ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿರಹಿತ ಸ್ಥಿತಿ ತಲುಪೋಣ

Last Updated 26 ಸೆಪ್ಟೆಂಬರ್ 2017, 19:54 IST
ಅಕ್ಷರ ಗಾತ್ರ

‘ಹಿಂದೂ ಧರ್ಮ ಎಲ್ಲಿದೆ? ಇಲ್ಲಿರುವುದು ಬರೀ ಜಾತಿ ಅಷ್ಟೆ’ ಎಂದು ಸಚಿವ ಕಾಗೋಡು ತಿಮ್ಮಪ್ಪನವರು ವಸ್ತುಸ್ಥಿತಿಯನ್ನು ತುಂಬಾ ಸರಳವಾಗಿ ವಿಶ್ಲೇಷಿಸಿದ್ದಾರೆ. ಬಹಳ ಹಿಂದೆಯೇ ಸುಪ್ರೀಂ ಕೋರ್ಟ್ ಸಹ ‘ಹಿಂದೂ’ ಎಂಬುದು ಒಂದು ಧರ್ಮ (religion) ಅಲ್ಲ, ಅದೊಂದು ಜೀವನ ಪದ್ಧತಿ ಎಂಬುದಾಗಿ ವಿವರಣಪೂರ್ವಕವಾಗಿ ತಿಳಿಸಿತ್ತು ಎಂದು ಓದಿದ್ದೇನೆ. ನಂತರವೂ ಅನೇಕರು ಅನೇಕ ಸಂದರ್ಭಗಳಲ್ಲಿ ಅದನ್ನು ಉಲ್ಲೇಖಿಸಿದ್ದಾರೆ, ಸ್ಥಿರೀಕರಿಸಿದ್ದಾರೆ.

ನಮ್ಮ ದೇಶದಲ್ಲಿ ಪರಂಪರಾಗತವಾಗಿಯೇ ‘ಧರ್ಮ’ ಎಂಬುದನ್ನು ಬೇರೆ ಬೇರೆ ವ್ಯಕ್ತಿಗಳಿಗೆ, ಸಮುದಾಯಗಳಿಗೆ ಹೇಳಲಾದ ಬೇರೆ ಬೇರೆ ಕಟ್ಟುಪಾಡುಗಳು, ವಿಧಿ–ನಿಷೇಧಗಳೂ ಇರುವ ಪ್ರತ್ಯೇಕ ‘ಕರ್ತವ್ಯ’ ಎಂಬ ರೀತಿಯಲ್ಲಿಯೇ ಹೇಳಲಾಗಿದೆ. ಉದಾಹರಣೆಗೆ ರಾಜಧರ್ಮ, ಗೃಹಸ್ಥಧರ್ಮ, ಸನ್ಯಾಸಧರ್ಮ, ಕ್ಷತ್ರಿಯಧರ್ಮ...

ಮಹಾಭಾರತದ ಧರ್ಮವ್ಯಾಧನಂತೂ ತನ್ನ ವೃತ್ತಿಯ ಕರ್ತವ್ಯವನ್ನೇ ತನ್ನ ಧರ್ಮವೆಂತಲೂ, ಪತಿವ್ರತೆಯರಿಗೆ ಪತಿಸೇವೆಯೇ ಪರಮಧರ್ಮವೆಂದೂ ಹೇಳುತ್ತಾನೆ. ಆತನದು ಕಟುಕ ವೃತ್ತಿ. ಕಾಡಿನ ಪ್ರಾಣಿಗಳನ್ನು ಬೇಟೆಯಾಡಿ ತಂದು ಮಾಂಸವನ್ನು ವಿಕ್ರಯಿಸುವವನು. ಭಗವದ್ಗೀತೆಯ ‘ಸ್ವಧರ್ಮೇ ನಿಧನಂ ಶ್ರೇಯಃ’ ಎನ್ನುವಲ್ಲಿಯೂ ಧರ್ಮ ಎಂದರೆ ‘ಹಿಂದೂ’ ಧರ್ಮ ಎಂಬ ವಿಶಾಲ ಅರ್ಥದ ಧರ್ಮ  (religion) ಅಲ್ಲವೆನ್ನಿಸುತ್ತದೆ. ಬದಲಿಗೆ ತಮ್ಮ ತಮ್ಮ ಕರ್ತವ್ಯವನ್ನು ವರ್ಣಾಶ್ರಮ ಧರ್ಮದ ಪ್ರಕಾರ ಮಾಡತಕ್ಕದ್ದು ಎಂದು ಹೇಳಿದಂತೆಯೇ ಇದೆ.

ವರ್ಣಾಶ್ರಮ ಧರ್ಮ ಎನ್ನುವಾಗ ಜಾತಿ, ಉಪಜಾತಿಗಳ ಮಾತು ಬರುವುದಿಲ್ಲ. ಬದಲಿಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದೇ ಆಗುತ್ತದೆ.  ಹಾಗಿರುವಾಗ ಈಗ ಪ್ರಚಾರ ಪಡೆಯುತ್ತಿರುವ ‘ಹಿಂದುತ್ವ’ ಅಥವಾ ‘ಹಿಂದೂ ಧರ್ಮ’ ಎಂದರೆ ಮತ್ತೆ ವರ್ಣಾಶ್ರಮ ಧರ್ಮಪಾಲನೆ, ಜಾತಿ ವ್ಯವಸ್ಥೆಯ ಯಥಾಸ್ಥಿತಿ ಮುಂದುವರಿಕೆ ಎಂದೇ ಆಗುತ್ತದೆ. ಆದರೆ ಇದು ಎರಡು ಅಲಗಿನ ಕತ್ತಿಯಂತೆ ನಮ್ಮ ಸಮಾಜವನ್ನೇ ತನ್ಮೂಲಕ ನಮ್ಮ ದೇಶವನ್ನೇ ಎರಡೂ ಕಡೆ ಸೀಳುತ್ತ ಹೋಗುತ್ತದೆ ಎಂಬುದು ಗಮನದಲ್ಲಿರಬೇಕು.

ನಮ್ಮ ಮೇಲೆ ಎಷ್ಟೇ ಬಾರಿ ಪರಕೀಯರ ದಾಳಿ ನಡೆದರೂ ಅದರಿಂದ ಅಲ್ಪಸ್ವಲ್ಪ ತೊಂದರೆಯಾದರೂ ನಾವು ಪರಸ್ಪರ ಸಹಬಾಳ್ವೆಯಿಂದ, ಪರಸ್ಪರ ಅವಲಂಬನೆಯಿಂದ ಮಾತ್ರ ಸ್ಥಿರವಾಗಿ ನಮ್ಮ ನಮ್ಮ ಬದುಕನ್ನು, ನಂಬಿಕೆಯನ್ನು ಉಳಿಸಿಕೊಂಡು ಬಂದಿದ್ದೇವೆ. ಒಮ್ಮೆ ಮಾತ್ರ ಇದನ್ನು ಮರೆತು ‘ಅವರು ಬೇರೆ, ನಾವು ಬೇರೆ’ ಎಂದಕೂಡಲೇ ದೇಶ ಇಬ್ಭಾಗವಾಯಿತು ಎನ್ನುವುದನ್ನು ಮರೆಯಬಾರದು.

ನಮ್ಮೊಂದಿಗೇ ನಮ್ಮ ನಂಬಿಕೆಗಳ ಜೊತೆಗೆ ಬೇರೆ ಮತ, ಪಂಥಗಳನ್ನೂ ಒಳಗೊಳ್ಳುತ್ತಾ ಅವರಿಗೂ ಆಶ್ರಯ ಕೊಡುತ್ತ ಬಂದಿರುವಷ್ಟು ಕಾಲವೂ ಆಸೇತು ಹಿಮಾಚಲ ಪರ್ಯಂತ ಒಂದು ಅಖಂಡ ಜನಶಕ್ತಿಯಾಗಿದ್ದೆವು ಎಂಬುದನ್ನು ಆ ಕ್ಷಣದಲ್ಲಿ ನಮ್ಮ ನಾಯಕರು ಮರೆತಿದ್ದರು. ಅದರ ಪರಿಣಾಮ ಈಗ ಅನುಭವಿಸುತ್ತಿದ್ದೇವೆ.

ಹಾಗಾಗಿ ಈಗ ನಿಜಕ್ಕೂ ನಮಗೆ ಬೇಕಾಗಿರುವುದು ‘ಹಿಂದೂ’ ಎಂಬ ಊಹಾತ್ಮಕ ಧರ್ಮದ ಹೆಸರಿನಲ್ಲಿ ಕೆಲವು ಅಥವಾ ಹಲವರ ಕ್ರೋಡೀಕರಣವಲ್ಲ. ಬದಲಿಗೆ ಮೇಲು, ಕೀಳು, ಸ್ಪೃಶ್ಯ,  ಅಸ್ಪೃಶ್ಯ ಎಂಬ ತಾರತಮ್ಯವನ್ನಾದರೂ ಕ್ರಮೇಣ ತ್ಯಜಿಸುತ್ತಾ ಕ್ರಮೇಣ ಜಾತಿರಹಿತ ಸ್ಥಿತಿಯನ್ನು ತಲುಪುವುದು. ಪರಸ್ಪರ ಅವಲಂಬನೆಯನ್ನು, ಸಹಬಾಳ್ವೆಯನ್ನು ಪ್ರಚೋದಿಸುವುದು. ಈ ಕ್ರಿಯೆಯಲ್ಲಿ ಅಲ್ಪಸಂಖ್ಯಾತರನ್ನೂ– ಅವರು ಮುಸ್ಲಿಮರೇ ಆಗಬೇಕೆಂದಿಲ್ಲ– ಒಳಗೊಂಡು ಸಮಾನತೆಯನ್ನು ಸಾಧಿಸುವುದು. ಆಗ ನಾವು ಖಂಡಿತ ದುರ್ಭೇದ್ಯರಾಗುತ್ತೇವೆ. ‘ನಮ್ಮತನ’ವನ್ನು ಅರ್ಥಾತ್ ಭಾರತೀಯತೆಯನ್ನು ಉಳಿಸಿಕೊಳ್ಳುತ್ತೇವೆ. ಇಲ್ಲದಿದ್ದರೆ ನಾವೇ ಹಚ್ಚಿದ ಬೆಂಕಿ ನಮ್ಮನ್ನು ಸುಡದೇ ಬಿಡುವುದಿಲ್ಲ.

ಈಗ ನಮಗೆ ಶರಣರ ವಚನಗಳೂ, ದಾಸರವಾಣಿಗಳೂ ಭಗವದ್ಗೀತೆಯಷ್ಟೇ ಮಾರ್ಗದರ್ಶಕವಾಗಬೇಕು. ನಿಜಕ್ಕೂ ‘ಹಿಂದೂ ಧರ್ಮ’ ಎಂಬುದೇ ಇದ್ದರೂ ಅದು ಎಲ್ಲರನ್ನೂ ಎಲ್ಲವನ್ನೂ ಒಳಗೊಂಡ, ಜಾತಿಯನ್ನೂ ಒಳಗೊಂಡ ‘ಜೀವನ ಪದ್ಧತಿ’. ಅದನ್ನು ‘ಧರ್ಮ’ ಎಂದು ಪ್ರತ್ಯೇಕಿಸಿ ನೋಡಲಾಗುವುದಿಲ್ಲ.

ಎಸ್.ಆರ್. ಮಹಾಬಲರಾವ್, ಕುಮಾರಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT