ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಜಿತ ಕೆಲಸ ಒತ್ತಡ ತರದು’

Last Updated 26 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕೆಲವರು ‘ನಗರದ ಜೀವನವೇ ಒತ್ತಡ’ ಎನ್ನುತ್ತಾರೆ. ಮತ್ತೂ ಕೆಲವರು ‘ಕೆಲಸವೇ ಒತ್ತಡ’ ಎನ್ನುತ್ತಾರೆ. ಆದರೆ ಒತ್ತಡ ಎನ್ನುವುದು ನಾವು ಹೇಗೆ ಅದನ್ನು ಸ್ವೀಕರಿಸುತ್ತೇವೋ ಹಾಗೆ ಅದು ಎದುರಾಗುತ್ತದೆ. ಒತ್ತಡ ಎಂದುಕೊಂಡರೆ ಅದು ಒತ್ತಡದಂತೆಯೇ ಮುಂದುವರೆಯುತ್ತಾ ಹೋಗುತ್ತದೆ.

ತುಂಬಾ ಕೆಲಸಗಳಿದ್ದು, ಅದರ ನಿರ್ಯವಹಣೆಯನ್ನು ಸಮಯಕ್ಕೆ ತಕ್ಕಂತೆ ಮಾಡಲು ಆಗಲಿಲ್ಲ ಎಂದಾಗ ಒತ್ತಡ ಕಾಡಲು ಶುರುವಾಗುವುದು. ಆದರೆ ನನ್ನ ಜೀವನದಲ್ಲಿ ಅಂಥ ಒತ್ತಡಗಳು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಅಥವಾ ನಾನು ಅವುಗಳನ್ನು ಒತ್ತಡ ಎಂದು ಪರಿಗಣಿಸಿಲ್ಲ.

ಕೆಲವೊಮ್ಮೆ ಸಂಗೀತ ಕಾರ್ಯಕ್ರಮಕ್ಕೆ ಹೋಗುವಾಗ ಸರಿಯಾದ ಸಮಯಕ್ಕೆ ಸೇರಬೇಕು ಎಂಬಲ್ಲಿಂದ ಒತ್ತಡ ಶುರುವಾಗಿ ಅಲ್ಲಿ ಕಾರ್ಯಕ್ರಮ ಯಾವುದೇ ಅಡ್ಡಿ ಆತಂಕ ಇಲ್ಲದೆಯೇ ಎಲ್ಲವೂ ಸರಾಗವಾಗಿ ನಡೆಯುವವರೆಗೂ ಆತಂಕಮಿಶ್ರಿತ ಭಾವ ಇದ್ದೇ ಇರುತ್ತದೆ. ಕಾರ್ಯಕ್ರಮದ ಏರ್ಪಾಡಿನಲ್ಲಿ ಏರುಪೇರಾಗಿದ್ದರೆ, ಬರಬೇಕಾದವರು ಬರಲಿಲ್ಲ ಎಂದರೆ, ಇವೆಲ್ಲವೂ ಒಂದು ರೀತಿ ಒತ್ತಡವೇ. ಆದರೂ ಅವೆಲ್ಲವೂ ಖುಷಿಯ ಜವಾಬ್ದಾರಿ, ಖುಷಿ ಕೊಡುವ ಒತ್ತಡವೇ ಆಗಿರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಕೆಲವೊಮ್ಮೆ ನಾವು ಹಾಕಿಕೊಂಡ ಪ್ಲಾನ್‍ಗಳೆಲ್ಲವೂ ಉಲ್ಟಾಪಲ್ಟಾ ಆಗಿದ್ದೂ ಇವೆ. ಅದನ್ನು ಒತ್ತಡ ಎಂದು ತೆಗೆದುಕೊಳ್ಳದೇ ನಿಭಾಯಿಸಲು ಕಲಿತರೆ ಸಮಸ್ಯೆ ಬೆಳೆಯುವುದಿಲ್ಲ.

ಕೆಲವೊಮ್ಮೆ ಸಂಗೀತ ಕಾರ್ಯಕ್ರಮಕ್ಕೆ ಹೋಗುವಾಗ ಗಂಟಲು ಕೆಟ್ಟಿರುತ್ತದೆ. ಅಥವಾ ಹೇಳಿದ ಸಮಯಕ್ಕೆ ತಲುಪಲು ಎಷ್ಟೇ ಪ್ರಯತ್ನ ಪಟ್ಟರೂ ಆಗುವುದೇ ಇಲ್ಲ. ಅದೊಂದು ರೀತಿ ಒತ್ತಡವೆನಿಸಿದರೂ, ನಮ್ಮ ಕೈ ಮೀರಿದ್ದನ್ನು ನಾವು ಏನು ಮಾಡಲು ಸಾಧ್ಯ ಎಂದು ಸಮಾಧಾನಚಿತ್ತದಿಂದ ಇರುತ್ತೇನೆ. ಇವೆಲ್ಲಾ ಸಂಗೀತದ ಪಯಣದಲ್ಲಿ ಸಿಗುವಂಥ ಅನುಭವಗಳೂ ಹೌದು. ಇದನ್ನೇ ಒತ್ತಡ ಎಂದು ಕುಳಿತರೆ ಕೆಲಸ ಆಗುವುದಿಲ್ಲ. ನಾನು ಹಾಗೆ ಅಂದುಕೊಳ್ಳುವುದೂ ಇಲ್ಲ.

ಆದರೆ ಕೆಲವೊಮ್ಮೆ ಅಡೆತಡೆಗಳನ್ನೆಲ್ಲಾ ದಾಟಿ ಕಾರ್ಯಕ್ರಮಕ್ಕೆ ಮುಟ್ಟುವಷ್ಟರಲ್ಲೇ ಸಾಕಾಗಿ ಹೋಗಿರುತ್ತದೆ. ಅಂಥ ಪರಿಸ್ಥಿತಿಯಲ್ಲಿ ಹಾಡುವುದು ಸವಾಲೇ. ಆದರೆ ಹಾಡಲೇಬೇಕು. ವೇದಿಕೆ ಮೇಲೆ ಕೂರುವ ಮುನ್ನ ಒಂದೆರಡು ನಿಮಿಷ ಮೌನವಾಗುತ್ತೇನೆ. ನನಗೆ ನಾನೇ ಒಂದಿಷ್ಟು ಸಮಯವನ್ನು ತೆಗೆದುಕೊಳ್ಳುತ್ತೇನೆ. ಮನಸ್ಸನ್ನು ಶಾಂತಗೊಳಿಸಿ, ಹಾಡಲು ಶುರುಮಾಡಿದರೆ ಒತ್ತಡದ ಎಲ್ಲ ಭಾವವೂ ದೂರ!

ಇದ್ದ ಪರಿಸ್ಥಿತಿಯನ್ನು ಇದ್ದ ಹಾಗೇ ಒಪ್ಪಿಕೊಳ್ಳುವುದರಲ್ಲೇ ಒತ್ತಡದ ನಿರ್ವಹಣೆ ಇದೆ. ಜೊತೆಗೆ ಒತ್ತಡ ಎನಿಸಿದಾಕ್ಷಣ ಮೊದಲು ಅದಕ್ಕೆ ಅಗತ್ಯವಾದ ಸ್ಪಂದನೆಯನ್ನು ನೀಡಬೇಕು. ಅಂದರೆ, ಅದನ್ನು ಪರಿಹರಿಸಲು ನಮ್ಮಿಂದ ಶೇಕಡ ನೂರರಷ್ಟು ಪ್ರಯತ್ನ ಪಡಬೇಕು. ಒತ್ತಡದ ಮೂಲವನ್ನು ಹುಡುಕಿ ಅದನ್ನು ತೆಗೆದು ಹಾಕಬೇಕು. ಆದರೆ ಕೆಲವೊಮ್ಮೆ ಸಂದರ್ಭಗಳು ಎಲ್ಲವನ್ನೂ ಮೀರಿರುತ್ತವೆ. ನಮ್ಮ ಕೈ ಮೀರಿದ ಪರಿಸ್ಥಿತಿಯಿದ್ದರೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ವಾಸ್ತವದ ಅರಿವೂ ಇರಬೇಕು.

ಒತ್ತಡ ಹೇರಿಕೊಂಡು ಏನು ಮಾಡಲು ಸಾಧ್ಯ? ನನ್ನ ನಿಯಂತ್ರಣಕ್ಕೆ ಮೀರಿದ್ದು ಇದ್ದರೆ ನಾನು ಒತ್ತಡ ಮಾಡಿಕೊಳ್ಳಲು ಹೋಗುವುದಿಲ್ಲ. ಏಕೆಂದರೆ ನಿಯಂತ್ರಣಕ್ಕೆ ಸಿಗದುದರ ಬಗ್ಗೆ ಒತ್ತಡ ಮಾಡಿಕೊಂಡರೂ ಅದು ಪ್ರಯೋಜನಕ್ಕೆ ಬಾರದ್ದು. ಬೇಸರ ಅನ್ನಿಸಿದರೆ ಚೆನ್ನಾಗಿ ನಿದ್ದೆ ಮಾಡುತ್ತೇನೆ. ಪುಸ್ತಕಗಳೆಂದರೆ ನನಗೆ ತುಂಬಾ ಇಷ್ಟ; ಓದುತ್ತಾ ಕೂರುತ್ತೇನೆ.

ನನ್ನ ಪ್ರಕಾರ ನಮ್ಮ ಆರೋಗ್ಯಕ್ಕಿಂತ ಹೆಚ್ಚಿನದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಆದ್ದರಿಂದ ಒತ್ತಡ ಬರದಂತೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ತಡೆಯುವುದೂ ಅಷ್ಟೇ ಮುಖ್ಯ. ಜೊತೆಗೆ ವೃತ್ತಿಬದ್ಧತೆ ಇರಬೇಕು. ಅದನ್ನು ಸರಿಯಾಗಿ ನಿರ್ವಹಿಸಲು ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಅವನ್ನೆಲ್ಲ ಮೀರಿದ ಸನ್ನಿವೇಶ ಬಂದಾಗ, ವಿಶ್ರಾಂತವಾಗಿ ಮನಸ್ಸನ್ನು ನಿಗ್ರಹಿಸಬೇಕು. ಒತ್ತಡ ಮಾಡಿಕೊಳ್ಳದಿರುವುದೇ ಬುದ್ಧಿವಂತಿಕೆಯ ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT