ಯುಲೇಟಿವ್ ಬಡ್ಡಿಯಾಗುತ್ತದೆ ಎಂದು ಬ್ಯಾಂಕಿನಲ್ಲಿ ತಿಳಿಸಿದ್ದಾರೆ ಇದು ಸರಿಯೇ. ಹಾಗೆಂದರೇನು?

ಉತ್ತರ: ಬ್ಯಾಂಕುಗಳಲ್ಲಿ ಹಣವನ್ನು ಅವಧಿ ಠೇವಣಿಯಲ್ಲಿ ಇರಿಸಿ ಪ್ರತೀ ತಿಂಗಳೂ  ಬಡ್ಡಿ ಪಡೆಯುವಲ್ಲಿ, ಮೂಲ ಬಡ್ಡಿದರದಲ್ಲಿ ಸ್ವಲ್ಪ ಕಡಿತ ಮಾಡಿ ಕೊಡುತ್ತಾರೆ. ಇದೇ ವೇಳೆ ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆದರೆ ಕಡಿತ ಮಾಡುವುದಿಲ್ಲ. ಹೀಗಿರುವಾಗ ಠೇವಣಿ ಮೇಲಿನ ಬಡ್ಡಿ ಪ್ರತೀ ತಿಂಗಳೂ ಪಡೆದು ಆರ್.ಡಿ. ಖಾತೆಗೆ ಜಮಾ ಮಾಡುವುದು ಲಾಭದಾಯಕವಲ್ಲ. ಜೊತೆಗೆ ನಷ್ಟವೇ ಆಗುತ್ತದೆ. ನೀವು ಒಂದು ವರ್ಷಕ್ಕೆ ಒಮ್ಮಲೇ ಬಡ್ಡಿ ಬರುವ ಠೇವಣಿ ಮಾಡಿರುತ್ತೀರಿ. ಇದು ನಿಜವಾಗಿಯೂ ಸರಿಯಾದ ಮಾರ್ಗ.

ಬ್ಯಾಂಕ್‌ನವರು, ಮೂರು ತಿಂಗಳಿಗೊಮ್ಮೆ ಕ್ಯುಮ್ಯುಲೇಟಿವ್ ಬಡ್ಡಿಯಾಗುತ್ತದೆ ಎನ್ನುವುದರ ಅರ್ಥವೇನೆಂದರೆ, ನಿಮ್ಮ ಠೇವಣಿಗೆ ಪ್ರತೀ ಮೂರು ತಿಂಗಳಿಗೊಮ್ಮೆ ಬಡ್ಡಿ ಸೇರಿಸಿ, ಚಕ್ರಬಡ್ಡಿಯಲ್ಲಿ ಹಣ ವೃದ್ಧಿಸಿ, ಅವಧಿ ಮುಗಿಯುತ್ತಲೇ ಹಿಂತಿರುಗಿಸುವುದು ಎನ್ನುವುದಾಗಿರುತ್ತದೆ. ಇದು ಸರಿಯಾಗಿದೆ. ನೀವು ಮುಂದೆ ಕೂಡಾ ಇದೇ ಮಾರ್ಗ ಅನುಸರಿಸಿ.

**

ರಾಜಶೇಖರನ್, ಚಾಮರಾಜಪೇಟೆ

ನಾನು ವಿವಿಧ ಬ್ಯಾಂಕುಗಳಲ್ಲಿ ₹ 70 ಲಕ್ಷ  ಹಾಗೂ ಅಂಚೆ ಕಚೇರಿಯಲ್ಲಿ ₹ 50 ಲಕ್ಷ ಠೇವಣಿ ಇರಿಸಿದ್ದೇನೆ. ಆದಾಯ ಇಲಾಖೆಯವರು ತೆರಿಗೆಗೆ ಬಡ್ಡಿ ಮಾತ್ರ ಪರಿಗಣಿಸುತ್ತಾರಾ ಅಥವಾ ಠೇವಣಿಯ ಮೇಲೂ ತೆರಿಗೆ ಸಲ್ಲಿಸಬೇಕಾ ತಿಳಿಸಿರಿ. ನಾನು ರಿಟರ್ನ್ ಸಲ್ಲಿಸಬೇಕೇ–ಬೇಡವೇ?

ಉತ್ತರ: ಆದಾಯ ತೆರಿಗೆ ಲೆಕ್ಕಾಚಾರವೆಂದರೆ, ವಾರ್ಷಿಕವಾಗಿ ಓರ್ವ ವ್ಯಕ್ತಿ ಪಡೆಯುವ ಒಟ್ಟು ವರಮಾನವನ್ನು ಮಾತ್ರ ಪರಿಗಣಿಸುತ್ತಾರೆ.

ನೀವು ಬ್ಯಾಂಕುಗಳಲ್ಲಿ ಹಾಗೂ ಅಂಚೆ ಕಚೇರಿಗಳಲ್ಲಿ ಇಟ್ಟಿರುವ ಒಟ್ಟು ಠೇವಣಿ ₹ 1.20 ಕೋಟಿಯಾದರೂ, ಇಲ್ಲಿ ಬರುವ ವಾರ್ಷಿಕ ಬಡ್ಡಿಗೆ ಮಾತ್ರ ತೆರಿಗೆ ಸಲ್ಲಿಸಬೇಕು ವಿನಾ ಠೇವಣಿಗೆ ಪ್ರತ್ಯೇಕ ತೆರಿಗೆ ವಿಧಿಸುವುದಿಲ್ಲ.

ನಿಮಗೆ ಬೇರೆ ಆದಾಯವೂ ಇರಬಹುದು. ಠೇವಣಿ ಮೇಲಿನ ಬಡ್ಡಿ ಹಾಗೂ ಉಳಿದ ಆದಾಯ ಸೇರಿಸಿ, ಆದಾಯ ತೆರಿಗೆ ರಿಟರ್ನ್ ಸಲ್ಲಿಸಿರಿ. ನಿಮ್ಮ ಮನೆಗೆ ಸಮೀಪದ ಚಾರ್ಟರ್ಡ್ ಅಕೌಂಟೆಂಟ್ ಭೇಟಿ ಮಾಡಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ.ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001.

ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT