ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಡಿಗಾಸ್ ಯಾತ್ರಾ’ ಯಶೋಗಾಥೆ

Last Updated 26 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬಿಎಸ್ಸಿ ಮುಗಿಸಿದ್ದ ಆ ಯುವಕನ ಮನಸ್ಸು ವಾಲಿದ್ದು ಸ್ವಯಂ ಉದ್ಯೋಗದತ್ತ. ರೈತಾಪಿ ಕುಟುಂಬವಾದ್ದರಿಂದ ಮನೆಯಿಂದ ಹಣ ನಿರೀಕ್ಷಿಸುವಂತಿರಲಿಲ್ಲ. ಓದುವಾಗಲೇ ಪಾರ್ಟ್‌ ಟೈಂ ಕೆಲಸ ಮಾಡಿ ಕೂಡಿಟ್ಟಿದ್ದ ಒಂದಿಷ್ಟು ಹಣ ಬಿಟ್ಟರೆ, ಮತ್ತೇನೂ ಇರಲಿಲ್ಲ. ಆಗ ಕೆಲ ಸ್ನೇಹಿತರು ಬೆನ್ನಿಗೆ ನಿಂತರು. ಕೆಲವರು ವಿಶ್ವಾಸವಿಟ್ಟು ಕೈಲಾದಷ್ಟು ಸಾಲ ಕೊಟ್ಟರು. ಕೈ ಸೇರಿದ ಒಟ್ಟು ₹ 25 ಸಾವಿರದಲ್ಲಿ 23 ವರ್ಷದ ಹಿಂದೆ ಆರಂಭಗೊಂಡ ‘ಅಡಿಗಾಸ್ ಯಾತ್ರಾ’ ಸಂಸ್ಥೆ ಇದೀಗ ಹೆಮ್ಮರವಾಗಿ ಬೆಳೆದಿದೆ. ಹತ್ತಾರು ಮಂದಿಗೆ ಕೆಲಸ ಕೊಟ್ಟಿದೆ. ಪ್ರವಾಸಿ ಸಂಸ್ಥೆಗಳ ಪೈಕಿ ತನ್ನದೇ ಆದ ಛಾಪು ಮೂಡಿಸಿದೆ. ಅಂದಹಾಗೆ, ಇದು ಕುಂದಾಪುರದ ಕೆ. ನಾಗರಾಜ್ ಅಡಿಗ ಅವರು ಹುಟ್ಟು ಹಾಕಿದ ಪ್ರವಾಸ ಸಂಸ್ಥೆಯ ಯಶೋಗಾಥೆ.

ಪ್ರವಾಸಿ ಸಂಸ್ಥೆ ನಡೆಸುವುದು ಮೇಲ್ನೊಟಕ್ಕೆ ಸುಲಭ ಎನಿಸಬಹುದು. ಆದರೆ, ಒಳ ಹೊಕ್ಕಾಗಲೇ ಗೊತ್ತಾಗುವುದು. ಅಡಿಗಡಿಗೂ ಎಷ್ಟು ಸಿಕ್ಕುಗಳಿರುತ್ತವೆ. ನಿರಂತರ ಶ್ರಮವಿದ್ದರೂ, ಕೆಲವೊಮ್ಮೆ ಬಿಡಿಗಾಸೂ ಗಿಟ್ಟುವುದಿಲ್ಲ. ಬದಲಿಗೆ, ಕೈಯಿಂದ ಕಳೆದುಕೊಳ್ಳುವುದೇ ಹೆಚ್ಚು. ಅಂತಹದ್ದರಲ್ಲಿ ಹತ್ತಾರು ಮಂದಿಗೆ ಕೆಲಸ ಕೊಟ್ಟು,  ಒಂದು ಸಂಸ್ಥೆಯನ್ನು ಏರುಗತಿಯಲ್ಲಿ ಬೆಳೆಸಿಕೊಂಡು ಬರುವುದು ಸಾಮಾನ್ಯ ವಿಷಯವೇನಲ್ಲ.

ಬದುಕು ಕೊಟ್ಟ ಸುತ್ತಾಟ

‘ನನಗೆ ಸುತ್ತಾಟವೆಂದರೆ ಬಲು ಇಷ್ಟ. ನಾನು ಓದುವಾಗ ನಮ್ಮೂರಿನಲ್ಲಿ ಕೆಲವರು ಪ್ರವಾಸ ಆಯೋಜಿಸುತ್ತಿದ್ದರು. ಕಾಲೇಜು ದಿನಗಳಲ್ಲಿ ಅವರ ಬೆನ್ನು ಬಿದ್ದು, ನಾನೂ ಹೋಗುತ್ತಿದ್ದೆ. ಆಗಲೇ ನನಗೆ ಪ್ರವಾಸಕ್ಕೆ ಜನರನ್ನು ಅಣಿಗೊಳಿಸುವುದರಿಂದ ಹಿಡಿದು, ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರುವುದು ಹೇಗೆ ಎಂಬುದು ಆಗಲೇ ಸ್ವಲ್ಪ ಮಟ್ಟಿಗೆ ಕರಗತವಾಯಿತು. ಆಗಲೇ ನಾನೂ ಒಂದು ಪ್ರವಾಸ ಸಂಸ್ಥೆ ಆರಂಭಿಸಬೇಕು ಎಂಬ ಕನಸು ಚಿಗುರೊಡೆಯಿತು’ ಎಂದು ನಾಗರಾಜ್ ಅಡಿಗ ಅವರು ತಮ್ಮ ಸಂಸ್ಥೆ ಆರಂಭಿಲು ಪ್ರೇರಣೆಯಾದ ಸಂದರ್ಭವನ್ನು ನೆನೆಯುತ್ತಾರೆ.

90ರ ದಶಕದಲ್ಲಿ ಬೆಂಗಳೂರು ಸೇರಿದಂತೆ ಕೆಲ ಭಾಗಗಳಲ್ಲಿ ಮಾತ್ರ ಪ್ರವಾಸಿ ಸಂಸ್ಥೆಗಳಿದ್ದವು. ಈ ಪೈಕಿ ವಿದೇಶ ಪ್ರವಾಸ ಆಯೋಜಿಸುತ್ತಿದ್ದದ್ದು ಬೆರಳೆಣಿಕೆಯ ಸಂಸ್ಥೆಗಳಷ್ಟೆ. ಅಲ್ಲದೆ, ಉತ್ತರ ಕರ್ನಾಟಕದಲ್ಲಿ ಪ್ರವಾಸಿ ಸಂಸ್ಥೆಗಳೇ ಇರಲಿಲ್ಲ. ಇದನ್ನು ಮನಗಂಡ ನಾಗರಾಜ್, ಹುಬ್ಬಳ್ಳಿಯಲ್ಲಿ ತಮ್ಮ ಸಂಸ್ಥೆಯನ್ನು ಆರಂಭಿಸಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮಾನ್ಯತೆ ಪಡೆದರು.

‘ಹುಬ್ಬಳ್ಳಿಯಲ್ಲಿ ವಂದೇ ಮಾತರಂ ಟ್ರಾವೆಲ್ಸ್‌ ಸಹಯೋಗದಲ್ಲಿ ಅಡಿಗಾಸ್ ಯಾತ್ರಾ ಆರಂಭಿಸಿದೆ. ಗುಜರಾತ್, ಉತ್ತರಪ್ರದೇಶ ಸೇರಿದಂತೆ ದೇಶದ ಐದಾರು ರಾಜ್ಯಗಳ ತೀರ್ಥಕ್ಷೇತ್ರಗಳು ಹಾಗೂ ನೇಪಾಳಕ್ಕೆ ಮೊದಲ ಪ್ರವಾಸ ಆಯೋಜಿಸಿದೆ. ಅಂತಿಮವಾಗಿ ನೇಪಾಳಕ್ಕೆ ಪ್ರವಾಸ ನಿಗದಿಯಾಯಿತು. 30 ಮಂದಿಯನ್ನು ನೇಪಾಳಕ್ಕೆ ಸುರಕ್ಷಿತವಾಗಿ ಕರೆದೊಯ್ದು ಬಂದೆ. ಜನ ಪ್ರವಾಸದ ವ್ಯವಸ್ಥೆಯನ್ನು ಮೆಚ್ಚಿಕೊಂಡರು. ಬಾಯಿಮಾತಿನ ಮೂಲಕ ಸಂಸ್ಥೆಗೆ ಹೆಚ್ಚಿನ ಪ್ರಚಾರ ಸಿಕ್ಕಿತು. ಹೀಗೆ ವರ್ಷಗಳು ಕಳೆದಂತೆ ಸಂಸ್ಥೆ ಏಳುಬೀಳು ಜತೆಗೆ ಬೆಳವಣಿಗೆ ಕಂಡಿತು. ಹತ್ತು ವರ್ಷದ ಹಿಂದೆ ಬೆಂಗಳೂರಿನಲ್ಲೂ ಸಂಸ್ಥೆಯ ಶಾಖೆ ಆರಂಭಿಸಿ ಯಶಸ್ವಿಯಾದೆ’ ಎಂದು ನಾಗರಾಜ್ ತಮ್ಮ ಸಂಸ್ಥೆ ಬೆಳೆದು ಬಂದ ದಿನಗಳ ಬಗ್ಗೆ ಗಮನ ಸೆಳೆಯುತ್ತಾರೆ.

‘ದೇಶದ ಎಲ್ಲಾ ರಾಜ್ಯಗಳ ಪ್ರಮುಖ ಪ್ರವಾಸ ಸ್ಥಳಗಳು ಸೇರಿದಂತೆ, 45 ಸ್ಥಳಗಳಿಗೆ ಸಂಸ್ಥೆ ಪ್ರವಾಸ ಆಯೋಜಿಸುತ್ತದೆ. ಈ ಪೈಕಿ ವಿದೇಶಗಳಾದ ನೇಪಾಳ, ಭೂತಾನ್, ಶ್ರೀಲಂಕಾ, ದುಬೈ, ಹಾಂಕಾಂಗ್‌, ಸಿಂಗಪುರ, ಕಜಕಿಸ್ತಾನ, ಥಾಯ್ಲೆಂಡ್, ಚೀನಾ, ರಷ್ಯಾ, ಉಜ್ಬೆಕಿಸ್ತಾನ, ಕೀನ್ಯಾ, ಯುರೋಪ್, ಮಾಲ್ಡೀವ್ಸ್, ಮಾರಿಷಸ್, ಕಾಂಬೊಡಿಯಾ, ವಿಯೆಟ್ನಾಂ, ಫಿಲಿಪ್ಪೀನ್ಸ್‌, ಟರ್ಕಿ, ಇಂಡೊನೇಷ್ಯಾ, ದಕ್ಷಿಣ ಆಫ್ರಿಕಾ, ಅಮೆರಿಕ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಕೂಡ ಸೇರಿದೆ. ಕನಿಷ್ಠ 2 ದಿನದಿಂದ 15 ದಿನದವರೆಗೆ, ಕನಿಷ್ಠ ₹ 4 ಸಾವಿರದಿಂದ ಆರಂಭಗೊಂಡು ₹ 1.5 ಲಕ್ಷದವರೆಗೆ ನಮ್ಮಲ್ಲಿ ಪ್ರವಾಸ ಪ್ಯಾಕೇಜ್‌ಗಳಿವೆ’ ಎಂದು ಅವರು ಸಂಸ್ಥೆಯ ಬೆಳವಣಿಗೆಯನ್ನು ವಿವರಿಸುತ್ತಾರೆ.

ಸಂಪರ್ಕ ಜಾಲವೇ ಸಾಧನ

‘ಪ್ರವಾಸಿ ಸಂಸ್ಥೆ ನಡೆಸಲು ಮೊದಲಿಗೆ ವಿಸ್ತಾರವಾದ ಸಂಪರ್ಕ ಜಾಲ ಇರಬೇಕು. ಆರಂಭದಲ್ಲಿ ಸಂಸ್ಥೆ ಪ್ರವಾಸ ನಿಗದಿಪಡಿಸುವ ಸ್ಥಳಗಳಿಗೆ ಮೊದಲು ನಾನು ಭೇಟಿ ಕೊಟ್ಟು, ಆ ಸ್ಥಳದ ಸಂಪರ್ಕ ಸಾಧಿಸುತ್ತಿದ್ದೆ. ಹೋಟೆಲ್‌, ಟ್ರಾವೆಲ್ಸ್‌, ಪ್ರವಾಸಿ ಸ್ಥಳಗಳ ಖರ್ಚು ವೆಚ್ಚ. ಊಟೋಪಚಾರ, ತುರ್ತು ನೆರವು ಇವೆಲ್ಲವನ್ನೂ ತಿಳಿದುಕೊಂಡಿದ್ದರಿಂದ ಸಂಸ್ಥೆಯು ಇದೀಗ ದೇಶ–ವಿದೇಶದಾದ್ಯಂತ ವ್ಯವಸ್ಥಿತ ಸಂಪರ್ಕ ಹೊಂದಿದೆ. ಬಹುತೇಕ ಪ್ರವಾಸ ಸ್ಥಳಗಳಲ್ಲಿ ನಮ್ಮ ಪ್ರತಿನಿಧಿಯೊಬ್ಬರು ಇದ್ದಾರೆ. ಅಲ್ಲಿಗೆ ಹೋದ ತಕ್ಷಣ ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾರೆ’ ಎಂದು ತಮ್ಮ ಸಂಪರ್ಕ ಜಾಲದ ಬಗ್ಗೆ ಗಮನ ಸೆಳೆಯುತ್ತಾರೆ.

‘ಈ ಕ್ಷೇತ್ರದಲ್ಲಿ ಬೆಳೆಯಬೇಕಾದರೆ, ವಿಸ್ತಾರವಾದ ಸಂಪರ್ಕ ಜಾಲದ ಜತೆಗೆ ಹಣ ಕಳೆದುಕೊಂಡರೂ ಅಂಜದೆ ಮುನ್ನುಗ್ಗಬೇಕು. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದಾಗಿ ಪ್ರವಾಸಗಳು ರದ್ದಾದಾಗ ಲೆಕ್ಕಾಚಾರ ಉಲ್ಟಾ ಆಗುತ್ತದೆ. ಅಲ್ಲದೆ, ಬಂದ ಲಾಭವನ್ನು ಸತತವಾಗಿ ಮರು ಹೂಡಿಕೆ ಮಾಡುತ್ತಿರಬೇಕು. ಜಾಹೀರಾತು ನೀಡುವುದು ಸೇರಿದಂತೆ ಸಂಸ್ಥೆಯ ಪ್ರಚಾರ ನಿರಂತರವಾಗಿರಬೇಕು. ಗ್ರಾಹಕರಿಗೆ ಸಂಸ್ಥೆ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಲು ಏನೆಲ್ಲಾ ಸಾಧ್ಯವೊ ಅದನ್ನು ಮಾಡುತ್ತಿರಬೇಕು’ ಎಂದು ಅವರು ಈ ಕ್ಷೇತ್ರಕ್ಕೆ ಬರಲು ಬಯಸುವವರಿಗೆ ಸಲಹೆ ನೀಡುತ್ತಾರೆ.

ಸಮಸ್ಯೆಗಳಿಗೆ ಸಿದ್ಧರಾಗಿರಬೇಕು

ಪ್ರವಾಸ ಕರೆದೊಯ್ಯುವಾಗ ಎದುರಾಗುವ ಸಮಸ್ಯೆಗಳು ನೂರೆಂಟು. ಈ ಪೈಕಿ ನೈಸರ್ಗಿಕ ವಿಕೋಪಗಳು, ಪ್ರತಿಭಟನೆ, ಭಯೋತ್ಪಾದನಾ ದಾಳಿ, ಆರೋಗ್ಯ ಸಮಸ್ಯೆ, ಅಪಘಾತ, ಪ್ರವಾಸಿಗರ ಕಿರಿಕಿರಿಗಳು ಸಹ ಪ್ರಮುಖವಾಗಿರುತ್ತವೆ.

‘ಕೆಲ ಪುಣ್ಯಕ್ಷೇತ್ರಗಳು ಸೇರಿದಂತೆ ಸೂಕ್ಷ್ಮ ರಾಜ್ಯಗಳಾದ ಕಾಶ್ಮೀರ, ಉತ್ತರಾಖಂಡ, ಅರುಣಾಚಲ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನೈಸರ್ಗಿಕ ವಿಕೋಪಗಳು ಹೆಚ್ಚು. ನಾಲ್ಕೈದು ವರ್ಷದ ಹಿಂದೆ ಉತ್ತರಭಾರತದಲ್ಲಿ ಸಂಭವಿಸಿದ ಭಾರಿ ಪ್ರವಾಹದಿಂದಾಗಿ ಸಂಸ್ಥೆ ಆಯೋಜಿಸಿದ್ದ ಪ್ರವಾಸ ರದ್ದಾಯಿತು. ಮೂರು ವರ್ಷಗಳ ಹಿಂದೆ ಪ್ರವಾಹದ ಕಾರಣಕ್ಕಾಗಿ ರೈಲುಗಳು ರದ್ದಾಗಿದ್ದರಿಂದ ನೇಪಾಳ ಪ್ರವಾಸಕ್ಕೆ ಹೋಗಲಾಗಲಿಲ್ಲ. ಕೆಲ ವೇಳೆ ನಿಗದಿತ ಸಮಯಕ್ಕೆ ತಲುಪದಿದ್ದಾಗ ರೈಲು ಅಥವಾ ವಿಮಾನಗಳು ತಪ್ಪುತ್ತವೆ. ಇಂತಹ ಸಮಸ್ಯೆಗಳು ಎದುರಾದಾಗ  ಗ್ರಾಹಕರು ಅತೃಪ್ತರಾಗುತ್ತಾರೆ. ಲಕ್ಷ ರೂಪಾಯಿ ಕೊಟ್ಟು ಬರುವ ಜನ ಸಂಸ್ಥೆ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಎದುರಿಸಬೇಕು’ ಎಂದು ಅವರು ಹೇಳುತ್ತಾರೆ.

ಸುದೀರ್ಘ 23 ವರ್ಷಗಳ ಪಯಣವನ್ನು ಯಶಸ್ವಿಯಾಗಿ ಪೂರೈಸಿರುವ ‘ಅಡಿಗಾಸ್‌ ಯಾತ್ರಾ’ಗೆ ಇಂಡಿಯಾ ಇಂಟರ್‌ನ್ಯಾಷ್‌ನಲ್ ಟ್ರಾವಲ್ ಮಾರ್ಟ್‌ನಿಂದ 2017ನೇ ಸಾಲಿನಲ್ಲಿ ‘ಡೊಮೆಸ್ಟಿಕ್ ಟೂರ್ ಆಪರೇಟರ್ ಆಫ್‌ ದ ಇಯರ್’ ಪ್ರಶಸ್ತಿ ಸಿಕ್ಕಿದೆ. ಅಲ್ಲದೆ, ಅತ್ಯುತ್ತಮ ಪ್ರವಾಸಿ ಸಂಸ್ಥೆಗಳಿಗೆ ಮಾಲ್ಡೀವ್ಸ್‌ ನೀಡುವ ‘ಮಾಲ್ಡೀವ್ಸ್‌ ಅವಾರ್ಡ್‌’ಗೆ ಸಂಸ್ಥೆ ನಾಮಕರಣವಾಗಿದೆ.

**

ವಿಭಿನ್ನ ಪ್ರವಾಸ ಪ್ಯಾಕೇಜ್‌ಗಳು

ಅಡಿಗಾಸ್ ಯಾತ್ರೆಯು ಮುಖ್ಯವಾಗಿ ದೇಶಿ ಮತ್ತು ಅಂತರರಾಷ್ಟ್ರೀಯ ಪ್ರವಾಸ ಪ್ಯಾಕೇಜ್‌ಗಳನ್ನು ಹೊಂದಿದೆ. ಈ ಎರಡರಲ್ಲೂ ಗುಂಪಾಗಿ ಮತ್ತು ಗ್ರಾಹಕರ ಇಚ್ಛಾನುಸಾರ, ಗ್ರಾಹಕರ ಸಾಮರ್ಥ್ಯಕ್ಕೆ ತಕ್ಕಂತೆ ವಸತಿ ವ್ಯವಸ್ಥೆ ಮಾಡಲಾಗುತ್ತದೆ.

‘ಸಂಸ್ಥೆ ಪ್ರತಿ ವರ್ಷ ದೇಶದ ಪ್ರಮುಖ ತೀರ್ಥಕ್ಷೇತ್ರಗಳು, ರಾಜ್ಯಗಳು ಹಾಗೂ ವಿದೇಶಗಳಿಗೆ ಪ್ರವಾಸ ಆಯೋಜಿಸುತ್ತದೆ. ಜನವರಿಯಲ್ಲಿ ಇಡೀ ವರ್ಷದ ಪ್ರವಾಸ ಯೋಜನೆ ಮತ್ತು ಪ್ಯಾಕೇಜ್ ದರ ನಿಗದಿ ಮಾಡಿ ಮೆನು ತಯಾರಿಸಲಾಗುತ್ತದೆ. ಅದರಂತೆ ನಿಗದಿತ ಸಂಖ್ಯೆಯ ಗ್ರಾಹಕರು ನೋಂದಣಿ ಮಾಡಿಕೊಂಡಂತೆ ಪ್ರವಾಸ ಕರೆದೊಯ್ಯಲಾಗುತ್ತದೆ. ಇತ್ತೀಚೆಗೆ ಗ್ರಾಹಕರ ಇಚ್ಛಾನುಸಾರವಾಗಿ ಪ್ರವಾಸಕ್ಕೆ ಕರೆದೊಯ್ಯುವ ಮತ್ತು ಕಳುಹಿಸಿ ಸಕಲ ವ್ಯವಸ್ಥೆ ಮಾಡುವ ವಿವಿಧ ಪಾಕೇಜ್‌ಗಳಿವೆ. ಕುಟುಂಬ, ನವ ದಂಪತಿ, ಸ್ನೇಹಿತರು ಸೇರಿದಂತೆ ಯಾರೂ ಬೇಕಾದರು ಹೋಗಿ ಬರಬಹುದು. ಈ ಪ್ಯಾಕೇಜ್‌ನಲ್ಲಿ ಸ್ಥಳದ ಆಯ್ಕೆ, ಊಟ, ವಸತಿ, ಎಷ್ಟು ದಿನ, ಪ್ರಯಾಣದ ಬಗೆ ಇದೆಲ್ಲವನ್ನು ಗ್ರಾಹಕರೇ ನಿರ್ಧರಿಸುತ್ತಾರೆ. ಸಂಸ್ಥೆಯು ಅವರಿಗೆ ಸುರಕ್ಷಿತವಾಗಿ ಹೋಗಿ ಬರಲು ವ್ಯವಸ್ಥೆ ಮಾಡಿಕೊಡುತ್ತದೆ’ ಎಂದು ನಾಗರಾಜ್ ಅಡಿಗ ತಮ್ಮ ಸಂಸ್ಥೆಯ ಪ್ರವಾಸಿ ಪ್ಯಾಕೇಜ್‌ಗಳ ಬಗ್ಗೆ ವಿವರಿಸುತ್ತಾರೆ. ಮಾಹಿತಿಗೆ ಸಂಸ್ಥೆಯ ಅಂತರ್ಜಾಲ ತಾಣ www.adigasyatra.com ಮತ್ತು www.vandemataramtravels.com. ಸಂಪರ್ಕ ಸಂಖ್ಯೆ: 080 26616678, 0836 2256678.

**

ಬೇರೆಲ್ಲ ಪ್ರವಾಸ ಸಂಸ್ಥೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ಶುಲ್ಕದಲ್ಲಿ ಪ್ರವಾಸಕ್ಕೆ ಕರೆದೊಯ್ಯುತ್ತೇವೆ. ಗ್ರಾಹಕರ ನಿರೀಕ್ಷೆ ಹುಸಿಯಾಗದಂತೆ ಸೇವೆ ಒದಗಿಸುವುದೇ ಸಂಸ್ಥೆಯ ಪರಮ ಧ್ಯೇಯ. ಎರಡೂಕಾಲು ದಶಕದಲ್ಲಿ ಸಂಸ್ಥೆ ಹಲವು ಏಳುಬೀಳುಗಳನ್ನು ಕಂಡರೂ, ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಅದಕ್ಕೆ ಗ್ರಾಹಕರು ನಮ್ಮ ಮೇಲಿಟ್ಟಿರುವ ನಂಬಿಕೆಯೇ ಕಾರಣ

– ಕೆ. ನಾಗರಾಜ್ ಅಡಿಗ, ಅಡಿಗಾಸ್ ಯಾತ್ರ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT