ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ನಡತೆಯೆಂಬ ಗುಪ್ತಗಂಗೆ

Last Updated 26 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನಡತೆ ಎಂಬುದು ವ್ಯಕ್ತಿಯ ಒಟ್ಟು ಸ್ವಭಾವದ ಮೊತ್ತ. ಬಡವನೋ ಶ್ರೀಮಂತನೋ ಜ್ಞಾನಿಯೋ ಅಜ್ಞಾನಿಯೋ ಅವನಿಗೊಂದು ವ್ಯಕ್ತಿತ್ವ, ಅವನದೊಂದು ನಡತೆ ಇದ್ದೇ ಇರುತ್ತದೆ. ಸಮಾಜದ ಹರಿವಿನಲ್ಲಿ ಪಾವಿತ್ರ್ಯವನ್ನು ಹುಡುಕುವಾಗ ಅದು ವ್ಯಕ್ತಿಗಳ ನಡತೆಯ ಮೊತ್ತವೆಂದೇ ಭಾವಿಸಬೇಕಾಗುತ್ತದೆ. ಸಮಾಜದ ಹೆಚ್ಚಿನ ಜನರು ಯಾವ ಮನೋಭಾವವನ್ನು, ನೈತಿಕ ನಿಲುವನ್ನು ಹೊಂದಿದ್ದಾರೆ ಎಂಬುದರ ಆಧಾರದ ಮೇಲೆ ಆ ಪ್ರದೇಶದ ಜನರ ನೈತಿಕ ನೆಲೆಗಟ್ಟನ್ನು ಗುರುತಿಸಬೇಕಾಗುತ್ತದೆ.

ಕೆನಡಾದಿಂದ ಸ್ನೇಹಿತರೊಬ್ಬರು ಬಂದಿದ್ದರು. 70ರ ದಶಕದಲ್ಲಿ ಭಾರತದಿಂದ ಕೆನಡಾಕ್ಕೆ ಹೋಗಿ ಅಲ್ಲಿಯೇ ವೃತ್ತಿಜೀವನ ನಡೆಸಿ ನಿವೃತ್ತರಾದ, ಅನಿವಾಸಿ ಭಾರತೀಯರು. 70ರ ಅಂಚಿನಲ್ಲೂ ಅಳಿಯದ ಉತ್ಸಾಹ, ಮಗುವಿನ ಕುತೂಹಲ, ಅಭಿಮಾನಿಯ ಛಲ ಈ ಮಹಿಳೆಯದು. ಮಾತಿನ ಮಧ್ಯೆ, ‘ಭಾರತ ಬದಲಾಗಿಲ್ಲ’ ಎಂದರು. ಖುಷಿಯಾದೆ.

ಮಾತು ಮುಂದುವರೆಸಿ, ‘ನನ್ನ ಪತಿ ಕೆನಡಾದಿಂದ ಬರೆದ ಪತ್ರದ ಮೇಲಿದ್ದ ಅಂಚೆಚೀಟಿಗಳನ್ನು ಎಗರಿಸಿದ್ದಾರೆ, ಅದರೊಂದಿಗೆ ಅದರ ಮೇಲಿದ್ದ ಮುದ್ರೆಗಳೂ ಹೋಗಿವೆ. ಹೀಗಾಗಿ ಅದು ಎಲ್ಲಿಂದ ಹೊರಟಿದೆ, ಎಂದು ತಲುಪಿದೆ ಎಂಬುದು ತಿಳಿಯುತ್ತಿಲ್ಲ. ನಿನ್ನ ಭಾರತ ಬದಲಾಗಿಲ್ಲ!’ ಎಂದರು. ನಾಚಿಕೆಯಿಂದ ತಲೆ ತಗ್ಗಿಸಿದೆ. ಮುಂಜಾನೆ ಏಳುವುದು ತಡವಾದರೆ ಪೇಪರಿನ ಹುಡುಗ ಬಾಗಿಲಿಗೆ ಸಿಕ್ಕಿಸಿದ್ದ ದಿನಪತ್ರಿಕೆ ಕಾಣೆಯಾಗುವುದು, ಯಾರದ್ದೋ ಮನೆಯ ತೆಂಗಿನ ಮರದಿಂದ ಬಿದ್ದ ಕಾಯಿ ದಾರಿಹೋಕರ ಪಾಲಾಗುವುದು, ಅಂಚೆಯಲ್ಲಿ ಅಥವಾ ಕೊರಿಯರ್‌ನಲ್ಲಿ ಪುಸ್ತಕ, ಕ್ಯಾಸೆಟ್, ಸಿ.ಡಿ. ಕಾಣೆಯಾಗುವುದು - ಇವೆಲ್ಲವನ್ನು ಗಮನಿಸಿದಾಗ (ಮರೆತೆ, ದೇವಸ್ಥಾನಗಳಲ್ಲಿ ನಿಮ್ಮ ಪಾದರಕ್ಷೆಗಳಿಗೆ ನೀವೇ ಹೊಣೆ!) ದೇಶದ ಪ್ರಜೆಗಳ ನೈತಿಕ ಮಟ್ಟ ಯಾವ ಸ್ತರದಲ್ಲಿದೆ ಎಂದು ಗೋಚರವಾಗುವುದು. ಇನ್ನು ರಾಜಕಾರಣಿಗಳ ಅಧಿಕಾರವರ್ಗದ ವಿಚಾರವನ್ನು, ಅಲ್ಲಿರುವ ಭ್ರಷ್ಟತೆಯನ್ನು ಕುರಿತು ಮಾತನಾಡದಿರುವುದೇ ಕ್ಷೇಮ.

ಇಂದು ಅನಾಚಾರ, ಲಂಚ, ಅವ್ಯವಹಾರ ಜಾಸ್ತಿಯಾಗಿದೆ ಎಂದು ಬೊಬ್ಬೆ ಹಾಕುವಾಗ ಅದರ ಮೂಲ ನಮ್ಮಲ್ಲಿಯೇ ಇದೆ ಎಂದು ತಿಳಿಯಬೇಕು. ನಮ್ಮ ನಮ್ಮ ಮನೆ–ಮನಗಳನ್ನು ಶುದ್ಧವಾಗಿಸಿಕೊಂಡರೆ, ನಮ್ಮನ್ನು ನಾವು ತಿದ್ದಿಕೊಂಡರೆ ನಮ್ಮ ರಾಜ್ಯ, ದೇಶ ಸ್ವಚ್ಛವಾಗುವುದು. ಆದುದರಿಂದ ಮೊದಲಿಗೆ ನಮ್ಮ ನಡವಳಿಕೆಗಳನ್ನು ತಿದ್ದಿಕೊಳ್ಳಬೇಕು. ಇಷ್ಟೆಲ್ಲ ಇದ್ದರೂ ಸಮಾಜದಲ್ಲಿ ಕೆಡುಕೇ ತುಂಬಿದೆ ಎಂದು ಭಾವಿಸುವುದು ಕೂಡ ತಪ್ಪು. ಆಗಾಗ ಅಲ್ಲಲ್ಲಿ ಸನ್ನಡತೆಯ ಮಿಂಚು ಹೊಳೆಯುತ್ತಲೇ ಇರುತ್ತದೆ. ನಮ್ಮೆಲ್ಲರ ಅನುಭವಕ್ಕೆ ಬರುತ್ತಲೂ ಇರುತ್ತದೆ. ಹೊನ್ನಾವರದ ಶ್ರೀಧರ ಆಶ್ರಮಕ್ಕೆ ಹೋಗಿದ್ದೆ. ಆಟೊದವರಿಗೆ ಹಣ ಕೊಡುವಾಗ ಜೇಬಿನಿಂದ ನೂರರ ಎರಡು ನೋಟು ಬಿದ್ದದ್ದು ಗಮನಕ್ಕೆ ಬರಲಿಲ್ಲ. ಆಶ್ರಮದ ಒಳಗೆ ಹೋದ ಬಳಿಕ ಎಷ್ಟೋ ಹೊತ್ತಿನ ಮೇಲೆ ಜೇಬು ತಡಕಿದಾಗ ಹಣ ಕಡಿಮೆ ಇರುವುದು ಗಮನಕ್ಕೆ ಬಂತು ಆದರೆ ಎಲ್ಲಿ ಹೋಯಿತೊ ಗೊತ್ತಾಗಲಿಲ್ಲ. ಆಶ್ರಮದ ಹೊರಜಗಲಿಯ ಮೇಲೆ ಪುಸ್ತಕ ಓದುತ್ತ ಕುಳಿತಿದ್ದೆ. 15-20 ನಿಮಿಷದ ಬಳಿಕ ಅದೇ ಆಟೊ ಚಾಲಕ ಬಂದು,  ’ಆಟೊದಲ್ಲಿ ಈ ನೋಟುಗಳು ದೊರಕಿದವು, ಬೇರೆ ಗಿರಾಕಿ ಹತ್ತಿದ್ದರಿಂದ ಅವರನ್ನು ಬಿಟ್ಟು ಹಿಂದಿರುಗಿ ಬರುವುದು ತಡವಾಯಿತು. ತೆಗೆದುಕೊಳ್ಳಿ’ ಎಂದು ನೂರರ ಎರಡು ನೋಟು ಒಪ್ಪಿಸಿದ. ಅವನು ನನಗೆ ಅದನ್ನು ಹಿಂದಿರುಗಿ ಕೊಡದಿದ್ದರೂ ನನಗೆ ಅಪಾರ ನಷ್ಟವಾಗಲಿ, ಅವನಿಗೆ ಅತಿಯಾದ ಲಾಭವಾಗಲಿ ಆಗುತ್ತಿರಲಿಲ್ಲ. ಜೊತೆಗೆ ಅವನಿಗೆ ಅದು ಸಿಕ್ಕಿತು ಎಂದು ನನಗೆ ತಿಳಿಯುವ ಪ್ರಮೇಯವೇ ಇರಲಿಲ್ಲ. ಆದರೂ ಏಕೆ ಹಿಂದಿರುಗಿಸಿದ ಎಂದು ಯೋಚಿಸುವಾಗ ಈ ಆಂಗ್ಲನಾಣ್ನುಡಿ ನೆನಪಾಗುತ್ತದೆ: ’Our character is what we do when we think no one is looking.’ ಈ ಆಟೊ ಚಾಲಕನೂ ನಮ್ಮ ದೇಶದವನೇ!

ಮತ್ತೊಂದು ಇಂತಹುದೇ ಸಂದರ್ಭ ನೆನಪಾಗುತ್ತದೆ. ಒಂದು ತರಬೇತಿ ಕಾರ್ಯಕ್ರಮ, ಸದಸ್ಯರೆಲ್ಲ ತಲಾ 50 ರೂ. ನೀಡಿ ವೆಚ್ಚವನ್ನು ಭರಿಸಬೇಕೆಂಬ ನಿಯಮ. ಕಾರ್ಯಕ್ರಮ ಮುಗಿದು ಒಂದು ವಾರವೇ ಕಳೆದಿತ್ತು. ಯುವಕನೊಬ್ಬ ನನ್ನೆದುರು ನಿಂತು ನೂರು ರೂಪಾಯಿಗಳನ್ನು ಕೊಟ್ಟು, ‘ಕ್ಷಮಿಸಿ, ನಾನು ಕಳೆದ ವಾರವೇ ಕೊಡಬೇಕಿತ್ತು. ಆದರೆ ಕಾರ್ಯಕ್ರಮದ ಕೊನೆಯಲ್ಲಿ ಕೊಡೋಣವೆಂದುಕೊಂಡು ನಾನು, ಮತ್ತು ನನ್ನ ಮಿತ್ರ ಇಬ್ಬರೂ ಮರೆತೆವು. ಈಗ ದಯವಿಟ್ಟು ತೆಗೆದುಕೊಳ್ಳಿ’ ಎಂದ. ಲೆಕ್ಕವೆಲ್ಲ ಚುಕ್ತ ಮಾಡಿದ್ದೆನಾದರೂ ಈ ಯುವಕನ ಪ್ರಾಮಾಣಿಕತೆಯನ್ನು ದಾಖಲಿಸಲು ಮತ್ತೆ ಈ ಇಬ್ಬರ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲಾಯಿತು. ’ಈ ಕಾಲದಲ್ಲಿಯೂ ಹೀಗುಂಟೆ? ನೀನು ಕೊಡದೆಯೂ ಇರಬಹುದಿತ್ತಲ್ಲವಾ?’ ಎಂದು ಯಾರೋ ಕೇಳಿದಾಗ ಈ ಯುವಕ ಉತ್ತರಿಸಿದ, ’ನೂರು ರೂಪಾಯಿ ಕೊಡುವುದರಿಂದ ನಾನು ಬಡವನಾಗುವುದಿಲ್ಲ, ಹಾಗೆಯೇ ಆ ನೂರೇ ರೂಪಾಯಿಯಿಂದ ಸಂಸ್ಥೆ ಶ್ರೀಮಂತವಾಗುವುದೂ ಇಲ್ಲ. ಆದರೆ ನಿಯಮಪಾಲನೆ ಮಾಡಿದ ಪೂರ್ಣತೃಪ್ತಿ, ತಿಳಿಮನಸ್ಸು ನನಗೂ, ನನ್ನ ಮೇಲೆ ವಿಶ್ವಾಸ ಸಂಸ್ಥೆಗೂ ಉಂಟಾಗುವುದು. ಇದು ನಾನು ನಂಬಿರುವ ತತ್ವಗಳ ಪ್ರಶ್ನೆಯೇ ಹೊರತು ನೂರು ರೂಪಾಯಿಯ ಪ್ರಶ್ನೆಯಲ್ಲ.’ ಆತ್ಮಸಾಕ್ಷಿಯೆಂಬುದೊಂದಿದೆ. ಅದು ಅಂತರಂಗದ ಧ್ವನಿ. ಯಾರು ಎಚ್ಚರಿಸದಿದ್ದರೂ ಅದು ನಮ್ಮನ್ನು ಎಚ್ಚರಿಸುತ್ತದೆ. ತಪ್ಪು ಮಾಡಿದಾಗೆಲ್ಲ ಪಶ್ಚಾತ್ತಾಪ ಪಡುವಂತೆ ಮಾಡುತ್ತದೆ. ಆದುದರಿಂದಲೇ ಫ್ರೆಂಚ್ ನಾಣ್ನುಡಿಯೊಂದು ಹೀಗೆನ್ನುತ್ತದೆ: ‘There is no pillow so soft as a clear conscience.’ ಇಷ್ಟೆಲ್ಲ ಅರಿವಿದ್ದೂ ಮನುಷ್ಯರೇಕೆ ತಪ್ಪೆಸಗುತ್ತಾರೆ? ಕೋಟಿಗಟ್ಟಲೆ ಕೂಡಿಡುತ್ತಾರೆ? – ಎಂಬ ಪ್ರಶ್ನೆ ಉದ್ಭವಿಸುತ್ತದೆ.

ನಿಜ, ಅದು ಹಾಗೇ. ನಾನಾ ಬಗೆಯ ಹಿನ್ನೆಲೆ, ಸಂಸ್ಕಾರ, ಸಹವಾಸ, ಪ್ರಸಂಗದ ಒತ್ತಡ; ಇವೆಲ್ಲಕ್ಕಿಂತ ಮಿಗಿಲಾಗಿ ಲೋಭದಿಂದ ನಾವು ಇಂತಹ ತಪ್ಪುಗಳಿಗೆ ಪಕ್ಕಾಗಿಬಿಡುತ್ತೇವೆ. ನಾಲ್ಕು ಕಾಸಿಗಾಗಿ ನಂಬಿದ ತತ್ವಗಳನ್ನೇ ಗಾಳಿಗೆ ತೂರಿಬಿಡುತ್ತೇವೆಂದರೆ ಅದೆಷ್ಟು ದುರ್ಬಲ ವ್ಯಕ್ತಿಗಳಾಗಿರಬೇಕು ನಾವು? 4ನೇ ಶತಮಾನದಲ್ಲಿದ್ದ ಗ್ರೀಸ್ ದೇಶದ ಡೆಮಾಸ್ತನೀಸ್‌ನ ಕಥೆ ಎಲ್ಲರಿಗೂ ಗೊತ್ತಿರುವಂತಹದ್ದೇ. ಅವನು ಚಿಕ್ಕಂದಿನಲ್ಲಿ ಉಗ್ಗುತ್ತಿದ್ದ, ಜನರ ಅವಹೇಳನಕ್ಕೆ ಒಳಗಾಗುತ್ತಿದ್ದ. ಸಣ್ಣವಯಸ್ಸಿನಲ್ಲೇ ಅನಾಥನೂ ಆಗಿಬಿಟ್ಟ. ಅವನ ಆಸ್ತಿಯನ್ನು ಅವನ ‘ಹಿತೈಷಿ’ಗಳು ಲಪಟಾಯಿಸಿದರು. ಇಷ್ಟೆಲ್ಲ ತೊಂದರೆಗಳು ಅಪ್ಪಳಿಸಿದರೂ ಧೃತಿಗೆಡದೆ ಡೆಮಾಸ್ತನೀಸ್ ಯಾರಿಗೂ ತಿಳಿಯದಂತೆ ಕನಿಷ್ಠ ಆವಶ್ಯಕತೆಗಳೊಂದಿಗೆ ಊರಿಂದ ಹೊರನಡೆದು ಗುಡ್ಡದ ಗುಹೆ ಸೇರಿದ. ಅಲ್ಲಿ ಅವನು ಬೆಣಚುಕಲ್ಲುಗಳನ್ನು ನಾಲಿಗೆಯ ಮೇಲೆ, ಕೆಳಗೆ ಒತ್ತಿ ಹಿಡಿದು ಕ್ಲಿಷ್ಟ ಪದಗಳನ್ನು ಗಟ್ಟಿಯಾಗಿ ಉಚ್ಚರಿಸುತ್ತಿದ್ದ. ಭೋರ್ಗರೆಯುತ್ತಿರುವ ಸಮುದ್ರದ ಎದುರು ಉಚ್ಚ ಸ್ವರದಲ್ಲಿ ಕೂಗಿ ಭಾಷಣದ ಅಭ್ಯಾಸ ಮಾಡುತ್ತಿದ್ದ. ಲಭ್ಯವಿರುವ ಶ್ರೇಷ್ಠಗ್ರಂಥಗಳನ್ನೆಲ್ಲ ಓದಿದ. 20ನೆಯ ವಯಸ್ಸಿಗೆ ಅವನು ಮರಳಿ ಊರಿಗೆ ಕಾಲಿಟ್ಟಾಗ ಜನ ಅವನನ್ನು ಬೆರಗಿನಿಂದ ನೋಡಿದರು. ಅವನ ಮುಖದಲ್ಲಿ ಕಲಿಕೆಯ ಕಾಂತಿ ಕಂಗೊಳಿಸುತ್ತಿತ್ತು. ನೇರವಾಗಿ ಅವನು ತನ್ನ ಪಿತ್ರಾರ್ಜಿತ ಆಸ್ತಿ ಲಪಟಾಯಿಸಿದವರ ವಿರುದ್ಧ ಮೊಕದ್ದಮೆ ಹೂಡಿದ. ನ್ಯಾಯಾಲಯದಲ್ಲಿ ಅವನು ಮಾಡಿದ ಮೂರೇ ಭಾಷಣ ಅವನಿಗೆ ಆಸ್ತಿಯನ್ನು ಮರಳಿ ದೊರಕಿಸಿಕೊಟ್ಟಿತು. ಅವನು ರಾಜಕೀಯ ಭಾಷಣಕಾರನೂ ಆದ, ಉನ್ನತ ಪದವಿ, ಗೌರವ ಹೊಂದಿದ. ಆದರೆ ಮುಂದೆ ಧನಲೋಭಕ್ಕೆ ಒಳಗಾಗಿ ಅವನು ಭ್ರಷ್ಟರ ಪರವಾಗಿ ಭಾಷಣ ಮಾಡಲು ನಿಂತಾಗ ಜನ ಅವನನ್ನು ಹಂಗಿಸಿದರು, ಅವನ ಗಂಟಲುಕಟ್ಟಿತು, ‘ಲಂಚದ ಚಿನ್ನದ ನಾಣ್ಯಗಳು ಇವನ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದೆ’ ಎಂದ ಜನ ಅವನ ಮೇಲೆ ಕೊಳೆತ ಹಣ್ಣು, ಮೊಟ್ಟೆ ಎಸೆದರು. ಮುಂದೆ ಅವನು ಆತ್ಮಹತ್ಯೆಯ ಮೂಲಕ ತನ್ನ ಜೀವನವನ್ನು ಕೊನೆಗಾಣಿಸಿಕೊಂಡ.

ಮನುಷ್ಯ ಸಂಕಲ್ಪದ ಉನ್ನತಿ-ಅವನತಿ ಎರಡಕ್ಕೂ ಉದಾಹರಣೆ ಡೆಮಾಸ್ತನೀಸ್. ಲೋಭವೊಂದು ಸಾಕು ಮನುಷ್ಯನನ್ನು ಕೆಡವಲು. ಹಾಗೆಂದು ಸುಮ್ಮನಿರುವಂತಿಲ್ಲ. ಅದನ್ನು ನಿಯಂತ್ರಿಸಬೇಕು. ಅದಕ್ಕೇ ಸಮಾಜ ಕೆಲವು ನಿಯಮಗಳನ್ನು ಮಾಡಿಕೊಂಡಿದೆ. ದುಷ್ಟ ವ್ಯಕ್ತಿಯಾಗಲೀ ದುಷ್ಟ ಮನಸ್ಸಾಗಲೀ, ದುಷ್ಟಸಮಾಜವಾಗಲೀ - ಅದನ್ನು ಕಟ್ಟುನಿಟ್ಟಾದ ನಿಯಮಗಳಿಂದ ಬಗ್ಗುಬಡಿಯಲೇಬೇಕು. ಎಷ್ಟೇ ಉನ್ನತ ಆದರ್ಶವಾದರೂ ಅದು ಸಮಾಜವಾಹಿನಿಯಲ್ಲಿ ಹರಿಯುತ್ತಾ ಸಾಗಿದಂತೆ ಮಲಿನಗೊಳ್ಳುತ್ತದೆ. ಆಗ ಅಲ್ಲೊಬ್ಬ ಇಲ್ಲೊಬ್ಬ ಪವಿತ್ರ ನಡೆಯ ವ್ಯಕ್ತಿ ಕಾಣಿಸಿಕೊಂಡು ತನ್ನ ಇರವಿನಿಂದಲೇ ಸಮಾಜಕ್ಕೆ ಶುದ್ಧತೆಯ ಸ್ಪರ್ಶ ನೀಡುತ್ತಾನೆ. ಗಂಗೆ ಕಲುಷಿತವಾಗುತ್ತಲೇ ಇರುತ್ತಾಳೆ, ಹಿಮಾಲಯ ಶಿಖರದಿಂದ ತಿಳಿಯಾದ ಪವಿತ್ರ ಝರಿ ಮತ್ತೆ ಹರಿದು ಬಂದು ಅದು ಮತ್ತೆ ತಿಳಿಯಾಗುತ್ತಲೇ ಇರುತ್ತದೆ. ಸಮುದಾಯವೂ ಹೀಗೆಯೇ; ಅನಾಚಾರಗಳು ನಡೆದರೂ ಭಾರತೀಯ ಸಂಸ್ಕೃತಿಯ ಶಿಖರದಿಂದ ಸನ್ನಡೆತೆಯೆಂಬ ಗುಪ್ತಗಂಗೆ ಮತ್ತೆ ಮತ್ತೆ ಹರಿಯುತ್ತಲೇ ಇರುತ್ತದೆ, ಶುದ್ಧಮಾದರಿಯ ವ್ಯಕ್ತಿತ್ವಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ.

(ಲೇಖಕ ಶಿಕ್ಷಣತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT